More

    ಬಿಜೆಪಿಗೆ ಹೋದ ಅಧ್ಯಾಯ ಮರೆಯಬೇಕೆಂದಿದ್ದೇನೆ

    ಚಿಕ್ಕಮಗಳೂರು: ಬಿಜೆಪಿ ಪಕ್ಷ ಸೇರಿದ ಕ್ಷಣ ಎಂತವರೇ ಆದರೂ ಒಳ್ಳೆಯವರಾಗುತ್ತಾರೆ. ಅದೇ ಆ ಪಕ್ಷವನ್ನು ಬಿಟ್ಟವರು ಅದೇ ಕ್ಷಣಕ್ಕೆ ಕೆಟ್ಟವರಾಗಿ ಬಿಡುತ್ತಾರೆ. ಕೇವಲ ಆರೋಪ ಮಾಡುವುದಷ್ಟೇ ಬಿಜೆಪಿ ಕೆಲಸ. ವಾಮ ಮಾರ್ಗದಲ್ಲಿ ಸರ್ಕಾರವನ್ನು ಬದಲು ಮಾಡಿದವರು ಇದೇ ಬಿಜೆಪಿಯವರು ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

    ನಗರದಲ್ಲಿ ಮಂಗಳವಾರ ಪತ್ರಿಕಾ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ಬಿಜೆಪಿಗೆ ಹೋದ ಅಧ್ಯಾಯವನ್ನೇ ಮರೆತುಬಿಡಬೇಕು ಎಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
    ಕಳೆದ ಹತ್ತು ವರ್ಷಗಳಲ್ಲಿ ಸಂಸದರಾದವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನಾನು ಎರಡು ವರ್ಷಗಳ ಕಾಲ ಸಂಸದನಾಗಿದ್ದ ಅವಧಿಯಲ್ಲಿ ಮಂಜೂರು ಮಾಡುತ್ತಿದ್ದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮತ್ತೆ ಹೊಸ ಯೋಜನೆಗಳನ್ನು ಜಿಲ್ಲೆಗೆ ತರಲು ಮತ್ತೊಮ್ಮೆ ಸಂಸದನಾಗಬೇಕಿದೆ. ಇದಕ್ಕೆ ಕ್ಷೇತ್ರದ ಮತದಾರರ ಆಶೀರ್ವಾದ ಬೇಕು ಎಂದು ಹೇಳಿದರು.
    ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಕೆಎಂ ರಸ್ತೆ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಬಿ ಎಚ್ ರಸ್ತೆ ಕಾಮಗಾರಿಯು ಕುಂಟುತ್ತಾ ಸಾಗಿದೆ. ಸಂಸದರಾದ ಮೇಲೆ ಕೇಂದ್ರದಲ್ಲಿ ಇರಬಾರದು ಬದಲಿಗೆ ಕ್ಷೇತ್ರದಲ್ಲಿದ್ದು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕಡೆ ಗಮನ ಹರಿಸಬೇಕು. ಆದರೆ ಈ ಹಿಂದಿನ ಸಂಸದರು ಕ್ಷೇತ್ರವನ್ನೇ ಮರೆತಿದ್ದರು ಎಂದು ಆಪಾದಿಸಿದರು.
    ನಾನು ಎರಡು ವರ್ಷ ಸಂಸದನಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸವನ್ನು ಈಗಿನ ಸಂಸದರು 10 ವರ್ಷದಲ್ಲಿಯೂ ಮಾಡಲಿಲ್ಲ. ನಾನು ಸಂಸದನಾಗದಾಗ ಕೇವಲ ಸಂಸತ್ತಿಗೆ ಹೋಗಿ ಬರಲಿಲ್ಲ. ಬದಲಿಗೆ ಅಧಿಕಾರಿಗಳ ಸಂಪರ್ಕ ಬೆಳೆಸಿದೆ. ಹೀಗಾಗಿ ಕ್ಷೇತ್ರಕ್ಕೆ ಹೆಚ್ಚಿನ ಯೋಜನೆಗಳನ್ನು ಹಾಗೂ ಕಾಮಗಾರಿಗಳನ್ನು ತರಲು ಸಾಧ್ಯವಾಯಿತು. ಚಿಕ್ಕಮಗಳೂರಿಗೆ ರೈಲ್ವೆ ಸಂಪರ್ಕವೇ ಇರಲಿಲ್ಲ. ರೈಲ್ವೆ ಸಂಪರ್ಕವನ್ನು ತಂದಿದ್ದು ನಾವು. ನಮ್ಮ ಅವಧಿಯಲ್ಲಿ ಜಿಲ್ಲೆಗೆ ರೈಲು ಬಂದಿದ್ದು ಬಿಟ್ಟರೆ ಮತ್ತೆ ಒಂದೇ ಒಂದು ಹೆಚ್ಚುವರಿ ರೈಲು ಸಹ ಚಿಕ್ಕಮಗಳೂರಿಗೆ ಬಂದಿಲ್ಲ ಎಂದು ದೂರಿದರು.
    ಪತ್ರಿಕಾ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ಶಾಸಕರಾದ ಟಿ.ಡಿ.
    ರಾಜೇಗೌಡ, ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ಮುಖಂಡರಾದ ಬಿ.ಪಿ.ಹರೀಶ್, ರವೀಶ್ ಬಸಪ್ಪ, ಎಚ್.ಪಿ.ಮಂಜೇಗೌಡ ಮತ್ತಿತರರಿದ್ದರು.

    ಅಡಕೆ ಬೆಳೆಗಾರರಿಗೆ ಮೋಸ
    ಪಾಂಡ್ರೆ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅಡಿಕೆಯ ಆಮದು ದರವನ್ನು ಪ್ರತಿ ಕೆಜಿಗೆ 110 ಹೆಚ್ಚಿಸಲಾಗಿತ್ತು. ಇದರ ಪರಿಣಾಮ ಅಡಕ್ಕೆ ಬೆಲೆ ಲಕ್ಷ ರೂಪಾಯಿ ಆಸು ಪಾಸಿಗೆ ಹೋಗಿತ್ತು. ಆದರೆ ಈಗ ಬಿಜೆಪಿ ಸರ್ಕಾರ ಬರ್ಮಾದಿಂದ 15 ಲಕ್ಷ ಟನ್ ಹಾಗು ಶ್ರೀಲಂಕಾದಿಂದ 5 ಲಕ್ಷ ಟನ್ ಅಡಕ್ಕೆ ಆಮದು ಮಾಡಿಕೊಳ್ಳುತ್ತಿದೆ. ಇದರಿಂದ ಅಡಕೆ ದರ ಕುಸಿಯುವ ಆತಂಕವಿದೆ ಎಂದು ಜಯಪ್ರಕಾಶ್ ಹೆಗ್ಡೆ ದೂರಿದರು.
    ನಾನು ಸಂಸದನಾಗಿದ್ದ ಅವಧಿಯಲ್ಲಿ ಅಡಕೆ ಹಳದಿ ಎಲೆ ರೋಗಕ್ಕೆ ಸಂಬಂಧಪಟ್ಟಂತೆ ಗೋರಕ್ ಸಿಂಗ್ ಅವರನ್ನು ಕರೆಸಿ ಸಂಶೋಧನೆ ನಡೆಸಿ ವರದಿ ನೀಡಲಾಗಿತ್ತು. ಆದರೆ ಬಳಿಕ ಕ್ಷೇತ್ರದ ಸಂಸದವರು 10 ವರ್ಷ ಕಳೆದರೂ ಗೋರಕ್ ಸಿಂಗ್ ವರದಿಯನ್ನು ಇನ್ನು ಜಾರಿಗೆ ತರಲಿಲ್ಲ. ಸಂಸತ್ತಿನಲ್ಲಿಯೂ ಈ ಭಾಗದ ಸಂಸದರು ಅಡಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾತನಾಡುವ ಕನಿಷ್ಠ ಸೌಜನ್ಯವನ್ನು ತೋರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಮುಂದಿನ ಯೋಜನೆಗಳು
    ನಾನು ಸಂಸದನಾದಲ್ಲಿ ಜಿಲ್ಲೆಯ ಸರ್ವಾಂಗೀನ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ. ಎಕೋ ಟೂರಿಸಂ ಅಭಿವೃದ್ಧಿ, ಚಿಕ್ಕಮಗಳೂರು ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸೇರಿದಂತೆ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡುತ್ತೇನೆ ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು.
    ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿವೆ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯ ಆರ್ಥಿಕ ಸ್ಥಿತಿ ಉತ್ತಮ ಮಟ್ಟಕ್ಕೆ ತರಬಹುದು. ಇದರೊಂದಿಗೆ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳು ಹೆಚ್ಚಿನ ಸಂಖ್ಯೆಯಲ್ಲಿ ಸೃಷ್ಟಿಯಾಗುತ್ತವೆ. ಇದರೊಂದಿಗೆ ಜಿಲ್ಲೆಗೆ ಬೇಕಾದ ಮೂಲ ಸೌಕರ್ಯಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಬದ್ಧವಾಗಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts