More

    ಈದ್ಗಾ ಹೊಸ ವಿವಾದ ಮುನ್ನೆಲೆಗೆ!

    ಸಂತೋಷ ವೈದ್ಯ ಹುಬ್ಬಳ್ಳಿ
    ಸುಮಾರು 2 ದಶಕಗಳ ಕಾಲ ವಿವಾದದ ಕೇಂದ್ರವಾಗಿದ್ದ ಹಾಗೂ ರಾಜ್ಯದಲ್ಲಿ ಬಿಜೆಪಿಗೆ ರಾಜಕೀಯ ಶಕ್ತಿ ತುಂಬಿದ್ದ ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನ (ಈದ್ಗಾ ಮೈದಾನ) ಮತ್ತೊಮ್ಮೆ ಹಿಂದು ಸಂಘಟನೆಗಳ ಹೋರಾಟದ ಕೇಂದ್ರವಾಗಿದೆ.
    ಈದ್ಗಾ ಮೈದಾನದಲ್ಲಿ ಹಿಂದೆ ರಾಷ್ಟ್ರಧ್ವಜಾರೋಹಣದ ವಿಷಯ ರಾಷ್ಟ್ರದ ಗಮನ ಸೆಳೆದಿದ್ದರೆ, ಈ ಬಾರಿ ಗಣೇಶೋತ್ಸವ ಆಚರಿಸುವುದಾಗಿ ಹಿಂದು ಸಂಘಟನೆಗಳು ಹಿಡಿದಿರುವ ಪಟ್ಟು ಮತ್ತೊಮ್ಮೆ ಈ ಮೈದಾನ ಗಮನ ಸೆಳೆಯುವಂತೆ ಮಾಡಿದೆ.
    2010ರಲ್ಲಿ ಸುಪ್ರೀಂ ಕೋರ್ಟ್​ನ ತೀರ್ಪಿನ ಬಳಿಕ ವಿವಾದ ತಣ್ಣಗಾದರೂ ಇಲ್ಲಿಯ ಚನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನ ಈಗಲೂ ಸೂಕ್ಷ್ಮ ಪ್ರದೇಶ. ಕೆಲ ದಿನಗಳಿಂದ ಇಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ರಾಣಿ ಚನ್ನಮ್ಮ ಉದ್ಯಾನ (ಈದ್ಗಾ) ಗಣೇಶ ಉತ್ಸವ ಸಮಿತಿ ನಡೆಸಿರುವ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಶ್ರೀ ರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಂಟ್ರಿ ಕೊಟ್ಟಿದ್ದಾರೆ. ವಿಶ್ವ ಹಿಂದು ಪರಿಷತ್, ಬಜರಂಗ ದಳ ಜತೆಯಾಗಿವೆ.
    ಸಮಿತಿ ಸಂಚಾಲಕ ಹನುಮಂತಸಾ ನಿರಂಜನ ನೇತೃತ್ವದಲ್ಲಿ ಈಗಾಗಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಲಾಗಿದೆ. ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವ ವಿಷಯದಲ್ಲಿ ಪಾಲಿಕೆ ಇನ್ನು ಅನುಮತಿ ನೀಡಿಲ್ಲ. ಇದು ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
    ಈದ್ಗಾ ಮೈದಾನದ ಮೇಲೆ ಮುಸ್ಲಿಂರಿಗೆ ಇರುವಷ್ಟು ಅಧಿಕಾರ ಹಿಂದೂಗಳಿಗೂ ಇದೆ. ಮುಸ್ಲಿಂ ಸಮಾಜದವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದಾದರೆ ನಮಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು ಎಂಬುದು ಹಿಂದು ಸಂಘಟನೆಗಳ ಬಲವಾದ ಆಗ್ರಹವಾಗಿದೆ. ಸಮಿತಿ ವತಿಯಿಂದ ಸೋಮವಾರ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ 1,556 ಜನರು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಪರವಾಗಿ ಸಹಿ ಹಾಕಿದ್ದಾರೆ.
    ಪಾಲಿಕೆ ಹೆಗಲಿಗೆ: ಇದೇ ವರ್ಷ ಜೂನ್​ನಲ್ಲಿ ಬೆಂಗಳೂರು ಚಾಮರಾಜಪೇಟ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಹಿಂದು ಸಂಘಟನೆಗಳು ಅವಕಾಶ ಕೋರಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಹುಬ್ಬಳ್ಳಿ ಸರದಿ. ಇಲ್ಲಿ ಗಣೇಶ ಪ್ರತಿಷ್ಠಾಪನೆಯ ಹೋರಾಟವು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದು ಕುತೂಹಲದ ಜತೆಗೆ ಆತಂಕದ ಸಂಗತಿಯಾಗಿದೆ. ಕಳೆದ ಒಂದೂವರೆ ದಶಕದಿಂದ (2022ರ ಏಪ್ರಿಲ್​ನಲ್ಲಿ ಘಟಿಸಿದ ಹಳೇ ಹುಬ್ಬಳ್ಳಿ ಗಲಭೆ ಹೊರತುಪಡಿಸಿ) ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶಾಂತಿ ನೆಲೆಸಿದೆ. ಕಾನೂನು-ಸುವ್ಯವಸ್ಥೆಗೆ ಧಕ್ಕೆ ಆಗಬಾರದು ಎಂಬುದು ಪ್ರಜ್ಞಾವಂತರ ಅನಿಸಿಕೆಯಾಗಿದೆ. ಹತ್ತಿರದಲ್ಲಿರುವ ವಿಧಾನಸಭೆ ಚುನಾವಣೆ (2023)ಯು ತಳಕು ಹಾಕಿಕೊಂಡಿದೆ.
    ಈ ವಿಷಯದಲ್ಲಿ ಪಾಲಿಕೆ ಅಧಿಕಾರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈದ್ಗಾ ಮೈದಾನವು ಹು-ಧಾ ಮಹಾನಗರ ಪಾಲಿಕೆಯ ಆಸ್ತಿ. ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡುವ ನಿರ್ಧಾರದ ಜವಾಬ್ದಾರಿ ಪಾಲಿಕೆಯ ಹೆಗಲಿಗೆ ಬಿದ್ದಿದೆ.

    ಇತಿಹಾಸ: ಸುಮಾರು 1.5 ಎಕರೆ ವಿಸ್ತಾರ ಇರುವ ಈದ್ಗಾ ಮೈದಾನವನ್ನು 1921ರಲ್ಲಿ ಅಂದಿನ ಹುಬ್ಬಳ್ಳಿ ನಗರ ಸಭೆಯು ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆಗೆ 999 ವರ್ಷಗಳಿಗೆ ಲೀಸ್ ಮೇಲೆ ಕೊಟ್ಟಿತ್ತು. ಈ ಸ್ಥಳದಲ್ಲಿ ಸಂಸ್ಥೆಯು 1990ರಲ್ಲಿ ವಾಣಿಜ್ಯ ಸಂಕೀರ್ಣ ನಿರ್ವಿುಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಿ.ಎಸ್. ಶೆಟ್ಟರ್ ಹಾಗೂ ಇತರ 105 ಜನ ವಾಣಿಜ್ಯ ಸಂಕೀರ್ಣ ನಿರ್ವಣದ ವಿರುದ್ಧ ಜಿಲ್ಲಾ ವ ಸತ್ರ ನ್ಯಾಯಾಲಯ (ಹುಬ್ಬಳ್ಳಿ)ದ ಮೊರೆ ಹೋಗಿದ್ದರು. ನ್ಯಾಯಾಲಯವು ಕಟ್ಟಡ ತೆರವುಗೊಳಿಸಲು ಪಾಲಿಕೆಗೆ ಸೂಚಿಸಿದ್ದನ್ನು ಪ್ರಶ್ನಿಸಿ, ಅಂಜುಮನ್ ಸಂಸ್ಥೆಯು ಬಳಿಕ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​ವರೆಗೆ ಹೋಗಿತ್ತು. ಈ ನಡುವೆ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಅವಕಾಶ ನೀಡಬೇಕೆಂಬ ಹೋರಾಟವು ತೀವ್ರ ಸ್ವರೂಪ ಪಡೆದು ಗಲಭೆಗೆ ಕಾರಣವಾಗಿ ಪೋಲಿಸ್ ಗೋಲಿಬಾರ್​ನಲ್ಲಿ 6 ಜನರು ಮೃತಪಟ್ಟಿದ್ದರು. ಈದ್ಗಾ ಮೈದಾನ ವಿಮೋಚನಾ ಚಳವಳಿ ಆರಂಭಿಸಿದ ಬಿಜೆಪಿ ಫೈರ್ ಬ್ರ್ಯಾಂಡ್, ಅಂದಿನ ಮಧ್ಯಪ್ರದೇಶ ಮುಖ್ಯಮಂತ್ರಿ ಉಮಾ ಭಾರತಿ ಅವರ ವಿರುದ್ಧ 2004ರಲ್ಲಿ ಕರ್ಫ್ಯೂ ಉಲ್ಲಂಘನೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಎಫ್​ಐಆರ್ ದಾಖಲಾಗಿ ಜಾಮೀನು ರಹಿತ ವಾರಂಟ ಹೊರಡಿಸಲಾಗಿತ್ತು. ಬಳಿಕ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ನ್ಯಾಯಾಲಯಕ್ಕೆ ಶರಣಾಗಿದ್ದರು.


    2010ರಲ್ಲಿ ಇತ್ಯರ್ಥ 2010 ಜನವರಿ 12 ರಂದು ‘ಈದ್ಗಾ ಮೈದಾನವು ಪಾಲಿಕೆಯ ಆಸ್ತಿಯಾಗಿದ್ದು, ಇಲ್ಲಿ ವರ್ಷದಲ್ಲಿ 2 ಬಾರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಅಂಜುಮನ್ ಇಸ್ಲಾಂ ಸಂಸ್ಥೆಗೆ ಅವಕಾಶವಿದೆ ಹಾಗೂ ಈ ಮೈದಾನದಲ್ಲಿ ಸಂಸ್ಥೆ ನಿರ್ವಿುಸಿದ ಕಟ್ಟಡವನ್ನು ತೆರವುಗೊಳಿಸುವಂತೆ ಹೈ ಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು’. 2010 ಜನವರಿ 26ರಂದು ಪಾಲಿಕೆಯ ಅಂದಿನ ಆಯುಕ್ತ ಪಿ.ಎಸ್. ವಸ್ತ್ರದ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದರು.


    ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅನುಮತಿ ನೀಡಲು ಪಾಲಿಕೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ. ಆಗಸ್ಟ್ 25 ಅಂತಿಮ ಗುಡುವು ನೀಡುತ್ತಿದ್ದೇವೆ. ಕಾನೂನು-ಸುವ್ಯವಸ್ಥೆ ಹಾಳು ಮಾಡುವ ಉದ್ದೇಶ ನಮ್ಮದಲ್ಲ.
    | ಹನುಮಂತಸಾ ನಿರಂಜನ ಸಂಚಾಲಕ, ರಾಣಿ ಚನ್ನಮ್ಮ ಉದ್ಯಾನ ಗಣೇಶ ಉತ್ಸವ ಸಮಿತಿ


    ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ವಿವಿಧ ಇಲಾಖೆಗಳಿಂದ ಪೂರ್ವಾನುಮತಿ ಪಡೆದುಕೊಳ್ಳುವಂತೆ ಸಮಿತಿಗೆ ಸೂಚಿಸಲಾಗಿದೆ. ಪೂರ್ವಾನುಮತಿ ಪಡೆದುಕೊಂಡು ಬಂದ ಮೇಲೆ ಪಾಲಿಕೆೆಯಿಂದ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಇದು (ಈದ್ಗಾ) ಸೂಕ್ಷ್ಮ ವಿಷಯವಾಗಿದೆ. ಶಾಂತಿಗೆ ಭಂಗ ಆಗಬಾರದು ಎಂಬುದು ನಮ್ಮ ಉದ್ದೇಶ. — ಡಾ. ಗೋಪಾಲಕೃಷ್ಣ ಬಿ., ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts