More

    ಕುಕ್ಕೆ ಜಾತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಸಂದರ್ಭ ಕ್ಷೇತ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
    ಜಾತ್ರೋತ್ಸವದ ಪ್ರಧಾನ ದಿನಗಳಾದ ಚೌತಿ, ಪಂಚಮಿ, ಷಷ್ಠಿ ಮತ್ತು ಅವಭೃತ ದಿನ ಕ್ಷೇತ್ರದ ರಥಬೀದಿಯಿಂದ ಕಾಶಿಕಟ್ಟೆ ತನಕ ಲಕ್ಷಾಂತರ ಮಂದಿ ಸಂಚರಿಸುವುದರಿಂದ ಈ ಸಮಯದಲ್ಲಿ ಉಂಟಾಗುವ ಕಸಗಳನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು.

    ಗರಿಷ್ಠ ಶುಚಿತ್ವ: ಜಾತ್ರೋತ್ಸವದ ಆರಂಭಿಕ ದಿನದಿಂದ ಕೊನೆಯ ದಿನವಾದ ಡಿ.26ರ ತನಕ 40ಕ್ಕೂ ಅಧಿಕ ಪೌರ ಕಾರ್ಮಿಕರು ನಿರಂತರವಾಗಿ ಸ್ವಚ್ಛತೆ ನಡೆಸಿದರು.

    ದೇವಳದ ಆರೋಗ್ಯ ನಿರೀಕ್ಷಕ ಯೋಗೀಶ್ ಮಾರ್ಗದರ್ಶನ ಮತ್ತು ಸಲಹೆ ಮೂಲಕ ಕ್ಷೇತ್ರದ ರಥಬೀದಿಯಿಂದ ಕಾಶಿಕಟ್ಟೆ ತನಕ, ಪಾರ್ಕಿಂಗ್ ಸ್ಥಳ, ಆದಿ ಸುಬ್ರಹ್ಮಣ್ಯ ಮೊದಲಾದೆಡೆ ಗರಿಷ್ಠ ಶುಚಿತ್ವಕ್ಕೆ ಶ್ರಮವಹಿಸಿದರು. ಕುಕ್ಕೆಯ ಸ್ವಯಂಸೇವಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಕುಮಾರಧಾರಾದಿಂದ ದೇವಳದ ತನಕ ರಸ್ತೆ ಗುಡಿಸಿ ನೀರು ಹಾಯಿಸಿ ಶುಚಿಗೊಳಿಸುವ ಕಾರ್ಯ ನಡೆಸಿದ್ದರು. ಕೋವಿಡ್-19 ನಿಯಮ ಪಾಲನೆಗಾಗಿ ದೇವಳದಿಂದ ಕುಮಾರಧಾರಾ ತನಕ, ಆದಿಸುಬ್ರಹ್ಮಣ್ಯ, ಸವಾರಿ ಮಂಟಪ, ಪಾರ್ಕಿಂಗ್ ಸ್ಥಳಗಳ ಅಲ್ಲಲ್ಲಿ ಜಾಗೃತಿ ಫಲಕ ಅಳವಡಿಸಲಾಗಿತ್ತು.

    ತಾತ್ಕಾಲಿಕ ಶೌಚಗೃಹ: 100ಕ್ಕೂ ಅಧಿಕ ಡಸ್ಟ್‌ಬಿನ್‌ಗಳನ್ನು ರಥಬೀದಿಯಿಂದ ಕಾಶಿಕಟ್ಟೆ ತನಕ ಇರಿಸಲಾಗಿತ್ತು. ತಾತ್ಕಾಲಿಕ ಶೌಚಗೃಹಗಳನ್ನು ಕುಮಾರಧಾರಾ, ಕಾಶಿಕಟ್ಟೆ, ಸವಾರಿ ಮಂಟಪ, ಪಾರ್ಕಿಂಗ್ ಸ್ಥಳ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ನಿರ್ಮಿಸಲಾಗಿತ್ತು.

    ಮಾಸ್ಕ್ ಧರಿಸಿ ರಥ ಎಳೆದ ಭಕ್ತರು: ಕೋವಿಡ್-19 ನಿಯಮ ಪ್ರಕಾರ ಕ್ಷೇತ್ರದ ರಥಬೀದಿ ಕ್ರಮಿಸುವಾಗ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿತ್ತು. ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ಈ ಬಗ್ಗೆ ಎಚ್ಚರಿಕೆ ವಹಿಸಿದ್ದರು. ರಥ ಎಳೆಯುವ ಎಲ್ಲ ಭಕ್ತರು ಮಾಸ್ಕ್ ಧಾರಣೆ ಮಾಡಿಕೊಂಡೇ ರಥ ಎಳೆಯುವಂತೆ ದೇವಳದ ಭದ್ರತಾ ಸಿಬ್ಬಂದಿ ವ್ಯವಸ್ಥೆ ಮಾಡಿದ್ದರು. ದೇವಳ ಪ್ರವೇಶಿಸುವಾಗ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕಾೃನಿಂಗ್, ಸ್ಯಾನಿಟೈಸರ್ ವಿತರಿಸಲಾಗಿತ್ತು. ಮಾಸ್ಕ್ ರಹಿತರಿಗೆ ಆರೋಗ್ಯ ಇಲಾಖೆ ಸಹಕಾರದಿಂದ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು.

    ಜಾತ್ರೆ ಆರಂಭಕ್ಕೆ ಮೊದಲು ವ್ಯವಸ್ಥೆ ಬಗ್ಗೆ ಮೂರು ಬಾರಿ ಸಭೆ ನಡೆಸಿ ಸ್ವಚ್ಛತೆಯೊಂದಿಗೆ ಕೋವಿಡ್-19 ನಿಯಮಗಳನ್ನು ಅನುಸರಿಸುವ ಬಗ್ಗೆ ಯೋಜನೆ ಸಿದ್ಧಪಡಿಸಿದ್ದೆವು. ದಿನದಲ್ಲಿ ಹಲವು ಬಾರಿ ಸ್ವಚ್ಛತಾ ಸೇವೆ ನಡೆಸಲು ಬೇಕಾದ ವ್ಯವಸ್ಥೆಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಊರವರು, ಸ್ವಯಂಸೇವಕರು, ಆರೋಗ್ಯ ಇಲಾಖೆಯವರು, ರವಿ ಕಕ್ಕೆಪದವು ಮತ್ತು ತಂಡ, ಪಿಡಿಒ ಮತ್ತು ಕಾರ್ಮಿಕ ವರ್ಗ ಸ್ವಚ್ಛತಾ ಸೇವೆಯಲ್ಲಿ ಹಗಲಿರುಳೆನ್ನದೆ ಸಹಕಾರ ನೀಡಿದ್ದಾರೆ.
    ಡಾ.ಯತೀಶ್ ಉಳ್ಳಾಲ್ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts