More

    ಶೆಡ್‌ಗಳೇ ಆಸರೆ…! ಭವಿಷ್ಯ ಕಣ್ಮರೆ…!

    ಚಂದ್ರು ಗಂಗೂರ
    ಹುನಗುಂದ: ‘‘ನಾವು ಯಾವ ಪಾಪ ಮಾಡಿವ್ರೀ, ದೇವರು ನಮಗ ಇಂಥಾ ಶಿಕ್ಷೆ ಕೊಡಾಕತ್ಯಾನ. ಚಳಿ, ಮಳೆ,ಬಿಸಿಲಲ್ಲೇ ಹತ್ತು ವರ್ಷದಿಂದ ಶೆಡ್‌ನ್ಯಾಗ ಸಣ್ಣ ಸಣ್ಣ ಮಕ್ಕಳು, ಮರಿ ಕಟ್ಟಗೊಂಡು ದಿನ ಕಳಿಯಾಕತ್ತೀವಿ. ಮಳೆಗಾಲದಲ್ಲಿ ಮಳೆ ಬಂದ್ರೆ ತಗಡಿನ ತಟ್ ತಟ್ ಸಪ್ಪಳ, ಬೇಸಿಗೆಯಲ್ಲಿ ಬಿಸಲಿನ ಝಳ ತಡೆಯೋಕ್ಕಾಗಲ್ಲ. ತಗಡು ಬೆಂಕಿಹಂಗ ಕಾಯ್ದು ಮನೆಯೊಳಗೆ ಕುಂದ್ರಾಕಾಗಲ್ಲ, ನಿಲ್ಲೋದಕ್ಕೂ ಆಗಲ್ಲ. ನಮ್ ಈ ಪರಿಸ್ಥಿತಿ ಆ ದೇವರೇ ಬಲ್ಲ..’’

    ಇದು ತಾಲೂಕಿನ ಬಿಸನಾಳಕೊಪ್ಪ ಗ್ರಾಮದಲ್ಲಿ ಹತ್ತು ವರ್ಷಗಳಿಂದ ಶೆಡ್‌ನಲ್ಲೇ ವಾಸವಾಗಿರುವ ಸಂತ್ರಸ್ತ ಮಹಿಳೆಯರ ಆಕ್ರಂದನದ ನುಡಿಗಳು.

    2009ರಲ್ಲಿ ಸುರಿದ ಕುಂಭದ್ರೋಣ ಬಾರಿ ಮಳೆಯಿಂದ ಮಲಪ್ರಭೆ ನದಿ ನೀರು ಗ್ರಾಮವನ್ನು ಪ್ರವೇಶಿಸಿ ಜನರ ಅಪಾರ ಆಸ್ತಿ ಪಾಸ್ತಿ, ಕಾಳು-ಕಡಿಗಳನ್ನು ನುಂಗಿ ನೀರು ಕುಡಿಯಿತು. ಮತ್ತೆ 2019 ರಲ್ಲಿ ಪ್ರವಾಹ ಬಂದು ಗ್ರಾಮ ಮತೆ ಸಂಪೂರ್ಣ ಜಲಾವೃತಗೊಂಡಿತ್ತು. 2009ರಕ್ಕಿಂತಲೂ ಈ ಬಾರಿಯ ಪ್ರವಾಹ ಭೀಕರವಾಗಿತ್ತು. ಈ ಸಂದರ್ಭದಲ್ಲಿಯೂ ಗ್ರಾಮದ ಜನ ಜೀವ ಉಳಿದರೆ ಸಾಕು ಎಂದು ಸರ್ವಸ್ವವನ್ನೇ ಕಳೆದುಕೊಂಡು ಉಟ್ಟ ಬಟ್ಟೆಯಲ್ಲಿಯೇ ಹೊರಗೆ ಬಂದರು. ಆಗ ಸರ್ಕಾರ ನಿರ್ಮಿಸಿದ ತಾತ್ಕಾಲಿಕ ಶೆಡ್‌ನಲ್ಲಿ ಸಣ್ಣ ಸಣ್ಣ ಮಕ್ಕಳು ಮತ್ತು ವಯೋವೃದ್ಧರನ್ನು ಕಟ್ಟಿಕೊಂಡು ಜೀವನ ಸಾಗಿಸಲು ಆರಂಭಿಸಿದರು. ಈಗ ಹನ್ನೊಂದು ವರ್ಷ ಗತಿಸುತ್ತ ಬಂದರೂ ಶಾಶ್ವತ ಸೂರು ಸಿಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.

    ಕೃಷ್ಣಾ ಮತ್ತು ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕುವ ಬಿಸನಾಳಕೊಪ್ಪ ಸೇರಿ ಇದ್ದಲಗಿ, ಬಿಸನಾಳ, ಕಮದತ್ತ, ಅಡಿಹಾಳ, ಎಮ್ಮೆಟ್ಟಿ, ಕೆಸರಪೆಂಟಿ, ವರಗೋಡದಿನ್ನಿ, ಕೆಂಗಲ್ಲ, ಖಜಗಲ್ಲ, ಕಟಗೂರ, ತುರಡಗಿ ಗ್ರಾಮಗಳನ್ನು ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಗ್ರಾಮಗಳೆಂದು ಯುಕೆಪಿ ಅಡಿಯಲ್ಲಿ 2011-12ರಲ್ಲಿಯೇ ಸ್ಥಳಾಂತರಿಸಲು ಸರ್ಕಾರ ಘೋಷಿಸಿದೆ. ಈಗ ಎಂಟು ವರ್ಷಗಳು ಗತಿಸಿದರೂ ಹಕ್ಕು ಪತ್ರಗಳನ್ನು ನೀಡಿಲ್ಲ. ಸ್ಥಳಾಂತರ ಕಾರ್ಯ ಮಾತ್ರ ನಿಧಾನಗತಿಯಲ್ಲಿ ಸಾಗಿರುವುದು ವಿಪರ್ಯಾಸ.

    ಬಿಸನಾಳಕೊಪ್ಪ ಸಂತ್ರಸ್ತರ ಬದುಕು ದುಸ್ತರ
    ಪ್ರವಾಹದಿಂದ ಬಾಧಿತಗೊಂಡ ಹತ್ತಕ್ಕೂ ಹೆಚ್ಚು ಗ್ರಾಮಗಳ ಪೈಕಿ ಬಿಸನಾಳಕೊಪ್ಪ ಗ್ರಾಮದ ಸಂತ್ರಸ್ತರ ಬದುಕು ಮಾತ್ರ ದುಸ್ತ್ತರವಾಗಿದೆ. ಇಲ್ಲಿನ ಮನೆಗಳು ಸಂಪೂರ್ಣ ಕುಸಿದು ಬಿದ್ದು ನೆಲೆ ಸಿಗದೆ ತಗಡಿನ ಶೆಡ್‌ಗಳೇ ಈ ಗ್ರಾಮದ ಸಂತ್ರಸ್ತರಿಗೆ ಆಶ್ರಯವಾಗಿದೆ. ಜಿಲ್ಲಾಡಳಿತ 2009ರಲ್ಲಿ ಸಂತ್ರಸ್ತರಿಗೆ ಶೆಡ್ ನಿರ್ಮಿಣ ಮತ್ತು ಹಾಳದ ಮನೆಗೆ ಪರಿಹಾರ ಕೊಟ್ಟಿರುವುದನ್ನು ಬಿಟ್ಟರೇ ಮರಳಿ ಇತ್ತ ಕಡೆಗೆ ತಿರುಗಿ ಸಹ ನೋಡಿಲ್ಲ. ಸರ್ಕಾರದ್ದು ಈ ಕಥೆಯಾದರೆ ಇನ್ನು ಮತ ಹಾಕಿ ಹಾರಿಸಿ ತಂದ ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಮಾತ್ರ ಈ ಕಡೆ ಮುಖ ಮಾಡ್ತಾರೆ. ಉಳಿದ ಸಮಯದಲ್ಲಿ ಅವರು ಈ ಕಡೆ ತಲೆ ಸಹ ಹಾಕುವುದಿಲ್ಲ ಎಂಬುದು ಸಂತ್ರಸ್ತರ ಆರೋಪ.

    ತುಕ್ಕು ಹಿಡಿಯುತ್ತಿರುವ ತಗಡುಗಳು
    ಸರ್ಕಾರ ಈ ತಗಡಿನ ಶೆಡ್ ನಿರ್ಮಿಸಿ ಹತ್ತು ವರ್ಷಗಳಾಗಿವೆ. ಶೆಡ್‌ನ ತಗಡುಗಳು ತುಕ್ಕು ಹಿಡಿದು ಅಲ್ಲಲ್ಲಿ ತೂತು ಬಿದ್ದು ಮಳೆ ಬಂದರೇ ಸಾಕು ಸೋರುತ್ತವೆ. ಶೆಡ್‌ಗೆ ಹಾಕಿರುವ ಕಟ್ಟಿಗೆ ಕಂಬಗಳು ಕೊಳೆತು ಈಗಲೋ ಆಗಲೋ ಮುರಿದು ನೆಲ ಕಚ್ಚುವ ಸಂಭವವಿದೆ. ಭಯಂಕರ ಗಾಳಿ ಮಳೆಗೆ ತಗಡುಗಳು ಹಾರಿ ಹೋಗುವ ಭೀತಿ ಸಂತ್ರಸ್ತರಲ್ಲಿದ್ದು, ಜೀವವನ್ನು ಕೈಯಲ್ಲಿ ಹಿಡಿದು ಬದುಕುವ ಸ್ಥಿತಿ ಇದೆ.

    ಮೂಲ ಸೌಕರ್ಯ ಕೊರತೆ
    ಶಾಶ್ವತ ಸೂರಿನ ಕಥೆ ಒಂದೆಯಲ್ಲ. ಇಲ್ಲಿ ಕುಡಿಯುವ ನೀರು, ಚರಂಡಿ, ಶೌಚಗೃಹ ಸೇರಿ ಅನೇಕ ಮೂಲ ಸೌಕರ್ಯಗಳೇ ಇಲ್ಲ. ಮೂಲ ಸೌಲಭ್ಯಗಳನ್ನು ಒದಗಿಸಬೇಕಾದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆ. ಕುಡಿಯುವ ನೀರಿಗಾಗಿ ರಾತ್ರಿ ಇಡೀ ಸರತಿ ಸಾಲು ಹಚ್ಚಿ ನೀರು ಹಿಡಿಯುವ ಪರಿಸ್ಥಿತಿ ಇದ್ದರೆ, ಮಳೆಯ ನೀರು ಸರಿಯಾಗಿ ಹರಿದು ಹೋಗಲು ಚರಂಡಿ ಮಾಡದಿರುವುದರಿಂದ ನಿಂತಲೇ ನೀರು ನಿಂತು ಹಲವು ರೋಗಗಳನ್ನು ಆಹ್ವಾನಸುವಂತಿದೆ. ಇನ್ನು ಬಯಲೇ ಅಲ್ಲಿನ ಜನರಿಗೆ ಶೌಚಗೃಹಗಳಾಗಿವೆ.

    ಈಗಲಾದರೂ ಸರ್ಕಾರ ಮತ್ತು ಜನಪ್ರತಿನಿಧಿಗಳು ಸಂತ್ರಸ್ತರ ಸಂಕಷ್ಟದ ಬದುಕನ್ನು ಕಣ್ಣಾರೆ ಕಂಡು ಅವರ ಹಲವು ಸಮಸ್ಯೆಗಳನ್ನು ಶೀಘ್ರ ಬಗೆಹರಿಸುತ್ತಾರಾ? ಎಂಬುವುದನ್ನು ಕಾಯ್ದು ನೋಡಬೇಕಾಗಿದೆ.

    ಹತ್ತು ವರ್ಷದಿಂದ ಈ ಶೆಡ್‌ನಲ್ಲಿ ವಾಸವಾಗಿ ಪಡಬಾರದ ಕಷ್ಟಗಳನ್ನು ಪಟ್ಟಿದೇವೆ. ಮಳೆ, ಚಳಿ, ಗಾಳಿ, ಬಿಸಿಲು ಸಹಿಸಿಕೊಂಡು ಬದುಕು ಸಾಗಿಸುವ ಅನಿವಾರ್ಯತೆ ಇದೆ. ಯಾವ ರಾಜಕಾರಣಿಗಳು ನಮ್ಮ ಕಷ್ಟವನ್ನು ಕೇಳಲು ಮುಂದೆ ಬರುತ್ತಿಲ್ಲ. ಅದೇ ಹರಕು ಮುರುಕು ತಗಡಿನಲ್ಲಿ ವಾಸಿಸುವುದು ಮಾತ್ರ ತಪ್ಪುತ್ತಿಲ್ಲ.
    ಶಿವಲಿಂಗಪ್ಪ ಹಾದಿಮನಿ, ಸಂತ್ರಸ್ತ ಬಿಸನಾಳಕೊಪ್ಪ

    ಚುನಾವಣೆ ಬಂದಾಗ ಕೈ ಮುಗಿದು ನಾವು ನಿಮಗೆ ಮನೆ ಕಟ್ಟಿಸಿ ಕೊಡ್ತೀವಿ, ಜಾಗ ಕೊಡ್ತೀವಿ ಅಂತ ಆಸೆ ತೋರಿಸಿ ಓಟು ಹಾಕುಸ್ಕೊಂದು ಹೋಗ್ತಾರಾ. ಗೆದ್ದ ಬಂದ ಮೇಲೆ ನೀವು ಅದಿರೋ ಸತ್ತಿರೋ ಅಂತ ಕೇಳಕೋ ಬರುದಿಲ್ಲ. ನಮ್ಮ ಬಂಗಾರದಂತ ಮನೆ, ಹೊಲ ಕಳಕೊಂಡು ಈ ಹರಕು ಮುರಕು ಶೆಡ್‌ನ್ಯಾಗ ಜೀವನ ಕಳಿಯಾಕ್ತೀವ್ರಿ.
    ನೊಂದ ಮಹಿಳೆಯರು

    ಈಗಾಗಲೇ ತಾಲೂಕಿನ ಮುಳುಗಡೆ ಗ್ರಾಮಗಳಿಗೆ ನಿರ್ಮಿಸಿದ ಆಸರೆ ಮನೆಗಳ ಹಕ್ಕು ಪತ್ರಗಳನ್ನು ಪ್ರವಾಹದ ಸಂತ್ರಸ್ತರ ಕುಟುಂಬಗಳಿಗೆ ವಿತರಿಸಲು ಆಲಮಟ್ಟಿ ಎಸ್‌ಎಲ್‌ಒ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕೂಡಲೇ ಹಕ್ಕು ಪತ್ರವನ್ನು ವಿತರಣೆ ಮಾಡುತ್ತೇವೆ.
    ಬಸವರಾಜ ನಾಗರಾಳ , ತಹಸೀಲ್ದಾರ್ ಹುನಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts