More

    ಲಸಿಕೆ ಪೂರೈಕೆಯಲ್ಲಿ ವ್ಯತ್ಯಯ

    ಇಳಕಲ್ಲ: ಇಳಕಲ್ಲ-ಹುನಗುಂದ ಅವಳಿ ತಾಲೂಕಾದ್ಯಂತ ದಿನೇ ದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಎರಡು ದಿನಗಳಿಂದ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜನರು ಆತಂಕ ಪಡುವಂತಾಗಿದೆ.

    ಕರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸ್ವಯಂ ಪ್ರೇರಿತವಾಗಿ ಸಾರ್ವಜನಿಕರು ಬರುತ್ತಿದ್ದಾರೆ. ಆದರೆ, ಲಸಿಕೆ ದೊರೆಯದೆ ನಿರಾಶರಾಗಿ ಮನೆಗೆ ಮರಳುತ್ತಿದ್ದಾರೆ. ಇಳಕಲ್ಲ-ಹುನಗುಂದ ಅವಳಿ ತಾಲೂಕಿಗೆ ಪ್ರಾರಂಭದಲ್ಲಿ 2000 ಡೋಸ್ ಪೂರೈಕೆಯಾಗುತ್ತಿತ್ತು. ನಂತರ ಅದು 1000 ಡೋಸ್‌ಗೆ ಇಳಿಯಿತು. ಈಗ 500 ಡೋಸ್ ಪೂರೈಕೆಯಾಗುತ್ತಿದೆ. ಈ 500 ಡೋಸ್‌ಗಳನ್ನು ಎರಡು ತಾಲೂಕು ಆಸ್ಪತ್ರೆಗಳಿಗೆ, ತಾಲೂಕಿನ ಆರೋಗ್ಯ ಕೇಂದ್ರಗಳಿಗೆ ಪೂರೈಸಬೇಕಾಗಿದೆ. ಹೀಗಾಗಿ ಲಸಿಕೆಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

    ಪೂರೈಕೆಯಾಗದ ಕೋವ್ಯಾಕ್ಸಿನ್
    ಕಳೆದೊಂದು ವಾರದಿಂದ ಅವಳಿ ತಾಲೂಕಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲ. ಮೊದಲ ಹಂತದಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದವರು ನಿಗದಿತ ಅವಧಿ ಮುಗಿಯುತ್ತಿದ್ದಂತೆಯೇ ಮತ್ತೊಂದು ಬಾರಿ ಕೋವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಬೇಕು. ಅದು ಲಭ್ಯವಿಲ್ಲದಿರುವುದರಿಂದ ಜನರಲ್ಲಿ ಆತಂಕವನ್ನುಂಟು ಮಾಡಿದೆ.

    ಒಂದು ದಿನ ಲಸಿಕೆ ಪೂರೈಕೆಯಾದರೆ ಮತ್ತೆ ಎರಡ್ಮೂರು ದಿನ ಲಸಿಕೆಗಾಗಿ ಸಾರ್ವಜನಿಕರು ಕಾಯುತ್ತ ಕುಳಿತುಕೊಳ್ಳಬೇಕಾಗಿದೆ. ಹೀಗಾಗಿ ಜನಪ್ರತಿನಿಧಿಗಳು, ವಿರೋಧ ಪಕ್ಷದ ನಾಯಕರು, ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುವುದು ತುಂಬಾ ಅಗತ್ಯವಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

    ನಾಮಫಲಕ ಅಳವಡಿಕೆ
    ಲಸಿಕೆಗಾಗಿ ಸಾರ್ವಜನಿಕರು ಪರದಾಡುವಂತಾಗಬಾರದು ಎಂಬ ಉದ್ದೇಶದಿಂದ ಇಳಕಲ್ಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿಲ್ಲ. ಲಭ್ಯವಾದ ನಂತರ ತಿಳಿಸಲಾಗುವುದು ಎಂದು ಆಸ್ಪತ್ರೆ ಮುಂಭಾಗದಲ್ಲಿ ನಾಮಲಕವನ್ನು ಹಾಕಲಾಗಿದೆ. ಸಾರ್ವಜನಿಕರು ಲಸಿಕೆಗಾಗಿ ಆಸ್ಪತ್ರೆಯ ಚೇತನ್ (7892543883), ಶರಣು (8123607646), ರಫೀಕ್ (8722073779) ಅವರನ್ನು ಸಂಪರ್ಕಿಸಿ ಆಸ್ಪತ್ರೆಗೆ ಬರಬೇಕೆಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಲಸಿಕೆ ಲಭ್ಯವಿಲ್ಲದ ಬಗ್ಗೆ ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಲಸಿಕೆ ಬಂದ ನಂತರ ಕಳುಹಿಸುತ್ತೇವೆ ಎಂದು ತಿಳಿಸಿದ್ದಾರೆ. ಬಂದ ತಕ್ಷಣವೇ ಜನರಿಗೆ ಲಸಿಕೆ ಹಾಕುವ ಕೆಲಸ ಮಾಡಲಾಗುವುದು. ಲಸಿಕೆ ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು.
    ಡಾ.ಪ್ರಶಾಂತ ತುಂಬಗಿ ಅವಳಿ ತಾಲೂಕು ಆರೋಗ್ಯಾಧಿಕಾರಿಗಳು, ಹುನಗುಂದ-ಇಳಕಲ್ಲ

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts