More

    ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರೆ ಕಾವೇರಿ ವಿಚಾರ ಚರ್ಚಿಸುತ್ತಿದ್ದೆವು

    ನಾಗಮಂಗಲ: ಕೇಂದ್ರದ ತಂಡ ಗುರುವಾರ ಜಿಲ್ಲೆಗೆ ಬಂದಿದ್ದು ಕಾವೇರಿ ಸಮಸ್ಯೆ ಬಗ್ಗೆ ತಿಳಿದುಕೊಳ್ಳಲು ಅಲ್ಲ. ತಂಡ ಬಂದಿದ್ದು ಡ್ಯಾಂನ ಸುಸ್ಥಿತಿ ಪರಿಶೀಲಿಸಲು. ಬಹಳ ದಿನಗಳಿಂದ ಡ್ಯಾಂನ ದುರಸ್ತಿ ಕಾರ್ಯ ನಡೆಯುತ್ತಿದೆ. ಎರಡನೇ ಅವಧಿಯ ಟೆಂಡರ್ ಪ್ರಕ್ರಿಯೆ ಇರುವುದರಿಂದ ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

    ತಾಲೂಕಿನ ಆದಿಚುಂಚನಗಿರಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ತಂಡ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಬಂದಿದ್ದರೆ ಸ್ಥಳೀಯ ಮಟ್ಟದಲ್ಲಿ ಕಾವೇರಿ ಸಮಸ್ಯೆ ಕುರಿತು ಚರ್ಚಿಸಬಹುದಿತ್ತು. ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದ ಪರವಾಗಿ ಕೇಂದ್ರದ ತಂಡ ಕೆಆರ್‌ಎಸ್‌ಗೆ ಬಂದಿರಲಿಲ್ಲ ಎಂದು ಹೇಳಿದರು.

    ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಪೂರ್ಣವಾದ ಕಟ್ಟಡವನ್ನು ಯಾರೂ ಉದ್ಘಾಟನೆ ಮಾಡಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಚಾಣಾಕ್ಷರು. ಪ್ರತಿ ಚುನಾವಣೆ ಸಂದರ್ಭ ಒಂದೊಂದು ವಿಚಾರ ತಂದು ಮುಗ್ಧರನ್ನು ಬೇರೆಡೆ ಗಮನ ಸೆಳೆಯುತ್ತಾರೆ. ಮನೆ, ದೇವಸ್ಥಾನ ಯಾವುದಾದರೂ ಸರಿ ಪೂರ್ಣವಾಗದಿದ್ದರೆ ಅದನ್ನು ಉದ್ಘಾಟನೆ ಮಾಡಲ್ಲ. ಶಂಕರಾಚಾರ್ಯರ ನಾಲ್ಕು ಪೀಠಗಳ ಪೈಕಿ 2 ಪೀಠದವರು ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ. ರಾಮಮಂದಿರ ಕಟ್ಟೋದು ತಪ್ಪಲ್ಲ. ಆದರೆ ಅವರು ಅದನ್ನು ಚುನಾವಣೆಗೆ ಬಳಸಿಕೊಳ್ಳುತ್ತಿರುವುದು ತಪ್ಪು ಎಂದು ಹೇಳಿದರು.

    ಕಾಂಗ್ರೆಸ್‌ನಲ್ಲಿ ಡಿಸಿಎಂ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣೆ ವೇಳೆ ಯಾರೂ ಡಿಸಿಎಂ ವಿಚಾರ ಚರ್ಚಿಸದಂತೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಡಿಸಿಎಂ ವಿಚಾರವಾಗಿ ಯಾರೂ ಚರ್ಚೆ ಮಾಡದಂತೆ ಎಐಸಿಸಿ ಅಧ್ಯಕ್ಷರೂ ಖಡಕ್ಕಾಗಿ ಹೇಳಿದ್ದಾರೆ. ಡಿಸಿಎಂ ವಿಚಾರ ಅನವಶ್ಯಕ ಎಂದರು.
    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಚಿವರು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ, ಸ್ಪರ್ಧೆಗೆ ಯಾರೂ ಹಿಂದೇಟು ಹಾಕುವ ಮಾತಿಲ್ಲ. ಸೂಕ್ತ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಆಯಾ ಜಿಲ್ಲೆಯ ಉಸ್ತುವಾರಿ, ಶಾಸಕರಿಗೆ ಮೊದಲ ಆದ್ಯತೆ ನೀಡಲಾಗಿದೆ. ಜ.15 ರಿಂದ 20ರ ಒಳಗೆ ಸಮೀಕ್ಷೆ ಮುಕ್ತಾಯವಾಗಲಿದೆ. ಜ.30ರ ಒಳಗೆ ಹೈಕಮಾಂಡ್ ಕೈಗೆ ಅಂತಿಮ ಪಟ್ಟಿ ತಲುಪಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts