More

    ಇಸ್ಪೀಟ್ ಆಡುತ್ತಿದ್ದ ಪೊಲೀಸ್ ಅಧಿಕಾರಿ- ಸಿಬ್ಬಂದಿ ಬಂಧನ !

    ಹುಬ್ಬಳ್ಳಿ: ಇಲ್ಲಿನ ಅಕ್ಷಯ ಕಾಲನಿಯ ಮನೆಯೊಂದರಲ್ಲಿ ಕುಳಿತು ಎಕ್ಕ-ರಾಜ-ರಾಣಿ ಎಲೆ ತಟ್ಟುತ್ತಿದ್ದ ಪೊಲೀಸ್​ ಅಧಿಕಾರಿ- ಸಿಬ್ಬಂದಿ ತಂಡದ ಮೇಲೆ ಪೊಲೀಸರೇ ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ ಅಪರೂಪದ ಪ್ರಕರಣ.
    ಹೌದು, ಇದು ಬೇಲಿಯೇ ಎದ್ದು ಹೊಲ ಮೇಯ್ದಂಥ ಪ್ರಕರಣ. ಜೂಜುಕೋರರ ವಿರುದ್ಧ ಸಮರ ಸಾರಬೇಕಿದ್ದ ಶಿಸ್ತಿನ ಇಲಾಖೆಯ ಸಿಪಾಯಿಗಳೇ ಇಲ್ಲಿ ಶಿಸ್ತು ಮರೆತು ಇಸ್ಪೀಟ್​ ಜೂಜಾಡುತ್ತಿದ್ದರು. ಗುಂಪು ಸೇರಿ ಅಂದರ್​- ಬಾಹರ್​ ಆಟದಲ್ಲಿ ಮೈಮರೆತಿದ್ದರು.
    ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್​)ಯ ಓರ್ವ ಇನ್​ಸ್ಪೆಕ್ಟರ್​, ಇಬ್ಬರು ಹೆಡ್​ ಕಾನ್ಸ್​ಟೆಬಲ್​ಗಳು, ಓರ್ವ ಕಾನ್​ಸ್ಟೆಬಲ್​, ಒಬ್ಬ ನಿವೃತ್ತ ಹೆಡ್​ ಕಾನ್​ಸ್ಟೆಬಲ್​ಗಳಿದ್ದ ಐವರ ತಂಡ ಅಕ್ಷಯ ಕಾಲನಿ ಎರಡನೇ ಹಂತದ ಮನೆ ಸಂಖ್ಯೆ 337ರಲ್ಲಿ ಶುಕ್ರವಾರ ರಾತ್ರಿ ಇಸ್ಪೀಟ್​ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಪೊಲೀಸ್​ ಆಯುಕ್ತ ಲಾಭೂರಾಮ ಅವರ ಸೂಚನೆ ಹಿನ್ನೆಲೆಯಲ್ಲಿ ಗೋಕುಲ ರೋಡ್​ ಠಾಣೆ ಇನ್​ಸ್ಪೆಕ್ಟರ್​ ಜೆ.ಎಂ.ಕಾಲಿಮಿಚಿರ್ ನೇತೃತ್ವದ ತಂಡ ದಾಳಿ ನಡೆಸಿತ್ತು.
    ದಾಳಿಯಲ್ಲಿ ಸಿಎಆರ್​ನ ಇಬ್ಬರು ಹೆಡ್​ ಕಾನ್​ಸ್ಟೆಬಲ್​, ಒಬ್ಬ ನಿವೃತ್ತ ಹೆಡ್​ ಕಾನ್​ಸ್ಟೆಬಲ್​ ಹಾಗೂ ಸಂಚಾರ ವಿಭಾಗದ ಒಬ್ಬ ಕಾನ್​ಸ್ಟೆಬಲ್​ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಗೋಕುಲ ರೋಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಧಾರವಾಡದಲ್ಲೂ ನಡೆದಿತ್ತು
    ಕಳೆದ ಎರಡು, ಮೂರು ವರ್ಷಗಳ ಹಿಂದೆ ಧಾರವಾಡದಲ್ಲೂ ಇಸ್ಪೀಟ್​ ಆಡುತ್ತಿದ್ದ ಪೊಲೀಸ್​ ತಂಡದ ಮೇಲೆ ಪೊಲೀಸ್​ ದಾಳಿ ನಡೆದಿತ್ತು. ಆ ವೇಳೆ ಹಲವು ಅಧಿಕಾರಿ, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
    ಈಗ ಬಂಧಿಸಲ್ಪಟ್ಟ ತಂಡದವರು ನಿತ್ಯ ಆ ಮನೆಯಲ್ಲಿ ಸೇರುತ್ತಿದ್ದರು. ಯಾವುದೇ ಅಂಜಿಕೆ ಅಳುಕಿಲ್ಲದೇ ಜೂಜಾಡುತ್ತಿದ್ದರು. ಈ ಹಿಂದೆಯೂ ಒಂದು ಬಾರಿ ಪೊಲೀಸರ ಕೈಗೆ ಸಿಕ್ಕಿದ್ದರು. ಆದರೆ, ಯಾವುದೋ ಕಾರಣದಿಂದ ತಪ್ಪಿಸಿಕೊಂಡಿದ್ದರು. ಆದರೆ, ಈ ಬಾರಿ ಹಾಗೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.

    ಆರ್​ಪಿಐ ಪರಾರಿ
    ಜೂಜಾಡುತ್ತಿದ್ದ ತಂಡದಲ್ಲಿ ಇದ್ದ ಒಬ್ಬ ಸಿಎಆರ್​ ರಿಸರ್ವ್​ ಪೊಲೀಸ್​ ಇನ್​ಸ್ಪೆಕ್ಟರ್​ (ಸಿಎಆರ್​) ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜೂಜಾಟದಲ್ಲಿ ಭಾಗಿಯಾಗಿದ್ದವರು ಯಾರೇ ಇರಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕಾನೂನು ಎಲ್ಲರಿಗೂ ಒಂದೇ ಅದರಲ್ಲಿ ಎರಡು ಮಾತಿಲ್ಲ.

    > ಲಾಭೂರಾಮ, ಪೊಲೀಸ್​ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts