ಸಿನಿಮಾ

ಅಕ್ರಮ ನೇಮಕಾತಿಗೆ ಬ್ರೇಕ್!

ಬೆಳಗಾವಿ: ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ ಬೆಳಕಿಗೆ ಬಂದಿದ್ದು, ಹೈಕೋರ್ಟ್‌ನಿಂದ ತಡೆಯಾಜ್ಞೆಯಾಗಿದೆ

‘ಉಳಿಕೆ ವೃಂದದ ಹುದ್ದೆಗಳಾದ ಉಪ ಕುಲಸಚಿವ, ಸಹಾಯಕ ಕುಲಸಚಿವ, ಕಚೇರಿ ಅಧೀಕ್ಷಕರ ಹುದ್ದೆಗಳ’ ನೇರ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಕಂಡುಬಂದಿದೆ. ಕಚೇರಿ ಅಧೀಕ್ಷಕರ ಹುದ್ದೆಗಳ ನೇಮಕ ಪ್ರಕ್ರಿಯೆ ತಡೆಗೆ ಅಭ್ಯರ್ಥಿಗಳು ಹೈಕೋರ್ಟ್ ಮೋರೆ ಹೋಗಿದ್ದರು. ಉಚ್ಚ ನ್ಯಾಯಾಲಯ ಈ ಹುದ್ದೆಯ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ತಡೆಯಾಜ್ಞೆ ನೀಡಿದೆ. ಆದರೂ ವಿವಿಯಲ್ಲಿ ಸಂಚಿತ ವೇತನದ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮಗೆ ಬೇಕಾದ ಅಭ್ಯರ್ಥಿಗಳನ್ನು ಅಕ್ರಮವಾಗಿ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಮುಂದುವರಿಸಿದೆ. ಈಗ ನೇಮಕಾತಿ ಆದೇಶ ನೀಡುವುದಕ್ಕೆ ವಿವಿ ಮುಂದಾಗಿರುವುದು ದುರಂತದ ಸಂಗತಿಯಾಗಿದೆ.

16ರಂದು ಸಿಂಡಿಕೇಟ್ ಸಭೆ?: ಹೈಕೋರ್ಟ್‌ನಿಂದ ಈ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದರೂ ರಾಣಿ ಚನ್ನಮ್ಮ ವಿವಿಯಲ್ಲಿ ತರಾತುರಿಯಲ್ಲೇ ಮೇ 16ರಂದು ಸಿಂಡಿಕೇಟ್ ಸಭೆ ಕರೆದು, ನೇಮಕಾತಿಗೆ ಘಟನೋತ್ತರ ಅನುಮತಿ ಪಡೆಯುವ ಧಾವಂತದಲ್ಲಿ ಕುಲಪತಿ ಇದ್ದಾರೆ. ಅಂದರೆ ಈಗಾಗಲೇ ಸಂದರ್ಶನ ಪೂರ್ಣಗೊಳಿಸಿದ್ದೇವೆ. ನೇಮಕಾತಿ ಆದೇಶ ಪ್ರತಿಯನ್ನೂ ಕೊಟ್ಟಿದ್ದೇವೆಂಬ ವಾದವನ್ನು ಮುಂದಿಡುವುದಕ್ಕೆ ವಿವಿಯವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ತಮಗೆ ಬೇಕಾದ ಅಭ್ಯರ್ಥಿಗಳಿಗೆ ನಿಯಮ ಬಾಹೀರವಾಗಿ ಆದೇಶ ಪ್ರತಿಗಳನ್ನು ನೀಡುವುದಕ್ಕೆ ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಆದೇಶಗಳು ಕುಲಸಚಿವರ ಬಳಿ ಇದ್ದು, ಸಿಂಡಿಕೇಟ್ ಸಭೆಯಲ್ಲಿ ಘಟನೋತ್ತರ ಅನುಮತಿ ಪಡೆದ ತಕ್ಷಣ ಕುಲಸಚಿವರು ಸಹಿ ಮಾಡಿ ಆದೇಶ ನೀಡಲಿದ್ದಾರೆಂದು ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ತಿಳಿಸಿದ್ದಾರೆ. ಸರ್ಕಾರದಿಂದ ಸಿಂಡಿಕೇಟ್ ಸದಸ್ಯರು ನಾಮನಿರ್ದೇಶನ ಮಾಡಿಲ್ಲ. ಆದರೂ ಸಿಂಡಿಕೇಟ್ ಸಭೆ ಕರೆಯುತ್ತಿದ್ದು, ವಿವಿ ಮತ್ತೊಂದು ಯಡವಟ್ಟು ಮಾಡುತ್ತಿದೆ.

ಸಂದರ್ಶನದಲ್ಲಿ ನಿಯಮ ಉಲ್ಲಂಘನೆ: ನ್ಯಾಯಾಲಯದಿಂದ ತಡೆಯಾಜ್ಞೆ ಬರುತ್ತದೆ ಎಂದು ಗೊತ್ತಿದ್ದರೂ ವಿವಿಯು ಈ ನೇಮಕಾತಿಯ ಸಂದರ್ಶನ ನಡೆದಿದೆ. ಸಂದರ್ಶನವನ್ನು ವಿವಿಯಲ್ಲಿ ನಡೆಸದೆ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜಿನಲ್ಲಿ ನಡೆಸಿದೆ. ಕುಲಪತಿ ಅವರಿಗೆ ಮೊಳಕಾಲು ಚಿಪ್ಪು ಸರ್ಜರಿ ಆಗಿದ್ದರೂ ಡಿಸ್ಚಾರ್ಜ್ ಆಗಿ ಬಂದು ತರಾತುರಿಯಲ್ಲಿ ಸಂದರ್ಶನ ನಡೆಸಿದ್ದಾರೆ. ಹಣದ ವ್ಯವಹಾರ ಕುದುರಿದ ಅಭ್ಯರ್ಥಿಗಳಿಗೆ ಆದೇಶ ಪ್ರತಿಗಳು ಸಿದ್ಧವಾಗಿವೆ ಎಂದು ನೊಂದ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಜುಲೈ 4ಕ್ಕೆ ಕುಲಪತಿ ಅವರ ಅವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಹೇಗಾದರೂ ಮಾಡಿ ನೇಮಕಾತಿ ಪ್ರಕ್ರಿಯೆ ಮುಗಿಸುವ ಧಾವಂತದಲ್ಲಿದ್ದಾರೆ. ನಿಯಮ ಪ್ರಕಾರ ಕುಲಪತಿ ನಿವೃತ್ತಿ ಆಗುವುದಕ್ಕೆ 6 ತಿಂಗಳು ಮುನ್ನ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆಸುವಂತಿಲ್ಲ. ಆದರೂ ಈ ಅಕ್ರಮ ನಡೆಯುತ್ತಿದೆ ಎಂದು ನೊಂದವರು ಹೇಳುತ್ತಿದ್ದಾರೆ. ಅಕ್ರಮ ನೇಮಕಾತಿ ಕುರಿತು ಏ. 13ರ ಸಂಚಿಕೆಯ ವಿಜಯವಾಣಿಯಲ್ಲಿ ‘ಆರ್‌ಸಿಯುನಲ್ಲಿ ನೇಮಕಾತಿ ಅಕ್ರಮ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಅಭ್ಯರ್ಥಿ ಅನರ್ಹ ಇದ್ದರೂ ಅರ್ಹ!: ನೇಮಕಾತಿಗೆ ಅನರ್ಹ ಎಂದು ತಯಾರಿಸಲಾದ ಪಟ್ಟಿಯಲ್ಲಿ ಇಬ್ಬರು ಅಭ್ಯರ್ಥಿಗಳು ವಯೋಮಿತಿ ಮೀರಿದರೂ ಲಿಖಿತ ಪರೀಕ್ಷೆ ಹಾಗೂ ಕಂಪ್ಯೂಟರ್ ಪರೀಕ್ಷೆಗೆ ಅವಕಾಶ ಕಲ್ಪಿಸಿದ್ದಾರೆ. ಮಾ. 24ರಂದು ಲಿಖಿತ

ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು ಅಭ್ಯರ್ಥಿಯೊಬ್ಬ

ಸಹಾಯಕ ಕುಲಸಚಿವರ ಹುದ್ದೆ ಮತ್ತು ಕಚೇರಿ ಅಧೀಕ್ಷಕರ ಎರಡೂ ಹುದ್ದೆಗಳಿಗೂ 100ಕ್ಕೆ 87.5 ಅಂಕ ಪಡೆದಿದ್ದಾರೆ. ಈ ಅಭ್ಯರ್ಥಿ ಪ್ರಸ್ತುತ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ನೇಮಕಾತಿ ಪ್ರಾಧಿಕಾರದ ಪರೀಕ್ಷೆ ಸಂಯೋಜಕರೊಂದಿಗೆ ಹತ್ತಿರದ ಒಡನಾಟವಿರುವುದು ಕಂಡುಬಂದಿದೆ. ನಡೆದಿರುವ ಎರಡೂ ಪರೀಕ್ಷೆಗಳಿಗೂ ಈ ಅಭ್ಯರ್ಥಿ ಪಡೆದ ಅಂಕಗಳೇ ಗರಿಷ್ಠ ಅಂಕಗಳಾಗಿವೆ. ದ್ವಿತೀಯ ಗರಿಷ್ಠ ಅಂಕಗಳಿಗೂ ಈ ಅಭ್ಯರ್ಥಿ ಪಡೆದ ಅಂಕಗಳಿಗೂ ಅಜಗಜಾಂತರ ವ್ಯತ್ಯಾಸವಿದ್ದು, ಅಕ್ರಮ ನಡೆದಿರುವುದು ಅತ್ಯಂತ ಸಷ್ಟವಾಗಿದೆ.

| ಜಗದೀಶ ಹೊಂಬಳಿ ಬೆಳಗಾವಿ

ಎರಡು ಹುದ್ದೆಗೆ 47 ಜನ ಅರ್ಜಿ
ಉಪಕುಲಸಚಿವ ಹಾಗೂ ಸಹಾಯಕ ಕುಲಸಚಿವರ ಹುದ್ದೆಗೆ ಒಂದೇ ಪರೀಕ್ಷೆಗಳನ್ನು ನಡೆಸಿದ್ದು, ಈ ಎರಡೂ ಹುದ್ದೆಗಳಿಗೆ ವಿವಿಯಲ್ಲಿ ಪ್ರಸ್ತುತ ಸಂಚಿತ ವೇತನ ಆಧಾರದ ಮೇಲೆ ಸಹಾಯಕ ಕುಲಸಚಿವರಾಗಿ ರಾಣಿ ಚನ್ನಮ್ಮ ವಿವಿ ಕೆಲಸ ಮಾಡುತ್ತಿರುವ ಇಬ್ಬರು, ಈ ಹುದ್ದೆಗಳ ಲಿಖಿತ ಪರೀಕ್ಷೆಗಳಲ್ಲಿ ಕ್ರಮವಾಗಿ 45.5 ಹಾಗೂ 40.5 ಅಂಕ ಪಡೆದಿದ್ದು, ಇವೇ ಗರಿಷ್ಠ ಅಂಕಗಳಾಗಿವೆ. ಎರಡೂ ಹುದ್ದೆಗಳಿಗೆ 47 ಜನ ಅರ್ಜಿ ಹಾಕಿದ್ದಾರೆ. ಈ ಪೈಕಿ 19 ಜನ ಉಪಕುಲಸಚಿವರ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಗರಿಷ್ಠ ಅಂಕ ಪಡೆದವರನ್ನು ಸಂದರ್ಶನ ಮಾಡಿದ್ದಾರೆ.

ಆರ್‌ಸಿಯು ಕಚೇರಿ ಅಧೀಕ್ಷಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ತಡೆಗೆ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋಟ್ ತಡೆಯಾಜ್ಞೆ ನೀಡಿದ್ದು, ಅಂತಿಮ ನಿರ್ದೇಶನ ಬರುವವರೆಗೆ ಆದೇಶ ಪತ್ರ ನೀಡಬಾರದು ಎಂದು ಆದೇಶಿಸಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸುತ್ತೇವೆ. ಇನ್ನುಳಿದ ಹುದ್ದೆಗಳ ನೇಮಕಾತಿ ಸಂಬಂಧ ಕಾನೂನು ಸಲಹೆಗಾರರಿಂದ ಸಲಹೆ ಪಡೆಯುತ್ತೇವೆ.
ಡಾ. ಎಂ. ರಾಮಚಂದ್ರಗೌಡ ರಾಣಿ ಚನ್ನಮ್ಮ ವಿವಿ ಕುಲಪತಿ

Latest Posts

ಲೈಫ್‌ಸ್ಟೈಲ್