More

    ಮಾನವ ಕಳ್ಳ ಸಾಗಣೆ ತಡೆಗೆ ಬೇಕು ಜನಬೆಂಬಲ: ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿಕೆ

    ದಾವಣಗೆರೆ: ಗ್ರಾಮ ಮಟ್ಟದಿಂದ ರಾಷ್ಟ್ರದ ಹಂತದವರೆಗೆ ಸಾರ್ವಜನಿಕರು ಕೈ ಜೋಡಿಸಿದರೆ ಮಾನವ ಕಳ್ಳ ಸಾಗಣೆ ಪ್ರಕರಣಗಳನ್ನು ಶೂನ್ಯಕ್ಕೆ ತರಬಹುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

    ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಜ್ಞಾವಿಧಿ ಸ್ವೀಕಾರ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಾಮಾಜಿಕ ಮತ್ತು ಆರ್ಥಿಕ ಕಾರಣಗಳ ಹಿನ್ನೆಲೆಯಲ್ಲಿ ಮಾನವ ಕಳ್ಳ ಸಾಗಣೆಯಂತಹ ದುರ್ಘಟನೆಗಳು ನಡೆಯುತ್ತಿವೆ. ಎರಡು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಜನರು ಕಾಣೆಯಾಗುವ ಘಟನೆಗಳು ಹೆಚ್ಚು ನಡೆಯುತ್ತಿದ್ದವು, ಅದರಲ್ಲಿ ವಿಶೇಷವಾಗಿ ಮಹಿಳೆಯರ ಕಣ್ಮರೆ ಪ್ರಕರಣಗಳು ಹೆಚ್ಚಿದ್ದವು ಎಂದರು.

    ಕಾಣೆಯಾದ ಮಹಿಳೆಯರನ್ನು ಮುಂಬೈ, ಪುಣೆ ಹಾಗೂ ದುಬೈನಂತಹ ದೊಡ್ಡ ನಗರಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದು ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಸರ್ಕಾರ ಇಂತಹ ಘಟನೆಗಳನ್ನ ನಿಯಂತ್ರಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಗಣನೀಯವಾಗಿ ಮಾನವ ಕಳ್ಳ ಸಾಗಣೆ ಪ್ರಕರಣಗಳು ಇಳಿಕೆಯಾಗಿವೆ ಎಂದು ತಿಳಿಸಿದರು.

    ಸಂಪನ್ಮೂಲ ವ್ಯಕ್ತಿ ಎಲ್.ಎಚ್.ಅರುಣ್​ಕುಮಾರ್ ಮಾತನಾಡಿ, ಬಡತನ, ಜಾತಿ ತಾರತಮ್ಯ, ಅಸಮಾನತೆ ಕಾರಣಗಳಿಂದ ಮಾನವ ಕಳ್ಳ ಸಾಗಣೆ ಪ್ರಕರಣಗಳು ನಡೆಯುತ್ತಿವೆ. ಇದರಲ್ಲಿ ಶೇ.70 ರಷ್ಟು ಮಹಿಳೆಯರು-ಮಕ್ಕಳನ್ನು ಅನೈತಿಕ ಚಟುವಟಿಕೆ ಹಾಗೂ ಭಿಕ್ಷಾಟನೆಯಂತಹ ಕಾನೂನುಬಾಹಿರ ಕಾರ್ಯಗಳಿಗೆ ಬಳಸಿಕೊಳ್ಳುವ ಸಂದರ್ಭವಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಪ್ರತಿಜ್ಞಾವಿಧಿ ಬೋಧಿಸಲಾಯಿತು. ಉಪವಿಭಾಗಾಧಿಕಾರಿ ದುರ್ಗಾಶ್ರೀ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಡಿಡಿಪಿಐ ತಿಪ್ಪೇಶಪ್ಪ, ಆರೋಗ್ಯ ಇಲಾಖೆಯ ಡಾ.ರೇಣುಕಾರಾಧ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮ್ಮಾ ಕೌಸರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ, ಜಿಲ್ಲಾ ಕಾರ್ವಿುಕ ಅಧಿಕಾರಿ ಇಬ್ರಾಹಿಂ, ವಕೀಲರಾದ ಎನ್.ಎಂ.ಆಂಜನೇಯ, ಶಶಿಧರ್ ಇತರರಿದ್ದರು.

    ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಜಿಲ್ಲೆಯಲ್ಲಿ ಒಂದು ವರ್ಷದಿಂದ ಎರಡು-ಮೂರು ಪ್ರಕರಣಗಳು ಪತ್ತೆಯಾಗಿವೆ. ಅವು ನಿಖರವಾಗಿ ಮಾನವ ಕಳ್ಳ ಸಾಗಣೆಗೆ ಸಂಬಂಧಿಸಿದ್ದಲ್ಲ. ಮಾನವ ಕಳ್ಳ ಸಾಗಣೆ, ಬಾಲಕಾರ್ವಿುಕ ಪದ್ಧ್ದತಿ ಸೇರಿ ಇನ್ನಿತರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಪ್ರತಿ ಪೊಲೀಸ್ ಠಾಣೆಯಲ್ಲೂ ಇಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    | ಸಿ.ಬಿ.ರಿಷ್ಯಂತ್ ಎಸ್​ಪಿ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts