More

    ಬರ ಅಧ್ಯಯನ ತಂಡ: ಜಿಲ್ಲೆಯ ವಸ್ತುಸ್ಥಿತಿ ಅವಲೋಕ, 62,132 ಹೆಕ್ಟೇರ್​ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ, 1.63 ಲಕ್ಷ ಹೆ. ಕೃಷಿ ಬೆಳೆ ಹಾನಿ

    • – ಜಿಲ್ಲೆಗೆ ಬರ ಅಧ್ಯಯನ ತಂಡ
    • – ಬರ ಕುರಿತು ಮಾಹಿತಿ ಪಡೆದ ಸಮಿತಿ
    • – ಕೆಲವಡೆ ನೋವು ತೋಡಿಕೊಂಡ ರೈತರು
    • – ಸಾಲ ಪಾವತಿಗೆ ಬ್ಯಾಂಕಿನಿಂದ ನೋಟೀಸ್

    ವಿಜಯವಾಣಿ ಸುದ್ದಿಜಾಲ ಗದಗ

    ಪ್ರಸಕ್ತ ಸಾಲಿನ ಮುಂಗಾರು ಮಳೆ ಕೊರತೆ ಹಿನ್ನೆಲೆ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಕೇಂದ್ರ ಬರ ಅದ್ಯಯನ ಸಮಿತಿ ಎದುರು ಜಿಲ್ಲೆಯ ರೈತರು ಅಳಲು ತಮ್ಮ ನೋವು ತೋಡಿಕೊಂಡರು.

    ಕೃಷಿ ಚಟುವಟಿಕೆ ವೆಚ್ಚ, ಕೃಷಿ ಸಾಲ, ಸಾಲ ಮರುಪಾವತಿಗೆ ಬ್ಯಾಂಕಿನಿಂದ ನೋಟೀಸ್, ತುಂಗಭದ್ರಾ ಎಡದಂಡೆ ಯೋಜನೆಗೆ ಒಳಪಡಿಸುವುದನ್ನು ಸೇರಿ ವಿವಿಧ ಬೇಡಿಕೆಗಳಿಗೆ ರೈತರು ಮನವಿ ಮಾಡಿದರಲ್ಲದೇ, ಗೂಳೆ ಹೋಗುವುದು ಅನಿವಾರ್ಯ ವಾಗಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಮಧ್ಯಂತರ ತುರ್ತು ಪರಿಹಾರಕ್ಕೆ ರೈತರು ಆಗ್ರಹಿಸಿದ ಘಟನೆಯೂ ಜರುಗಿತು.

    ಮಳೆ ಅಭಾವ ಹಿನ್ನೆಲೆ ಜಿಲ್ಲೆಯಲ್ಲಿ ಈಗಾಗಲೆ ಹೆಸರು ಬೆಳೆ ನಾಶವಾಗಿದ್ದು, ಮೆಕ್ಕೆಜೋಳ, ಮೆಣಸಿನಕಾಯಿ, ಶೇಂಗಾ ಸೇರಿದಂತೆ ಇತರೆ ಬೆಳೆ ಇಳುವರಿ ಕೈಕೊಟ್ಟಿದೆ. ಈ ಕಾರಣದಿಂದ ಹೊಲಗಳಿಗೆ ಭೇಟಿ ನೀಡಿದ ತಂಡವು ಮಾಹಿತಿ ಪಡೆಯಿತು. ಸರ್ಕಾರದಿಂದ ಇನ್ ಪುಟ್ ಸಬ್ಸಿಡಿ ಕುರಿತು ಮಾಹಿತಿ ಸಂಗ್ರಹಿಸಿತಲ್ಲದೇ, ಕೃಷಿ ಕೈಕೊಟ್ಟ ಹಿನ್ನೆಲೆ ಪರ್ಯಾಯ ಕೂಲಿ ಮಾಡುತ್ತಿರುವ ಕುರಿತು ರೈತರಿಂದ ಮಾಹಿತಿ ಪಡೆಯಲಾಯಿತು.

    ಗೋಜನೂರು ಗ್ರಾಮದ ರೈತನ ಹೊಲದಲ್ಲಿ ಮೆಕ್ಕೆಜೋಳ ಪರಿಶೀಲಿಸಿದ ಅದ್ಯಯನ ತಂಡಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಕೃಷಿ ಜಂಟಿ ಅಧಿಕಾರಿ ತಾರಾಮಣಿ ಮಾಹಿತಿ ನೀಡಿದರು. ಮುಂಗಾರು ವಿಳಂಬ ಹಿನ್ನೆಲೆ ಮೆಕ್ಕೆಜೋಳವನ್ನು ಸಾಮಾನ್ಯ ಅವಧಿಗೆ ಬದಲಾಗಿ ಜುಲೈ ಅಂತ್ಯದಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಸ್ತುತ ಮಳೆ ಸಂಭವಿಸಿದರೂ ಮೆಕ್ಕೆಜೋಳ ಕಾಳು ಕಟ್ಟವುದಿಲ್ಲ ಎಂದು ಎಂದು ರೈತರು ಕೇಂದ್ರ ಅದ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

    ಶಿರಹಟ್ಟಿ ತಾಲೂಕಿನ ಚಿಕ್ಕಸವನೂರು ಗ್ರಾಮಕ್ಕೆ ಭೇಡಿ ನೀಡಿದ ಕೇಂದ್ರ ಅಧ್ಯಯನ ತಂಡಕ್ಕೆ ದನಕರುಗಳಿಗೆ ಮೇವಿನ ಕೊರತೆ ಎದುರಾಗುವ ಸಂಭವ ಕುರಿತು ರೈತರು ನೋವು ಹೇಳಿಕೊಂಡರು. ಕೀಟ ಹತ್ತಿದ ಮೆಕ್ಕೆಜೋಳ ತೆನೆಗಳನ್ನು ದನಕರುಗಳಿಗೆ ಮೇವು ರೂಪದಲ್ಲಿ ಹಾಕಲು ಬರುವುದಿಲ್ಲ. ದನಕರುಗಳು ಅನಾರೋಗ್ಯಕ್ಕೆ ಒಳಗಾಗುತ್ತವೆ. ಇದರಿಂದ ಬೆಳೆ ನಾಶದ ಜತೆ ದನಕರುಗಳನ್ನು ಕಳೆದುಕೊಳ್ಳುವ ಸ್ಥಿತಿ ಬರುತ್ತದೆ ಎಂದು ರೈತರು ತಿಳಿಸಿದರು.

    ಇನ್ನೊಂದು ತಿಂಗಳು ಮಳೆಯ ಅವಧಿ ಇದ್ದು, ಕೃಷಿಗೆ ಯೋಗ್ಯವಲ್ಲ. ಹೀಗಾಗಿ ಬಿಜಾಪುರ, ಗೋವಾ ಪುಣೆಗೆ ಗೂಳೆ ಹೋಗಬೇಕಾಗುತ್ತದೆ ಎಂದರು. ಗೂಳೆ ಹೋಗುವ ಬದಲಾಗಿ ನರೇಗಾ ಯೋಜನೆಯಲ್ಲಿ ಕೂಲಿ ಮಾಡಬಹುದಲ್ಲವೇ ಎಂದು ಕೇಂದ್ರ ತಂಡದ ಸದಸ್ಯರು ರೈತರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರೈತರು ‘ ಹೊಟ್ಟೆಗಾಗಿ ನರೇಗಾ ಕೂಲಿ ಮಾಡಬಹುದು ಆದರೆ ಇತರೆ ಖರ್ಚು ಮಕ್ಕಳ ಶಿಕ್ಷಣಕ್ಕೆ ನರೇಗಾ ಕೂಲಿ ಸಾಲದು’ ಎಂದು ತಿಳಿಸಿದರು.

    ಬಿತ್ತನೆ ನಡೆಸಿದ ಮೆಕ್ಕೆಜೋಳದ ತಳಿ ಕುರಿತು ಚರ್ಚಿಸಲಾಯಿತು. ‘ಗಂಗಾ ಕಾವೇರಿ ಜಿಕೆ3045 ಮೆಕ್ಕೆ ಜೋಳ ಬಿತ್ತನೆ ಮಾಡಿದ್ದಾಗಿ ಮಾಹಿತಿ ನೀಡಿದರು. ಬೆಳೆ ವಿಮೆ ಕುರಿತು ಮಾಹಿತಿ ಪಡೆಯಲಾಯಿತು.

    ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ, ಕೇಂದ್ರ ಪಶುಸಂಗೋಪನಾ ಇಲಾಖೆ ನಿರ್ದೇಶಕ ವಿ. ಆರ್. ಠಾಕ್ರೆ, ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿ ರಾಮ ಹಾಗೂ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ನಿರ್ದೇಶಕ ಕರೀಗೌಡ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಇದ್ದರು

    *ವೃದ್ಧೆಯ ನೋವು*:
    ನಾಲ್ಕು ಎಕರೆಯಲ್ಲಿ ಎರಡೂ ಸಲ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. 25 ರಿಂದ 30 ಸಾವಿರ ಖರ್ಚಾಗಿದೆ ಎಂದು ವೃದ್ಧೆಯೋರ್ವಳು ಕಣ್ಣೀರಿಟ್ಟ ಘಟನೆ ಶಿರಹಟ್ಟಿ ತಾಲೂಕಿನ ವರವಿ ಗ್ರಾಮದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಧಿಕಾರಿಗಳು ‘ಈ ಭಾಗದ ಜನರು ಪ್ರಸಕ್ತ ಸಾಲಿನಲ್ಲಿ ಎರಡೂ ಬಾರಿ ಬಿತ್ತನೆ ಮಾಡಿದ್ದರೂ ಮಳೆ ಅಭಾವ ಹಿನ್ನೆಲೆ ಬೆಳೆ ಬಂದಿಲ್ಲ. ಭಾಗಶಃ ಈ ಭಾಗದ ಜನರು ಗೋವಾ ಕ್ಕೆ ಗೂಳೆ ಹೋಗುತ್ತಾರೆ. ಸಂಪೂರ್ಣ ಮಾನ್ಸೂನ್ ಆಧಾರಿತ ಕೃಷಿ ಆಗಿದ್ದರಿಂದ ಬೇಸಿಗೆಯಲ್ಲಿ ಗೂಳೆ ಹೋಗುವುದು ಅನಿವಾರ್ಯ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಬತ ಕುರಿತು ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ಸಂಪೂರ್ಣ ಬೆಳೆ ಸಮೀಕ್ಷೆ ಜಿಲ್ಲೆಯನ್ನು ಒಳಪಡುಸಲಾಗಿದೆ ತಿಳಿಸಿದರು.

    *ಬ್ಯಾಂಕಿನಿಂದ ನೋಟೀಸ್:*
    ಸಾಲ ಮರುಪಾವತಿ ಮಾಡದ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿ ನೋಟೀಸ್ ನೀಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಒಂದೇ ಮಾರ್ಗ ಉಳಿದಿದೆ ಎಂದು ರೈತರು ಕೇಂದ್ರ ಅದ್ಯಯನ ತಂಡದ ಮುಂದೆ ನೋವು ತೋಡಿಕೊಂಡಿ ಘಟನೆ ಶಿರಹಟ್ಟಿ ತಾಲೂಕಿನ ಬಟ್ಟೂರು ಕ್ರಾಸ್ ಬಳಿಯ ಜರುಗಿತು. ಬಟ್ಟೂರು ಕ್ರಾಸ್ ಬಳಿಯ ರೈತರ ಹೊಲಗಳಲ್ಲಿ ಕೇಂದ್ರ ಅಧ್ಯಯನ ತಂಡವು ಶೇಂಗಾ ಬೆಳೆ ವೀಕ್ಷಣೆ ಮಾಡುವ ಸಂದರ್ಭದಲ್ಲಿ ರೈತರ ನೋವು ಆಲಿಸಿದರು. ಈ ವೇಳೆ ಬ್ಯಾಂಕ್ ಸಾಲದ ಕುರಿತು ರೈತರು ಮಾಹಿತಿ ನೀಡಿದರು. ದನಕರುಗಳನ್ನು ಮಾರಾಟ ಮಾಡಿ ಸಾಲ ತೀರಿಸುವ ಪರಿಸ್ಥಿತಿ ಎದುರಾಗಿದೆ ಎಂದರು.
    ಸಾಮಾನ್ಯ ಮಳೆಗಾಲದಲ್ಲಿ ಒಂದು ಶೇಂಗಾ ಬಳ್ಳಿಯಲ್ಲಿ 60 ರಿಂದ 70 ಶೇಂಗಾ ಕಾಯಿ ಇಳುವರಿ ಬರುತ್ತದೆ. ಈಗ ಎರಡರಿಂದ ಮೂರು ಶೇಂಗಾ ಕಾಯಿ ಮಾತ್ರ ಇಳುವರಿ ಬಂದಿದೆ ಎಂದು ಶೇಂಗಾ ಬೆಳೆ ನಾಶವಾಗಿದ್ದನ್ನು ಅಧಿಕಾರಿಗಳಿಗೆ ತೋರಿಸಿದರು.

    *ವಿಮೆ ಗೊಂದಲ*
    ಶಿರಹಟ್ಟಿ ತಾಲೂಕಿನ ವಡವಿ ಹೊಸರು ಗ್ರಾಮದಲ್ಲಿ ವಿಮೆಯೋಜನೆ ಗೊಂದಲ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಮೆಣಸಿನಕಾಯಿ ಬೆಳೆ ನಾಶದ ಕುರಿತು ಕೇಂದ್ರ ಬರ ಅದ್ಯಯನ ತ‌ಂಡ ಮಾಹಿತಿ ಪಡೆಯುತ್ತಿದ್ದ ಸಂದರ್ಭದಲ್ಲಿ ವಿಮೆ ಕುರಿತು ಗ್ರಾಮಸ್ಥರು, ಅಧಿಕಾರಿ ಹಾಗೂ ಗ್ರಾಪಂ ಸದಸ್ಯರ ನಡುವೆ ಸಣ್ಣಮಟ್ಟದ ಮಾತಿನ ಚಕಮಕಿ ಜರುಗಿತು. ಮಳೆ ಅಭಾವ ಸಂಭವಿಸಿದರೂ ಗ್ರಾಪಂ ಸದಸ್ಯರು ವಿಮೆ ಅಧಿಕಾರಿಗಳನ್ನು ಕರೆಸಿ ಬೆಳೆ ಸಮೀಕ್ಷೆ ನಡೆಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಜಮೀನಿನಲ್ಲಿ ಬೆಳೆ ನಾಶವಾದರೂ ಶೇ.80 ರಷ್ಟು ಬೆಳೆ ಕಾಳು ಕಟ್ಟಿದೆ ಎಂದು ವಿಮೆ ಕಂಪನಿಯವರು ಸಮೀಕ್ಷೆ ಮಾಡುತ್ತಾರೆ. ಹೊಲಗದ್ದೆಗೆ ಬಂದು ವಿಮೆ ಕಂಪನಿಯವರು ಸಮೀಕ್ಷೆ ನಡೆಸಿಲ್ಲ ಎಂದು ಆರೋಪಿಸದರು.
    ಸಂಪೂರ್ಣ ಬೆಳೆ ನಾಶ ಆಗಿದ್ದರಿಂದ ಆದಷ್ಟು ಬೇಗ ಬೆಳೆ ಪರಿಹಾರ ವಿತರಿಸುವಂತೆ ಮತ್ತು ಮಧ್ಯಂತರ ತುರ್ತು ಪರಿಹಾರ ನೀಡುವಂತೆ ರೈತರು ಮನವಿ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಗೆ ಈ ಬಾರಿ ಅತ್ಯಧಿಕ ಬೆಳೆ ವಿಮೆ ಲಭಿಸಲಿದ್ದು, ಇನ್ನೊಂದು ತಿಂಗಳ ಒಳಗಾಗಿ ವಿಮೆ ರೈತರ ಖಾತೆಗೆ ಜಮೆ ಆಗಲಿದೆ ಎಂದು ಭರವಸೆ ನೀಡಿದರು.

    *ಬಿಟ್ಟಿ ಭಾಗ್ಯ ತಂದ ಆಪತ್ತು*
    ಬಿಟ್ಟಿ ಭಾಗ್ಯದಿಂದ ಕೂಲಿ ಆಳುಗಳ ಸಮಸ್ಯೆ ಎದುರಾಗಿದೆ ಎಂದು ಗೊಜನೂರು ಗ್ರಾಮದಲ್ಲಿ ರೈತರು ಆರೋಪಿಸಿದ್ದಾರೆ. ಒಣ ಬೇಸಾಯದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ರೈತರಿಗೆ ಭದ್ರತೆ ಅಗತ್ಯವಿದೆ ಎಂದ ರೈತರು ಗ್ಯಾರಂಟಿ ಯೋಜನೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಗ್ಯಾರಂಟಿ ಅನುಷ್ಠಾದಲ್ಲೆ ಸರ್ಕಾರ ಮಗ್ನವಾಗಿದೆ. ರೈತರ ಬೆಳೆ ಪರಿಹಾರವನ್ನು ತುರ್ತಾಗಿ ವಿತರಿಸುವ ಬದಲಾಗಿ ಸಮೀಕ್ಷೆ ಮತ್ತೊಂದು ಎಂದು ಕಾಲಹರಣ ಮಾಡುತ್ತಿದ್ದೆ. ಬಿಟ್ಟಿ ಭಾಗ್ಯ ನೀಡುತ್ತಿರುವುದರಿಂದ ರೈತರ ಹೊಲಗಳ ಕೆಲಸಕ್ಕೆ ಕಾರ್ಮಿಕರು ಸಿಗುತ್ತಿಲ್ಲ ಎಂದು ಆರೋಪೀಸದರು.

    *ತುಂಗಭದ್ರಾ ಎಡದಂಡೆಗೆ ಒಳಪಡಿಸಿ*
    ತುಂಗಭದ್ರಾ ಎಡದಂಡೆ ವ್ಯಾಪ್ತಿಗೆ ಶಿರಹಟ್ಟಿ ತಾಲೂಕು ಬರುತ್ತಾದರೂ ಮುಂಡರಗಿ ತಾಲೂಕಿಗೆ ಮಾತ್ರ ಎಡದಂಡೆ ಯೋಜನೆ ಜಾರಿಯಾಗಿದೆ. ಶಿರಹಟ್ಟಿ ತಾಲೂಕನ್ನು ಯೋಜನೆಗೆ ಒಳಪಡಿಸಿಲ್ಲ. ಹೀಗಾಗಿ ಒಣ ಬೇಸಾಯ ಪದ್ದತಿ ಮುಂದುವರಿಸಲಾಗಿದೆ ಎಂದು ರೈತರು ಮನವಿ ಸಲ್ಲಿಸಿದ ಘಟನೆ ಶಿರಹಟ್ಟಿ ತಾಲೂಕಿನ ಒಡವಿ ಹೊಸುರು ಗ್ರಾಮದಲ್ಲಿ ಜರುಗಿತು.

    *ರಸ್ತೆ ಕಿರಿಕಿರಿ*
    ಜಿಲ್ಲೆಗೆ ಆಗಮಿಸಿದ ಕೇಂದ್ರ ಅಧ್ಯಯನ ತಂಡಕ್ಕೆ ಇಲ್ಲಿನ ರಸ್ತೆ ಅವ್ಯವಸ್ಥೆ ಕಿರಿಕಿರಿ ಉಂಟು ಮಾಡಿದೆ. ಈಗಾಗಲೇ ಗದಗ-ಲಕ್ಷ್ಮೇಶ್ವರ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದೇ ಮಾರ್ಗವಾಗಿ ಲಕ್ಷ್ಮೇಶ್ವರದ ಇಟ್ಟಿಕೆರೆ ವೀಕ್ಷಿಸಿದ ನಂತರ ದೊಡ್ಡರು, ಚಿಕ್ಕಸವನೂರು ಗ್ರಾಮಕ್ಕೆ ಸುಮಾರು 25 ಕಿಮೀ ಸಾಗಿದ ತಂಡಕ್ಕೆ ರಸ್ತೆ ಹದಗೆಟ್ಟ ಕುರಿತು ಮನವರಿಕೆಯಾಗಿದೆ. ಈ ಮಾರ್ಗದಲ್ಲಿ ಪ್ರತಿ ನೂರು ಮೀಟರ್ ಗೆ ಹತ್ತಾರು ತಗ್ಗು ಗುಂಡಿಗಳು ಬಿದ್ದಿವೆ. ಹೀಗಾಗಿ ಕೇಂದ್ರ ತಂಡ ಮೀಸಲಿಟ್ಟ ಅವಧಿ ಒಳಗಾಗಿ ಸೂಚಿತ ಪ್ರದೇಶಗಳನ್ನು ತಲುಪಲು ವಿಳಂಬವಾಯಿತು. ಜಿಲ್ಲಾಡಳಿತಕ್ಕೂ ಇಲ್ಲಿನ ರಸ್ತೆ ದುಸ್ಥಿತಿ ಬಗ್ಗೆ ಅರಿವಿಗೆ ಬಂದಿತು.

    ಜಿಲ್ಲಾಧಿಕಾರಿ ಸಭೆ.
    ಜಿಲ್ಲೆಯ ಬರ ಅಧ್ಯಯನಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಅಧ್ಯಯನ ತಂಡ ಜತೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಬರ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ಆರು ತಾಲೂಕುಗಳಲ್ಲಿ ಒಟ್ಟಾರೆ 62,132 ಹೆಕ್ಟೇರ್​ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಯನ್ನು ಬಿತ್ತನೆ ಮಾಡುವ ಮೂಲಕ ಶೇ.89.88ರಷ್ಟು ಬಿತ್ತನೆ ಮಾಡಲಾಗಿತ್ತು. ಇದರಲ್ಲಿ 21,337 ಹೆ. ಈರುಳ್ಳಿ, 40,350 ಹೆ. ಪ್ರದೇಶದಲ್ಲಿ ಮೆನಸಿನಕಾಯಿ, 445 ಹೆ. ಪ್ರದೇಶದಲ್ಲಿ ಟೊಮೆಟೊಬಿತ್ತನೆ ಮಾಡಲಾಗಿತ್ತು. ಮಳೆಯ ಅಭಾವದಿಂದಾಗಿ ಈ ಬೆಳೆಗಳು ಸಂರ್ಪೂಣ ನೆಲಕಚ್ಚಿದೆ. ಅದರಂತೆ 6 ತಾಲೂಕುಗಳ 1.63 ಲಕ್ಷ ಹೆ. ಪ್ರದೇಶದಲ್ಲಿ ಕೃಷಿ ಬೆಳೆ ಬಿತ್ತನೆ ಮಾಡಲಾಗಿತ್ತು. ಆ ಪೈಕಿ 1.54 ಲಕ್ಷ ಹೆ. ಪ್ರದೇಶದ ಬೆಳೆ ಸಂರ್ಪೂಣವಾಗಿ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
    ರಾಷ್ಟ್ರೀಯ ವಿಪತ್ತಿ ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯಂತೆ ಗದಗ ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು 215 ಕೋಟಿ ರೂ. ಮೊತ್ತದ ಬೆಳೆ ಹಾನಿಯಾಗಿದೆ. ಇದರಲ್ಲಿ ಕೃಷಿ ಇಲಾಖೆಯ 160 ಕೋಟಿ, ತೋಟಗಾರಿಕೆ ಇಲಾಖೆಯ 54 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ. ಮಳೆಯ ತೀವ್ರ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಸಹ ಕುಸಿದಿರುತ್ತದೆ. ಸೆ. 15 ರಂದು 7.57 ಮೀಟರನಲ್ಲಿದ್ದ ಅಂತರ್ಜಲ ಸೆ. ಅಂತ್ಯದ ವೇಳೆಗೆ 10.51 ಮೀಟರ್​ ತಲುಪಿದೆ. ಇದರಿಂದ ಜನ ಜಾನುವಾರುಗಳಿಗೆ ನೀರು ಪೂರೈಕೆ ಕಷ್ಟ ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts