More

    ಅಡಕೆ ಭವಿಷ್ಯಅಡಕತ್ತರಿಯಲ್ಲಿ : ಕಾರ್ಯಾಗಾರದಲ್ಲಿ ಆತಂಕ

    ಶಿವಮೊಗ್ಗ: ಅಡಕೆಗೆ ಪ್ರಸ್ತುತ ಉತ್ತಮ ಧಾರಣೆ ಇದ್ದರೂ ಭವಿಷ್ಯದ ಬಗ್ಗೆ ಆತಂಕವಿದೆ. ಹೀಗಾಗಿ ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಈ ಸಂದರ್ಭದಲ್ಲೇ ಸಂಶೋಧನೆಗಳು ನಡೆಯಬೇಕು ಎಂದು ಕಾಸರಗೋಡು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರವಿ ಭಟ್ ಹೇಳಿದರು.

    ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಲ್ಲಿ ಶಿವಮೊಗ್ಗ ಅಡಕೆ ಸಂಶೋಧನಾ ಕೇಂದ್ರ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಡಕೆ ಮೌಲ್ಯವರ್ಧಿತ ಉತ್ಪನ್ನಗಳ ಕುರಿತ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಾತನಾಡಿದರು.
    ಅಡಕೆಯಿಂದ ಹೊಸ ಉತ್ಪನ್ನ ತಯಾರಿಸುವುದು ಮಾತ್ರ ಮೌಲ್ಯವರ್ಧನೆಯಲ್ಲ. ಉತ್ತಮ ತಳಿ ಆಯ್ಕೆ, ಕೃಷಿಯ ಖರ್ಚಿನ ಪ್ರಮಾಣ ತಗ್ಗಿಸುವುದು, ಹೆಚ್ಚು ಫಸಲು ಪಡೆಯುವುದು ಕೂಡ ಮೌಲ್ಯವರ್ಧನೆಯ ಒಂದು ಭಾಗವೇ ಆಗಿದೆ. ಈ ನಿಟ್ಟಿನಲ್ಲೂ ಬೆಳೆಗಾರರು ಗಮನ ಕೇಂದ್ರೀಕರಿಸಬೇಕು ಎಂದರು.
    ಅಡಕೆಯಲ್ಲಿ ಯಾವುದೂ ತ್ಯಾಜ್ಯವಲ್ಲ. ಅಡಕೆ ಮರಗಳಿಂದ ಪೀಠೋಪಕರಣ ಮಾಡಬಹುದು. ಸೋಗೆ, ಸಿಪ್ಪೆ ಉತ್ತಮ ಗೊಬ್ಬರವಾಗಬಲ್ಲದು. ಹಾಳೆಯಿಂದ ಅನೇಕ ಉತ್ಪನ್ನಗಳು ಇಂದು ಮಾರುಕಟ್ಟೆಗೆ ಬಂದಿವೆ. ರಫ್ತಿನಲ್ಲೂ ಹಾಳೆ ತಟ್ಟೆಗಳು ಗಮನ ಸೆಳೆದಿವೆ. ಅಡಕೆಯಿಂದ ಚೊಗರು ಬೇರ್ಪಡಿಸಿ ಅದನ್ನು ಬಟ್ಟೆಗಳಿಗೆ ನೈಸರ್ಗಿಕ ಬಣ್ಣವಾಗಿ ಬಳಸಬಹುದು. ಕೆಲ ವರ್ಷಗಳ ಹಿಂದೆ ಅಷ್ಟೇನೂ ಲಾಭದಾಯಕವಾಗಿರಲಿಲ್ಲ. ಆದರೆ ಇಂದಿನ ತಂತ್ರಜ್ಞಾನದಲ್ಲಿ ಇದಕ್ಕೂ ಪರಿಹಾರ ಕಂಡುಕೊಳ್ಳಲಾಗಿದೆ. ವಿದೇಶಗಳಲ್ಲೂ ಅಡಕೆ ಚೊಗರಿಗೆ ವ್ಯಾಪಕ ಬೇಡಿಕೆ ಇದೆ ಎಂದು ತಿಳಿಸಿದರು.
    ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಕಾರ್ಯಾಗಾರ ಉದ್ಘಾಟಿಸಿದರು. ಕಲ್ಲಿಕೋಟೆ ಡಿಎಎಸ್‌ಡಿ ಉಪನಿರ್ದೇಶಕಿ ಡಾ. ಫೆಮಿನಾ, ವಿವಿ ಆಡಳಿತ ಮಂಡಳಿ ಸದಸ್ಯ ಕೆ.ನಾಗರಾಜ್, ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾನಾಯ್ಕಾ, ಅಡಕೆ ಪತ್ರಿಕೆಯ ಶ್ರೀಪಡ್ರೆ, ಮ್ಯಾಮ್ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್, ಅಡಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ನಾಗರಾಜಪ್ಪ ಅಡಿವಪ್ಪರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts