More

    ಐಎಎಸ್​ ಅಧಿಕಾರಿ ಲಂಚ ಸ್ವೀಕಾರ ಪ್ರಕರಣ; ಅರ್ಜಿ ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್​..

    ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.

    ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಜಾಮೀನು ಅರ್ಜಿ ಕುರಿತು ಸೋಮವಾರ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ, ಅರ್ಜಿದಾರರು ಹಾಗೂ ಎಸಿಬಿ ಪರ ವಕೀಲರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿತಲ್ಲದೆ, ಎರಡು ದಿನಗಳಲ್ಲಿ ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

    ಅರ್ಜಿದಾರರ ವಾದವೇನು?: ಇದಕ್ಕೂ ಮುನ್ನ ಮಂಜುನಾಥ್ ಪರ ವಕೀಲರು ವಾದ ಮಂಡಿಸಿ, ಜಿಲ್ಲಾಧಿಕಾರಿಯಾಗಿದ್ದ ಅರ್ಜಿದಾರರು ಯಾವುದೇ ರೀತಿಯಲ್ಲೂ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಮತ್ತು ಸ್ವೀಕರಿಸಿಲ್ಲ. ಪ್ರಕರಣದ ಮೊದಲ ಆರೋಪಿ ಉಪ ತಹಸೀಲ್ದಾರ್ ಮಹೇಶ್, ಎರಡನೇ ಆರೋಪಿ ಚಂದ್ರು ಹಾಗೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಜಿಲ್ಲಾಧಿಕಾರಿಗಳು ಜಿಲ್ಲಾ ದಂಡಾಧಿಕಾರಿಯೂ ಆಗಿರುತ್ತಾರೆ. ಭೂವಿವಾದಕ್ಕೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಅವರ ಮುಂದಿರುತ್ತವೆ. ಅವುಗಳ ಕುರಿತು ಕ್ರಮವಾಗಿ ಆದೇಶ ಮಾಡಲಾಗುತ್ತದೆ. ಇದೇ ಕಾರಣದಿಂದ ಪ್ರಕರಣದ ದೂರುದಾರ ಅಜಂ ಪಾಷಾ ಅವರ ಪ್ರಕರಣದ ವಿಲೇವಾರಿ ತಡವಾಗಿದೆ ಎಂದು ವಿವರಿಸಿದರು.

    ಎಸಿಬಿ ಪರ ವಕೀಲರು, ಮೊದಲ ಆರೋಪಿ ಮಹೇಶ್‌ಗೆ ಡಿಫಾಲ್ಟ್ ಜಾಮೀನು ದೊರೆತಿದೆ. ಮಂಜುನಾಥ್ ಅವರ ಜಾಮೀನು ಅರ್ಜಿಗೆ ಎಸಿಬಿ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ. ಅರ್ಜಿದಾರರು ಇತರ ಆರೋಪಿಗಳ ಜತೆ ಮೇ 18ರಂದು ಸಮಾಲೋಚನೆ ನಡೆಸಿರುವ ಆಡಿಯೋ ಕ್ಲಿಪ್ ಲಭ್ಯವಿದ್ದು, ಸದ್ಯ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

    ಆಕ್ಷೇಪಣೆ ಇಲ್ಲವೇ?: ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, 2ನೇ ಆರೋಪಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಏಕೆ ನೇಮಕ ಮಾಡಲಾಗಿತ್ತು, ಮೊದಲನೇ ಆರೋಪಿಗೆ ಡಿಫಾಲ್ಟ್ ಜಾಮೀನು ದೊರೆತಿದೆ ಎಂದು ಹೇಳುತ್ತಿದ್ದೀರಿ. ಅಂದರೆ ಮಂಜುನಾಥ್ ಅವರ ಜಾಮೀನು ಅರ್ಜಿಗೂ ನಿಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎನ್ನುತ್ತೀರೇ ಎಂದು ಎಸಿಬಿ ವಕೀಲರನ್ನು ಮಾರ್ಮಿಕವಾಗಿ ಪ್ರಶ್ನಿಸಿತಲ್ಲದೆ, ಅಂತಿಮವಾಗಿ ತನಿಖೆ ನಡೆದರೆ ಎಲ್ಲ ಸಂಗತಿಗಳು ತಿಳಿಯುತ್ತದೆ. ಇದಕ್ಕಾಗಿಯೇ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತನಿಖಾ ವರದಿಯನ್ನು ಸಿದ್ಧಪಡಿಸಿ, ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ ಎಂದು ಮೌಖಿಕವಾಗಿ ನುಡಿದ ಪೀಠ, ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿತು.

    ಪ್ರಕರಣವೇನು?: ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದಂತೆ ಅನುಕೂಲಕರ ಆದೇಶ ಮಾಡಲು ಅಜಂ ಪಾಷಾ ಎಂಬುವರಿಂದ 5 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ತಹಸೀಲ್ದಾರ್ ಆಗಿದ್ದ ಪಿ.ಎಸ್.ಮಹೇಶ್ ಹಾಗೂ ಚೇತನ್ ಕುಮಾರ್ ಅಲಿಯಾಸ್ ಚಂದ್ರ ಅವರನ್ನು ಮೇ 21ರಂದು ಎಸಿಬಿ ಬಂಧಿಸಿತ್ತು. ಇದೇ ಪ್ರಕರಣದಲ್ಲಿ ಜು.4ರಂದು ಬಂಧನಕ್ಕೊಳಗಾಗಿರುವ ಮಂಜುನಾಥ್ ಅವರ ಜಾಮೀನು ಅರ್ಜಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿತ್ತು. ಇದರಿಂದ, ಮಂಜುನಾಥ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

    ನಾಳೆ ‘ವಿಜಯಾನಂದ’ ಟೀಸರ್​ ರಿಲೀಸ್; ಆನಂದ್​ ಆಡಿಯೋ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts