More

    ಭಾರತದ ಸಂಸ್ಕೃತಿ ಉಳಿದಿದ್ದರೆ ಅದು ಕನ್ನಡಿಗರಿಂದ

    ಚಿಕ್ಕಮಗಳೂರು: ಭಾರತದ ಸಂಸ್ಕೃತಿ ಉಳಿದಿದ್ದರೆ ಅದಕ್ಕೆ ಕಾರಣ ದಕ್ಷಿಣ ಭಾರತ. ಅದರಲ್ಲೂ ಕನ್ನಡಿಗರೇ ಸಂಸ್ಕೃತಿ ಪಾಲಕರು. ಹೀಗಾಗಿ ಭಾರತೀಯ ಪರಂಪರೆ ಹಾಗೂ ಕನ್ನಡದ ಪರಂಪರೆ ಎರಡೂ ಒಂದೇ ಎಂದು ಮೈಸೂರು ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

    ತಾಲೂಕಿನ ಬಿಂಡಿಗ ಮಲ್ಲೇನಹಳ್ಳಿಯ ಶ್ರೀ ದೇವೀರಮ್ಮ ದೇವಾಲಯದ ಬ್ರಹ್ಮ ಕುಂಬಾಭಿಷೇಕ ಮಹೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುತ್ತಾ ಅದನ್ನು ಬೆಳೆಸುವ ಕೆಲಸ ಮಾಡಬೇಕು. ಆಗ ನಾಡಿಗೆ ಇನ್ನಷ್ಟು ಕೀರ್ತಿ ಬರಲು ಸಾಧ್ಯ ಎಂದು ಹೇಳಿದರು.
    ನಮ್ಮ ಇತಿಹಾಸವನ್ನು ಗಮನಿಸಿದಾಗ ಕನ್ನಡಿಗರ ಸಂಸ್ಕೃತಿ ಎಷ್ಟು ಶ್ರೇಷ್ಟ ಎಂಬುದು ತಿಳಿಯುತ್ತದೆ. ದಕ್ಷಿಣ ಭಾರತದ ಮೇಲೆ ತ್ತರ ಭಾರತದ ಅರಸರು ಎಷ್ಟು ಬಾರಿ ದಾಳಿ ನಡೆಸಿದರೂ ನಮ್ಮ ಸಂಸ್ಕೃತಿಯನ್ನು ಅಳಿಸಲು ಸಾಧ್ಯವಾಗಲಿಲ್ಲ. ದಾಳಿಯಾದಂತೆಲ್ಲಾ ನಮ್ಮ ಸಂಸ್ಕೃತಿ, ಪರಂಪರೆ ಇನ್ನಷ್ಟು ಬೆಳೆದಿದ್ದು ವಿಶೇಷ ಎಂದರು.
    ವಿಜಯ ನಗರ ಅರಸರ ಕಾಲದಲ್ಲಿ ಅವರ ಸಾಮ್ರಾಜ್ಯದ ಮೇಲೆ ಉತ್ತರ ಭಾರತದ ಅರಸರು ಹಲವು ಬಾರಿ ದಾಳಿ ನಡೆಸಿದರು. ಆದರೆ ಕನ್ನಡಿಗರು ದೊಡ್ಡ ಕೋಟೆಯಂತೆ ಅವರನ್ನು ತಡೆಯುವಲ್ಲಿ ಯಶಸ್ವಿಯಾದರು. ಇಂದು ಉತ್ತರ ಭಾರತದಲ್ಲಿ ದೊಡ್ಡ ದೊಡ್ಡ ದೇವಾಲಯಗಳು ನಿರ್ಮಾಣವಾಗುತ್ತಿವೆ. ಆದರೆ ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಸಾಮ್ರಾಜ್ಯದ ಅರಸರು ಅಂದೇ ದೊಡ್ಡ ದೊಡ್ಡ ದೇವಾಲಯಗಳನ್ನು ಪುನರ್ ನಿರ್ಮಾಣ ಮಾಡುವ ಮೂಲಕ ಭಾರತದ ಸಂಸ್ಕೃತಿ ಸಂರಕ್ಷಿಸುವ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.
    ಕರ್ನಾಟಕದಲ್ಲಿ ದೊಡ್ಡ ದೊಡ್ಡ ದೇವಾಲಯಗಳು ನಿರ್ಮಾಣವಾಗಿದ್ದರಿಂದಾಗಿ ಹಾಗೂ ವಿಜಯ ನಗರ ಅರಸರ ಪ್ರೋತ್ಸಾಹ ಹಾಗೂ ರಕ್ಷಣೆಯಿಂದಾಗಿ ರಾಮಾನುಜಾಚಾರ್ಯರು ಮೇಲುಕೋಟೆಯಿಂದ ವೈಷ್ಣವ ಪರಂಪರೆಯನ್ನು ಇಡೀ ದೇಶಾದ್ಯಂತ ಹರಡಲು ಸಾಧ್ಯವಾಯಿತು ಎಂದು ಮಾಹಿತಿ ನೀಡಿದರು.
    ಮಲೆನಾಡಿನ ಜೊತೆಗೂ ನಮ್ಮ ಹಿರಿಯರ ಕಾಲದಿಂದಲೂ ನಿಕಟವಾದ ಸಂಬಂಧವಿದೆ. ಮಹರಾಜರು ಪ್ರಕೃತಿ, ಪರಿಸರ ಪ್ರೇಮಿಗಳಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅರಣ್ಯ ಎಂದರೆ ತುಂಬಾ ಪ್ರೀತಿ ಇತ್ತು. ಈಗ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಘೋಷಣೆ ಆಗಿದೆ. ಹಿಂದೆ ಮೈಸೂರು ಅರಸರ ಕಾಲದಲ್ಲಿ ಅದು ಭದ್ರಾ ಟೈಗರ್ ಬ್ಲಾಕ್ ಎಂದಿತ್ತು. ನಮ್ಮ ಪೂರ್ವಜರು ಭದ್ರಾ ಅತಿಥಿಗೃಹದಲ್ಲಿ ವಿಶ್ರಾಂತಿ ಪಡೆಯಲು ಹೆಚ್ಚಾಗಿ ಬರುತ್ತಿದ್ದರು. ಅದೇ ರೀತಿ ದತ್ತಪೀಠ, ಕೆಮ್ಮಣ್ಣುಗುಂಡಿಗಳಲ್ಲೂ ಅಂದಿನ ಕಾಲದಲ್ಲೇ ಅತಿಥಿ ಭವನಗಳನ್ನು ನಿರ್ಮಿಸಿದ್ದರು. ಪ್ರಕೃತಿ ತಾಣಗಳಲ್ಲಿ ವಿಶ್ರಮಿಸುವುದು ಅವರಿಗೆ ಅಚ್ಚುಮೆಚ್ಚಾಗಿತ್ತು ಎಂದರು.
    ಇದರೊಂದಿಗೆ ಈ ಭಾಗದ ಧಾರ್ಮಿಕ ಸ್ಥಳಗಳ ಜೊತೆಗೂ ರಾಜ ಮನೆತನಕ್ಕೆ ದೊಡ್ಡ ಸಂಬಂಧವಿದೆ. ಶೃಂಗೇರಿ ಶ್ರೀಶಾರದಾ ಪೀಠದಲ್ಲಿ ಅದ್ವೈತ ವೇದಾಂತ ಮುಂದುವರಿಯುತ್ತಿದೆ. ಅದಕ್ಕೆ ರಾಜಮನೆತನದ ಪ್ರೋತ್ಸಾಹವೂ ಮುಂದುವರಿಯುತ್ತಿದೆ ಎಂದು ತಿಳಿಸಿದರು.
    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕ್ಷೇತ್ರದ ಜನರಿಗೆ, ರೈತರಿಗೆ ಉತ್ತಮ ಮಳೆ, ಬೆಳೆ, ಆರೋಗ್ಯ ನೀಡುವಂತೆ ಶ್ರೀದೇವೀರಮ್ಮನವರಲ್ಲಿ ಪ್ರಾರ್ಥಿಸಿದ್ದೇವೆ. ಪ್ರವಾಸೋದ್ಯಮದಲ್ಲಿ ನಮ್ಮ ಜಿಲ್ಲೆ ದೇಶಕ್ಕೆ ಹೆಸರುವಾಸಿಯಾಗಿದೆ. ಅದೇ ರೀತಿ ಧರ್ಮಕ್ಷೇತ್ರದಲ್ಲೂ ಬಿಂಡಿಗಾ ದೇವಾಲಯ ಮುಂಚೂಣಿಯಲ್ಲಿರುವುದು ಹೆಮ್ಮೆ ತಂದಿದೆ ಎಂದರು.
    ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಮಹಾರಾಜರೆಂದರೆ ನಮ್ಮೆಲ್ಲರ ಆರಾಧ್ಯ ದೈವ. ಈವರೆಗೆ ಯಾವ ಸರ್ಕಾರಗಳೂ ಕೊಡದ ಕೊಡುಗೆಯನ್ನು ರಾಜರ ಆಡಳಿತದಲ್ಲಿ ನೀಡಲಾಗಿದೆ. ಮಹರಾಜರು ನಿರ್ಮಿಸಿದ ಕನ್ನಂಬಾಡಿ ಕಟ್ಟೆಯಿಂದ ರೈತರು ಸೇರಿದಂತೆ ಬೆಂಗಳೂರು, ಇನ್ನಿತೆರೆ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡಿ ಜೀವನಾಡಿಯಾಗಲು ಕಾರಣವಾಗಿದೆ ಎಂದರು.
    ಬ್ರಹ್ಮ ಕುಂಬಾಭಿಷೇಕದ ಅಂಗವಾಗಿ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಶ್ರೀ ದೇವೀರಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಕುಲಶೇಖರ, ಪ್ರಮುಖರಾದ ಬಸವರಾಜೇಗೌಡ, ನಿಂಗಶೆಟ್ರು, ದಿನೇಶ್, ಯತೀಶ್, ಬಿಳಿಯಪ್ಪ, ಸುನೀಲ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts