More

    ತಮಿಳುನಾಡಲ್ಲಿ ಬಿಜೆಪಿಗೆ ಸುಧಾರಿತ ಫಲಿತಾಂಶ?

    | ರಾಘವ ಶರ್ಮ ನಿಡ್ಲೆ, ನವದೆಹಲಿ

    ದ್ರಾವಿಡ ಪಕ್ಷಗಳನ್ನೇ ಗೆಲ್ಲಿಸುವ ಮತ್ತು ರಾಷ್ಟ್ರೀಯ ಪಕ್ಷಗಳನ್ನು ಗಂಭೀರವಾಗಿ ಪರಿಗಣಿಸದ ತಮಿಳುನಾಡಿನಲ್ಲಿ ಈ ಬಾರಿಯಾದರೂ, ನಾಲ್ಕೈದು ಸೀಟುಗಳನ್ನು ಗೆಲ್ಲಬೇಕು ಎಂದು ಬಿಜೆಪಿ ಶಕ್ತಿಮೀರಿ ಯತ್ನಿಸುತ್ತಿದೆ. ಈ ದಿಕ್ಕಿನಲ್ಲಿ ಖುದ್ದು ಪ್ರಧಾನಿಯೇ ಹೆಚ್ಚು ಗಮನವಹಿಸಿದ್ದಾರೆ. ತಮಿಳುನಾಡಿನ ಎಲ್ಲ 39 ಕ್ಷೇತ್ರಗಳಿಗೆ ಏಪ್ರಿಲ್ 19ರಂದೇ ಮತದಾನ ನಡೆಯುತ್ತಿದೆ. ಡಿಎಂಕೆ-ಕಾಂಗ್ರೆಸ್ ಒಳಗೊಂಡ ಇಂಡಿಯಾ ಮೈತ್ರಿಕೂಟ ಮತ್ತು ಮಾಜಿ ಸಿಎಂ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ವಿರುದ್ಧ ರಾಜ್ಯದ ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದುಕೊಂಡ ಬಿಜೆಪಿ ಚುನಾವಣಾ ಹೋರಾಟಕ್ಕೆ ಸಜ್ಜಾಗಿದೆ. ಎಐಎಡಿಎಂಕೆ ಎನ್​ಡಿಎ ಮೈತ್ರಿಕೂಟದಿಂದ ಹೊರಬಂದಿರುವುದರಿಂದ ಏಕಾಂಗಿ ಸ್ಪರ್ಧೆಗೆ ಮುಂದಾಗಿದೆ.

    ಎರಡು ಪ್ರಮುಖ ಬೆಳವಣಿಗೆಗಳ ನಂತರ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಎದುರಿಸುತ್ತಿರುವ ಮೊದಲ ಚುನಾವಣೆ ಇದು. ಮೊದಲನೆಯದಾಗಿ, ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಮತ್ತವರ ಬೆಂಬಲಿಗರನ್ನು ಪಕ್ಷದಿಂದ ಹೊರಹಾಕಲಾಯ್ತು. ಎರಡನೆಯದಾಗಿ, ಎಐಎಡಿಎಂಕೆ-ಬಿಜೆಪಿ ಸಂಬಂಧ ಮುರಿದುಬಿದ್ದಿದೆ. ಈ ಚುನಾವಣೆಯಲ್ಲಿ ಹೆಚ್ಚಿನ ಲೋಕಸಭೆ ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷಕ್ಕೆ ನಾನೇ ನಿಜವಾದ ಮಾಸ್ ಲೀಡರ್ ಎಂಬುದನ್ನು ಸಾಬೀತುಪಡಿಸುವ ಅನಿವಾರ್ಯತೆಯಲ್ಲಿ ಪಳನಿಸ್ವಾಮಿ ಇದ್ದಾರೆ. ಬಿಜೆಪಿ ಸಖ್ಯ ಕಡಿದುಕೊಂಡ ನಂತರದಲ್ಲಿ, ರಾಷ್ಟ್ರೀಯ ಪಕ್ಷಗಳು ತಮಿಳುನಾಡಿನ ಹಿತಾಸಕ್ತಿಗಳಿಗೆ ವಿರುದ್ಧ ಎಂದು ಕಿಡಿಕಾರುತ್ತಿರುವ ಅವರು, ಹಿಂದಿ ಹೇರಿಕೆ, ಪ್ರಾದೇಶಿಕವಾದದಂತಹ ವಿಚಾರಗಳನ್ನು ಮತ್ತೆ ತೇಲಿಬಿಡುತ್ತಿದ್ದಾರೆ.

    ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿ ಹುದ್ದೆ ತೊರೆದು, ಬಿಜೆಪಿ ಸೇರ್ಪಡೆಯಾದ ಅಣ್ಣಾಮಲೈ ಈಗ ರಾಜ್ಯ ಬಿಜೆಪಿ ಅಧ್ಯಕ್ಷರು. ಕೊಯಮತ್ತೂರು ಲೋಕಸಭೆಯಿಂದ ಸ್ಪರ್ಧಿಸುತ್ತಿದ್ದು, ಮೊದಲ ಬಾರಿಗೆ ಲೋಕಸಭೆ ಕಣದಲ್ಲಿದ್ದಾರೆ. ಡಿಎಂಕೆ, ಎಐಎಡಿಎಂಕೆ ವಿರುದ್ಧದ ಪ್ರಬಲ ಹೋರಾಟದಿಂದಲೇ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಾರೆ. ಎಐಎಡಿಎಂಕೆ ಎನ್​ಡಿಎ ಮೈತ್ರಿಕೂಟದಲ್ಲಿದ್ದಾಗಲೂ ಆ ಪಕ್ಷದ ನಾಯಕರನ್ನು ಟೀಕಿಸುವಲ್ಲಿ ಅಣ್ಣಾಮಲೈ ಹಿಂದೇಟು ಹಾಕಿರಲಿಲ್ಲ. ಅಣ್ಣಾಮಲೈ ಬೆಳವಣಿಗೆಯನ್ನು ಕಂಡೇ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಬೇಕು. 2026ರ ವಿಧಾನಸಭೆ ಚುನಾವಣೆಯನ್ನು ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ ನಾಯಕತ್ವದಲ್ಲೇ ಎದುರಿಸಬೇಕು ಎಂಬ ಪ್ರಸ್ತಾವವನ್ನು ಬಿಜೆಪಿ ಹೈಕಮಾಂಡ್ ಮುಂದೆ ಎಐಎಡಿಎಂಕೆ ನಾಯಕರು ಮುಂದಿಟ್ಟಿದ್ದರು. ಆದರೆ ಬಿಜೆಪಿ ಇದಕ್ಕೊಪ್ಪಲಿಲ್ಲ. ಅದರಿಂದ ಮುನಿಸಿಕೊಂಡ ಎಐಎಡಿಎಂಕೆ, ಕಳೆದ ಆಗಸ್ಟ್​ನಲ್ಲಿ ಮೈತ್ರಿಕೂಟದಿಂದ ಹೊರನಡೆದಿತ್ತು.

    ಅಣ್ಣಾಮಲೈ ಸುಮಾರು 100 ದಿನಗಳ ಎನ್ ಮಣ್, ಎನ್ ಮಕ್ಕಳ್ (ನನ್ನ ಮಣ್ಣು, ನನ್ನ ಜನರು) ಎಂಬ ಪಾದಯಾತ್ರೆ ಪೂರ್ಣಗೊಳಿಸಿದ್ದಾರೆ. ಮನೆ-ಮನಗಳನ್ನು ತಲುಪುವ ಯತ್ನ ಮಾಡಿದ್ದಾರೆ. ಅಣ್ಣಾಮಲೈ ವೈಯಕ್ತಿಕ ಜನಪ್ರಿಯತೆ ಹೆಚ್ಚುತ್ತಿದೆ. ಹಾಗಂತ, ಅವರು ಪ್ರತಿನಿಧಿಸುತ್ತಿರುವ ಬಿಜೆಪಿಯನ್ನು ಮತದಾರರು ಸ್ವೀಕರಿಸುವ ಬಗ್ಗೆ ಖಚಿತತೆ ಇಲ್ಲ.

    ಎಐಎಡಿಎಂಕೆ ಬಿಜೆಪಿ ಜತೆ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎನ್ನುವುದು ಡಿಎಂಕೆ ಆರೋಪ. ಎಐಎಡಿಎಂಕೆ ಕೇಂದ್ರದ ಸಿಎಎ ಕಾನೂನು ಬೆಂಬಲಿಸಿದ್ದನ್ನು ಡಿಎಂಕೆ ಖಂಡತುಂಡವಾಗಿ ಟೀಕಿಸಿದೆ. ಇದು ಚುನಾವಣಾ ವಿಷಯವಾಗಿಯೂ ಚರ್ಚೆಯಲ್ಲಿದೆ. ಡಿಎಂಕೆ ಸಚಿವರ ವಿರುದ್ಧದ ಭ್ರಷ್ಟಾಚಾರ ಆರೋಪಗಳು, ನ್ಯಾಯಾಲಯಗಳ ಮುಂದೆ ಬಾಕಿ ಇರುವ ಪ್ರಕರಣಗಳು, ಡಿಎಂಕೆ ’ಕುಟುಂಬ ರಾಜಕಾರಣ’ ಸೇರಿ ಹಲವು ವಿಚಾರಗಳು ಚುನಾವಣೆಯಲ್ಲಿ ಸದ್ದು ಮಾಡಲಿವೆ. ಡಿಎಂಕೆ ವಿರುದ್ಧ ಅಣ್ಣಾಮಲೈ ದಿನನಿತ್ಯವೂ ವಾಗ್ದಾಳಿ ನಡೆಸುವ ಮೂಲಕ ವಿರೋಧಿ ಅಲೆ ರೂಪಿಸುವ ಯತ್ನ ಮಾಡಿದ್ದಾರೆ. ಜನರು ಡಿಎಂಕೆ ಬಗ್ಗೆ ಭ್ರಮನಿರಸನಗೊಂಡಿದ್ದಾರೆ ಎಂದು ವಿಪಕ್ಷಗಳು ಹೇಳುತ್ತಿದ್ದರೂ, ಅವು ಮತಗಳಾಗಿ ಪರಿವರ್ತನೆಯಾಗುವವೇ ಎಂಬುದು ಸದ್ಯದ ಪ್ರಶ್ನೆ.

    ತಮಿಳುನಾಡಿನ ಮೇಲೆ ವಿಶೇಷ ನಿಗಾ ಇಟ್ಟಿರುವ ಪ್ರಧಾನಿ ಮೋದಿ, ಪಕ್ಷದ ನಿರ್ವಹಣೆಯಲ್ಲಿ ಗಮನಾರ್ಹ ಸುಧಾರಣೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ಮೂರು ತಿಂಗಳಲ್ಲಿ ರಾಜ್ಯದಲ್ಲಿ 5 ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡಿದ್ದಾರೆ. 3 ತಿಂಗಳ ಅಂತರದಲ್ಲಿ ಯಾವ ಪ್ರಧಾನಿಯೂ ರಾಜ್ಯದಲ್ಲಿ ಈ ಪರಿ ಪ್ರವಾಸ ಮಾಡಿದ ಉದಾಹರಣೆಯಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 4 ಶಾಸಕ ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟಕ್ಕೇ ಒಲವು:

    ತಮಿಳುನಾಡಿನಲ್ಲಿ ಕಾಂಗ್ರೆಸ್ ಜತೆ ಗುರುತಿಸಿಕೊಂಡ ಪಕ್ಷದ ಮೈತ್ರಿಕೂಟಕ್ಕೇ ಹೆಚ್ಚು ಸ್ಥಾನಗಳು ಲಭ್ಯವಾಗಿರುವುದಕ್ಕೆ ಇತಿಹಾಸವೇ ಸಾಕ್ಷಿ. 1952ರಿಂದ 2019ರವರೆಗಿನ 17 ಲೋಕಸಭಾ ಚುನಾವಣೆಗಳಲ್ಲಿ, ಕಾಂಗ್ರೆಸ್ 1952, 1957 ಮತ್ತು 1962ರಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದಾದ ನಂತರದಲ್ಲಿ ಬಹುಪಾಲು ಚುನಾವಣೆಗಳಲ್ಲಿ ಡಿಎಂಕೆ ಜತೆ ಮೈತ್ರಿ ಮಾಡಿಕೊಂಡಿದೆ. ಎಐಎಡಿಎಂಕೆ ಜತೆಗೂ ಅದು ಕೆಲ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡಿತ್ತು. 1967, 1998, 1991 ಮತ್ತು 2014 ಹೊರತುಪಡಿಸಿ ಉಳಿದ 13 ಲೋಕಸಭೆ ಚುನಾವಣೆಗಳಲ್ಲಿ ತಮಿಳುನಾಡು ಮತದಾರರು ಕಾಂಗ್ರೆಸ್ ಒಳಗೊಂಡ ಮೈತ್ರಿಕೂಟವನ್ನೇ ಆಯ್ಕೆ ಮಾಡಿದ್ದಾರೆ.

    ಐಎನ್​ಡಿಐಎ ಮೈತ್ರಿಕೂಟ ಸೀಟುಹಂಚಿಕೆ: 

    ಆಡಳಿತಾರೂಢ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮಗೊಳಿಸಿದ್ದು, 22 ಸೀಟುಗಳಲ್ಲಿ ಡಿಎಂಕೆ ಸ್ಪರ್ಧಿಸುತ್ತಿದೆ. ಪುದುಚೇರಿ ಸೇರಿ ಒಟ್ಟು 9 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯಲಿದೆ. ಉಳಿದ 8 ಸೀಟುಗಳನ್ನು ಎಂಡಿಎಂಕೆ, ವಿಸಿ, ಸಿಪಿಐ, ಸಿಪಿಐಎಂ, ಐಯುಎಂಎಲ್ ಪಕ್ಷಗಳಿಗೆ ಹಂಚಲಾಗಿದೆ.

    5 ಸೀಟುಗಳ ಮೇಲೆ ಗಮನ: 

    ಹಲವು ಕ್ಷೇತ್ರಗಳು ಈ ಬಾರಿ ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಲಿವೆ. ಹಾಗಾಗಿ, ಕನ್ಯಾಕುಮಾರಿ, ಕೊಯಮತ್ತೂರು, ರಾಮನಾಥಪುರಂ, ತೂತುಕುಡಿ, ಶಿವಗಂಗಾ ಸೇರಿ 5 ಸೀಟುಗಳ ಮೇಲೆ ಬಿಜೆಪಿ ತನ್ನ ಗಮನ ಕೇಂದ್ರೀಕರಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಈ 5 ಕ್ಷೇತ್ರಗಳಲ್ಲಿ ಬಿಜೆಪಿ ಮತ ಗಳಿಕೆ ಪ್ರಮಾಣವೂ ಏರಿಕೆ ಕಂಡಿದೆ. 2014ರಲ್ಲಿ ಕನ್ಯಾಕುಮಾರಿ ಕ್ಷೇತ್ರದಿಂದ ಬಿಜೆಪಿಯ ಪೊನ್ ರಾಧಾಕೃಷ್ಣನ್ ಅವರು ಕಾಂಗ್ರೆಸ್ಸಿನ ವಸಂತ್ ಕುಮಾರ್ ವಿರುದ್ಧ ಒಂದು ಲಕ್ಷಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, 2019ರಲ್ಲಿ ಬಿಜೆಪಿ-ಕಾಂಗ್ರೆಸ್ ನೇರ ಹಣಾಹಣಿಯಲ್ಲಿ ಕಾಂಗ್ರೆಸ್​ನ ವಸಂತ್ ಕುಮಾರ್ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದರು. ಈ ಸಲವೂ ಪೊನ್ ರಾಧಾಕೃಷ್ಣನ್​ಗೆ ಬಿಜೆಪಿ ಟಿಕೆಟ್ ನೀಡಿದೆ. ಕೊಯಮತ್ತೂರು ಕ್ಷೇತ್ರದಲ್ಲಿ 2014ರಲ್ಲಿ ಎಐಎಡಿಎಂಕೆ ಮತ್ತು 2019ರಲ್ಲಿ ಸಿಪಿಐಎಂ ಪಕ್ಷಗಳು ಗೆಲುವು ಸಾಧಿಸಿವೆ. ಈ ಬಾರಿ ಅಣ್ಣಾಮಲೈ ಪ್ರವೇಶ ಕೊಯಮತ್ತೂರಿನಲ್ಲಿ ಸಂಚಲನ ಸೃಷ್ಟಿಸಿದೆ. 2019ರಲ್ಲಿ ವೆಲ್ಲೂರ್ ಕ್ಷೇತ್ರದಲ್ಲಿ ಎಐಎಡಿಎಂಕೆ ಚಿಹ್ನೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಡಾ. ಎ.ಸಿ. ಷಣ್ಮುಗಂ ಕೇವಲ 12 ಸಾವಿರ ಮತಗಳ ಅಂತರದಿಂದ ಡಿಎಂಕೆ ವಿರುದ್ಧ ಸೋತಿದ್ದರು. ಈ ಬಾರಿ ಷಣ್ಮುಗಂ ಮತ್ತೆ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.

    ರಾಮನಾಥಪುರಂ ಕ್ಷೇತ್ರದಲ್ಲಿ ಕಳೆದ ಮೂರು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ 30% ಮತಗಳನ್ನು ಪಡೆದಿದೆ. 2009 ಮತ್ತು 2014ರಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದ್ದರೆ, ಡಿಎಂಕೆ ಮತ್ತು ಎಐಎಡಿಎಂಕೆ ಕ್ರಮವಾಗಿ ಸ್ಥಾನಗಳನ್ನು ಗೆದ್ದವು. 2019ರ ಚುನಾವಣೆಯಲ್ಲಿ ಐಯುಎಂಎಲ್ ಅಭ್ಯರ್ಥಿ ಗೆದ್ದರೆ, ಬಿಜೆಪಿಯ ನೈನಾರ್ ನಾಗೇಂದ್ರನ್ ಎರಡನೇ ಸ್ಥಾನಿಯಾಗಿದ್ದರು. ಪುದುಚೇರಿ ಲೆಫ್ಟಿನಂಟ್ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿರುವ ತಮಿಳ್​ಇಸೈ ಈ ಬಾರಿ, ಚೆನ್ನೈ ದಕ್ಷಿಣ ಕ್ಷೇತ್ರದಿಂದ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ಅವರು ಮೀಸಲು ಕ್ಷೇತ್ರ ನೀಲಗಿರಿಯಿಂದ ಸ್ಪರ್ಧಿಸುತ್ತಿದ್ದಾರೆ.

    ತಮಿಳುನಾಡಲ್ಲಿ ಬಿಜೆಪಿಗೆ ಸುಧಾರಿತ ಫಲಿತಾಂಶ?ಮೇಕೆದಾಟು ಪ್ರಸ್ತಾಪ:

    ಕರ್ನಾಟಕ ನಿರ್ವಿುಸಲು ಉದ್ದೇಶಿಸಿರುವ ಮೇಕೆದಾಟು ಜಲಾಶಯಕ್ಕೆ ಅವಕಾಶ ನೀಡುವುದಿಲ್ಲ ಎಂದು ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ. ಮೇಕೆದಾಟುವಿಗೆ ಆಕ್ಷೇಪಿಸಿ ತಮಿಳುನಾಡು ಈಗಾಗಲೇ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮೇಕೆದಾಟು ವಿಷಯದಲ್ಲಿ ಕೇಂದ್ರ ಸರ್ಕಾರ ಕೂಡ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳಲಾಗದು. ಕೇಂದ್ರ ಸರ್ಕಾರಕ್ಕೆ ಎರಡೂ ರಾಜ್ಯಗಳ ಹಿತಾಸಕ್ತಿ ಮುಖ್ಯ. ಹೀಗಾಗಿ, ಜಲಾಶಯ ನಿರ್ಮಾಣ ಸಾಧ್ಯವೇ ಇಲ್ಲವೇ, ಇದಕ್ಕೆ ಅವಕಾಶ ನೀಡಬೇಕೆ ಬೇಡವೇ ಎಂಬ ಬಗ್ಗೆ ಕೇಂದ್ರ ಸಮರ್ಪಕ ಅಧ್ಯಯನ ಮಾಡಿ ತನ್ನ ನಿರ್ಧಾರ ಪ್ರಕಟಿಸುವ ತನಕ, ಮೇಕೆದಾಟು ಸದ್ದು ಮಾಡುತ್ತ, ಸುದ್ದಿಯಾಗುತ್ತಲೇ ಇರುತ್ತದೆ. ಹಾಗಾಗಿ, ಡಿಎಂಕೆ ಪ್ರಣಾಳಿಕೆಯಲ್ಲಿ ವಿರೋಧಿಸಿದ ತಕ್ಷಣ ಏನೂ ಆಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

    ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts