More

    ಊರಿಗೆ ಹೋಗುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ: ಅಪರಾಧಿಗೆ 28 ವರ್ಷ ಜೈಲು ಶಿಕ್ಷೆ ಕೊಟ್ಟ ನ್ಯಾಯಾಲಯ

    ಮಂಡ್ಯ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 28 ವರ್ಷ ಜೈಲು ಶಿಕ್ಷೆ ಹಾಗೂ 1.5 ಲಕ್ಷ ರೂ ದಂಡ ವಿಧಿಸಿ ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯ ತೀರ್ಪು ನೀಡಿದೆ.
    ತಮಿಳುನಾಡು ಮೂಲದ ಹಾಗೂ ಬೆಂಗಳೂರಿನ ಪೀಣ್ಯ 2ನೇ ಹಂತದ ಚೇತನ್ ವೃತ್ತದ ಬಳಿ ಇರುವ ವೆಂಕಟೇಶ್ ಶಿಕ್ಷೆಗೆ ಗುರಿಯಾದ ಅಪರಾಧಿ. 2020 ಸೆ.20ರಂದು 14 ವರ್ಷದ ಬಾಲಕಿ ಕೆ.ಆರ್.ಪೇಟೆ ತಾಲೂಕಿನ ಗ್ರಾಮವೊಂದಕ್ಕೆ ಹೋಗಲು ಬೆಂಗಳೂರಿನ ಗೋವರ್ಧನ ಬಸ್ ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ಹತ್ತಿಕೊಂಡಿದ್ದಳು. ಇದೇ ಬಸ್‌ಗೆ ವೆಂಕಟೇಶ್ ಸಹ ಹತ್ತಿಕೊಂಡಿದ್ದು, ನಂತರ ಬಾಲಕಿ ಕುಳಿತಿದ್ದ ಸೀಟ್‌ನಲ್ಲಿ ಪಕ್ಕ ಕುಳಿತುಕೊಂಡು ಮಾತನಾಡಿಸಿದಲ್ಲದೆ, ಲೈಂಗಿಕವಾಗಿ ಮುಟ್ಟಿ ದೌರ್ಜನ್ಯವೆಸಗಿದ್ದನು.
    ಮಾತ್ರವಲ್ಲದೆ ಅದೇ ದಿನ ಮಧ್ಯಾಹ್ನ ನಾಗಮಂಗಲ ಟೌನ್‌ಗೆ ಬಂದು ಇಳಿದುಕೊಂಡು ಬಾಲಕಿಯನ್ನು ಪುಸಲಾಯಿಸಿಕೊಂಡು ಮತ್ತೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾನೆ. ನಂತರ ರೈಲಿನಲ್ಲಿ ತಮಿಳುನಾಡಿನ ಕೊಯಮತ್ತೂರು ಹತ್ತಿರ ಇರುವ ಪುದುಪುದೂರಿಗೆ ಕರೆದುಕೊಂಡು ಹೋಗಿ ಧನಲಕ್ಷ್ಮೀ ನಗರದಲ್ಲಿ ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಬಾಲಕಿಯ ಕುತ್ತಿಗೆಗೆ ಹರಿಸಿನ ಕೊನೆ ದಾರವನ್ನು ಕಟ್ಟಿ ಮದುವೆ ಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದನು. ಈ ಸಂಬಂಧ ಪ್ರಕರಣ ಬೆಳಕಿಗೆ ಬಂದ ನಂತರ ನಾಗಮಂಗಲ ಟೌನ್ ಠಾಣೆಯ ಪೊಲೀಸರು ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕ ಕೆ.ಎನ್.ಸುಧಾಕರ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
    ವಿಚಾರಣೆ ನಡೆದು ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶೆ ಕೆ.ಎ.ನಾಗಜ್ಯೋತಿ ಅಪರಾಧಿಗೆ ಭಾದಂಸಂ ಕಲಂ 354(ಡಿ) ಮತ್ತು ಪೋಕ್ಸೋ ಕಾಯ್ದೆ ಕಲಂ 12 ಆಡಿಯಲ್ಲಿನ ಅಪರಾಧಕ್ಕೆ 1 ವರ್ಷ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ ದಂಡ, ಒಂದು ವೇಳೆ ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ, ಭಾದಂಸಂ ಕಲಂ 363 ಮತ್ತು 366 ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 5 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ದಂಡ, ಪಾವತಿಸಲು ತಪ್ಪಿದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ ಭಾದಂಸಂ ಕಲಂ 9 ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 1 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ ದಂಡ, ಪಾವತಿಸಲು ತಪ್ಪಿದಲ್ಲಿ 8 ತಿಂಗಳ ಸಾದಾ ಶಿಕ್ಷೆ ಮತ್ತು ಭಾದಂಸಂ ಕಲಂ 376(3) ಮತ್ತು ಪೋಕೋ ಕಾಯ್ದೆ ಕಲಂ 6 ಅಡಿಯಲ್ಲಿನ ಅಪರಾಧಕ್ಕೆ 21 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ದಂಡ, ಪಾವತಿಸಲು ತಪ್ಪಿದಲ್ಲಿ 5 ವರ್ಷ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ತೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts