More

    ಆಸ್ಪತ್ರೆಯಿಂದ ವಾಪಸ್ ಬರ್ತಿನಿ, ನೋಡ್ಕೋತಿನಿ…

    ಬೆಂಗಳೂರು: ಚುನಾವಣೆ ನಡೆಸುವುದು ಹೇಗೆ ಎನ್ನುವುದು ನನಗೂ ಗೊತ್ತಿದೆ ಮಿಸ್ಟರ್ ಡಿ.ಕೆ.ಶಿವಕುಮಾರ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗುಡುಗಿದರು.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2002ರ ಚುನಾವಣೆಯನ್ನು ನಿಮಗೆ ನೆನಪು ಮಾಡಿಕೊಡುತ್ತೇನೆ. ಮೈಸೂರು, ಶಿಡ್ಲಘಟ್ಟ, ದೇವನಹಳ್ಳಿ ಕಡೆಯಿಂದ ನೀವು ಜನರನ್ನು ಕರೆದುಕೊಂಡು ಬಂದು ಕಳ್ಳ ವೋಟು ಹಾಕಿಸಿದ್ದು ಮರೆತಿದ್ದೀರಾ? ಕಳ್ಳ ಮತ ಹಾಕಿಸಲು ಕರೆದುಕೊಂಡು ಬಂದಾಗ ರಾಜರಾಜೇಶ್ವರಿ ನಗರದ ಹೆಬ್ಬಾಗಿಲಲ್ಲಿ ನಾನು ನಿಮ್ಮವರನ್ನು ಚಡ್ಡಿಯಲ್ಲಿ ಕೂರಿಸಿದ್ದನ್ನು ಮರೆಯಬೇಡಿ. ನನಗೆ ಚುನಾವಣೆ ಮಾಡುವುದು ಬರುವುದಿಲ್ಲ ಎಂದುಕೊಳ್ಳಬೇಡಿ. ಫೀಲ್ಡಿಗೆ ಇಳಿದರೆ ನಿಮಗಿಂತ ಚೆನ್ನಾಗಿ ಚುನಾವಣೆ ಮಾಡಬಲ್ಲೆ. ಆಗ ನೀವು ಅಧಿಕಾರದಲ್ಲಿ ಇದ್ದಿರಿ. ದೇವೇಗೌಡರನ್ನು ಸೋಲಿಸಲು ಪ್ತಯತ್ನ ಮಾಡಿದಿರಿ. ಆಸ್ಪತ್ರೆಯಿಂದ ನಾನು ವಾಪಸ್ ಬರ್ತಿನಿ, ಅದುವರೆಗೂ ನಿಮ್ಮ ಆಟ ನಡೆಯಲಿ ನೋಡೋಣ ಎಂದು ಶಿವಕುಮಾರ್‌ಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.

    ವಿಷ ಹಾಕಿ ನಮ್ಮನ್ನು ಕೊಂದಿದ್ದೀರಿ:

    ರಾಜಕೀಯವಾಗಿ ನೀವು ವಿಷ ಹಾಕಿ ನಮ್ಮನ್ನು ಕೊಂದಿದ್ದೀರಾ. ಹಂತ ಹಂತವಾಗಿ ನಮ್ಮನ್ನು ಕುಗ್ಗಿಸಿದ್ದೀರಾ. 14 ತಿಂಗಳು ನಿಮ್ಮ ಜತೆ ಸರ್ಕಾರ ಮಾಡಿದ್ದು ನಾನು ತೆಗೆದುಕೊಂಡ ಅತ್ಯಂತ ಕೆಟ್ಟ ನಿರ್ಧಾರ. ದೇವೇಗೌಡರ 60 ವರ್ಷಗಳ ಸುಧೀರ್ಘ ರಾಜಕಾರಣಕ್ಕೆ ಕೊಳ್ಳಿ ಇಟ್ಟಿದ್ದೀರಾ. ನನ್ನ ಜತೆ ಇದ್ದವರನ್ನು ಖರೀದಿ ಮಾಡುತ್ತಿದ್ದೀರಾ ಎಂದು ಡಿ.ಕೆ.ಶಿವಕುಮಾರ್‌ವಿರುದ್ಧ ಕಿಡಿಕಾರಿದರು.

    ಅಡಕೆ ವ್ಯಾಪಾರದ ಹಣವೆ?

    ಮಂಡ್ಯ ಕ್ಷೇತ್ರದಲ್ಲಿ ಕೂಡ 1 ಕೋಟಿ ರೂಪಾಯಿ ಸೀಜ್ ಆಗಿದೆ. ಈ ಹಣ ಅಡಕೆ ವ್ಯಾಪಾರದ್ದು ಎಂದು ಹೇಳಿಕೊಂಡಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಷ್ಟು ಹಣ ದುಡಿಯುವ ಅಡಕೆ ವ್ಯಾಪಾರಿಗಳಿದ್ದಾರಾ? ಎಂದು ನನಗೆ ಅಚ್ಚರಿ ಉಂಟಾಯಿತು. ಇದು ಕೂಡ ಕಾಂಗ್ರೆಸ್ ಅಭ್ಯರ್ಥಿ ಹಣವೇ ಆಗಿದೆ. ಅಲ್ಲಿಯೂ ಕಾಂಗ್ರೆಸ್ ಹಣದ ಹೊಳೆಯನ್ನೇ ಹರಿಸುತ್ತಿದೆ ಎಂದು ಆರೋಪ ಮಾಡಿದರು.

    ಮೈತ್ರಿ ಧರ್ಮ ಪಾಲಿಸಲು ಸೂಚನೆ:

    ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿಯೂ ಎನ್‌ಡಿಎ ಮೈತ್ರಿಕೂಟ ಗೆಲ್ಲಬೇಕು. ಆ ನಿಟ್ಟಿನಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಮೈತ್ರಿ ಧರ್ಮಕ್ಕೆ ಬದ್ಧರಾಗಿ ಚುನಾವಣೆ ಕೆಲಸ ಮಾಡಿಕೊಂಡು ಹೋಗುವಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಅದೇ ರೀತಿ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಬಯಸುತ್ತೇನೆ. ಆಸ್ಪತ್ರೆಯಿಂದ ಬಂದ ಕೂಡಲೇ ನಾನು ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆಯೋ ಇಲ್ಲವೋ ಎಂಬುದನ್ನು ತಿಳಿಸುತ್ತೇನೆ. ನನ್ನ ಪ್ರಕಾರ ಮಂಡ್ಯ ಸೇರಿ ನಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರೇ ಅಭ್ಯರ್ಥಿಗಳು. ಪಕ್ಷವನ್ನು, ಕಾರ್ಯಕರ್ತರನ್ನು ಗೆಲ್ಲಿಸುವುದಕ್ಕಾಗಿ ಎಲ್ಲರೂ ಒಮ್ಮತವಾಗಿ ಶ್ರಮಿಸಬೇಕು ಎಂದು ಕಾರ್ಯಕರ್ತರಿಗೆ ಕುಮಾರಸ್ವಾಮಿ ಮನವಿ ಮಾಡಿದರು.

    ಕೋಲಾರ ಕ್ಷೇತ್ರದ ಬಗ್ಗೆ ಗೊಂದಲ ನಿವಾರಣೆ ಆಗಿದೆ. ಆಸ್ಪತ್ರೆಯಿಂದ ಬಂದ ಕೂಡಲೇ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡುತ್ತೇವೆ. ಮಂಡ್ಯ ಜಿಲ್ಲೆಯ ಕಾರ್ಯಕರ್ತರು ನಿರಾಶೆ ಪಡಬೇಕಿಲ್ಲ. ಅವರಿಗೆ ಒಪ್ಪಿಗೆಯಾಗುವ ಒಳ್ಳೆಯ ನಿರ್ಧಾರವನ್ನೇ ಪ್ರಕಟಿಸುತ್ತೇನೆ.

    >ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts