More

    ಅಕ್ರಮ ಮದ್ಯ ಮಾರಾಟ ತಡೆಯಲು ಕ್ರಮವಹಿಸಿ

    ಕೂಡ್ಲಿಗಿ: ಪ್ರಗತಿ ಪರಿಶೀಲನಾ ಸಭೆಗೆ ಬರುವ ಅಧಿಕಾರಿಗಳು ಮಾಹಿತಿ ಕೊರತೆಯಿಂದ ಸುಳ್ಳು ಹೇಳಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.

    ಅಧಿಕಾರಿಗಳು ಇಲಾಖೆಯ ಪ್ರಗತಿಯ ಅಂಕಿ ಅಂಶಗಳ ಬಗ್ಗೆ ಮಾಹಿತಿ ಇರದೇ ಇದ್ದರೆ ಇನ್ನೊಮ್ಮೆ ತಿಳಿದುಕೊಂಡು ಸರಿಯಾದ ಮಾಹಿತಿ ನೀಡಬೇಕು ಎಂದರು.

    ಇದನ್ನೂ ಓದಿ:ಮದ್ಯ ಮಾರಾಟ ಮಾಡುವ ಅಂಗಡಿಗಳು ನಿಯಮ ಪಾಲಿಸುತ್ತಿಲ್ಲ: ವೆಂಕಟೇಶ್ ಬೋರೆಹಳ್ಳಿ

    ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಮದ್ಯ ಮರಾಟದ ದೂರುಗಳು ಸಾಕಷ್ಟು ಬಂದಿದ್ದು, ಇದಕ್ಕೆ ಕ್ರಮ ಏನು ಜರುಗಿಸಿದ್ದಿರಿ ಎಂದು ಅಬಕಾರಿ ಸಿಪಿಐ ಎಂ.ಎಚ್.ಪವಿತ್ರ ಅವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು ಈಗಾಗಲೇ ಹಲವು ದಾಳಿ ಮಾಡಲಾಗಿದೆ. ಸರ್ಕಾರದ ನಿಯಮದ ಪ್ರಕಾರ 2.5 ಲೀಟರ್ ನಷ್ಟು ಮದ್ಯ ಇದ್ದರೆ ಯಾವುದೇ ಕ್ರಮ ಜರುಗಿಸಲು ಬರುವುದಿಲ್ಲ ಎಂದರು.

    ಮುಲಾಜಿಲ್ಲದೆ ಕ್ರಮ ಜರುಗಿಸಿ

    ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಅವ್ಯಾಹತವಾಗಿ ಮದ್ಯ ಮಾರಾಟ ಮಾಡುವ ದೂರು ಬಂದಿದೆ, ಮುಂದಿನ ದಿನಗಳಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಿ ಎಂದು ಶಾಸಕರು ಸೂಚಿಸಿದರು.

    ತಾಲೂಕಿನ ಮರಳು ಮಾಫಿಯಾ ಸೇರಿದಂತೆ ಅನೇಕ ಅನೈತಿಕ ದಂಧೆಗಳು ನಡೆದರೆ ಸಹಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಬೇಕು. ತಾಲೂಕಿನಲ್ಲಿ ವಿದ್ಯುತ್ ಪರಿವರ್ತಕಗಳನ್ನ ರಿಪೇರಿ ಮಾಡಿಸದೆ ಹೊಸ ಪರಿವರ್ತಕಗಳನ್ನೇ ಅಳವಡಿಸಲು ಕೂಡ್ಲಿಗಿ ಉಪ ವಿಭಾಗದ ಎಇಇ ಪ್ರಕಾಶ ಪತ್ತೇನೂರು ಅವರಿಗೆ ಸೂಚಿಸಿದರು.

    ಇದಕ್ಕೆ ಉತ್ತರಿಸಿದ ಅವರು ಕಳೆದ ವರ್ಷಗಳಿಂದ ಇಲಾಖೆಯಿಂದ ಹೊಸ ಪರಿವರ್ತಕಗಳು ಲಭ್ಯವಿಲ್ಲದೇ ಅವುಗಳನ್ನೇ ರಿಪೇರಿ ಮಾಡಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಪರಿವರ್ತಕ ನೀಡುವುದಾಗಿ ಇಲಾಖೆ ತಿಳಿಸಿದೆ ಎಂದರು. ಶಾಲೆ-ಕಾಲೇಜು ಮೈದಾನಗಳಲ್ಲೆ ವಿದ್ಯುತ್ ಪರಿವರ್ತಕಗಳು ಹಾಗೂ ಹೆಚ್ಚಿನ ವಿದ್ಯುತ್ ಪ್ರಸರಣ ತಂತಿಗಳು ಹಾದು ಹೋಗಿದ್ದರೆ ಈ ಕೂಡಲೆ ಅವುಗಳನ್ನ ಸ್ಥಳಾಂತರ ಮಾಡುವಂತೆ ಶಾಸಕರು ತಿಳಿಸಿದರು.

    ಪಟ್ಟಣದ ಹಳೇ ಆಸ್ಪತ್ರೆಯಲ್ಲಿ ಮಕ್ಕಳ ಆಸ್ಪತ್ರೆ ಮಾಡಲು ಈಗಾಗಲೆ 3ಕೋಟಿ ರೂ. ಮಂಜೂರಾಗಿ ವಾಪಸ್ ಹೋಗಿದೆ ಸಂಬಂಧಿಸಿದ ಸಚಿವರ ಜತೆ ಮಾತಾನಾಡಿ ಹಣ ವಾಪಸ್ ಪಡೆದು ಅಲ್ಲಿಯೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು. ಈಗಿರುವ ಆಸ್ಪತ್ರೆಯ ಅರೆಬರೆ ಕಟ್ಟಡಗಳನ್ನು ಮರು ನವೀಕರಣ ಮಾಡಲು ಕ್ರಮ ಜರುಗಿಸಲು ತಿಳಿಸಿದರು.

    ಟಿಎಚ್‌ಒ ಪ್ರದೀಪ್ ಮಾತಾನಾಡಿ, ಹಳೇ ಆಸ್ಪತ್ರೆ ಜಾಗದ ಪತ್ರಗಳು ಇದ್ದು ಅಲ್ಲಿನ ಇಂದಿರಾ ಕ್ಯಾಂಟೀನ್ ಬೇರೆಡೆಗೆ ಸ್ಥಳಾಂತರ ಮಾಡಿ ನಿರ್ಮಾಣ ಮಾಡಬಹುದು ಎಂದರು. ಅಲ್ಲದೆ ರಕ್ತ ಭಂಡಾರ ನಿರ್ಮಾಣ ಮಾಡಲು ಶಾಸಕರನ್ನು ಕೋರಿದರು.

    ರಾಷ್ಟ್ರೀಯ ಹೆದ್ದಾರಿ ಇರುವ ಕಾರಣ ಅಪಘಾತ ಸಂಧರ್ಭದಲ್ಲಿ ರಕ್ತ ಭಂಡಾರ ಸೇರಿದಂತೆ ಹೆಚ್ಚಿನ ಚಿಕಿತ್ಸೆಗೆ ಸ್ಕ್ಯಾನಿಂಗ್ ಯಂತ್ರಗಳು ಸೇರಿದಂತೆ ಸೂಕ್ತ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಮಂಜೂರು ಮಾಡಿಸುವುದಾಗಿ ಶಾಸಕರು ತಿಳಿಸಿದರು. ಕೃಷಿ, ಸಮಾಜಕಲ್ಯಾಣ, ಸಿಡಿಪಿಒ, ಶಿಕ್ಷಣ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts