More

    ಮಾಜಿ ಸಿಎಂ ಪತ್ನಿ ಮರಿಬಸಮ್ಮ ಅಂತ್ಯಕ್ರಿಯೆ

    ಇಳಕಲ್ಲ: ಸ್ವಾತಂತ್ರ್ಯ ಹೋರಾಟಗಾರ್ತಿ, ಶತಾಯುಷಿ, ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್.ಕಂಠಿ ಅವರ ಧರ್ಮಪತ್ನಿ ಮರಿಬಸಮ್ಮ ಎಸ್.ಕಂಠಿ(104) ಅವರ ಅಂತ್ಯಕ್ರಿಯೆ ಬುಧವಾರ ಬಸವ ತತ್ವದ ಅಡಿಯಲ್ಲಿ ನಗರದಲ್ಲಿ ನಡೆಯಿತು.

    ಬೆಳಗಾವಿ ಜಿಲ್ಲೆಯ ಕಿತ್ತೂರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ಶಾಲೆಯ ಕೊಠಡಿಯಲ್ಲಿ ವಾಸ ಇದ್ದ ಮರಿಬಸಮ್ಮ ಅವರು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕಿತ್ತೂರನಿಂದ ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯ ಮಂಗಳವಾರ ಕೊನೆಯುಸಿರು ಎಳೆದಿದ್ದರು. ಬುಧವಾರ ಬೆಳಗ್ಗೆ ಕಿತ್ತೂರನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ಎಸ್.ಆರ್.ಕಂಠಿ ಅವರ ತವೂರೂರಾದ ಇಳಕಲ್ಲ ನಗರಕ್ಕೆ ಬುಧವಾರ ಮಧ್ಯಾಹ್ನ ಪಾರ್ಥಿವ ಶರೀರ ತರಲಾಯಿತು.

    ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಪಾರ್ಥಿವ ಶರೀರ ಮೆರವಣಿಗೆ ಎಸ್.ಎಂ.ಕಾಲೇಜು, ಕಂಠಿ ವೃತ್ತ, ಸಾಲಪೇಟೆ, ಮುಖ್ಯ ಬಜಾರ್, ಗಾಂಧಿ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಜಯಮಹಾಂತೇಶ್ವರ ಸಂಸ್ಥಾನಮಠ ತಲುಪಿತು. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು, ನೂರಾರು ಜನ ಭಾಗವಹಿಸಿ ಅಂತಿಮ ದರ್ಶನ ಪಡೆದುಕೊಂಡರು. ನಂತರ ವಿಜಯಮಹಾಂತೇಶ್ವರ ಶ್ರೀಗಳ ಗದ್ದುಗೆ ತಪೋವನದ ಬಳಿ ಇರುವ ಹಿರೇಹಳ್ಳದ ಹತ್ತಿರ ದಿ.ಎಸ್.ಆರ್.ಕಂಠಿ ಅವರ ಗದ್ದುಗೆ ಪಕ್ಕದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ಜರುಗಿತು. ಪುತ್ರ ಮಹೇಂದ್ರ ಕಂಠಿ, ಸೊಸೆ ಗೀತಾ ಕಂಠಿ, ಗುರುಮಹಾಂತ ಶ್ರೀಗಳು, ಡಾ.ಬಸವಲಿಂಗ ಶ್ರೀಗಳು, ಸಿದ್ದಬಸವ ಕಬಿರಾಮನಂದ ಸ್ವಾಮೀಜಿ ಸಮ್ಮುಖದಲ್ಲಿ ಅಂತಿಮ ಸಂಸ್ಕಾರ ನೆರವೇರಿತು.

    ಶಾಸಕ ದೊಡ್ಡನಗೌಡ ಪಾಟೀಲ, ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ, ಉಪಾಧ್ಯಕ್ಷೆ ಸವಿತಾ ಆರಿ, ಎಸ್.ವಿ.ಎಂ ಸಂಘದ ಚೆರ್ಮೆನ್ ಎಂ.ವಿ.ಪಾಟೀಲ, ವೈಸ್ ಚೆರ್ಮೆನ್ ಗೌತಮ ಬೂರಾ, ಪ್ರಧಾನ ಕಾರ್ಯದರ್ಶಿ ಅಶೋಕ ಬಿಜ್ಜಳ, ತಹಸೀಲ್ದಾರ ನಿಂಗಪ್ಪ ಬಿರಾದಾರ, ಸಿಪಿಐ ಅಯ್ಯನಗೌಡ ಪಾಟೀಲ, ನಗರಸಭೆ ಆಯುಕ್ತ ಜಗದೀಶ ಹುಲಿಗೆಜ್ಜಿ, ಮುಖಂಡರಾದ ದೇವಾನಂದ ಕಾಶಪ್ಪನವರ, ಮಲ್ಲಿಕಾರ್ಜುನ ಶೆಟ್ಟರ, ಶಿವರುದ್ರಪ್ಪ ಗೊಂಗಡಶೆಟ್ಟಿ, ಮಹಾಬಲೇಶ್ವರ ಮಠದ, ಜಿ.ಟಿ.ಪಾಟೀಲ, ಮಹಾಂತಪ್ಪ ಶೆಟ್ಟರ, ದಿಲೀಪ ದೇವಗಿರಿಕರ, ಎಂ.ಎಸ್.ಪಾಟೀಲ, ವೀರಣ್ಣ ಹಲಕುರ್ಕಿ ಸೇರಿದಂತೆ ಅಕ್ಕನ ಬಳಗ, ವಿಜಯಮಹಾಂತೇಶ ತರುಣ ಸಂಘ ಹಾಗೂ ಕಂಠಿ ಕುಟುಂಬದ ಅಭಿಮಾನಿಗಳು, ಹಿತೈಶಿಗಳು ಅತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.



    ಮಾಜಿ ಸಿಎಂ ಪತ್ನಿ ಮರಿಬಸಮ್ಮ ಅಂತ್ಯಕ್ರಿಯೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts