More

    ಐಮಂಗಲ ಹೋಬಳಿಗಿಲ್ಲ ನೀರು ಭಾಗ್ಯ

    ವಿ.ಮಲ್ಲಿಕಾರ್ಜುನ ಐಮಂಗಲ: ದೀಪದ ಕೆಳಗೆ ಕತ್ತಲು ಎಂಬಂತೆ ವಾಣಿ ವಿಲಾಸ ಸಾಗರ ಆಣೆಕಟ್ಟು ಸಮೀಪದ ಐಮಂಗಲ ಹೋಬಳಿಗೇ ನೀರಿನ ಭಾಗ್ಯವೇ ಇಲ್ಲ. ಇಲ್ಲಿನ ಜನರು ಯಾವಾಗ ಜೀವ ಜಲ ಹರಿಯುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

    ಹೋಬಳಿಯಲ್ಲಿ ಮಳೆಯ ಪ್ರಮಾಣ ಕಡಿಮೆ. ಇನ್ನು ಮಳೆಗಾಲ ಬಿಟ್ಟು ಉಳಿದ ದಿನಗಳಲ್ಲಿ ನೀರಿನ ಸಮಸ್ಯೆ ತೊಂದರೆ ತಪ್ಪದು. ಕೆರೆ, ಕಟ್ಟೆಗಳಲ್ಲಿ ಅಂತರ್ಜಲ ಮಟ್ಟದ ಕುಸಿದಿದ್ದು, ಜನರು ಮತ್ತು ಜಾನುವಾರು ಕಟ್ಟಿಕೊಂಡವರ ಪಾಡಂತು ಹೇಳತೀರದು.

    ಸೊಂಡೆಕೆರೆ, ಬುರುಜಿನರೊಪ್ಪ, ವದ್ದಿಕೆರೆ, ಮರಡಿಹಳ್ಳಿ, ಭರಂಪುರ, ಕಲ್ಲಹಟ್ಟಿ, ಐಮಂಗಲದಲ್ಲಿ ಜನಸಂಖ್ಯೆ ಹೆಚ್ಚಳವಿದ್ದು, ಇಲ್ಲಿ ಪ್ರತಿವರ್ಷ ಬೇಸಿಗೆಯಲ್ಲೂ ನೀರಿನ ಅಭಾವ ಉಂಟಾಗುತ್ತದೆ. ನಿತ್ಯ ಸರತಿ ಸಾಲಿನಲ್ಲಿ ನಿಂತು ನೀರು ಹಿಡಿಯುವುದೇ ಕಾಯಕವಾಗಿದೆ.

    ವಿದ್ಯುತ್ ಕೈಕೊಟ್ಟರೆ ದಿನವಿಡೀ ಸಮಸ್ಯೆ ಉಲ್ಬಣ. ಭದ್ರಾ ಮೇಲ್ದಂಡೆ ಯೋಜನೆಯಿಂದ ವಿವಿ ಸಾಗರಕ್ಕೆ ಹರಿದ ನೀರು ನಮ್ಮೂರಿಗೂ ಹರಿಯಲಿದೆ ಎಂಬ ಆಶಾಭಾವನೆಯಲ್ಲಿದ್ದ ಹೋಬಳಿ ಜನರಿಗೆ ನಿರಾಶೆ ಮೂಡಿಸಿದೆ.

    ಬಹುಗ್ರಾಮ ಯೋಜನೆ ಕಾಮಗಾರಿ ಮಂದಗತಿ: ವಿವಿ ಸಾಗರದಿಂದ ಹೋಬಳಿಯ 72 ಹಳ್ಳಿಗಳಿಗೆ ನೀರು ಹರಿಸುವ ಬಹುಗ್ರಾಮ ಯೋಜನೆ 2009ರಲ್ಲಿ ಕ್ರಿಯಾಯೋಜನೆ ಸಿದ್ಧವಾಯಿತು. ಬಳಿಕ 2012ರಲ್ಲಿ ಹಳ್ಳಿಗಳಿಗೆ ಪೈಪ್‌ಲೈನ್ ಅಳವಡಿಸುವ ಸರ್ವೇ ಕಾರ್ಯ ನಡೆಯಿತು. 2016ರಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ಆರಂಭಗೊಂಡ ಯೋಜನೆ ನಾಲ್ಕು ವರ್ಷವಾದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಕರೊನಾ ಕಾರಣಕ್ಕೆ ಸ್ಥಗಿತಗೊಂಡಿರುವ ಕೆಲಸ ಆರಂಭ ಯಾವಾಗ ಎಂಬ ಪ್ರಶ್ನೆ ಜನರದು.

    ಪ್ರಾಯೋಗಿಕವಾಗಿ ನೀರು ಹರಿಸಿದ್ದೇ ಕೊನೆ: ವಿವಿ ಸಾಗರದ ನೀರನ್ನು ಗುಡಿಹಳ್ಳಿ, ಗೌನಹಳ್ಳಿ, ಕೆ.ಸಿ.ರೊಪ್ಪ ಗ್ರಾಮಗಳಲ್ಲಿ ಅಳವಡಿಸಿರುವ ಪೈಪುಗಳ ಮೂಲಕ ಭರಂಪುರದ ಬೃಹತ್ ಟ್ಯಾಂಕ್‌ನಲ್ಲಿ ನೀರು ಸಂಗ್ರಹವಾಗುತ್ತದೆ. ಅಲ್ಲಿಂದ ಉಳಿದ ಗ್ರಾಮಗಳಿಗೆ ಪೂರೈಸುವ ಉದ್ದೇಶ ಈ ಯೋಜನೆ ಹೊಂದಿದೆ. ಪ್ರಾಯೋಗಿಕವಾಗಿ ನೀರು ಭರಂಪುರದ ಟ್ಯಾಂಕ್‌ಗೆ ಹರಿಸಿದ್ದು, ನೀರಿನ ಒತ್ತಡಕ್ಕೆ ಕೆಲವೆಡೆ ಪೈಪುಗಳು ಹೊಡೆದ ಕಾರಣ ಸ್ಥಗಿತಗೊಂಡಿದೆ.

    ಪ್ರಾಯೋಗಿಕವಾಗಿ ವಿವಿ ಸಾಗರದ ನೀರನ್ನು ಭರಂಪುರಕ್ಕೆ ನೀರು ಹರಿಸಲಾಗಿತ್ತು. ನೀರಿನ ಒತ್ತಡಕ್ಕೆ ಪೈಪುಗಳು ಹೊಡೆದು ಹೋಗಿವೆ. ಭದ್ರಾ ಯೋಜನೆಯಡಿ ಕಾಮಗಾರಿ ನಡೆಸುವಾಗ ಹಾಕಿದ್ದ ಪೈಪುಗಳು ಹಾಳಾಗಿವೆ. ಶೀಘ್ರವಾಗಿ ಪೈಪ್‌ಲೈನ್ ದುರಸ್ತಿಪಡಿಸಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಗಸ್ಟ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
    ಕೆ.ಪೂರ್ಣಿಮಾ ಶ್ರೀನಿವಾಸ್
    ಶಾಸಕರು, ಹಿರಿಯೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts