More

    ಮತದಾರರ ಓಲೈಕೆಗೆ ಅಂತಿಮ ಕಸರತ್ತು

    ಹುಣಸೂರು: ಫೆ.9ರಂದು ನಡೆಯಲಿರುವ ಹುಣಸೂರು ನಗರಸಭೆ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಮತದಾರರ ಓಲೈಕೆಯ ಅಂತಿಮ ಕಸರತ್ತು ನಡೆಸುತ್ತಿದ್ದು, ಈ ಹಿಂದಿನ ಅವಧಿಯಂತೆ ನಗರಸಭೆ ಗೊಂದಲದ ಗೂಡಾಗದಿರಲಿ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

    ಕಳೆದ ಬಾರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತವಿದ್ದರೂ ನಗರಸಭೆ ಅಧಿಕಾರಕ್ಕಾಗಿ ಕಿತ್ತಾಟ ಉಂಟಾಗಿದ್ದರಿಂದ ಗೊಂದಲದ ಗೂಡಾಗಿತ್ತು. ನಾಗರಿಕರಲ್ಲಿ ಇದು ಅಸಹನೆ ಉಂಟು ಮಾಡಿದೆ. ನಗರಸಭೆ ಆಡಳಿತ ಮಂಡಳಿಯ ಅಧಿಕಾರಾವಧಿ 5 ವರ್ಷಗಳು ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಹುಣಸೂರು ನಗರಸಭೆ ಆಡಳಿತ 2013ರಿಂದ 2020ರವರೆಗೆ ಒಟ್ಟು 7 ವರ್ಷಗಳ ಕಾಲ ಅಸ್ತಿತ್ವದಲ್ಲಿತ್ತು ಎಂದರೆ ರಾಜಕೀಯ ಮೇಲಾಟಗಳ ದುರಂತವೇ ಸರಿ. ಇದರಿಂದಾಗಿ ಇಡೀ ನಗರಸಭೆ ಆಡಳಿತ ಯಾರ ಹಿಡಿತಕ್ಕೂ ಸಿಗದೆ ಅವ್ಯವಸ್ಥೆಯ ಗೂಡಾಗಿತ್ತು.

    ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೇರಿತು: 2013ರಲ್ಲಿ ಪುರಸಭೆಗೆ ಆಯ್ಕೆಯಾಗಿದ್ದ ಸದಸ್ಯರು 2015ರಲ್ಲಿ ಪುರಸಭೆಯು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿದ ನಂತರ ಎಲ್ಲರೂ ನಗರಸಭೆ ಸದಸ್ಯರಾದರು. ಪುರಸಭಾ ಮುಖ್ಯಾಧಿಕಾರಿ ಎ.ರಮೇಶ್ ನಗರಸಭೆ ಪೌರಾಯುಕ್ತರಾಗಿ ಬಡ್ತಿಯನ್ನೂ ಪಡೆದಿದ್ದರು. ಅಲ್ಲದೆ ಗುಲ್ನಾಜ್ ಬೇಗಂ ಪ್ರಥಮ ನಗರಸಭಾ ಅಧ್ಯಕ್ಷೆಯಾಗಿ ಹಾಗೂ ಸುನೀತಾ ಜಯರಾಮೇಗೌಡ ಉಪಾಧ್ಯಕ್ಷರಾಗಿ ಮುಂದುವರಿದರು. 2013 ಆರಂಭದಲ್ಲೇ ಚುನಾವಣೆ ನಡೆದಿದ್ದರೂ ಪುರಸಭೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಮೊದಲ ಸಭೆ ನಡೆದದ್ದು, 2014ರ ಮಾರ್ಚ್ ತಿಂಗಳಲ್ಲಿ. ಅಂದರೆ ಸರಿಸುಮಾರು ಒಂದು ವರ್ಷ ಕಾಲ ಅಧ್ಯಕ್ಷಗಾದಿಯ ಮೀಸಲಾತಿಯ ಜಟಾಪಟಿ ಮುಂದುವರೆದಿತ್ತು. ಇದರಿಂದಾಗಿ ಆಡಳಿತ ಕುಸಿತ ಆರಂಭಗೊಂಡಿತ್ತು. ವಿಪರ್ಯಾಸವೆಂದರೆ 2019ರ ಮಾರ್ಚ್ ತಿಂಗಳಲ್ಲಿ ನಗರಸಭೆ ಆಡಳಿತಾವಧಿ ಪೂರ್ಣಗೊಂಡರೂ ಸರಿಸುಮಾರು ಒಂದು ವರ್ಷದ ನಂತರ ನಗರಸಭೆಗೆ ಚುನಾವಣೆ ನಡೆಯುತ್ತಿದೆ.

    ರಾಜಕೀಯ ಮೇಲಾಟ, ಅಭಿವೃದ್ಧಿ ಶೂನ್ಯ: 27 ಸದಸ್ಯರನ್ನು ಹೊಂದಿದ್ದ ಆಗಿನ ಹುಣಸೂರು ನಗರಸಭೆಯಲ್ಲಿ 15 ಕಾಂಗ್ರೆಸ್, 9 ಜೆಡಿಎಸ್ ಹಾಗೂ 3 ಪಕ್ಷೇತರರಿದ್ದರು. ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿದ್ದರೂ 5 ವರ್ಷಗಳ ನಗರಸಭೆ ಅವಧಿಯಲ್ಲಿ ಪಕ್ಷಾಂತರ ಪರ್ವ ಸಂಪೂರ್ಣ ಆವರಿಸಿತ್ತು. ಯಾವ ಪಕ್ಷದ ಸದಸ್ಯ ಇದೀಗ ಯಾವ ಪಕ್ಷದಲ್ಲಿದ್ದಾನೆ ಎನ್ನುವುದು ಆಯ್ಕೆ ಮಾಡಿದ ಮತದಾರರಿಗೆ ಗೊಂದಲಕ್ಕೀಡು ಮಾಡಿತ್ತು. ತಕ್ಕಡಿಯಲ್ಲಿ ಹಾಕಿದ ಕಪ್ಪೆಗಳಂತೆ ಸದಸ್ಯರು ಪಕ್ಷದಿಂದ ಪಕ್ಷಕ್ಕೆ ತಮ್ಮ ನಿಲುವನ್ನು ಬದಲಾಯಿಸುತ್ತಲೇ ಅಧಿಕಾರವನ್ನು ಅನುಭವಿಸಿದರು.
    5 ವರ್ಷಗಳ ಕಾಲಾವಧಿಯಲ್ಲಿ ಇಬ್ಬರು ಪ್ರಭಾರ ಅಧ್ಯಕ್ಷರನ್ನು ಒಳಗೊಂಡಂತೆ ಒಟ್ಟು 8 ಸದಸ್ಯರು ಅಧ್ಯಕ್ಷಗಾದಿಯ ಆಸೆಯನ್ನು ತೀರಿಸಿಕೊಂಡಿದ್ದಾರೆ. ಜನರಿಂದ ಆಯ್ಕೆಯಾದ ಸದಸ್ಯರು ತಮ್ಮ ಆಸೆಯನ್ನೇನೋ ತೀರಿಸಿಕೊಂಡರು. ಆದರೆ ಜನರ ನಿರೀಕ್ಷೆಗಳಿಗೆ ತಣ್ಣೀರೆರೆಚಿರುವುದು ನಗರಸಭೆಯ ಇಂದಿನ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

    ಬೆರಳೆಣಿಕೆ ಸದಸ್ಯರ ಕ್ರಿಯಾಶೀಲತೆ: ಕೌನ್ಸಿಲರ್‌ಗಳಾದ ಕೃಷ್ಣರಾಜಗುಪ್ತ, ಶರವಣ, ರವಿಕುಮಾರ್ ಮುಂತಾದವರು ತಮ್ಮ ಪಾಡಿಗೆ ತಮ್ಮ ವಾರ್ಡ್‌ನ ಕಡೆ ಗಮನಹರಿಸಿ ಸರ್ಕಾರದ ಯೋಜನೆಗಳ ಜಾರಿಗೆ ಪ್ರಯತ್ನಿಸಿದ್ದಾರೆ. ಈ ಬಾರಿ ವಾರ್ಡ್ ಸಂಖ್ಯೆ 16ರಲ್ಲಿ ಸ್ಪರ್ಧಿಸಿರುವ ಕೃಷ್ಣರಾಜಗುಪ್ತ ತಮ್ಮ ವಾರ್ಡಿನಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಗ್ರ ವ್ಯವಸ್ಥೆಯನ್ನು ಕಲ್ಪಿಸುವ ಮತ್ತು ಜನರೊಂದಿಗೆ ಸದಾ ಒಡನಾಟವಿಟ್ಟುಕೊಂಡ ಪರಿಣಾಮ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಇದೇ ಹಾದಿಯಲ್ಲಿ ಶರವಣ ಮತ್ತು ರವಿಕುಮಾರ್ ಇದ್ದಾರೆ.

    ಈ ಬಾರಿ ಮಹಿಳೆಯರದ್ದೇ ದರ್ಬಾರ್: 27 ಸದಸ್ಯರನ್ನು ಹೊಂದಿದ್ದ ಪುರಸಭೆಯು ನಗರಸಭೆಯಾದ ನಂತರ 4 ವಾರ್ಡ್‌ಗಳನ್ನು ಹೆಚ್ಚಿಸಿಕೊಂಡು ಒಟ್ಟು ಸ್ಥಾನಗಳ ಸಂಖ್ಯೆ 31ಕ್ಕೇರಿದೆ. ಹಲವಾರು ವಾರ್ಡ್‌ಗಳನ್ನು ವಿಭಜಿಸಿ ಹೊಸ ವಾರ್ಡ್‌ಗಳನ್ನು ರೂಪಿಸಲಾಗಿದೆ. 31 ಸ್ಥಾನಗಳ ಪೈಕಿ 14 ಮಹಿಳೆಯರು ಈ ಬಾರಿ ನಗರಸಭೆ ಪ್ರವೇಶಿಸಲಿದ್ದಾರೆ. 31 ಸದಸ್ಯರ ಪೈಕಿ 16 ಸಾಮಾನ್ಯ ವರ್ಗ, ಪ.ಜಾತಿ 5, ಪ.ಪಂಗಡ 3 ಹಾಗೂ ಹಿಂದುಳಿದ ವರ್ಗಕ್ಕೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts