More

    ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ಮಂಜುನಾಥ್; ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕಾರ ಪ್ರಕರಣ..

    ಬೆಂಗಳೂರು: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

    ಸದ್ಯ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಪ್ರತಿವಾದಿ ಆಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ಹೈಕೋರ್ಟ್​ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.

    ಲಂಚ ಸ್ವೀಕಾರ ಪ್ರಕರಣದಲ್ಲಿ ಜು.4ರಂದು ಬಂಧನಕ್ಕೊಳಗಾಗಿದ್ದ ಜೆ. ಮಂಜುನಾಥ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನು ಕೋರಿ ಮಂಜುನಾಥ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿತ್ತು. ಇದರಿಂದ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ಅರ್ಜಿಯಲ್ಲೇನಿದೆ?

    ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಲಂಚ ಸ್ವೀಕರಿಸಿದ ಸಂದರ್ಭದಲ್ಲಿ ನಾನು ಸ್ಥಳದಲ್ಲಿಯೂ ಇರಲಿಲ್ಲ. ಪ್ರಕರಣದ ಸಂಬಂಧ ಸಂಗ್ರಹಿಸಲಾಗಿರುವ ದಾಖಲೆಗಳೂ ದಾಳಿ ನಡೆಸಿದ ದಿನ ಅಥವಾ ಅದಕ್ಕೂ ಮೊದಲು ಯಾವುದೇ ಹಂತದಲ್ಲಿ ನಾನು ಹಣಕ್ಕಾಗಿ ಬೇಡಿಕೆ ಇಟ್ಟಿರುವುದನ್ನು ತೋರಿಸುತ್ತಿಲ್ಲ. ಕಳೆದ 50 ದಿನಗಳಿಂದ ತನಿಖೆ ನಡೆಯುತ್ತಿದ್ದು, ಇಡೀ ಪ್ರಕರಣದಲ್ಲಿ ಎಲ್ಲಿಯೂ ನನ್ನ ಪಾತ್ರವಿರುವ ಬಗ್ಗೆ ಕೇಳಿ ಬಂದಿರಲಿಲ್ಲ. ಮೊದಲ ಮತ್ತು ಎರಡನೇ ಆರೋಪಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಎಸಿಬಿ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿಯೂ ನನ್ನ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಮಂಜುನಾಥ್ ಅರ್ಜಿಯಲ್ಲಿ ವಿವರಿಸಿದ್ದಾರೆ.

    ಈ ಮಧ್ಯೆ, 2022ರ ಜೂ.22ರಂದು ಏಕಾಏಕಿ ನೋಟಿಸ್ ಜಾರಿಗೊಳಿಸಿ, ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅಂತೆಯೇ ತನಿಖಾಧಿಕಾರಿಯ ಮುಂದೆ ಹಾಜರಾಗಿ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಹೀಗಿದ್ದರೂ, ಕೆಲ ಬಾಹ್ಯ ಒತ್ತಡಗಳಿಂದ ಹಾಗೂ ಎರಡನೇ ಆರೋಪಿ ಪಿ.ಎಸ್.ಮಹೇಶ್ ಅವರ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳ ಆಧಾರದಲ್ಲಿ ತನಿಖಾಧಿಕಾರಿಗಳು ಹೆಚ್ಚುವರಿ ವರದಿ ಸಲ್ಲಿಸಿ, ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದು ನ್ಯಾಯಸಮ್ಮತವಲ್ಲ ಎಂದು ಮಂಜುನಾಥ್ ಆಕ್ಷೇಪಿಸಿದ್ದಾರೆ.

    ಬೆಂಗಳೂರು ನಗರ ನೂತನ ಜಿಲ್ಲಾಧಿಕಾರಿಯಾಗಿ ಕೆ.ಶ್ರೀನಿವಾಸ್; ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts