More

    ಚಾಕೊಲೇಟ್‌ಗೆ ಆಮದು ಸುಂಕ ಕಹಿ, ಕೊಕ್ಕೋ ದೇಶೀಯ ಉತ್ಪಾದನೆ ಸಾಕಾಗದೆ ಕಂಪನಿಗಳಿಗೆ ಸಮಸ್ಯೆ

    ವೇಣುವಿನೋದ್ ಕೆ.ಎಸ್. ಮಂಗಳೂರು

    ಕರಾವಳಿಯ ಪ್ರಮುಖ ಅಡಕೆ ಸಹಕಾರಿ ಅಲ್ಲದೆ ಚಾಕೊಲೇಟ್ ಉತ್ಪಾದನಾ ಸಂಸ್ಥೆಯೂ ಆಗಿರುವ ಕ್ಯಾಂಪ್ಕೊ ಸೇರಿದಂತೆ ದೇಶದ ಚಾಕೊಲೇಟ್ ಕಂಪನಿಗಳು ಕೊಕ್ಕೋ ಪುಡಿಯ ಮೇಲೆ ದುಬಾರಿ ಆಮದು ಸುಂಕ ಹೇರಿಕೆಯ ಬಿಸಿ ಎದುರಿಸುತ್ತಿವೆ.

    ಚಾಕೊಲೇಟ್ ಉತ್ಪಾದನೆಗೆ ದೊಡ್ಡ ಪ್ರಮಾಣದಲ್ಲಿ ಬೇಕಾಗಿರುವುದು ಕೊಕ್ಕೋ ಪೌಡರ್. ದೇಶೀಯವಾಗಿ ಉತ್ಪಾದನೆಯಾಗುವ ಕೊಕ್ಕೋ ಇದಕ್ಕೆ ಸಾಕಾಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತದೆ. ಹಾಗಾಗಿ ನಿರ್ವಾಹವಿಲ್ಲದೆ ಆಮದು ಮಾಡಿಕೊಳ್ಳಬೇಕಾಗುತ್ತದೆ. ಕ್ಯಾಂಪ್ಕೊ ಕೂಡ ಇದನ್ನೇ ಅನುಸರಿಸುತ್ತದೆ.

    ಕೊಕ್ಕೋ ಪೌಡರ್ ಮೇಲೆ ಸರ್ಕಾರ ಶೇ.34ರಷ್ಟು ಆಮದು ಸುಂಕ ಹಾಕುತ್ತಿರುವುದು ಚಾಕೊಲೇಟ್ ಉತ್ಪಾದನೆಯಲ್ಲಿ ದರ ಏರಿಕೆಗೆ ಕಾರಣವಾಗುತ್ತದೆ. ಒಂದೆಡೆ ಸಿಂಗಾಪುರ, ಮಲೇಷ್ಯಾ ದೇಶಗಳಿಗೆ ಘಾನಾ, ಕಾಂಗೊ ರಿಪಬ್ಲಿಕ್ ಮುಂತಾದ ಆಫ್ರಿಕನ್ ದೇಶಗಳಿಂದ ಆಮದು ಸುಂಕವಿಲ್ಲದೆ ಕೊಕ್ಕೋ ಬೀನ್ ಬರುತ್ತಿದೆ. ಅಲ್ಲಿ ಅದು ಪೌಡರ್ ರೂಪ ಪಡೆದು ಭಾರತಕ್ಕೆ ಬರುತ್ತದೆ.
    ಈ ರೀತಿ ಹೆಚ್ಚಿನ ದರ ತೆರುವುದರಿಂದ ನಮ್ಮ ಚಾಕೊಲೇಟ್ ತಯಾರಿಕೆಯಲ್ಲಿ ಇನ್‌ಪುಟ್ ವೆಚ್ಚವೇ ಜಾಸ್ತಿಯಾಗುತ್ತದೆ. ಆದರೆ ಮಲೇಷ್ಯಾ, ಥಾಯ್ಲೆಂಡ್‌ಗಳಲ್ಲಿ ಕೊಕ್ಕೋ ಬೆಳೆಯುವುದಿಲ್ಲ. ಬದಲಿಗೆ ಅವರ ಡ್ಯೂಟಿ ಫ್ರೀ ನೀತಿಯಂತೆ ಶೂನ್ಯ ಆಮದು ಸುಂಕದಲ್ಲಿ ಆಮದು ಮಾಡಿ, ಮೌಲ್ಯವರ್ಧನೆ ಮಾಡುತ್ತಾರೆ. ಅಲ್ಲದೆ ಅಲ್ಲಿಂದ ಬರುವ ಚಾಕೊಲೇಟ್‌ಗಳು ಕಡಿಮೆ ಬೆಲೆಯಲ್ಲಿ ನಮ್ಮ ಚಾಕೊಲೇಟ್‌ಗಳೊಂದಿಗೆ ಪೈಪೋಟಿಯಲ್ಲಿರುತ್ತವೆ ಎನ್ನುತ್ತಾರೆ ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಕುಮಾರ್.

    ಈ ರೀತಿ ಕೊಕ್ಕೋ ಪೌಡರ್ ಆಮದು ಸುಂಕ ಕಡಿಮೆಗೊಳಿಸಿದರೂ ಅದು ಇಲ್ಲಿನ ರೈತರಿಗೆ ಸಮಸ್ಯೆಯಾಗಲಾರದು. ಯಾಕೆಂದರೆ ಇಲ್ಲಿಯ ಬೇಡಿಕೆ ಈಡೇರಿಸಲು ಬೇಕಾದಷ್ಟು ಕೊಕ್ಕೋ ನಮ್ಮ ದೇಶದಲ್ಲಿ ಉತ್ಪಾದನೆಯಾಗುವುದಿಲ್ಲ ಎನ್ನುತ್ತಾರೆ. ಜಿಎಸ್‌ಟಿ ಶುರುವಾದಾಗಿನಿಂದಲೂ ದುಬಾರಿ ಆಮದು ಸುಂಕ ನಮ್ಮಲ್ಲಿ ವಿಧಿಸಲಾಗುತ್ತಿದೆ.

    ಅಡಕೆಗೂ ಜಿಎಸ್‌ಟಿ ಹೊರೆ: ಅಡಕೆಗೆ ಶೇ.5ರಷ್ಟು ಜಿಎಸ್‌ಟಿ ಹಾಕಲಾಗುತ್ತಿರುವುದು ಕೂಡ ಕ್ಯಾಂಪ್ಕೊ ಮೇಲೆ ಹೊರೆ. ಶೇ.70ರಷ್ಟು ಅಡಕೆ ವಹಿವಾಟು ನಡೆಸುವವರು ಖಾಸಗಿ ವ್ಯಾಪಾರಿಗಳು. ಅವರು ಈ ಜಿಎಸ್‌ಟಿ ತಪ್ಪಿಸಿ ವ್ಯಾಪಾರ ಮಾಡುತ್ತಾರೆ. ಅದನ್ನು ಪಾವತಿಸುವ ಬದಲು ತೆರಿಗೆ ತಪ್ಪಿಸಿ, ಅದರ ಸಣ್ಣ ಅಂಶವನ್ನು ಬೆಳೆಗಾರರಿಗೆ ನೀಡುತ್ತಾರೆ. ಇದರಿಂದ ಗ್ರಾಹಕರು ಕ್ಯಾಂಪ್ಕೊದಿಂದ ಹೆಚ್ಚು ದರ ಸಿಗುವುದಾಗಿ ತಿಳಿದು ಅವರಿಗೆ ಕೊಡಲು ಮುಂದಾಗುತ್ತಾರೆ. ಆದರೆ ವಾಸ್ತವವಾಗಿ ದೇಶಕ್ಕಾಗುವ ನಷ್ಟವಿದು. ಅದರ ಬದಲು ಜಿಎಸ್‌ಟಿ ಕನಿಷ್ಠ ಇರಿಸಿದರೆ ಆಗ ಕ್ಯಾಂಪ್ಕೊಗೆ ಹೊರೆ ತಪ್ಪುವುದು ಮಾತ್ರವಲ್ಲ, ಖಾಸಗಿ ವ್ಯಾಪಾರಿಗಳು ಕೂಡ ತೆರಿಗೆ ಪಾವತಿಸಲು ಮುಂದೆ ಬರಬಹುದು ಎನ್ನುವುದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಭಿಪ್ರಾಯ.

    ವಾರ್ಷಿಕ 24 ಸಾವಿರ ಟನ್: ವಾರ್ಷಿಕವಾಗಿ ಕ್ಯಾಂಪ್ಕೊ ಪ್ರಸ್ತುತ 5000ದಿಂದ 6000 ಟನ್ ಕೊಕ್ಕೋ ಬೀನ್ ಖರೀದಿ ಮಾಡುತ್ತದೆ. 7 ಸಾವಿರ ಟನ್‌ನಷ್ಟು ಕೊಕ್ಕೋ ಆಧರಿತ ಚಾಕೊಲೇಟ್ ಉತ್ಪಾದಿಸಲಾಗುತ್ತದೆ. ಭಾರತದಲ್ಲಿ ಒಟ್ಟು ವಾರ್ಷಿಕ 24 ಸಾವಿರ ಟನ್ ಕೊಕ್ಕೋ ಉತ್ಪಾದನೆಯಾಗುತ್ತದೆ. ಕರ್ನಾಟಕ, ಕೇರಳವಲ್ಲದೆ, ಈಗ ಆಂಧ್ರಪ್ರದೇಶದಲ್ಲೂ ಕೊಕ್ಕೋ ಬೆಳೆ ಬೆಳೆಯಲಾಗುತ್ತಿದೆ.

    ಅಡಕೆ ಮೇಲಿನ ಜಿಎಸ್‌ಟಿ ದರ ಇಳಿಕೆ ಬಗ್ಗೆ ನಾವು ಒತ್ತಾಯವಷ್ಟೇ ಮಾಡಿದ್ದೇವೆ, ಇನ್ನೂ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಷ್ಟೆ. ಈಗಿರುವ ಕನಿಷ್ಠ ದರದ ಸ್ಲಾಬ್ ಶೇ.5. ಅದಕ್ಕಿಂತ ಕಡಿಮೆ ಮಾಡಲು ಅವರು ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ.

    ಕೃಷ್ಣಕುಮಾರ್, ಆಡಳಿತ ನಿರ್ದೇಶಕ, ಕ್ಯಾಂಪ್ಕೊ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts