More

    ಹೈಬ್ರಿಡ್ ಜೋಳಕ್ಕೆ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರದಿಂದ 2500 ರೂ. ಬೆಂಬಲ ಬೆಲೆ : ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾಹಿತಿ

    ಸಿಂಧನೂರು: ಕೇಂದ್ರ ಸರ್ಕಾರವು ಹೈಬ್ರಿಡ್ ಜೋಳಕ್ಕೆ ಕ್ವಿಂಟಾಲ್‌ಗೆ 2500 ರೂ. ಬೆಂಬಲ ಬೆಲೆ ಘೋಷಿಸಿದ್ದು, ಶೀಘ್ರವೇ ತಾಲೂಕಿನಲ್ಲಿ ಖರೀದಿ ಕೇಂದ್ರ ತೆರೆದು ರೈತರ ಜೋಳವನ್ನು ಖರೀದಿಸಲಾಗುವುದು ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ತಿಳಿಸಿದರು.

    ನಗರದ ತಹಸಿಲ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಹೈಬ್ರಿಡ್ ಜೋಳ ಹೆಚ್ಚಾಗಿ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ 2 ಸಾವಿರ ರೂ. ದರದಲ್ಲಿ ಜೋಳದ ವಹಿವಾಟು ಇದ್ದು, ಬೆಂಬಲ ಬೆಲೆ ಘೋಷಣೆ ಹಿನ್ನೆಲೆ ಮಾರುಕಟ್ಟೆಯಲ್ಲಿ ದರ ಹೆಚ್ಚಾಗಲಿದೆ. ಹೋಬಳಿ ಮಟ್ಟದಲ್ಲಿಯೂ ಖರೀದಿ ಕೇಂದ್ರ ತೆರೆಯಲು ಚಿಂತಿಸಲಾಗುತ್ತಿದೆ. ಇದರಿಂದ ವಿಲೇವಾರಿಗೆ ಅನುಕೂಲವಾಗಲಿದೆ. ರೈತರು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅಕಾಲಿಕ ಮಳೆಯಿಂದ ಈ ಭಾಗದಲ್ಲಿ ಸುಮಾರು 5 ಸಾವಿರ ಹೇಕ್ಟರ್ ಪ್ರದೇಶದಲ್ಲಿ ಭತ್ತ ನಷ್ಟವಾದ ಅಂದಾಜಿದೆ. ಈಗಾಗಲೇ ಸರ್ವೇ ಮಾಡಿ ಸರ್ಕಾರಕ್ಕೆ ಕೃಷಿ ಇಲಾಖೆ ವರದಿ ಸಲ್ಲಿಸಿದ್ದು ಪ್ರತಿ ಹೇಕ್ಟರ್ ಪ್ರದೇಶದ ಭತ್ತಕ್ಕೆ 13,500 ರೂ. ಪರಿಹಾರ ನೀಡಲಾಗುವುದು. ತೋಟಗಾರಿಕೆ ಬೆಳೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಸಚಿವರಿಗೆ ಒತ್ತಾಯಿಸಲಾಗಿದೆ ಎಂದರು.

    ಶಾಸಕ ವೆಂಕಟರಾವ ನಾಡಗೌಡ ಮಾತನಾಡಿ, ಈಗಾಗಲೇ ನೋಂದಣಿಯಾದ ರೈತರ ಜೋಳವನ್ನು ಏ.19 ರಿಂದಲೇ ಖರೀದಿಸಬೇಕು ಎಂದರು. ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಮುಂಗಾರಿನಲ್ಲಿ 1.2 ಲಕ್ಷ ಹೇಕ್ಟರ್ ಪ್ರದೇಶದಲ್ಲಿ ಜೋಳ ಬೆಳೆದಿದ್ದರೆ, ಹಿಂಗಾರಿನಲ್ಲಿ 7.2 ಲಕ್ಷ ಹೇಕ್ಟರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗಿದೆ. ಒಟ್ಟು ಉತ್ಪಾದನೆ 8 ಲಕ್ಷ ಟನ್ ಆಗಿದೆ. ಈಗ 1 ಲಕ್ಷ ಮೆಟ್ರಿಕ್ ಟನ್ ಜೋಳ ಖರೀದಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿಂದೆ ಭತ್ತಕ್ಕೆ ನೀಡಿದ್ದ 200 ರೂ. ಪ್ರೋತ್ಸಾಹಧನ ವಾಪಾಸ್ ಪಡೆದಿದ್ದು, ಈಗ ಮತ್ತೇ ಭತ್ತಕ್ಕೆ 200 ಪ್ರೋತ್ಸಾಹ ಧನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

    ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಪಂ ಸದಸ್ಯ ಹಾಗೂ ನಯೋಪ್ರಾ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಜಿಪಂ ಸದಸ್ಯರಾದ ಬಸವರಾಜ ಹಿರೇಗೌಡ, ಎನ್.ಶಿವನಗೌಡ ಗೊರೇಬಾಳ, ತಹಸೀಲ್ದಾರ ಮಂಜುನಾಥ ಭೋಗಾವತಿ, ಕೃಷಿ ಅಧಿಕಾರಿ ಡಾ.ಜಯಪ್ರಕಾಶ, ಡಿವೈಎಸ್‌ಪಿ ವಿಶ್ವನಾಥರಾವ ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts