More

    ಪಿಲಿಕುಳ ಐಫೆಲ್ ಟವರ್ ನಿರ್ವಹಣೆ ಕೊರತೆ

    ಹರೀಶ್ ಮೋಟುಕಾನ ಮಂಗಳೂರು
    ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿರುವ ಐಫೆಲ್ ಗೋಪುರ ಶತಮಾನ ಕಳೆದರೂ ಗಟ್ಟಿಯಾಗಿ ಆಕರ್ಷಣೀಯವಾಗಿ ವಿಶ್ವದ ಗಮನ ಸೆಳೆಯುತ್ತಿದೆ. ಅದೇ ಮಾದರಿಯಲ್ಲಿ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಉದ್ಯಾನವನದಲ್ಲಿ ನಿರ್ಮಿಸಿದ ಗೋಪುರ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯಲಾರಂಭಿಸಿದೆ.

    ಲಕ್ಷಾಂತರ ರೂ. ವೆಚ್ಚ ಮಾಡಿ ಪ್ರವಾಸಿಗರ ವೀಕ್ಷಣೆಗೆಂದು ನಾಲ್ಕು ವರ್ಷದ ಹಿಂದೆ ಎ.ಬಿ.ಇಬ್ರಾಹಿಂ ಜಿಲ್ಲಾಧಿಕಾರಿ ಆಗಿದ್ದಾಗ ಐಫೆಲ್ ಮಾದರಿ ಗೋಪುರ ನಿರ್ಮಾಣ ಮಾಡಲಾಗಿತ್ತು. ಸಂಪೂರ್ಣವಾಗಿ ಕಬ್ಬಿಣದಿಂದ ನಿರ್ಮಿಸಲಾಗಿದೆ. ಸಮುದ್ರದಿಂದ ಬೀಸುವ ಉಪ್ಪು ಮಿಶ್ರಿತ ಗಾಳಿಗೆ ಮಂಗಳೂರು ಪರಿಸರದಲ್ಲಿ ಕಬ್ಬಿಣದ ವಸ್ತುಗಳಿಗೆ ಬಹು ಬೇಗನೆ ತುಕ್ಕು ಹಿಡಿಯುವುದು ಸಹಜ. ವರ್ಷಕ್ಕೊಂದು ಬಾರಿ ಪೆಯಿಂಟ್ ಬಳಿಯುವ ಮೂಲಕ ತುಕ್ಕು ಹಿಡಿಯುವುದರಿಂದ ರಕ್ಷಣೆ ಪಡೆಯಬಹುದು.
    ಪಿಲಿಕುಳದಲ್ಲಿ ಐಫೆಲ್ ಗೋಪುರ ಅಳವಡಿಸಿದ ಬಳಿಕ ಪೆಯಿಂಟಿಂಗ್ ಮಾಡಿಲ್ಲ. ಮಳೆಗಾಲದಲ್ಲಿ ಮಳೆ ನೀರು ಕೂಡಾ ಅದರ ಮೇಲೆ ಬೀಳುವುದರಿಂದ ಬಹು ಬೇಗನೆ ತುಕ್ಕು ಹಿಡಿದಿದೆ. ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಇಂತಹ ಮಾದರಿಗಳನ್ನು ಪಿಲಿಕುಳ ನಿಸರ್ಗಧಾಮದ ಆಡಳಿತ ಸಕಾಲದಲ್ಲಿ ನಿರ್ವಹಣೆ ಮಾಡದೆ ನಿರ್ಲಕ್ಷೃ ವಹಿಸಿದೆ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.

    ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಾರ್ಪೋರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಅನುದಾನ ಪಡೆದು ಇಲ್ಲಿ ಹಲವು ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಅವುಗಳ ನಿರ್ವಹಣೆ ಮಾಡದೆ ಇರುವುದರಿಂದ ಅವು ದೀರ್ಘ ಕಾಲ ಬಾಳ್ವಿಕೆ ಇಲ್ಲದೆ ನಾಶವಾಗುತ್ತಿದೆ. ಈಗಾಗಲೇ ನಿರ್ಮಾಣ ಆಗಿರುವುದನ್ನು ನಿರ್ವಹಣೆ ಮಾಡಿ ಅದೇ ಸ್ವರೂಪದಲ್ಲಿ ಉಳಿಸಿಕೊಳ್ಳುವ ಹೊಣೆಗಾರಿಕೆ ಇಲ್ಲಿನ ಆಡಳಿತ ವರ್ಗಕ್ಕಿದೆ.
    *ಗತ್ತು ಕಳೆದುಕೊಂಡ ಗುತ್ತು ಮನೆ:
    ಆಕರ್ಷಣೀಯವಾಗಿದ್ದ ಜಿಲ್ಲೆಯ ಪುರಾತನ ಮಾದರಿಯ ಗುತ್ತು ಮನೆ ಹಾಗೂ ಅದರೊಳಗೆ ಪಾರಂಪರಿಕ ವಸ್ತು ಸಂಗ್ರಹಾಲಯ ನಿರ್ವಹಣೆ ಇಲ್ಲದೆ ಧೂಳು ಹಿಡಿದಿದೆ. ಇದರೊಳಗಿನ ಯಕ್ಷಗಾನದ ಪ್ರತಿಕೃತಿಗಳು ಬಣ್ಣ ಕಳೆದುಕೊಂಡಿವೆ. ಕಬ್ಬಿಣದ ಸೊತ್ತುಗಳು ತುಕ್ಕು ಹಿಡಿಯುತ್ತಿವೆ. ಎದುರಿನ ಕಂಬಳದ ಗದ್ದೆ ಕಾಡು ತುಂಬಿಕೊಂಡಿದೆ. ಕಲಾ ಸಂಪತ್ತಿನ ಕಣಜವಾಗಿರುವ ಜಿಲ್ಲೆಯ ಸಮಗ್ರ ಚಿತ್ರಣವನ್ನು ಹೊರ ಜಗತ್ತಿಗೆ ಸಾರಬೇಕಿದ್ದ ಗುತ್ತು ಮನೆ ವೈಭವ ಕಳೆದುಕೊಂಡಿದೆ.

    ಕುಶಲಕರ್ಮಿಗಳ ಗ್ರಾಮದ ಮಾಹಿತಿ ಇಲ್ಲ: ಸ್ವರ್ಣ ಜಯಂತಿ ಸ್ವರಾಜ್ ರೋಜ್‌ಗಾರ್ ಯೋಜನೆಯಡಿ ಪಿಲಿಕುಳದಲ್ಲಿ ಕುಶಲಕರ್ಮಿಗಳ ಗ್ರಾಮ ಸ್ಥಾಪಿಸಿ ಕುಂಬಾರಿಕೆ, ಕಮ್ಮಾರಿಕೆ, ಅವಲಕ್ಕಿ ಕುಟ್ಟುವುದು, ಎಣ್ಣೆಗಾಣ, ನೇಕಾರಿಕೆ, ಕಲ್ಲಿನ ಕೆತ್ತನೆ, ಮರದ ಕೆತ್ತನೆ, ಬಡಗಿ, ಬೆತ್ತ ಮತ್ತು ಬಿದಿರಿನ ಕೆಲಸ, ಬೆಲ್ಲ ತಯಾರಿಕೆ ಮೊದಲಾದ ಕುಶಲತೆಗಳ ಪ್ರಾತ್ಯಕ್ಷಿಕೆ, ಉತ್ಪಾದನೆ, ತರಬೇತಿ ನೀಡಲಾಗುತ್ತಿದೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರಿಗೆ ಈ ಗ್ರಾಮದ ಬಗ್ಗೆ ಮಾಹಿತಿಯೇ ಇಲ್ಲ. ಜೈವಿಕ ಉದ್ಯಾನವನ, ಹೂದೋಟ, ವಿಜ್ಞಾನ ಕೇಂದ್ರ ವೀಕ್ಷಿಸಿ ಹಿಂತಿರುಗುವವರೇ ಹೆಚ್ಚು. ಪ್ರವೇಶ ದ್ವಾರದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಈ ಗ್ರಾಮ ಇರುವುದರಿಂದ ಅಲ್ಲಿಗೆ ಖಾಸಗಿ ವಾಹನ ಪ್ರವೇಶಕ್ಕೂ ಅವಕಾಶ ಇಲ್ಲ. ದುಬಾರಿ ದರ ನೀಡಿ ಬಗ್ಗೀಸ್‌ನಲ್ಲಿ ಪ್ರಯಾಣಿಸಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಗೊಂದಲಗಳನ್ನು ನಿವಾರಿಸಿ, ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶಕರನ್ನು ನೇಮಕ ಮಾಡಬೇಕು. ಪಿಲಿಕುಳ ಪ್ರವಾಸಿ ಕೇಂದ್ರ ಬ್ರಾಂಡಿಂಗ್ ಆಗಬೇಕು ಎಂದು ಪ್ರವಾಸಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಿಲಿಕುಳದ ಯೋಜನೆಗಳನ್ನು ನಿರ್ವಹಣೆ ಮಾಡಲು ಅನುದಾನದ ಕೊರತೆ ಇದೆ. ಸರ್ಕಾರದಿಂದ ನಿರ್ವಹಣೆಗೆ ಅನುದಾನ ಸಿಗುತ್ತಿಲ್ಲ. ಐಫೆಲ್ ಟವರ್, ಗುತ್ತಿನ ಮನೆ ನಿರ್ವಹಣೆ ಆಗಬೇಕಾಗಿದೆ. ದಾನಿಗಳ ನೆರವಿನಿಂದ ಕಡಿಮೆ ಖರ್ಚಿನಲ್ಲಿ ಮಾಡಿಸಲು ಪ್ರಯತ್ನ ನಡೆಯುತ್ತಿದೆ.
    ಗೋಕುಲ್‌ದಾಸ್ ನಾಯಕ್, ಕಾರ್ಯನಿರ್ವಾಹಕ ನಿರ್ದೇಶಕರು

    ಪಿಲಿಕುಳ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಯೋಜನೆ ರೂಪಿಸಲಾಗುವುದು. ಮುಂದಿನ ತಿಂಗಳಿನಲ್ಲಿ ಪ್ರಾಧಿಕಾರ ಜಾರಿಗೆ ಬರುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ತುರ್ತು ಆಗಬೇಕಾದ ಕೆಲಸಗಳನ್ನು ಆದ್ಯತೆ ನೆಲೆಯಲ್ಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು.
    ಸಿ.ಪಿ.ಯೋಗೇಶ್ವರ್, ಪ್ರವಾಸೋದ್ಯಮ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts