More

    ಸಿದ್ದರಾಮಯ್ಯ ಗೆದ್ದರೆ ನಾನು ಎಂಎಲ್‌ಸಿ

    ಕೋಲಾರ: ಜಿಲ್ಲೆಯಿಂದ ರಾಜ್ಯಕ್ಕೆ ಎರಡನೇ ಮುಖ್ಯಮಂತ್ರಿ ಕೊಡುಗೆ ನೀಡುವ ದಿಸೆಯಿಂದ ಸಿದ್ದರಾಮಯ್ಯ ಅವರಿಗೆ ಅವಕಾಶ ಕಲ್ಪಿಸಲು ಕ್ಷೇತ್ರ ಬಿಟ್ಟು ಕೊಟ್ಟಿದ್ದೇನೆ ಹೊರತಾಗಿ ನಾನು ಯಾವುದೇ ರೀತಿ ಕರಾರು ಮಾಡಿಕೊಂಡು ಆಹ್ವಾನಿಸಿಲ್ಲ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸ್ಪಷ್ಟಪಡಿಸಿದರು.

    ಸಿದ್ದರಾಮಯ್ಯ ಗೆದ್ದರೆ ನಾನು ಎಂಎಲ್‌ಸಿ
    ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ.

    ಕಾರ್ಯಕರ್ತರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣ ನೀಡಿದರು. ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯಾಗಿ ಕೆ.ಸಿ.ರೆಡ್ಡಿ ಅವರನ್ನು ನೀಡಿದ್ದೇವೆ, ಎರಡನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿಗೆ ಅವಕಾಶ ಇರುವುದರಿಂದ ಅವರನ್ನು ಆಹ್ವಾನಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಕೋಲಾರದಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಬೇಕಾಗಿದೆ, ಪ್ರಸ್ತುತ ಚುನಾವಣೆ ಎದುರಿಸುವುದು ನಿರೀಕ್ಷೆಯಷ್ಟು ಸುಲಭವಾಗಿಲ್ಲ ಎಂದರು.

    ಸಿದ್ದರಾಮಯ್ಯ ಅವರನ್ನು ಮುಂದಿನ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಘೋಷಿಸಿಲ್ಲ ನಿಜ. ಆದರೆ, ಮುಖ್ಯ ಮಂತ್ರಿಯಾಗಿದ್ದ ಅನುಭವಿಗಳು ಆಡಳಿತ ನಡೆಸುವ ಅರ್ಹತೆ ಇರುವವರಾಗಿದ್ದಾರೆ. ಹಾಗಾಗಿ ನಾವು ಭಾವಿ ಮುಖ್ಯಮಂತ್ರಿ ಎಂದು ಆಶಯ ವ್ಯಕ್ತಪಡಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಹೇಳಿದರು.

    ನಾನು ಶಾಸಕನಾಗಿ ಆಯ್ಕೆಯಾಗಿದ್ದ 3 ಚುನಾವಣೆಯಲ್ಲಿ ಯಾವುದೇ ರೀತಿ ಹಣ ವೆಚ್ಚ ಮಾಡಿರಲಿಲ್ಲ. ಆದರೆ, ಕಳೆದ ಚುನಾವಣೆಯಲ್ಲಿ ಎದುರಾಳಿಗಳ ಹಣದ ಸುರಿಮಳೆಯಿಂದಾಗಿ ನನ್ನದೂ 17 ಕೋಟಿ ರೂಪಾಯಿ ಜಮೀನು ಮಾರಿದ್ದ ಹಣ ಇದ್ದಿದ್ದರಿಂದ ವೆಚ್ಚ ಮಾಡಬೇಕಾದ ಅನಿವಾರ್ಯತೆ ಉಂಟಾಗಿತ್ತು. ಇಲ್ಲದೆ ಹೋಗಿದ್ದರೆ ನಾನು ಚುನಾವಣೆಗೆ ಸ್ವಂದಿಸುತ್ತಿರಲಿಲ್ಲ ಎಂದರು.

    ನನಗೂ 76 ವರ್ಷವಾಗಿದೆ ಚುನಾವಣೆ ನಿಭಾಯಿಸುವ ಶಕ್ತಿ ಜತೆಗೆ ಜ್ಞಾಪಕಶಕ್ತಿಯೂ ಕುಂದಿದೆ. ಪಕ್ಷದಲ್ಲಿ ಸ್ಥಾನಮಾನಗಳ ಅವಕಾಶ ಬಯಸುವುದು ತಪ್ಪಲ್ಲ. ಅವಕಾಶವಿದ್ದಲ್ಲಿ ನನ್ನನ್ನು ಎಂಎಲ್ಸಿ ಮಾಡುವುದು ಬಿಡುವುದು, ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು. ಇದಕ್ಕೆ ನನ್ನದು ಯಾವುದೇ ಒತ್ತಾಯವೂ ಇಲ್ಲ. ಯಾವುದೇ ಕರಾರು ಹಾಕಿಲ್ಲ ಎಂದು ಸಮರ್ಥಿಸಿಕೊಂಡರು.

    ಮುಂದಿನ ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹೋಳೂರು ಕ್ಷೇತ್ರಕ್ಕೆ ನನ್ನ ಮಗ ಮಂಜುನಾಥ್‌ಗೆ ಅವಕಾಶ ನೀಡಬೇಕೆಂದು ತಿಳಿಸಿದ್ದೇವೆ. ಪಕ್ಷದ ವರಿಷ್ಠರೂ ಭರವಸೆ ನೀಡಿದ್ದಾರೆ ಎಂಬುದು ಸತ್ಯದ ಸಂಗತಿಯಾಗಿದೆ ಎಂದರು.
    ನಾನು ಈ ಹಿಂದೆ ಚುನಾವಣೆಯಲ್ಲಿ ಸೋಲಲು ವರ್ತೂರು ಪ್ರಕಾಶ್ ಕಾರಣವಲ್ಲ, ಕೆ.ಎಚ್.ಮುನಿಯಪ್ಪ ಅವರಿಂದ ಸೋತಿದ್ದೇನೆ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ. ರಾಜಕಾರಣ ನಿಂತ ನೀರಲ್ಲ. ಹರಿಯುವ ನೀರು. ಪರಿಸ್ಥಿತಿಗಳಿಗೆ ತಕ್ಕಂತೆ ಬದಲಾವಣೆಗಳು ಸಾಮಾನ್ಯ ಎಂದರು.

    ಕೆ.ಎಚ್.ಮುನಿಯಪ್ಪ 7 ಬಾರಿ ಲೋಕಸಭಾ ಸದಸ್ಯರಾಗಿದ್ದಾರೆ. ಕೇಂದ್ರ ಸಚಿವರಾಗಿದ್ದವರು. ವ್ಯಕ್ತಿಗತವಾಗಿ ಗೌರವಾನ್ವಿತರು, ಅವರ ಬಗ್ಗೆ ನನಗೆ ಗೌರವವಿದೆ. ಈ ಚುನಾವಣೆಯಲ್ಲಿ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ನೇತೃತ್ವದಲ್ಲಿ ಸಿದ್ದರಾಮಯ್ಯ ಬಹುಮತದಿಂದ ಆಯ್ಕೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.

    ಯರಗೋಳ್ ಯೋಜನೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಉಳಿದಿರುವ ಅಲ್ಪಸ್ಪಲ್ಪ ಕಾಮಗಾರಿಗಳು ಒಂದೆರಡು ತಿಂಗಳಲ್ಲಿ ಮುಗಿಸಿ ಚುನಾವಣೆಗೂ ಮುನ್ನ ಜನತೆಗೆ ಕುಡಿಯುವ ನೀರು ಕೊಡಬಹುದಾಗಿದೆ. ಆದರೆ, ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದಾಗಿ ಕಾಮಗಾರಿಗಳು ತ್ವರಿತವಾಗಿ ಅಗುತ್ತಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts