More

    ಅಕ್ರಮವಾಗಿ ಪ್ರವೇಶಿಸಿದರೆ ಹುಷಾರ್

    ಬೆಳಗಾವಿ: ಮಹಾರಾಷ್ಟ್ರ ರಾಜ್ಯದಿಂದ ಜಿಲ್ಲೆಗೆ ಅಕ್ರಮ ಪ್ರವೇಶಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಇ-ಪಾಸ್ ಇಲ್ಲದೆ ಆಗಮಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಡಿಸಿ ಡಾ.ಎಸ್.ಬಿ. ಬೊಮ್ಮನಹೊಳ್ಳಿ ಆದೇಶಿಸಿದ್ದಾರೆ.

    ಕಾರ್ಮಿಕರ ಮತ್ತು ಜನರ ಅನುಕೂಲಕ್ಕಾಗಿ ಸರ್ಕಾರವು ಲಾಕ್‌ಡೌನ್ ಸಡಿಲುಗೊಳಿಸಿ ಇ-ಪಾಸ್ ಮೂಲಕ ರಾಜ್ಯದಿಂದ ರಾಜ್ಯಕ್ಕೆ ಮತ್ತು ಜಿಲ್ಲೆಯಿಂದ ಜಿಲ್ಲೆಗೆ ಸಂಚರಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಆದರೆ, ಮಾರ್ಗಸೂಚಿ ಪ್ರಕಾರ ಸೇವಾಸಿಂಧು ಅನುಮತಿ ಪತ್ರ (ಇ-ಪಾಸ್) ಪಡೆಯದೆ ಅನೇಕರು ನೆರೆಯ ರಾಜ್ಯಗಳಿಂದ ಕಾನೂನುಬಾಹಿರವಾಗಿ ಅಡ್ಡಮಾರ್ಗದಲ್ಲಿ ಬೆಳಗಾವಿ ಜಿಲ್ಲೆ ಪ್ರವೇಶಿಸುತ್ತಿದ್ದಾರೆ. ಇಂಥವರು ಸ್ವಯಂ ಪ್ರೇರಣೆಯಿಂದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ, ಕರೊನಾ ವೈರಸ್ ಪರೀಕ್ಷೆಗೆ ಒಳಪಡಬೇಕು. ಅಲ್ಲದೆ, ಸಂಬಂಧಿಸಿದ ಪೊಲೀಸ್ ಠಾಣೆಗೂ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಅನ್ಯ ರಾಜ್ಯಗಳಿಂದ ಅಕ್ರಮವಾಗಿ ಬಂದಿರುವವರ ಬಗ್ಗೆ ಮಾಹಿತಿ ಇದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್ ರೂಂ ದೂ.ಸಂ.0831-2407290 ಅಥವಾ ಸಮೀಪದ ಪೊಲೀಸ್ ಠಾಣೆಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿ ವಿನಂತಿಸಿದ್ದಾರೆ.

    ಮೂವರ ವಿರುದ್ಧ ಪ್ರಕರಣ ದಾಖಲು: ಸೇವಾಸಿಂಧು ಮೂಲಕ ಇ-ಪಾಸ್ ಪಡೆಯದೇ ನಿಯಮ ಉಲ್ಲಂಘಿಸಿ ಮಹಾರಾಷ್ಟ್ರ ಮುಂಬೈಯಿಂದ ಬೆಳಗಾವಿ ನಗರ ಪ್ರವೇಶಿಸಿದ ಕರೊನಾ ವೈರಸ್ ಸೋಂಕಿತ ಗರ್ಭಿಣಿಯ ಪತಿ, ಸಹೋದರ, ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ನಗರದಲ್ಲಿ ಪತ್ತೆಯಾಗಿರುವ 27 ವರ್ಷದ ಸೋಂಕಿತ ಗರ್ಭಿಣಿ (ಪಿ-974)ಯನ್ನು ಆಕೆಯ ಪತಿಯು ಇ-ಪಾಸ್ ಪಡೆಯದೇ ಮಹಾರಾಷ್ಟ್ರದಿಂದ ಅಕ್ರಮವಾಗಿ ಬೆಳಗಾವಿಗೆ ಕರೆತಂದಿದ್ದಲ್ಲದೆ, ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೋಂಕಿತ ಮಹಿಳೆಯ ಪತಿ, ಸಹೋದರ ಮತ್ತು ಚಾಲಕನ ವಿರುದ್ಧ ಐಪಿಸಿ ಕಲಂ 269, 270, 188. 201, 202,/ಡಿ 34 ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಪಾಲಿಕೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

    ಮೂರು ಪ್ರದೇಶ ಕರೊನಾಮುಕ್ತ: ಯಳ್ಳೂರು, ಬೆಳಗುಂದಿ ಹಾಗೂ ಪೀರನವಾಡಿ ಕರೊನಾ ಮುಕ್ತ ಪ್ರದೇಶಗಳೆಂದು ಜಿಲ್ಲಾಡಳಿತ ಘೋಷಿಸಿದೆ. ಮೂರು ದಿನಗಳ ಒಳಗಾಗಿ ಕ್ಯಾಂಪ್ ಪ್ರದೇಶ ಕೂಡ ಕರೊನಾ ಮುಕ್ತ ಪ್ರದೇಶವಾಗಲಿದ್ದು, ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

    ಕರೊನಾ ಸೋಂಕಿತ ಮಹಿಳೆಯ ಕುಟುಂಬದವರು ಮಹಾರಾಷ್ಟ್ರದಿಂದ ಬೆಳಗಾವಿ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಯಾವ ಮಾರ್ಗದ ಮೂಲಕ ಆಗಮಿಸಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅಕ್ರಮ ಗಡಿ ಪ್ರವೇಶಿಸುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.
    | ಲಕ್ಷ್ಮಣ ನಿಂಬರಗಿ, ಎಸ್ಪಿ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts