More

    ಹಕ್ಕಿಜ್ವರದ ಬಗ್ಗೆ ಆತಂಕ ಬೇಡ; ಸೋಂಕು ಮಾನವನ ದೇಹ ಸೇರಲ್ಲ ಎಂದು ತಜ್ಞರ ಸ್ಪಷ್ಟನೆ

    | ಗಿರೀಶ್ ಗರಗ ಬೆಂಗಳೂರು

    ಕರೊನಾ ಸೋಂಕಿನ ಭೀತಿಯ ಜತೆಗೆ ಇದೀಗ ಹಕ್ಕಿ ಜ್ವರದ ಆತಂಕ ಎದುರಾಗಿದೆ. ಆದರೆ, ಸದ್ಯ ಕಾಣಿಸಿಕೊಂಡಿರುವ ಹಕ್ಕಿಜ್ವರದ ಎಚ್5ಎನ್8 ಸೋಂಕು ಎಚ್5ಎನ್1 ಸೋಂಕಿಗಿಂತ ಮನುಷ್ಯರ ಮೇಲೆ ಕಡಿಮೆ ಪರಿಣಾಮ ಬೀರಲಿದೆ. ಹೀಗಾಗಿ ಬೇರೆ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿ ಜ್ವರದ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು.

    ದೇಶದ 6 ರಾಜ್ಯಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಅದರಲ್ಲೂ ಕರ್ನಾಟಕದ ಪಕ್ಕದ ರಾಜ್ಯವಾದ ಕೇರಳದಲ್ಲಿ ಎಚ್5ಎನ್8 ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಈಗಾಗಲೇ 50 ಸಾವಿರಕ್ಕೂ ಹೆಚ್ಚಿನ ಕೋಳಿ, ಬಾತುಕೋಳಿಗಳು ಸಾವನ್ನಪ್ಪಿವೆ. ಅದರಿಂದ ರಾಜ್ಯಕ್ಕೂ ಸೋಂಕು ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಹೊರರಾಜ್ಯಗಳಿಂದ ಕೋಳಿ ಸೇರಿ ಇನ್ನಿತರ ಪಕ್ಷಿಗಳನ್ನು ತರಿಸಿಕೊಳ್ಳುವುದಕ್ಕೆ ನಿಯಂತ್ರಣ ಹೇರಲಾಗುತ್ತಿದೆ. ಆದರೆ, ಸದ್ಯ ಕಾಣಿಸಿಕೊಂಡಿರುವ ಎಚ್5ಎನ್8 ಸೋಂಕು ಮನುಷ್ಯರ ಮೇಲೆ ಪರಿಣಾಮ ಉಂಟು ಮಾಡುವುದಿಲ್ಲ. ಜತೆಗೆ, ಪಕ್ಷಿಗಳ ಸಾಕಣೆ ಕೇಂದ್ರಗಳಲ್ಲಿ ಸ್ವಚ್ಛತೆ ಕಾಯ್ದುಕೊಂಡರೆ ಸೋಂಕು ನಿಯಂತ್ರಿಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ.

    ಮುನ್ನೆಚ್ಚರಿಕೆ ಅಗತ್ಯ: ಹಕ್ಕಿ ಜ್ವರ ಬಂದರೂ ಕೋಳಿ ಸೇರಿ ಇನ್ನಿತರ ಹಕ್ಕಿಗಳ ಮಾಂಸ ಸೇವೆ ಬಗ್ಗೆ ಭಯಪಡುವ ಅಗತ್ಯವಿಲ್ಲ. ಹಕ್ಕಿಗಳ ಮಾಂಸ ಅಥವಾ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿದರೆ ಸೋಂಕು ನಿವಾರಣೆಯಾಗುತ್ತದೆ. ಆನಂತರ ಅದನ್ನು ಸೇವಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಹಸಿ ಮಾಂಸ ಸೇವನೆ ಅಪಾಯಕಾರಿ.

    ಏನಿದು ಎಚ್5ಎನ್8?

    ಎವಿಯನ್ ಫ್ಲೂ (ಹಕ್ಕಿ ಜ್ವರ) ಹಲವು ವಿಧದ ವೈರಸ್​ಗಳ ಮೂಲಕ ಹರಡುತ್ತದೆ. ಅದರಲ್ಲಿ ಎಚ್5ಎನ್1ನಿಂದ ಎಚ್7ಎನ್9ವರೆಗೆ ಸೋಂಕುಗಳಿವೆ. ದೇಶದಲ್ಲೀಗ ಹಕ್ಕಿಗಳಲ್ಲಿ ಅದೇ ಪ್ರಬೇಧದ ಎಚ್5ಎನ್8 ಸೋಂಕು ಕಾಣಿಸಿಕೊಂಡಿದೆ. ಎಚ್5ಎನ್8 ಎಚ್5ಎನ್1ಗಿಂತ ಕಡಿಮೆ ಪ್ರಭಾವಶಾಲಿಯದ್ದಾಗಿದೆ. ಹೀಗಾಗಿ ಅದರಿಂದ ಮನುಷ್ಯರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ. ಹಕ್ಕಿಗಳಲ್ಲಿ ಎಚ್5ಎನ್1 ಸೋಂಕು ಕಾಣಿಸಿಕೊಂಡರೆ ಮಾತ್ರ ಜೀವಂತ ಅಥವಾ ಸತ್ತ ಪಕ್ಷಿಗಳಿಂದ ಮಾನವನ ದೇಹಕ್ಕೆ ಸೋಂಕು ಹೊಕ್ಕುತ್ತದೆ. ಅದರಿಂದ ಜ್ವರ, ಶೀತ ಹೀಗೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ.

    ಸೋಂಕು ಹರಡುವುದು ಹೇಗೆ?

    ಹಕ್ಕಿ ಜ್ವರದ ಸೋಂಕು ಹರಡುವುದರಲ್ಲಿ ಪ್ರಮುಖ ಪಾತ್ರವಹಿಸುವುದು ವಲಸೆ ಹಕ್ಕಿಗಳು ಮತ್ತು ನೀರಿನಲ್ಲಿ ಹೆಚ್ಚಾಗಿ ಕಾಲ ಕಳೆಯುವ ಪಕ್ಷಿಗಳು. ಬಾತುಕೋಳಿ, ಕೊಕ್ಕರೆ ಜಾತಿಗೆ ಸೇರಿಗೆ ಪಕ್ಷಿಗಳು ಈ ಸೋಂಕನ್ನು ಹೆಚ್ಚಾಗಿ ಹರಡುತ್ತವೆ. ಹಕ್ಕಿಗಳ ಹಿಕ್ಕೆಯಿಂದಲೂ ಸೋಂಕು ಹರಡುತ್ತದೆ. ಸೋಂಕಿತ ಹಕ್ಕಿ ನೀರಿಗಿಳಿದರೆ, ಆ ನೀರಿನಲ್ಲಿರುವ ಅಥವಾ ಆ ನೀರನ್ನು ಸೇವಿಸುವ ಹಕ್ಕಿಗಳಿಗೂ ಸೋಂಕು ತಗಲುವ ಸಂಭವವಿರುತ್ತದೆ.

    ಒಂದೂ ಸಾವು ವರದಿಯಾಗಿಲ್ಲ: ಭಾರತದಲ್ಲಿ 2006ರಲ್ಲಿ ಮಹಾರಾಷ್ಟ್ರದ ನಂದಕೂರಿನಲ್ಲಿ ಹಕ್ಕಿ ಜ್ವರ ಮೊದಲ ಬಾರಿ ಕಾಣಿಸಿಕೊಂಡಿತು. ನಂತರ ಆಗಾಗ ಹಕ್ಕಿ ಜ್ವರ ದೇಶದ ವಿವಿಧ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈವರೆಗೆ ಮನುಷ್ಯರು ಸಾವನ್ನಪ್ಪಿರುವುದು ವರದಿಯಾಗಿಲ್ಲ.

    ಬಯಲುಸೀಮೆಗೆ ಹಕ್ಕಿಜ್ವರ?

    ಚಿಕ್ಕಬಳ್ಳಾಪುರ: ಅಣಕನೂರು ಸಮೀಪದ ಅಮಾನಿ ಗೋಪಾಲಕೃಷ್ಣ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಗುರುವಾರ ಅನುಮಾನಾಸ್ಪದವಾಗಿ ಎರಡು ವಲಸೆ ಪಕ್ಷಿಗಳು ಮೃತಪಟ್ಟಿವೆ. ಒಂದು ಪಕ್ಷಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಶುವೈದ್ಯರು, ಪಕ್ಷಿಗಳ ಕಳೇಬರ, ನಿತ್ರಾಣ ಸ್ಥಿತಿಯಲ್ಲಿದ್ದ ಪಕ್ಷಿಯ ಸ್ಯಾಂಪಲ್​ಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಕೆರೆಗೆ ದೇಶ ವಿದೇಶಗಳಿಂದ ನಾನಾ ಪ್ರಭೇದದ ಪಕ್ಷಿಗಳು ವಲಸೆ ಬಂದಿವೆ.

    ಕೇರಳಕ್ಕೆ ಕೇಂದ್ರದ ತಂಡ ಭೇಟಿ

    ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಅಲಪು್ಪಳ, ಕೊಟ್ಟಾಯಂ ಜಿಲ್ಲೆಗಳಿಗೆ ಕೇಂದ್ರದ ಮೂವರು ತಜ್ಞರ ತಂಡ ಗುರುವಾರ ಭೇಟಿ ನೀಡಿದೆ. ಆರೋಗ್ಯ ಸಚಿವಾಲಯದಲ್ಲಿ ಸಾರ್ವಜನಿಕ ಆರೋಗ್ಯದ ತಜ್ಞೆಯಾದ ಡಾ. ರುಚಿ ಜೈನ್, ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ವಿಜ್ಞಾನಿ ಡಾ. ಶೈಲೇಶ್ ಪವಾರ್ ಮತ್ತು ದೆಹಲಿಯ ಆರ್​ಎಂಎಲ್ ಆಸ್ಪತ್ರೆಯ ವೈದ್ಯ ಡಾ. ಅನಿತ್ ಜಿಂದಾಲ್, ಅಲಪು್ಪಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹಕ್ಕಿ ಜ್ವರದಿಂದ ಪೀಡಿತ ಪ್ರದೇಶಗಳನ್ನು ಪರಿಶೀಲಿಸಲಿಸಿದರು. ಹಕ್ಕಿ ಜ್ವರದ ಹಾಟ್​ಸ್ಪಾಟ್ ಆದ ಕರುವಾಟ್ಟಕ್ಕೂ ಈ ತಂಡ ಭೇಟಿ ನೀಡಿತ್ತು. ಹಕ್ಕಿ ಜ್ವರದ ಕಾರಣ ಕೇರಳದಲ್ಲಿ 69 ಸಾವಿರ ಪಕ್ಷಿಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶದಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ.

    ಗುಜರಾತ್​ನಲ್ಲೂ ಶಂಕೆ

    ಗುಜರಾತ್​ನ ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮದ ಪ್ರಸಿದ್ಧ ಸೂರ್ಯ ದೇಗುಲದ ಬಳಿ ಕಾಗೆಗಳು ಅನುಮಾನಾಸ್ಪದವಾಗಿ ಸಾವನ್ನಪು್ಪತ್ತಿದ್ದು, ಮೃತ ಹಕ್ಕಿಗಳ ಮಾದರಿಯನ್ನು ಪರೀಕ್ಷೆಗಾಗಿ ಭೋಪಾಲ್​ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಡಿಶಾದಲ್ಲೂ ಹಕ್ಕಿ ಜ್ವರದ ಶಂಕೆ ಇತ್ತು. ಆದರೆ, ಇದು ದೃಢಪಟ್ಟಿಲ್ಲ ಎಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಎಸ್.ಸಿ.ಮಹಾಪಾತ್ರ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ದಲ್ಲಿ 6 ಕಾಗೆಗಳು ಸಾವನ್ನಪ್ಪಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಹಕ್ಕಿಜ್ವರ ಬಾರದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ. ಜನರಿಗೂ ಸಹ ಆತಂಕ ಬೇಡ, ಎಚ್ಚರ ವಹಿಸಿದರೆ ಸಾಕು.

    | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

    ಸದ್ಯ ಕೇರಳದಲ್ಲಿ ಕಾಣಿಸಿಕೊಂಡಿರುವ ಎಚ್5ಎನ್8 ಸೋಂಕಿನಿಂದ ಮನುಷ್ಯರ ಮೇಲೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ. ಆದರೂ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಒಳಿತು. ಮಾಂಸವನ್ನು ಚೆನ್ನಾಗಿ ಬೇಯಿಸಿ ಸೇವಿಸಿದರೆ ರೋಗವು ಮನುಷ್ಯರಿಗೆ ಹರಡುವುದಿಲ್ಲ.

    | ಡಾ. ಕೆ.ವೆಂಕಟರೆಡ್ಡಿ ಬೀದರ್ ಪಶುಸಂಗೋಪನೆ ವಿವಿ ಆಡಳಿತ ಮಂಡಳಿ ಸದಸ್ಯ

    ‘ಅಮ್ಮ’ನ ಆಪ್ತೆಗೆ ಜ. 27ರಂದು ಬಿಡುಗಡೆ ಭಾಗ್ಯ?; ವಕೀಲರಿಂದ ಹೊರಬಿತ್ತು ಮಾಹಿತಿ..

    ಅಪ್ರಾಪ್ತೆಯ ಮೇಲೆ ರೇಪ್​ ಮಾಡಿ ವಿಡಿಯೋ ಮಾಡಿಕೊಂಡ ಕಾಮುಕ! ಮತ್ತೆ ಕರೆದಾಗ ಬರುವುದಿಲ್ಲ ಎಂದಿದ್ದಕ್ಕೆ ವಿಡಿಯೋ ವೈರಲ್​ ಮಾಡಿದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts