More

    ಬೀದಿಬದಿ ವ್ಯಾಪಾರಿಗಳಿಗಾಗಿ ಪಿಎಂ ಸ್ವನಿಧಿ ಜಾರಿ

    ಚಾಮರಾಜಗರ: ಕೇಂದ್ರ ಸರ್ಕಾರ ಬೀದಿ ಬದಿ ವ್ಯಾಪಾರಿಗಳಿಗಾಗಿ ಪಿಎಂ ಸ್ವನಿಧಿ ಯೋಜನೆಯನ್ನು ಪರಿಚಯಿಸಿದ್ದು, ವ್ಯಾಪಾರಿಗಳು ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಕರೆ ನೀಡಿದರು.


    ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪಿಎಂ ಸ್ವನಿಧಿ ಯೋಜನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು.


    ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ವಿಶೇಷ ಕಿರುಸಾಲ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಿದೆ. ಇದರಲ್ಲಿ 1 ನೇ ಹಂತದಲ್ಲಿ 10 ಸಾವಿರ ರೂ., 2 ನೇ ಹಂತದಲ್ಲಿ 20 ಸಾವಿರ ರೂ. ಹಾಗೂ 3 ನೇ ಹಂತದಲ್ಲಿ 50 ಸಾವಿರ ರೂ.ಗಳವರೆಗೆ ಕಿರು ಸಾಲಸೌಲಭ್ಯವನ್ನು ಕೈಗೆಟುಕುವ ಬಡ್ಡಿದರದಲ್ಲಿ ನೀಡಲಾಗುವುದು.

    ಈ ಯೋಜನೆ 2020ರ ಜುಲೈನಲ್ಲಿ ಆರಂಭಗೊಂಡಿದ್ದು, 2024ರ ಡಿ. 21ವರೆಗೂ ಜಾರಿಯಲ್ಲಿರುತ್ತದೆ. ಸ್ಥಳೀಯ ಬೀದಿ ಬದಿ ವ್ಯಾಪಾರಿಗಳು, ಮಾರಾಟ ಗುರುತಿನ ಚೀಟಿ ಇಲ್ಲದವರೂ ಈ ಸಾಲಕ್ಕೆ ಅರ್ಹರಾಗಿರುತ್ತಾರೆ. ಗ್ರಾಮೀಣ ಪ್ರದೇಶದ ವ್ಯಾಪಾರಸ್ಥರು ಪಟ್ಟಣದಲ್ಲಿ ವ್ಯಾಪಾರ ಮಾಡುತ್ತಿದ್ದರೆ ಅವರು ಕೂಡ ಇದಕ್ಕೆ ಅರ್ಹರಾಗಿರುತ್ತಾರೆ. ಸಾಲದ ಮರುಪಾವತಿಗೆ 12, 24, 36 ತಿಂಗಳುಗಳ ಅವಕಾಶ ಇರುತ್ತದೆ. ನಿಗದಿತ ಅವಧಿಯೊಳಗೆ ಮರುಪಾವತಿಸುವ ಫಲಾನುಭವಿಗೆ ಶೇ.7ರಷ್ಟು ಬಡ್ಡಿ ಸಹಾಯಧನವೂ ಬ್ಯಾಂಕ್ ಖಾತೆಗೆ ಪ್ರತಿ ತ್ರೈಮಾಸಿಕವಾಗಿ ಜಮೆ ಮಾಡಲಾಗುತ್ತದೆ ಎಂದು ಹೇಳಿದರು.


    ಪಪಂ ಸದಸ್ಯ ಮಹದೇವನಾಯಕ, ನೋಡಲ್ ಅಧಿಕಾರಿ ಅಮ್ಜದ್‌ಪಾಷ, ಸಮುದಾಯ ಸಂಘಟನಾಧಿಕಾರಿ ಪರಶಿವಮೂರ್ತಿ, ಮಲ್ಲಿಕಾರ್ಜುನ, ಗಣೇಶ, ಮುಖಂಡರಾದ ಮಹೇಶ್, ನಿಂಗರಾಜು, ರಂಗದೇಗುಲದ ಬಳೇಪೇಟೆ ಶಾಂತರಾಜು, ಗಣಿಗನೂರು ರವಿ, ಗೋವಿಂದರಾಜನ್, ಬಸವರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts