More

  ಸಂಸದನಾಗಿ ಆಯ್ಕೆಯಾದರೆ ಜನರ ಕಷ್ಟ-ಸುಖಗಳಲ್ಲಿ ಸ್ಪಂದನೆ

  ಹುಣಸೂರು: ಸಂಸದನಾಗಿ ಆಯ್ಕೆಯಾದಲ್ಲಿ ಜನರೊಂದಿಗೆ ಬೆರೆತು ಜನರ ಕಷ್ಟಸುಖಗಳಿಗೆ ಸ್ಪಂದಿಸಲಾಗುವುದು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದರು.

  ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಬುಧವಾರ ತಾಲೂಕಿನ ವಿವಿಧೆಡೆ ಮತಯಾಚನೆ ಮಾಡಿದ ಅವರು ನಗರದ ಎಚ್.ಡಿ.ಕೋಟೆ ವೃತ್ತದ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

  ಬಿಜೆಪಿ ಹೈಕಮಾಂಡ್ ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ನನ್ನ ಆಲೋಚನೆ ಮತ್ತು ಬಿಜೆಪಿಯ ಯೋಚನಾಲಹರಿ ಒಂದಕ್ಕೊಂದು ಹೊಂದಿಕೆಯಾಗುತ್ತದೆ. ಹಾಗಾಗಿಯೇ ನಾನು ಅಭ್ಯರ್ಥಿಯಾಗಲು ಒಪ್ಪಿಕೊಂಡೆ. ತಾಲೂಕಿನಲ್ಲಿ ತಂಬಾಕು ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

  ನಾನು ಜನಸಾಮಾನ್ಯರ ಜನಪ್ರತಿನಿಧಿಯಾಗಬೇಕೆಂದು ಬಂದಿದ್ದೇನೆ. ಆ ಮೂಲಕ ಜನಸೇವೆ ಮಾಡಲು ಉತ್ಸುಕನಾಗಿದ್ದೇನೆ. ನಾನು ಸಂಸದನಾಗಿ ಆಯ್ಕೆಯಾದಲ್ಲಿ ಪ್ರತಿ ತಾಲೂಕಿನಲ್ಲೂ ಸಂಸದರ ಕಚೇರಿ ಸ್ಥಾಪಿಸಿ ಜನರ ಅಹವಾಲುಗಳನ್ನು ಸ್ವೀಕರಿಸುವ ಕಾರ್ಯ ಮಾಡಲಿದ್ದೇನೆ. ನಿಮ್ಮ ಪರವಾಗಿ ದುಡಿಯಲು ಸಿದ್ಧನಿದ್ದು, ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

  ಪಕ್ಷದ ಜಿಲ್ಲಾ ಪ್ರಭಾರಿ ಮೈ.ವಿ.ರವಿಶಂಕರ್, ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ನಾಗರಾಜ ಮಲ್ಲಾಡಿ, ಸೂರ್ಯಕುಮಾರ್, ರಮೇಶ್, ಬಿಜೆಪಿ ತಾಲೂಕು ಅಧ್ಯಕ್ಷ ಕಾಂತರಾಜು, ನಗರಮಂಡಲ ಅಧ್ಯಕ್ಷ ನಾರಾಯಣ, ಕಾರ್ಯದರ್ಶಿ ರಾಮಚಂದ್ರ, ನಿಕಟಪೂರ್ವ ಅಧ್ಯಕ್ಷ ನಾಗಣ್ಣಗೌಡ, ವೆಂಕಟಮ್ಮ, ಕಮಲಮ್ಮ, ಸವಿತಾ ಚೌಹಾಣ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಳಿನಿಗೌಡ, ಉಪಾಧ್ಯಕ್ಷೆ ವೆಂಕಟಮ್ಮ, ಮಂಜುಳಮ್ಮ, ಯಶೋದಮ್ಮ, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಲಕ್ಷಣ್, ಮಹದೇವಮ್ಮ, ಇತರರು ಹಾಜರಿದ್ದರು.

  ಗದ್ದಿಗೆ ಕ್ಷೇತ್ರದಿಂದ ಆರಂಭ: ಬಿಳಿಕೆರೆ ಹೋಬಳಿಯ ಗದ್ದಿಗೆ ಕೆಂಡಗಣ್ಣೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ಆರಂಭಿಸಿದ ಯದುವೀರ್, ನಂತರ ರತ್ನಪುರಿಯ ಬಲಮುರಿ ಗಣಪತಿ ದೇವಾಲಯದ ಮುಂಭಾಗ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದರು. ಬಳಿಕ ಆಸ್ಪತ್ರೆ ಕಾವಲ್, ಸಿಬಿಟಿ ಕಾಲನಿ, ವಿನೋಬಾ ಕಾಲನಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಹುಣಸೂರಿನ ಎಚ್.ಡಿ.ಕೋಟೆ ವೃತ್ತದಿಂದ ಐಕೆ ರಸ್ತೆಯ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯವರೆಗೆ ರೋಡ್‌ಶೋ ನಡೆಸಿ ಮತಯಾಚಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts