More

    ಉಪ್ಪಿನಬೆಟಗೇರಿ ಆರೋಗ್ಯ ಕೇಂದ್ರಕ್ಕೆ ಅನಾರೋಗ್ಯ

    ಉಪ್ಪಿನಬೆಟಗೇರಿ: ಸುತ್ತಲಿನ ಹತ್ತಾರು ಗ್ರಾಮಗಳ ಆರೋಗ್ಯದ ಹೊಣೆ ಹೊತ್ತಿರುವ ಉಪ್ಪಿನಬೆಟಗೇರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮೂಲಸೌಕರ್ಯಗಳಿಂದ ಬಳಲುತ್ತಿದೆ.

    ಸುತ್ತಲಿನ 17 ಗ್ರಾಮಗಳು ಈ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ.

    ಆಸ್ಪತ್ರೆಯಲ್ಲಿ ಒಬ್ಬ ಎಂಬಿಬಿಎಸ್ ಹಾಗೂ ಒಬ್ಬ ಆಯುಷ್ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಕೆಲ ತಿಂಗಳ ಹಿಂದೆ ಆಯುಷ್ ವೈದ್ಯ ಕೆಲಸ ಬಿಟ್ಟಿದ್ದಾರೆ.

    ಹೀಗಾಗಿ ಎಂಬಿಬಿಎಸ್ ವೈದ್ಯೆ ಪ್ರಿಯಾಂಕಾ ಚವ್ಹಾಣ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಆರೋಗ್ಯ ಕೇಂದ್ರದಲ್ಲಿ ಒಟ್ಟು 31 ಸಿಬ್ಬಂದಿ ಅಗತ್ಯವಿದ್ದು ಸದ್ಯ 22 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಮುಖ್ಯವಾಗಿ ಒಬ್ಬ ಆಯುಷ್ ವೈದ್ಯ, ಒಬ್ಬ ನೇತ್ರ ತಪಾಸಕರು, ಮೂವರು ಕಿರಿಯ ಪುರುಷ ಆರೋಗ್ಯ ಸಹಾಯಕರು, ಮೂವರು ಪ್ರಾಥಮಿಕ ಮಹಿಳಾ ಆರೋಗ್ಯ ಸುರಕ್ಷಣಾಧಿಕಾರಿಗಳು ಸೇರಿ 9 ಸಿಬ್ಬಂದಿಯ ಕೊರತೆ ಇದೆ.

    ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರೆ ಅಲ್ಲಿ ಸರಿಯಾದ ಪ್ರಥಮ ಚಿಕಿತ್ಸೆ ಕೂಡ ದೊರೆಯುತ್ತಿಲ್ಲ.

    ರೋಗಿಗೆ ಬೇಕಾದ ಆಕ್ಸಿಜನ್ ಸೇರಿ ಪ್ರಮುಖ ಸಲಕರಣೆಗಳು ಇಲ್ಲಿ ಲಭ್ಯವಿಲ್ಲದ ಕಾರಣ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗಬೇಕಾಗಿದೆ.

    ಹೀಗಾಗಿ ಶೀಘ್ರವೇ ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯ ನೀಡಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

    ಆಸ್ಪತ್ರೆ ಸುತ್ತಲೂ ಸರಿಯಾದ ಆವರಣ ಗೋಡೆ ಹಾಗೂ ಗೇಟ್‌ಗಳಿಲ್ಲದ ಕಾರಣ ಪ್ರಾಣಿಗಳು ಕಟ್ಟಡದೊಳಗೆ ನುಗ್ಗುತ್ತಿವೆ.

    ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿಗಾಗಿ ನಿರ್ಮಿಸಿದ್ದ ಕೊಠಡಿಗಳು ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದ್ದು ಅಕ್ರಮ ಚಟುವಟಿಕೆಯ ತಾಣವಾಗಿವೆ.
    ಆಸ್ಪತ್ರೆ ಎತ್ತರ ಪ್ರದೇಶದಲ್ಲಿದ್ದು, ಆವರಣದಲ್ಲಿರುವ ರಸ್ತೆ ಸಂಪೂರ್ಣ ತಗ್ಗು-ದಿನ್ನೆ ಮತ್ತು ಕಲ್ಲುಗಳಿಂದ ಕೂಡಿದೆ.

    ಆಸ್ಪತ್ರೆಯ ಆವರಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವೂ ದುರಸ್ತಿಯಲ್ಲಿದ್ದು, ಸುತ್ತಲೂ ಕಸ ಬೆಳೆದು ನಿರುಪಯುಕ್ತವಾಗಿದೆ.

    ಆಂಬುಲೆನ್ಸ್ ನಿಷ್ಕ್ರಿಯ

    ಆಸ್ಪತ್ರೆ ಆವರಣದಲ್ಲಿ ಕಸಕಡ್ಡಿ, ಗಿಡ-ಗಂಟೆಗಳು ಬೆಳೆದಿವೆ. ಅಲ್ಲದೆ, ಆಂಬುಲೆನ್ಸ್‌ನ ಸೇವೆಯೂ ಸ್ಥಗಿತಗೊಂಡಿದೆ. ಹೀಗಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಕರೆದೊಯ್ಯಲು ಖಾಸಗಿ ವಾಹನಗಳ ಮೊರೆ ಹೋಗುವಂತಾಗಿದೆ.

    ಉಪ್ಪಿನಬೆಟಗೇರಿ ಆರೋಗ್ಯ ಕೇಂದ್ರದಲ್ಲಿ ಆಯುಷ್ ವೈದ್ಯರು ಸೇರಿ 9 ಜನ ಸಿಬ್ಬಂದಿಯ ಕೊರತೆ ಇರುವ ಬಗ್ಗೆ ಮಾಹಿತಿ ಇದೆ. ಹುದ್ದೆ ಭರ್ತಿಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಸ್ವಲ್ಪ ವಿಳಂಬವಾಗಿದ್ದು, ಆದಷ್ಟು ಬೇಗ ಹುದ್ದೆಗಳ ಭರ್ತಿ ಮಾಡಲಾಗುವುದು.
    ಡಾ. ಶಶಿ ಪಾಟೀಲ, ಡಿಎಚ್‌ಒ ಧಾರವಾಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts