More

    ಕಿಮ್ಸ್​ನಲ್ಲಿ ಕಿದ್ವಾಯಿ, ಜಯದೇವ ಶಾಖೆ

    ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್​ನಲ್ಲಿ ಕಿದ್ವಾಯಿ, ನಿಮ್ಹಾನ್ಸ್ ಹಾಗೂ ಜಯದೇವ ಆಸ್ಪತ್ರೆ ಶಾಖೆಗಳ ಜತೆಗೆ ಮೂತ್ರಪಿಂಡ ಚಿಕಿತ್ಸೆ ಆಸ್ಪತ್ರೆಯನ್ನೂ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಹೇಳಿದರು.

    ನಗರದ ಕಿಮ್ಸ್​ನಲ್ಲಿ ಶನಿವಾರ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಾಣಿಜ್ಯ ನಗರ ಹುಬ್ಬಳ್ಳಿಯನ್ನು ಆರೋಗ್ಯ ನಗರವನ್ನಾಗಿ ರೂಪಿಸಲಾಗುವುದು ಎಂದರು.

    ಕೋವಿಡ್ ಸಂದರ್ಭದಲ್ಲಿ ಕಿಮ್್ಸ ವೈದ್ಯರು ಮಾಡಿದ ಕಾರ್ಯವನ್ನು ಶ್ಲಾಘಿಸಿದ ಸಚಿವರು, ಇದೇ ಸಮಯದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ತೋರಿದ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

    ಆರೋಗ್ಯ ಇಲಾಖೆಯಡಿ ಸಮಗ್ರ ನೀತಿ ತರುವ ಯೋಜನೆಯನ್ನು ಸರ್ಕಾರ ರೂಪಿಸುತ್ತಿದೆ. ಇದಕ್ಕಾಗಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವೆಲ್​ನೆಸ್ ಸೆಂಟರ್ ಮಾದರಿಯಲ್ಲಿ ರೂಪಿಸಲಾಗುವುದು ಎಂದು ಹೇಳಿದರು.

    ಆಸ್ಪತ್ರೆಗಳಿಗೆ ಬರುವ ರೋಗಿಗಳೊಂದಿಗೆ ವೈದ್ಯರು ನಗುಮುಖದೊಂದಿಗೆ ವರ್ತಿಸಬೇಕು. ಚಿಕಿತ್ಸೆಯ ಜತೆಗೆ ಉತ್ತಮ ಆಡಳಿತ ಅನುಭವವೂ ವೈದ್ಯರಿಗೆ ಇರಬೇಕು. ವೈದ್ಯರಿಗೆ ಹಾಗೂ ವೈದ್ಯಕೀಯೇತರ ಸಿಬ್ಬಂದಿಗೆ ಕೌಶಲ ತರಬೇತಿ ನೀಡಲಾಗುವುದು. ಆ ಮೂಲಕ ಸರ್ಕಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳಂತೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು. ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದು ತಿಳಿಸಿದರು.

    ಮುಂದಿನ 1 ವರ್ಷದಲ್ಲಿ ರಾಜ್ಯ ಸರ್ಕಾರ 2,500 ವೈದ್ಯರನ್ನು ನೇರ ನೇಮಕಾತಿ ಮಾಡಿಕೊಳ್ಳಲಿದೆ. ಈ ಸಂದರ್ಭದಲ್ಲಿ ಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸೇವೆಯನ್ನೂ ಕಾಯಂಗೊಳಿಸಲಾಗುವುದು ಎಂದು ಹೇಳಿದರು.

    ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಕೇಂದ್ರ ಸರ್ಕಾರ 2019ರಲ್ಲಿ 36 ಯುಎಸ್ ಬಿಲಿಯನ್ ಡಾಲರ್ ಅನ್ನು ಆರೋಗ್ಯಕ್ಕಾಗಿ ಖರ್ಚು ಮಾಡಿದೆ. ದೇಶದಲ್ಲಿ 3,600ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ಸ್ಥಾಪಿಸಿದ್ದು, ಬರುವ ವರ್ಷದಲ್ಲಿ 5 ಸಾವಿರಕ್ಕೂ ಹೆಚ್ಚು ಕೇಂದ್ರ ಸ್ಥಾಪಿಸಲಾಗುವುದು ಎಂದರು.

    ಆಯುಷ್ಮಾನ್ ಭಾರತ ಯೋಜನೆಯಡಿ ಧಾರವಾಡ ಜಿಲ್ಲೆಯ 4.14 ಲಕ್ಷ ಜನರು ಹೆಸರು ನೋಂದಾಯಿಸಿದ್ದು, 37 ಸಾವಿರ ಜನರು ಈ ಯೋಜನೆಯಡಿ ಚಿಕಿತ್ಸೆ ಪಡೆದಿದ್ದಾರೆ. ಇದಕ್ಕಾಗಿ ಸುಮಾರು 82 ಕೋಟಿ ರೂ.ಗಳನ್ನು ಸರ್ಕಾರ ವೆಚ್ಚ ಮಾಡಿದೆ ಎಂದು ಹೇಳಿದರು.

    ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ವೈದ್ಯರು ಮಾನವೀಯತೆ ಅಳವಡಿಸಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಲಕ್ಷಾಂತರ ರೂ. ಲೂಟಿ ಮಾಡಿದವು ಎಂದು ಕಳವಳ ವ್ಯಕ್ತಪಡಿಸಿದರು.

    ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಎಸ್.ವಿ. ಸಂಕನೂರ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ವಾಯವ್ಯ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts