More

    ಮೀಸಲಾತಿ ವರದಿ ಕೊಟ್ಟರೆ ಸರ್ಕಾರಕ್ಕೆ ಸಲ್ಲಿಕೆ


    ಹುಬ್ಬಳ್ಳಿ: ಶೈಕ್ಷಣಿಕ, ಉದ್ಯೋಗದಲ್ಲಿ ಮೀಸಲಾತಿ ಬಯಸುವ ಬಂಟರ ಸಮುದಾಯದವರು, ಒಂದೆಡೆ ಕುಳಿತು ರ್ಚಚಿಸಬೇಕು. ನೀವೆಲ್ಲರೂ ಸೇರಿ ವರದಿ ಕೊಟ್ಟರೆ ಅದನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ಮಾಡುವೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಹೇಳಿದರು.
    ಹುಬ್ಬಳ್ಳಿ-ಧಾರವಾಡ ಬಂಟರ ಸಂಘದಿಂದ ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಬಂಟರ ಭಾವೈಕ್ಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 2ಎ ಮೀಸಲಾತಿಯಲ್ಲಿ ಕಸುಬು ಆಧಾರಿತ ಬಹಳಷ್ಟು ಉಪ ಪಂಗಡಗಳು ಇವೆ. ಅಲ್ಲಿ ಶೇ. 15ರಷ್ಟು ಮೀಸಲಾತಿ ಇದೆ. 3ಬಿಯಲ್ಲಿ ಶೇ. 5ರಷ್ಟು ಮೀಸಲಾತಿ ಇದೆ. ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ತಾವು ಕುಳಿತು ಸಮಗ್ರವಾಗಿ ರ್ಚಚಿಸಬೇಕು. ಕೇಂದ್ರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ಇದೆ. ಇದರಲ್ಲಿ ಬಂಟರ ಸಮುದಾಯವು ಬರುತ್ತದೆ. ಈ ಕುರಿತು ಜಿಲ್ಲಾಧಿಕಾರಿಗಳ ಸಭೆ ನಡೆಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲು ಸೂಚಿಸಿದ್ದೇನೆ ಎಂದರು.
    ಬಂಟರ ಸಮುದಾಯದರು ಉದ್ಯೋಗ ಅರಸಿ ಯಾವುದೇ ಜಿಲ್ಲೆ ಮತ್ತು ರಾಜ್ಯಕ್ಕೆ ಹೋದರೂ ಅಲ್ಲಿನ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವ ಮೂಲಕ ಇತರ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.
    ಸನ್ಮಾನ ಸ್ವೀಕರಿಸಿದ ಸಮಾಜದ ಹಿರಿಯರಾದ ಬೆಳಗಾವಿಯ ವಿಠ್ಠಲ ಹೆಗ್ಡೆ ಮಾತನಾಡಿ, ಸಂಘದ ಚುನಾವಣೆಗಳಲ್ಲಿ ಸದಸ್ಯರನ್ನು ಅವಿರೋಧ ಆಯ್ಕೆ ಮಾಡುವ ಮೂಲಕ ರಾಜ್ಯದ ಎಲ್ಲ ಬಂಟರ ಸಂಘದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.
    ಹುಬ್ಬಳ್ಳಿ- ಧಾರವಾಡ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಬಂಟರ ಸಂಘ ನಡೆದು ಬಂದ ದಾರಿ ಮತ್ತು ಅದು ಸಮಾಜಕ್ಕೆ ಮಾಡುತ್ತಿರುವ ಸೇವೆಯ ಬಗ್ಗೆ ಮಾಹಿತಿ ನೀಡಿದರು.
    ಹು-ಧಾ ಬಂಟರ ಸಂಘದ ಉಪಾಧ್ಯಕ್ಷರಾದ ಬಿ. ಶಾಂತರಾಮ ಶೆಟ್ಟಿ, ಪ್ರದೀಪ ಪಕ್ಕಳ, ಕಾರ್ಯದರ್ಶಿ ಸತೀಶ ಶೆಟ್ಟಿ, ಕೋಶಾಧಿಕಾರಿ ಸುಧೀರ ಶೆಟ್ಟಿ, ಉಪ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ವಿವಿಧ ಸಂಘಗಳ ಮುಖಂಡರಾದ ಸುರೇಶ ಶೆಟ್ಟಿ ಗುರ್ವೆ, ಎಂ. ಸತೀಶ ಚಂದ್ರಶೆಟ್ಟಿ, ಸುಧಾಕರ ಶೆಟ್ಟಿ ಮೆರ್ವಡಿ, ಉದಯಕುಮಾರ ಶೆಟ್ಟಿ, ಸಂತೋಷ ಶೆಟ್ಟಿ, ತ್ಯಾಗರಾಜ ಶೆಟ್ಟಿ, ಬಿ.ಸಿ. ಶೆಟ್ಟಿ, ಚಂದ್ರಹಾಸ ಶೆಟ್ಟಿ, ವಿಶ್ವನಾಥ ಶೆಟ್ಟಿ, ಇತರರು ಇದ್ದರು.
    ಇದಕ್ಕೂ ಮೊದಲು ಏರ್ಪಡಿಸಿದ್ದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಪ್ರಾಣೇಶ ಗಂಗಾವತಿ ಅವರು, ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ನಗೆ ಗಡಲಲ್ಲಿ ತೇಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts