More

    ರೈತರಿಗೆ ವರವಾದ ಹಿಂಗಾರು ಮಳೆ, ಬಿತ್ತನೆಗೆ ಸಜ್ಜಾದ ಕೃಷಿಕರು

    ಅಳವಂಡಿ: ಪ್ರಸಕ್ತ ವರ್ಷ ಹಿಂಗಾರು ಮಳೆ ಪ್ರಾರಂಭದಲ್ಲಿ ಉತ್ತಮವಾಗಿ ಆಗಿರಲಿಲ್ಲ. ಹೀಗಾಗಿ ಬಿತ್ತನೆ ಕಾರ್ಯಕ್ಕೆ ಹಿನ್ನೆಡೆಯಾಗಿತ್ತು. ಈಗ ಹಿಂಗಾರು ಮುಕ್ತಾಯ ಹಂತದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿಗೆ ಜೀವಕಳೆ ಬಂದಿದೆ.

    ಬೆಟಗೇರಿ, ಅಳವಂಡಿ, ಕವಲೂರು, ಘಟ್ಟಿರಡ್ಡಿಹಾಳ, ಮುರ್ಲಾಪುರ, ಹಂದ್ರಾಳ, ಕಂಪ್ಲಿ, ಬೆಳಗಟ್ಟಿ, ಮೈನಳ್ಳಿ, ಗುಡಗೇರಿ, ಮೋರನಾಳ ಮುಂತಾದ ಗ್ರಾಮಗಳು ಕಪ್ಪು (ಎರಿ) ಹಾಗೂ ಮಸಾರಿ ಭೂಮಿ ಹೊಂದಿವೆ. ಇಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಗಳನ್ನು ಬೆಳೆಯಲಾಗುತ್ತದೆ. ಕೆಲದಿನಗಳಿಂದ ಉತ್ತಮವಾಗಿ ಮಳೆಯಾಗುತ್ತಿದ್ದು, ಬಿತ್ತನೆಗೆ ರೈತರು ತಯಾರಿ ನಡೆಸಿದ್ದಾರೆ. ಕಡಲೆ, ಬಿಳಿಜೋಳ, ಗೋಧಿ, ಅಗಸೆ ಮುಂತಾದ ಬೆಳೆ ಬಿತ್ತನೆ ಮಾಡಲಾಗುತ್ತದೆ.

    ಅಳವಂಡಿ ವಲಯದ 10 ಗ್ರಾಪಂ ವ್ಯಾಪ್ತಿಯಲ್ಲಿ 37 ಗ್ರಾಮಗಳು ಬರುತ್ತವೆ. ಒಟ್ಟು ಭೌಗೋಳಿಕ ಕ್ಷೇತ್ರ 47,653 ಹೆಕ್ಟೇರ್ ಇದೆ. ಇದರಲ್ಲಿ ಸಾಗುವಳಿ ಯೋಗ್ಯವಲ್ಲದ ಕ್ಷೇತ್ರ 6,329 ಹೆ., ಸಾಗುವಳಿ ಯೋಗ್ಯ ಕ್ಷೇತ್ರ 41,324 ಹೆಕ್ಟೇರ್ ಇದೆ. ಇದರಲ್ಲಿ ಮುಂಗಾರು ಹಂಗಾಮಿನ ಬೆಳೆ ಕ್ಷೇತ್ರ 30,274 ಹೆ., ಹಿಂಗಾರು ಬೆಳೆ ಕ್ಷೇತ್ರ 18,516 ಹೆ. ಇದೆ. ಆದರೆ ಪ್ರಸಕ್ತ ವರ್ಷ ಹಿಂಗಾರು ಬಿತ್ತನೆ ಕ್ಷೇತ್ರ ಅಧಿಕವಾಗಲಿದೆ. ಕಾರಣ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗದ ಕ್ಷೇತ್ರದಲ್ಲೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಲಿದೆ.

    ಹಿಂಗಾರು ಪ್ರಾರಂಭದಲ್ಲಿ ಮಳೆಯಾಗದೆ ಇರುವುದರಿಂದ ಬೀಜ ಮಾರಾಟ ಕುಂಠಿತಗೊಂಡಿತ್ತು. ಆದರೆ ಕಳೆದ ಕೆಲ ದಿನದಿಂದ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ಬೀಜಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದಿದ್ದಾರೆ. ಎರಡನೇ ಶನಿವಾರ ರಜೆ ಇದ್ದರೂ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ರೈತರ ಅನುಕೂಲಕ್ಕಾಗಿ ಬೀಜ ಮಾರಾಟ ಮಾಡುತ್ತಿರುವುದು ಕೃಷಿಕರಿಗೆ ಸಂತಸ ತರಿಸಿದೆ.

    ಅಳವಂಡಿ ಹೋಬಳಿಯಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ರೈತರು ಜೋಳ, ಕುಸುಬೆ, ಕಡಲೆ, ಸೂರ್ಯಕಾಂತಿ, ಗೋಧಿ ಮುಂತಾದ ಬೆಳೆಗಳ ಬಿತ್ತನೆಗೆ ಭೂಮಿ ಹದಗೊಳಿಸಿದ್ದಾರೆ. ಸದ್ಯ ಬಿತ್ತನೆ ಬೀಜ ಮಾರಾಟ ಜೋರಾಗಿದೆ. ಮಳೆಯಿಂದ ಬಿತ್ತನೆ ಕ್ಷೇತ್ರ ಅಧಿಕವಾಗುವ ಸಾಧ್ಯತೆ ಇದೆ. ರೈತರ ಅನೂಕೂಲಕ್ಕಾಗಿ ಬಿತ್ತನೆ ಬೀಜ ಮಾರಾಟ ಸಮಯವನ್ನು ಹೆಚ್ಚು ಮಾಡಲಾಗಿದೆ.
    ಪ್ರತಾಪಗೌಡ ನಂದನಗೌಡ್ರ, ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಅಳವಂಡಿ

    ಹಿಂಗಾರು ಹಂಗಾಮು ಮುಗಿಯುವ ಸಮಯದಲ್ಲಿ ಮಳೆಯಾಗಿದೆ. ಕಡಲೆ, ಜೋಳ ಮುಂತಾದ ಬೆಳೆ ಬಿತ್ತನೆಗೆ ಜಮೀನು ಹದಗೊಳಿಸಲಾಗುತ್ತಿದೆ. ಆರ್‌ಎಸ್‌ಕೆ ರೈತರಿಗೆ ಸಕಾಲದಲ್ಲಿ ಬೀಜ ಮಾರಾಟ ಮಾಡುತ್ತಿದ್ದು, ಸಂತಸ ತಂದಿದೆ.
    ಗೂಳರಡ್ಡಿ ತವದಿ, ರೈತ ಅಳವಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts