More

    ಕೋಟಿ ಕೋಟಿ ದಂಡ ಆಕರಣೆ

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
    ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಜಾಗೃತ ದಳದ ಅಧಿಕಾರಿಗಳು ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ಎಂಟು ಘಟಕಗಳಲ್ಲಿ 2023ರ ಜನವರಿಯಿಂದ ಅಕ್ಟೋಬರ್‌ವರೆಗೆ ಅಕ್ರಮವಾಗಿ ವಿದ್ಯುತ್ ಬಳಕೆ ಮಾಡಿದವರಿಂದ ಒಟ್ಟು 8.91 ಕೋಟಿ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
    ಹೆಸ್ಕಾಂ ವ್ಯಾಪ್ತಿಯಲ್ಲಿ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಸೇರಿ ಒಟ್ಟು 8 ಘಟಕಗಳಲ್ಲಿ ಒಟ್ಟು 34,080 ದಾಳಿ ನಡೆಸಿದ್ದು, ಅನಧಿಕೃತ ವಿದ್ಯುತ್ ಬಳಕೆ ಮಾಡಿದವರ ವಿರುದ್ಧ ಒಟ್ಟು 6,091 ಪ್ರಕರಣ ದಾಖಲಿಸಿದ್ದಾರೆ.
    ಎಂಟು ಪೊಲೀಸ್ ಠಾಣೆ: ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಯ 8 ಘಟಕಗಳಲ್ಲಿ ಜಾಗೃತ ದಳದ ಪೊಲೀಸ್ ಠಾಣೆಗಳಿವೆ. ಒಬ್ಬರು ಎಸ್‌ಪಿ, ಒಬ್ಬರು ಡಿಎಸ್‌ಪಿ, 8 ಜನ ಪೊಲೀಸ್ ಇನ್‌ಸ್ಪೆಕ್ಟರ್, ಎಂಟು ಜನ ಎಇಇ, ಎಂಟು ಜನ ಎಇ, ಒಬ್ಬ ಇಇ ಇದ್ದಾರೆ. ಗ್ರಾಹಕರು ವಿದ್ಯುತ್ ಸಂಪರ್ಕವನ್ನು ಯಾವ ಉದ್ದೇಶಗಳಿಗಾಗಿ ಪಡೆದಿರುತ್ತಾರೆಯೋ ಅದೇ ಉದ್ದೇಶಕ್ಕೆ ಬಳಸಬೇಕು. ಮನೆ ಬಳಕೆಗೆ ಪಡೆದ ವಿದ್ಯುತ್ ಸಂಪರ್ಕವನ್ನು ಬೋರ್‌ವೆಲ್, ಗಿರಣಿಗಳಿಗೆ ಬಳಸಿ ದುರುಪಯೋಗ ಮಾಡಬಾರದು ಎನ್ನುತ್ತಾರೆ ಜಾಗೃತದಳದ ಅಧಿಕಾರಿಗಳು.

    ತಪ್ಪಿತಸ್ಥರ ವಿರುದ್ಧ ಕ್ರಮ
    ಹೆಸ್ಕಾಂನಿಂದ ಎಷ್ಟು ಪ್ರಮಾಣದ ವಿದ್ಯುತ್ ಸರಬರಾಜು ಆಗಿರುತ್ತದೆಯೋ ಅಷ್ಟಕ್ಕೇ ಬಿಲ್ ಆಗಬೇಕು ಮತ್ತು ಗ್ರಾಹಕರಿಂದ ಹಣ ಪಾವತಿಯಾಬೇಕು. ಅದರಲ್ಲಿ ವ್ಯತ್ಯಾಸ ಕಂಡು ಬಂದರೆ ಅಥವಾ ವಿದ್ಯುತ್ ಸೋರಿಕೆ ಆಗುತ್ತಿದ್ದರೆ ಅದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದೇ ಹೆಸ್ಕಾಂ ಜಾಗೃತ ದಳದ ಕೆಲಸ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

    ಗ್ರಾಹಕರು ಅಧಿಕೃತವಾಗಿ ಹೆಸ್ಕಾಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ವಿದ್ಯುತ್ ಸಂಪರ್ಕ ಪಡೆಯಬೇಕು. ಅನಧಿಕೃತವಾಗಿ ಸಂಪರ್ಕ ಪಡೆದು ವಿದ್ಯುತ್ ಕಳ್ಳತನ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಯಾರೂ ವಿದ್ಯುತ್ ಕಳ್ಳತನ ಮಾಡಲು ಮುಂದಾಗಬಾರದು. ಹಾಗೆನಾದರೂ ಕಂಡು ಬಂದರೆ ಅಂಥವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇವೆ.
    ಮಹಮ್ಮದ ರೋಶನ್, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

    ಕೆಲವು ಬಾರಿ ಹೆಸ್ಕಾಂನ ಒ ಆ್ಯಂಡ್ ಎಂ ವಿಭಾಗದ ಸಿಬ್ಬಂದಿ ನೀಡುವ ಮಾಹಿತಿ, ಸಾರ್ವಜನಿಕರಿಂದ ಬಂದ ದೂರಿನನ್ವಯ ಮತ್ತು ಜಾಗೃತ ದಳದ ಅಧಿಕಾರಿಗಳು ವಿವಿಧೆಡೆ ನಿತ್ಯ ದಾಳಿ ನಡೆಸಿ ವಿದ್ಯುತ್ ಕಳ್ಳತನ, ದುರುಪಯೋಗ ಪತ್ತೆ ಮಾಡುತ್ತಾರೆ. ಕಳೆದ 2 ವರ್ಷಗಳಿಂದ ಹೆಸ್ಕಾಂ ಜಾಗೃತದಳ ಶೇ. 100ರಷ್ಟು ಗುರಿ ಸಾಧಿಸಿದೆ.
    ಎಲ್.ವೈ. ಶಿರಕೋಳ, ಪೊಲೀಸ್ ಅಧೀಕ್ಷಕರು ಹೆಸ್ಕಾಂ ಜಾಗೃತದಳ ಹುಬ್ಬಳ್ಳಿ

    2023ರ ಜನವರಿಯಿಂದ ಅಕ್ಟೋಬರ್‌ವರೆಗೆ ದಾಖಲಾದ ಪ್ರಕರಣ ಮತ್ತು ದಂಡ
    ಜಿಲ್ಲೆ — ಪ್ರಕರಣ — ದಂಡ — ದಾಳಿ
    2023ರ ಜನವರಿಯಿಂದ ಅಕ್ಟೋಬರ್‌ವರೆಗೆ ದಾಖಲಾದ ಪ್ರಕರಣ ಮತ್ತು ದಂಡ
    ಜಿಲ್ಲೆ — ಪ್ರಕರಣ — ದಂಡ — ದಾಳಿ
    ಧಾರವಾಡ — 822 — 96,10,100 — 4,575
    ಹಾವೇರಿ — 452 — 79,90,370 — 1,545
    ಗದಗ — 651 — 57,98,776 — 4,572
    ಉತ್ತರ ಕನ್ನಡ — 311 — 49,19,600 — 1,113
    ಬೆಳಗಾವಿ — 1,263 — 1,63,40,862 — 6,384
    ಚಿಕ್ಕೋಡಿ — 1,003 — 1,46,27,379 — 5,920
    ವಿಜಯಪುರ — 747 — 1,50,08,701 — 5,920

    ಬಾಗಲಕೋಟೆ — 842 — 1,48,54,046 — 4,051

    =================================

    ಒಟ್ಟು —- 6,091 —- 8,91,49,834 – — 34,080

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts