More

    ಹೊಸ ಆರ್ಥಿಕ ವರ್ಷ; ಜನಸ್ನೇಹಿ ಕ್ರಮಗಳು ಅನುಷ್ಠಾನ ಸಮರ್ಪಕವಾಗಿರಲಿ

    ಇಂದಿನಿಂದ ಹೊಸ ಆರ್ಥಿಕ ವರ್ಷ ಆರಂಭವಾಗಿದ್ದು, ಹಲವು ಜೀವನಾವಶ್ಯಕ ವಸ್ತುಗಳು ತುಟ್ಟಿಯಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ಏರಿಕೆ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುಮುಖದಲ್ಲಿದೆ. ಕಳೆದ 10 ದಿನಗಳಲ್ಲಿ ಇಂಧನ ಬೆಲೆಗಳಲ್ಲಿ ಒಟ್ಟು 6.40 ರೂಪಾಯಿ ಹೆಚ್ಚಳವಾಗಿದ್ದು, ಸರಕು ಸಾಗಣೆ ಸೇರಿದಂತೆ ಇತರ ಕ್ಷೇತ್ರಗಳನ್ನೂ ಪ್ರಭಾವಿಸಿದೆ. ಅಡುಗೆ ಅನಿಲ (ಎಲ್​ಪಿಜಿ), ಖಾದ್ಯತೈಲಗಳ ಬೆಲೆಯೂ ಕಳೆದ ಕೆಲ ತಿಂಗಳಿಂದ ಏರಿಕೆ ಕಾಣುತ್ತಿವೆ. ಪರಿಣಾಮ, ಕರೊನಾ ಸಂಕಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜನಸಾಮಾನ್ಯರು ಈಗ ಬೆಲೆಯೇರಿಕೆ ವಿರುದ್ಧ ಸೆಣೆಸುತ್ತ, ದೈನಂದಿನ ಜೀವನ ರೂಪಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ನಡುವೆ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ನೆಮ್ಮದಿ ನೀಡಬಲ್ಲ ಎರಡು ಪ್ರಮುಖ ನಿರ್ಣಯ ಕೈಗೊಂಡಿರುವುದು ಸ್ವಾಗತಾರ್ಹ.

    ರೈತರು ಮತ್ತು ಬಡ ಕುಟುಂಬಗಳಿಗೆ ಒದಗಿಸಲಾಗುವ ಆರೋಗ್ಯ ವಿಮೆ ಯೋಜನೆ ಗೊಂದಲದ ಗೂಡಾಗಿದ್ದು ಗೊತ್ತಿರುವಂಥದ್ದೇ. ಆದರೆ, ರೈತರ ಆರೋಗ್ಯದ ದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಕೆಲ ಪ್ರಮುಖ ಮಾರ್ಪಾಡುಗಳೊಂದಿಗೆ ಮರುಜಾರಿ ಮಾಡಲು ಸರ್ಕಾರ ನಿರ್ಧರಿಸಿದೆ. ಯಶಸ್ವಿನಿ ಯೋಜನೆಯನ್ನು ಮತ್ತೆ ಆರಂಭಿಸಬೇಕು ಎಂಬ ಬೇಡಿಕೆಯೂ ವ್ಯಾಪಕವಾಗಿತ್ತು. ಈ ಯೋಜನೆಯ ಹೊಸ ಲಾಂಛನ ಇಂದು (ಶುಕ್ರವಾರ) ಬಿಡುಗಡೆ ಆಗಲಿದ್ದು, ಎರಡು-ಮೂರು ವಾರಗಳಲ್ಲಿ ಹೊಸ ಸ್ವರೂಪದಲ್ಲಿ ‘ಯಶಸ್ವಿನಿ’ ಜಾರಿಗೆ ಬರುವ ಸಾಧ್ಯತೆ ಇದೆ. ಈ ಯೋಜನೆಗಾಗಿ ಸರ್ಕಾರ 300 ಕೋಟಿ ರೂ. ಮೀಸಲಿಟ್ಟಿದೆ. ಯಶಸ್ವಿನಿ ಯೋಜನೆ ಮತ್ತೆ ಜಾರಿಯಾದರೆ ರೈತ ಕುಟುಂಬಗಳಿಗೆ ಖಂಡಿತವಾಗಿಯೂ ಪ್ರಯೋಜನವಾಗಲಿದೆ.

    ಕರೊನಾ ಸಂಕಷ್ಟದಿಂದ ರಿಯಲ್ ಎಸ್ಟೇಟ್ ಉದ್ಯಮ ಸಂಪೂರ್ಣ ನೆಲಕಚ್ಚಿತ್ತು, ಜನರು ಹೊಸ ಆಸ್ತಿಗಳ ಖರೀದಿಗಾಗಿ ಹಿಂದೇಟು ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಭೂಮಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ದರ ಕಡಿಮೆ ಮಾಡಿದ್ದ ರಾಜ್ಯ ಸರ್ಕಾರ, ಈ ಕ್ರಮವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಿದೆ. ನಿವೇಶನ, ಮನೆ, ಭೂಮಿ ಖರೀದಿದಾರರಿಗೆ ಇದರಿಂದ ಅನುಕೂಲವಾಗಲಿದೆ. ಸರ್ಕಾರ ಮಾರ್ಗಸೂಚಿ ಬೆಲೆಯಲ್ಲಿ ಶೇಕಡ 10ರಷ್ಟು ಕಡಿತ ಮಾಡಿತ್ತು. ಇದೀಗ ಮೊದಲ ತ್ರೖೆಮಾಸಿಕ ಅಂತ್ಯದವರೆಗೂ ಮುಂದುವರಿಯಲಿದೆ.

    45 ಲಕ್ಷ ರೂ.ಗಳ ತನಕದ ಅಪಾರ್ಟ್​ವೆುಂಟ್​ಗಳ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ.5.65 ರಿಂದ ಶೇ.3ಕ್ಕೆ ಇಳಿಸಲಾಗಿತ್ತು. ಅದನ್ನು ಸಹ ಮುಂದುವರಿಸಲು ನಿರ್ಧರಿಸಲಾಗಿದೆ. ಮಾರ್ಗಸೂಚಿ ಬೆಲೆ ಕಡಿಮೆ ಮಾಡಿದ್ದರಿಂದ ನೋಂದಣಿಯ ಪ್ರಮಾಣವೂ ಹೆಚ್ಚಾಗಿದೆ. ಸರ್ಕಾರಕ್ಕೆ ನಿರೀಕ್ಷೆಗಿಂತ 1000 ಕೋಟಿ ರೂ.ಗಳಿಗಿಂತ ಹೆಚ್ಚಿನ ಆದಾಯ ಬಂದಿದೆ ಎಂಬುದು ಗಮನಾರ್ಹ. ಪ್ರಸಕ್ತ ವಿನಾಯ್ತಿಯಿಂದ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಡಿಮೆ ಆಗಲಿದ್ದು, ಜನರು ಆಸ್ತಿಗಳನ್ನು ಖರೀದಿಸಲು ಒಂದಿಷ್ಟು ಅನುಕೂಲವಾಗಲಿದೆ. ಈ ಮೂಲಕ ನಿರ್ಮಾಣ ರಂಗಕ್ಕೆ ಸಂಬಂಧಿಸಿದ ಕೆಲಸಗಳೂ ಹೆಚ್ಚಿ, ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಕರೊನಾ ಸಂಕಷ್ಟದಿಂದ ಪೂರ್ಣಪ್ರಮಾಣದಲ್ಲಿ ಹೊರಬಂದು, ವಿಕಾಸದ ಪ್ರಕ್ರಿಯೆಗೆ ವೇಗ ನೀಡಲು ಇಂಥ ಜನಸ್ನೇಹಿ ಕ್ರಮಗಳು ಅತ್ಯಗತ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts