More

    ಬಲಿಗಾಗಿ ಕಾಯುತ್ತಿವೆ ಹಂಪ್​ಗಳು!

    ರಟ್ಟಿಹಳ್ಳಿ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಹಂಪ್​ಗಳು (ಅಡೆತಡೆ) ವಾಹನ ಚಾಲಕರಿಗೆ, ಬೈಕ್ ಸವಾರರಿಗೆ ಮಾರಕವಾಗಿ ಪರಿಣಮಿಸಿವೆ. ಅಧಿಕಾರಿಗಳ ನಿರ್ಲಕ್ಷ್ಯಂದ ಸಾರ್ವಜನಿಕರು ನರಳುವಂತಾಗಿದೆ.

    ಹಂಪ್ ನಿರ್ಮಾಣ ಮಾಡುವಾಗ ಕೆಲವೊಂದು ನಿಯಮ ಪಾಲಿಸಬೇಕು. ಆದರೆ, ಈ ಅಧಿಕಾರಿಗಳಿಗೆ ತಿಳಿವಳಿಕೆ ಇಲ್ಲವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಏಕೆಂದರೆ, ಅವೈಜ್ಞಾನಿಕವಾಗಿ ನಿರ್ವಿುಸಲಾಗಿರುವ ಹಂಪ್​ಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ.

    ರಟ್ಟಿಹಳ್ಳಿ- ರಾಣೆಬೆನ್ನೂರಿನ ರಾಜ್ಯ ಹೆದ್ದಾರಿಯನ್ನು ಕೆಲವು ವರ್ಷಗಳ ಹಿಂದೆ ಬಿಳಿಗಿರಿರಂಗನಬೆಟ್ಟ-ಬೈಂದೂರು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣದಲ್ಲಿ ಈ ರಸ್ತೆಗೆ ಭಗತ್​ಸಿಂಗ್ ಸರ್ಕಲ್, ಹೊಸ ಬಸ್ ನಿಲ್ದಾಣ, ಬ್ಯಾಡಗಿ ಕ್ರಾಸ್, ಶಿವಾಜಿ ನಗರ ಕ್ರಾಸ್ ಸೇರಿ ವಿವಿಧೆಡೆ ದೊಡ್ಡಮಟ್ಟದಲ್ಲಿ ಹಂಪ್ ನಿರ್ಮಾಣ ಮಾಡಲಾಗಿದೆ. ನಿಯಮದ ಪ್ರಕಾರ ಸಣ್ಣ ಗಾತ್ರದಲ್ಲಿ ಹಂಪ್ ಇರಬೇಕು. ಆದರೆ, ಇಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಹಾಕಲಾಗಿದೆ. ಸಣ್ಣ ವಾಹನಗಳ ಕೆಳಭಾಗಕ್ಕೆ ಬಡಿಯುವ ರೀತಿಯಲ್ಲಿ ಹಂಪ್ ನಿರ್ವಿುಸಲಾಗಿದೆ.

    ಸೂಚನಾ ಫಲಕವಿಲ್ಲ: ಹಂಪ್ ಇರುವಿಕೆ ಬಗ್ಗೆ ವಾಹನ ಚಾಲಕರಿಗೆ ತಿಳಿಸಲು 100 ಮೀಟರ್ ದೂರದಲ್ಲೇ ಸೂಚನಾಫಲಕಗಳನ್ನು ಅಳವಡಿಸಬೇಕು. ಆದರೆ, ಈ ಹೆದ್ದಾರಿಯ ಒಂದೆರಡು ಹಂಪ್​ಗೆ ಸೂಚನಾ ಫಲಕ ಅಳವಡಿಸಿದ್ದು, ಬ್ಯಾಡಗಿ ಕ್ರಾಸ್ ಮತ್ತು ಶಿವಾಜಿನಗರದ ಕೊನೆಯಲ್ಲಿ ನಿರ್ಮಾಣ ಮಾಡಿರುವ ಹಂಪ್​ಗಳಿಗೆ ಯಾವುದೇ ಸೂಚನಾಫಲಕ ಅಳವಡಿಸಿಲ್ಲ. ಹಂಪ್ ಇರುವ ಸ್ಥಳದಲ್ಲಿ ಮಾರ್ಕಿಂಗ್, ಲೈಟಿಂಗ್ ವ್ಯವಸ್ಥೆ ಸಹ ಮಾಡಿಲ್ಲ.

    ಸರಣಿ ಅಪಘಾತಗಳು: ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಹಂಪ್ ಇರುವಿಕೆ ಬಗ್ಗೆ ಸೂಚನಾಫಲಕ ಹಾಕದ ಕಾರಣ ವೇಗವಾಗಿ ಬರುವ ವಾಹನಗಳ ಚಾಲಕರು ಒಮ್ಮೆಲೇ ಗೊಂದಲಕ್ಕೀಡಾಗುವಂತಾಗಿದೆ. ತೀರ ಹತ್ತಿರ ಬರುವವರೆಗೂ ಹಂಪ್​ಗಳು ಚಾಲಕರ ಗಮನಕ್ಕೆ ಬರುವುದಿಲ್ಲ. ಇದರಿಂದ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ.

    ಶಿವಾಜಿನಗರದ ಬಳಿ ನಿರ್ಮಾಣ ಮಾಡಲಾಗಿರುವ ಅವೈಜ್ಞಾನಿಕ ಹಂಪ್​ನಿಂದಾಗಿ ಶನಿವಾರ ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಬ್ಯಾಡಗಿ ಕ್ರಾಸ್ ಬಳಿ ಇರುವ ಅವೈಜ್ಞಾನಿಕ ಹಂಪ್​ನಿಂದಾಗಿ 4-5 ಬೈಕ್ ಚಾಲಕರು ಬಿದ್ದು ಸಣ್ಣಪುಟ್ಟ ಗಾಯ ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.

    ಇಲ್ಲಿನ ಹಂಪ್​ಗಳು ನಿಜಕ್ಕೂ ಚಾಲಕರಿಗೆ ಮಾರಕವಾಗಿ ಪರಿಣಮಿಸಿವೆ. ದೊಡ್ಡ ಅಪಘಾತಗಳಾಗಿ ಪ್ರಾಣ ಹಾನಿ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲಿದ್ದ ಸಣ್ಣ ಹಂಪ್​ಗಳನ್ನೇ ದೊಡ್ಡದಾಗಿ ಮಾರ್ಪಡಿಸಲಾಗಿದೆ. ಹಂಪ್ ನಿರ್ಮಾಣ ಮುನ್ನ ಎಚ್ಚರಿಕೆಯ ಸೂಚನಾಫಲಕ ಹಾಕಿಸುವುದು ಕಡ್ಡಾಯ. ಬುಧವಾರ ಅಧಿಕಾರಿಗಳನ್ನು ಸ್ಥಳಕ್ಕೆ ಕಳಿಸಿ ಪರಿಶೀಲನೆ ನಡೆಸಿ, ಸಮಸ್ಯೆ ಸರಿಪಡಿಸಲಾಗುವುದು.

    | ಆರ್.ಕೆ. ಮಠದ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರಾ, ಷ್ಟ್ರೀಯ ಹೆದ್ದಾರಿ ಉಪವಿಭಾಗ, ಹುಬ್ಬಳ್ಳಿ

    ಹಂಪ್ ಹಾಕುವಾಗ ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕಿತ್ತು. ಇತ್ತೀಚೆಗೆ ನಮ್ಮ ಕೆಲಸಗಾರರು ಬೈಕ್​ನಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೆ ಅಧಿಕಾರಿಗಳು ಇಲ್ಲಿನ ಸಮಸ್ಯೆ ಬಗೆಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

    | ಎನ್.ಎಸ್. ಸಣ್ಣಗೌಡರ, ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts