

ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ಸದಾ ಧ್ವನಿ ಎತ್ತಿ, ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುತ್ತಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್ ಆಗಿರುವ ಚಿನ್ಮಯಿ ಅವರು ಇದೀಗ ಮಾಡಿರುವ ಟ್ವೀಟ್ ಒಂದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸ್ಪೇನ್ ಮೂಲದ ಮಹಿಳೆಯು ಭಾರತ ಪ್ರವಾಸದ ಸಮಯದಲ್ಲಿ ರಾತ್ರಿ ಟೆಂಟ್ನಲ್ಲಿ ತನ್ನ ಗಂಡನ ಜತೆ ಇರುವಾಗ ಆಕೆಯ ಮೇಲೆ ಗ್ಯಾಂಗ್ರೇಪ್ ನಡೆದಿರುವ ಆರೋಪ ಕೇಳಿಬಂದಿದೆ. ಈ ಘಟನೆ ಜಾರ್ಖಂಡ್ನ ದುಮ್ಕ ಜಿಲ್ಲೆಯ ಕುರುಮಹತ್ನ ಹನ್ಸದಿಹಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಯಿಂದ ಎಲ್ಲ ಭಾರತೀಯರು ನಾಚಿಕೆಪಡಬೇಕು ಎಂದು ಚಿನ್ಮಯಿ ಹೇಳಿದ್ದಾರೆ.
ಕೆಲ ಭಾರತೀಯರು ಒಲಿಂಪಿಕ್ ಪದಕ ಜಯಿಸುವುದನ್ನು ಎಲ್ಲ ಭಾರತೀಯರು ಹೆಮ್ಮೆ ಪಡುವುದಾದರೆ, ಕೆಲವರು ಅತ್ಯಾಚಾರ ಮಾಡಿದಾಗ ಎಲ್ಲ ಭಾರತೀಯರು ಕೂಡ ನಾಚಿಕೆಪಡಬೇಕು ಎಂದು ಚಿನ್ಮಯಿ ಎಕ್ಸ್ನಲ್ಲಿ ಬರೆದುಕೊಂಡು ಘಟನೆಯನ್ನು ಖಂಡಿಸಿದ್ದಾರೆ.
ನಟ ದುಲ್ಕರ್ ಸಲ್ಮಾನ್ ಮತ್ತು ನಟಿ ರಿಚಾ ಛಡ್ಡಾ ಸೇರಿದಂತೆ ಅನೇಕ ಕಲಾವಿದರು ಕೂಡ ಈ ಘಟನೆಯನ್ನು ಖಂಡಿಸಿದ್ದು, ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ.
ಕ್ರಿಮಿನಲ್ಗಳನ್ನು ಮಾತ್ರ ದೂಷಿಸುತ್ತೇನೆ
ದೇಶದಾದ್ಯಂತ ಸುಮಾರು 20,000 ಕಿಮೀ ಸುರಕ್ಷಿತವಾಗಿ ಪ್ರಯಾಣ ಮಾಡಿರುವುದರಿಂದ ಭಾರತೀಯರ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ ಎಂದು ಸ್ಪೇನ್ ಮಹಿಳೆ ಕಳೆದ ಮಂಗಳವಾರ ಹೇಳಿದ್ದಾರೆ. ತಮ್ಮ ಪತಿಯೊಂದಿಗೆ ತಮ್ಮ ಮೋಟರ್ ಸೈಕಲ್‌ನಲ್ಲಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ವಿಶ್ವ ಪ್ರವಾಸವನ್ನು ಮುಂದುವರಿಸುವುದಾಗಿ ಹೇಳಿದರು. ಭಾರತದ ಜನರು ಒಳ್ಳೆಯವರು. ನಾನು ಜನರನ್ನು ದೂಷಿಸುವುದಿಲ್ಲ, ಆದರೆ ನಾನು ಕ್ರಿಮಿನಲ್ಗಳನ್ನು ಮಾತ್ರ ದೂಷಿಸುತ್ತೇನೆ. ಭಾರತದ ಜನರು ನನ್ನನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ ಮತ್ತು ನನ್ನೊಂದಿಗೆ ತುಂಬಾ ಕರುಣಾಮಯಿಯಂತೆ ವರ್ತಿಸಿದ್ದಾರೆ. ತುಂಬಾ ಪ್ರಶಾಂತವಾಗಿದ್ದರಿಂದ ತಂಗಲು ಆ ಸ್ಥಳವನ್ನು ಆಯ್ಕೆ ಮಾಡಿಕೊಂಡೆವು. ಇದೇ ಮೊದಲ ಬಾರಿಗೆ ಇದು ನಡೆದಿದೆ. ಆದರೆ, ಇದಕ್ಕಾಗಿ ಎಲ್ಲ ಭಾರತೀಯರನ್ನು ನಾನು ದೂಷಿಸುವುದಿಲ್ಲ. ಅಪರಾಧಿಗಳನ್ನು ಮಾತ್ರ ದೂಷಿಸುತ್ತೇನೆ. ನನಗೆ ಭಾರತದಲ್ಲಿ ಒಳ್ಳೆಯ ಮೆಮೊರಿಗಳಿವೆ ಎಂದು ಸ್ಪೇನ್ ಮಹಿಳೆ ಹೇಳಿದ್ದಾರೆ. (ಏಜೆನ್ಸೀಸ್)