More

    ಪತಿ ಕೊಲೆ ಮಾಡಿದ್ದ ಪತ್ನಿ ಸಹಿತ ನಾಲ್ವರ ಬಂಧನ

    ನಿಪ್ಪಾಣಿ: ಪತಿಯನ್ನೇ ಕೊಲೆಗೈದು ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿ ತರಿಸಿ ಗುಂಡಿ ತೋಡಿಸಿ ಶವವನ್ನು ಹೂತು ಹಾಕಿ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ, ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿ ನಾಲ್ವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

    ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ನೇರ್ಲಿ ಗ್ರಾಮದ ಸಚಿನ ಸದಾಶಿವ ಭೋಪಳೆ (35) ಎಂಬಾತನನ್ನು ಆತನ ಪತ್ನಿ ಅನಿತಾ ಸಚಿನ ಭೋಪಳೆ (35), ಸಂಬಂಧಿಕರೊಂದಿಗೆ ಸೇರಿ ಕೊಲೆ ಮಾಡಿದ್ದಳು. ಅನಿತಾಳ ಸಹೋದರ ಕೃಷ್ಣಾತ್ ಅಲಿಯಾಸ್ ಪಿಂಟು ರಾಜಾರಾಮ ಘಾಟಗೆ (26), ಸಹೋದರಿ ಕಾಗಲ್ ತಾಲೂಕಿನ ಸಿದ್ಧನೇರ್ಲಿ ಗ್ರಾಮದ ವನಿತಾ ಕೃಷ್ಣಾತ್ ಚವ್ಹಾಣ (29) ಮತ್ತು ಸಂಬಂಧಿ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಗಣೇಶ ಅಣ್ಣಪ್ಪ ರೇಡೆಕರ (21) ಮೂವರು ಸಾಥ್ ನೀಡಿದ್ದರು. ಕೊಲೆ ನಂತರ ಎಲ್ಲರೂ ಪರಾರಿಯಾಗಿದ್ದರು. ನಿಪ್ಪಾಣಿ ಠಾಣೆಯ ಪೊಲೀಸರು ನಾಲ್ವರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಘಟನೆಯ ಹಿನ್ನೆಲೆ: ಕೊಲೆಯಾದ ಸಚಿನ್ ಸದಾಶಿವ ಭೋಪಳೆ, ಪತ್ನಿಯ ಶೀಲ ಶಂಕಿಸಿ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಗಂಡ-ಹೆಂಡತಿ ಇಬ್ಬರೂ ಹಂಚಿನಾಳ ಗ್ರಾಮಕ್ಕೆ ಬಂದಿದ್ದರು. ಸೆ. 3ರಂದು ರಾತ್ರಿ ಮತ್ತೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಪತ್ನಿ ದೊಣ್ಣೆಯಿಂದ ಪತಿ ತಲೆಗೆ ಜೋರಾಗಿ ಹೊಡೆದಿದ್ದಾಳೆ. ನಂತರ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಅನಿತಾ ಇತರ ಮೂವರು ಆರೋಪಿಗಳ ಜತೆ ಸೇರಿ ಮನೆಯಲ್ಲಿ ಎಮ್ಮೆ ಸತ್ತಿದೆ ಎಂದು ರಾತ್ರೋರಾತ್ರಿ ಜೆಸಿಬಿ ತರಿಸಿ, ಗುಂಡಿ ತೋಡಿಸಿ ಪತಿಯ ಶವವನ್ನು ಹೂತಿದ್ದಾರೆ.

    ಜೆಸಿಬಿ ಚಾಲಕನ ಧೈರ್ಯ: ಜೆಸಿಬಿ ಚಾಲಕನಿಗೆ ಸಂಶಯ ಬಂದು ಆತ ಘಟನೆ ಕುರಿತು ಕೇಳಿದ್ದ. ಕೊಲೆ ಮಾಡಿ ಶವ ಹೂತಿರುವ ಕುರಿತು ಚಾಲಕನಿಗೆ ತಿಳಿಸಿ, ಯಾರಿಗಾದರೂ ತಿಳಿಸಿದಲ್ಲಿ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಸೆ.5ರಂದು ಆತ ಧೈರ್ಯದಿಂದ ಪೊಲೀಸರ ಬಳಿ ಬಂದು ಘಟನೆ ಕುರಿತು ಮಾಹಿತಿ ನೀಡಿದ್ದರಿಂದ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

    ಸಿಪಿಐ ಸಂತೋಷ ಸತ್ಯನಾಯಕ, ಗ್ರಾಮೀಣ ಠಾಣೆಯ ಪಿಎಸ್‌ಐ ಬಿ.ಎಸ್. ತಳವಾರ, ಶಹರ್ ಪೊಲೀಸ್ ಠಾಣೆಯ ಪಿಎಸ್‌ಐ ಅನಿಲಕುಮಾರ್ ಕುಂಬಾರ, ಎಎಸ್‌ಐ ಎಸ್.ಎ. ತೊಲಗಿ, ಎಸ್.ಐ. ಕುಂಬಾರ, ಎ.ಬಿ. ಮೊಕಾಶಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts