More

    ಐಸಿಸಿ ಸಭೆ ವಿಳಂಬ, ರೈತರೊಂದಿಗೆ ಶಾಸಕ ನಾಡಗೌಡ ಚೆಲ್ಲಾಟ: ಹಂಪನಗೌಡ ಬಾದರ್ಲಿ ಟೀಕೆ

    ಸಿಂಧನೂರು: ಬೇಸಿಗೆ ಬೆಳೆಯ ಬಗ್ಗೆ ಎಡದಂಡೆ ನಾಲೆ ಭಾಗದ ಜನಪ್ರತಿನಿಧಿಗಳು ಈವರೆಗೂ ತಲೆಕೆಡಿಸಿಕೊಂಡಿಲ್ಲ. ಇನ್ನೂ ಐಸಿಸಿ ಸಭೆ ನಡೆಯದೆ ರೈತರು ಗೊಂದಲಕ್ಕೆ ಒಳಗಾಗುವಂತಾಗಿದ್ದು, ಶಾಸಕ ವೆಂಕಟರಾವ್ ನಾಡಗೌಡ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ದೂರಿದರು.

    ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಯಚೂರು ಸಮೀಪದ 47ನೇ ಕಿಮೀ ಬಳಿ ನೀರಿನ ಅಳತೆ ಮಾಪನ ಕೇಂದ್ರವಿದ್ದು, ಅಲ್ಲಿ ಜ.1ರಿಂದ ಈವರೆಗೆ ಪ್ರತಿನಿತ್ಯ 3600 ರಿಂದ 3800 ಕ್ಯೂಸೆಕ್ ನೀರು ಹರಿಯುತ್ತಿದೆ ಎಂಬ ಅಧಿಕಾರಿಗಳ ಮಾಹಿತಿಯಂತೆ ಅಳತೆ ಮಾಪನದಲ್ಲಿ 11.4 ಅಡಿ ನೀರು ಹರಿಯಬೇಕಿತ್ತು. ಆದರೆ 10.3 ಅಡಿ ಮಾತ್ರ ಹರಿಯುತ್ತಿದೆ. ಇದನ್ನು ಗಮನಿಸಿದರೆ ವಡ್ಡರಹಟ್ಟಿ ವಲಯದ ಮೇಲ್ಭಾಗದ ರೈತರು ನೀರು ಕದಿಯುತ್ತಿದ್ದಾರೆ ಎಂದರ್ಥ ಎಂದು ದೂರಿದರು.

    ಈ ಬಗ್ಗೆ ಶಾಸಕ ವೆಂಕಟರಾವ್ ನಾಡಗೌಡ ನೀರಾವರಿ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕೊನೇ ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ. ನಿಗದಿತ ನೀರಿನ ಪ್ರಮಾಣದ ರೈತರ ಹಕ್ಕನ್ನು ಒದಗಿಸಲು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕುರಿತು ದೇಶಾದ್ಯಂತ ಪರ-ವಿರೋಧದ ಹೋರಾಟಗಳು ತೀವ್ರವಾಗಿ ನಡೆಯುತ್ತಿದ್ದು, ಸಿಂಧನೂರಿನಲ್ಲಿ ಜ.19 ರಂದು ಸಂವಿಧಾನ ಹಕ್ಕು ರಕ್ಷಣಾ ಸಮಿತಿಯಿಂದ ಬೃಹತ್ ಸಮಾವೇಶ ನಡೆಯಲಿದೆ ಎಂದರು.

    ನಗರಸಭೆ ಮಾಜಿ ಅಧ್ಯಕ್ಷ ಸೈಯ್ಯದ್ ಜಾಫರ್‌ಅಲಿ ಜಾಗೀರದಾರ್, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್, ಜಿಪಂ ಸದಸ್ಯ ಬಸವರಾಜ ಹಿರೇಗೌಡರ್, ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಾಟೀಲ್, ಶೇಖರಪ್ಪ ಗಿಣಿವಾರ, ಮುರ್ತುಜಾ ಹುಸೇನ್, ಮುನೀರ್‌ಪಾಷಾ, ಆಲಂಸಾಬ್, ಮಾಜಿ ಸದಸ್ಯ ಕರೀಮ್‌ಸಾಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts