More

    ತಾರಿಹಾಳ ಅಗ್ನಿ ದುರಂತ ಪ್ರಕರಣ; ಫ್ಯಾಕ್ಟರಿ ವಿರುದ್ಧ ಕ್ರಿಮಿನಲ್​ ಮೊಕದ್ದಮೆ

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ಇಲ್ಲಿನ ಹೊರವಲಯದ ತಾರಿಹಾಳ ಕೈಗಾರಿಕೆ ವಸಾಹತು ಪ್ರದೇಶದಲ್ಲಿ ಜು.23ರಂದು ಅಗ್ನಿ ದುರಂತಕ್ಕೆ ಕಾರಣವಾದ ಐ.ಸಿ.ಫ್ಲೇಮ್​ ಸ್ಫಾರ್ಕಲ್​ ಫ್ಯಾಕ್ಟರಿಯವರು ಸ್ಫೋಟಕಗಳಿದ್ದರೂ ಕಿಟಕಿ, ಬಾಗಿಲು ಮುಚ್ಚಿ ಕದ್ದು ಮುಚ್ಚಿ ಸ್ಫಾರ್ಕಲ್​ ಕ್ಯಾಂಡಲ್​ ತಯಾರಿಸುತ್ತಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ. ಯಾವುದೇ ಪರವಾನಗಿ ಇಲ್ಲದೇ, ಸುರಕ್ಷತಾ ಕ್ರಮ ಇಲ್ಲದೇ ಕೆಲಸ ಆರಂಭಿಸಿದ್ದ ಫ್ಯಾಕ್ಟರಿ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಲು ಕಾರ್ಖಾನೆಗಳು ಮತ್ತು ಬಾಯ್ಲರ್​ ಇಲಾಖೆ ಮುಂದಾಗಿದೆ.
    ಕೇವಲ 15- 20 ದಿನಗಳ ಹಿಂದೆ ಅನಧಿಕೃತವಾಗಿ ಪ್ರಾರಂಭವಾಗಿದ್ದ ಐ.ಸಿ.ಫ್ಲೇಮ್​ ಸ್ಫಾರ್ಕಲ್​ ಫ್ಯಾಕ್ಟರಿಯಲ್ಲಿ 11 ಕಾಮಿರ್ಕರು ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಪಾಳಿಯಲ್ಲಿ 8, ರಾತ್ರಿ ಪಾಳಿಯಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಅಗ್ನಿ ದುರಂತ ನಡೆದ ಸ್ಥಳದಲ್ಲಿ ಅಪಾಯಕಾರಿ ಬ್ಯುಟೆನಾಲ್​ ರಾಸಾಯನಿಕ ಹೆಸರಿದ್ದ ಬ್ಯಾರೆಲ್​ ದೊರೆತಿದೆ. ಇದರ ಜತೆಗೆ ವ್ಯಾಕ್ಸ್​, ಐಟಿಎ ರಾಸಾಯನಿಕಗಳೂ ಇದ್ದವು ಎಂಬ ಶಂಕೆ ವ್ಯಕ್ತವಾಗಿದೆ.
    ಇಂತಹ ಅಪಾಯಕಾರಿ ರಾಸಾಯನಿಕಗಳನ್ನು ಯಾವುದೇ ಮುಂಜಾಗ್ರತಾ, ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿ ಇರಿಸಲಾಗಿತ್ತು. ಕೆಲಸಗಾರರಿಗೆ ಕೇವಲ ಕ್ಯಾಂಡಲ್​ ತಯಾರಿಸುವ ಕೆಲಸ ಎಂದು ಹೇಳಿಕೊಂಡು ಸ್ಫಾರ್ಕಲ್​ ಕ್ಯಾಂಡಲ್​ ತಯಾರಿಸುತ್ತಿದ್ದರು. ಇದೇ ಕಾರಣಕ್ಕೆ ಫ್ಯಾಕ್ಟರಿಯಲ್ಲಿದ್ದ ರಾಸಾಯನಿಕ ವಸ್ತುಗಳು ಸ್ಫೋಟಗೊಂಡಿವೆ. ಅವಡದಲ್ಲಿ ಮೂವರು ಕಾಮಿರ್ಕರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ.
    ಹತ್ತಕ್ಕಿಂತ ಹೆಚ್ಚು ಕಾಮಿರ್ಕರನ್ನು ಒಳಗೊಂಡಿದ್ದರೆ ಕೈಗಾರಿಕಾ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅಗತ್ಯ ಸುರಾ ಕ್ರಮಗಳನ್ನು ಮಾಡಿಕೊಳ್ಳಬೇಕು ಎಂಬ ನಿಯಮವಿದೆ. ಪ್ರಕರಣ ಕುರಿತು ಈಗಾಗಲೇ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಕಾರ್ಖಾನೆಗಳು ಮತ್ತು ಬಾಯ್ಲರ್​ ಇಲಾಖೆಯ ಕ್ಷೇತ್ರಾಧಿಕಾರಿಗಳು ಫ್ಯಾಕ್ಟರಿ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಲು ತಯಾರಿ ನಡೆಸಿದ್ದಾರೆ. ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.
    ಮೂವರು ಮಾಲೀಕರು
    ಅಬ್ದುಲ್​ ಶೇಖ್​ ಸೇರಿದಂತೆ ಮೂವರು ಐ.ಸಿ.ಫ್ಲೇಮ್​ ಫ್ಯಾಕ್ಟರಿಯ ಮಾಲೀಕರು. ಸ್ಥಳಿಯರಾದ ಆರೀಫ್ ಮತ್ತು ತಬಸುಮ್​ ಎಂಬುವರೂ ಶೇಖ್​ ಜತೆ ಪಾಲುದಾರಿಕೆ ಹೊಂದಿದ್ದರು. ಮುಂಬೈನಿಂದ ಅಬ್ದುಲ್​ ಕಚ್ಚಾವಸ್ತು ಕಳುಹಿಸುತ್ತಿದ್ದ. ಸ್ಥಳಿಯವಾಗಿ ಇವರಿಬ್ಬರು ನೋಡಿಕೊಳ್ಳುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.
    ಶಾರ್ಟ್​ ಸರ್ಕ್ಯೂಟ್​ ಅಲ್ಲ
    ತಾರಿಹಾಳ ಅಗ್ನಿ ದುರಂತ ನಡೆದದ್ದು ಶಾರ್ಟ್​ ಸರ್ಕ್ಯೂಟ್​ ಎಂದೇ ಭಾವಿಸಲಾಗಿತ್ತು. ಆದರೆ, ಇದು ಶಾರ್ಟ್​ ಸರ್ಕ್ಯೂಟ್​ನಿಂದ ಆದದ್ದಲ್ಲ. ಸ್ಫಾರ್ಕಲ್​ ತಯಾರಿಸುವಾಗ ಡೆ ಪೇಪರ್​ಗಳನ್ನು 40 ಡಿಗ್ರಿ ಉಷ್ಣಾಂಶದಲ್ಲಿ ಹೀಟ್​ ಮಾಡಲಾಗುತ್ತಿತ್ತು. ಈ ವೇಳೆ ಕೆಲ ನಿಮಿಷ ನಿರ್ಲಕ್ಷ್ಯ ವಹಿಸಿದ್ದರಿಂದ ಅದರಿಂದ ಬೆಂಕಿ ಉತ್ಪತ್ತಿಯಾಗಿ ಕಿಡಿ ಹೊತ್ತಿದೆ. ಪ್ಯಾಕ್ಟರಿಯಲ್ಲಿ ಸ್ಫೋಟಕಗಳು ಇದ್ದಿದ್ದರಿಂದ ವೇಗವಾಗಿ ಬೆಂಕಿ ಹಬ್ಬಿದೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts