More

    ಮೆಕಾನಿಕಲ್ ಬದಲು ಡಿಜಿಟಲ್ ಮೀಟರ್

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
    ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯ ಐದು ನಗರ, ಪಟ್ಟಣಗಳ ಮನೆ ಮತ್ತು ಉದ್ದಿಮೆಗಳಲ್ಲಿನ ಹಳೆಯ ಮೆಕಾನಿಕಲ್ ಮೀಟರ್‌ಗಳನ್ನು ಬದಲಿಸಿ ಹೊಸ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸುವ ಪ್ರಕ್ರಿಯೆ ಆರಂಭವಾಗಿದೆ.
    ಮೊದಲ ಹಂತದಲ್ಲಿ ಅಂದಾಜು 48.19 ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ ಮತ್ತು ವಿಜಯಪುರ ನಗರಗಳಲ್ಲಿ 3,17,847 ಮೀಟರ್‌ಗಳ ಬದಲಾವಣೆ ಕಾರ್ಯ ಕೈಗೊಳ್ಳಲಾಗಿದೆ.
    ಏಕೆ ಬದಲಾವಣೆ?:
    ಅಸ್ತಿತ್ವದಲ್ಲಿರುವ ಎಲೆಕ್ಟ್ರೋ ಮೆಕಾನಿಕಲ್ ಮೀಟರ್‌ಗಳು 15 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿರುವುದರಿಂದ ಅವುಗಳನ್ನು ತೆಗೆದು ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದೆ. ಇದರಿಂದ ಹೆಸ್ಕಾಂಗೆ ನಿಖರವಾದ ಬೇಡಿಕೆ ಮತ್ತು ಪೂರೈಕೆ ಮಾಹಿತಿ ಲಭ್ಯವಾಗಲಿದೆ.
    ಹಳೇ ಮತ್ತು ಹೊಸ ಮೀಟರ್ ವ್ಯತ್ಯಾಸವೇನು?:
    ಹಳೇ ಮೀಟರ್‌ಗಳು ಕಡಿಮೆ ಲೋಡ್‌ಗಳಲ್ಲಿ ಮತ್ತು ಕಡಿಮೆ ವೋಲ್ವೇಜ್‌ಗಳಲ್ಲಿ ನಿಖರತೆಯನ್ನು ಕಳೆದುಕೊಳ್ಳುತ್ತವೆ. ಅಲ್ಲದೆ, ಹಳೇ ಮೀಟರ್‌ಗಳು ಟ್ಯಾಂಪರಿಂಗ್ ಡೇಟಾವನ್ನು ರೆಕಾರ್ಡ್ ಮಾಡಿಕೊಳ್ಳಲು ಯಾವುದೇ ಸಂಗ್ರಹ ಸಾಮರ್ಥ್ಯ ಹೊಂದಿಲ್ಲ. ಇದರಿಂದ ಹೆಸ್ಕಾಂ ತನ್ನ ಸಂಭವನೀಯ ಆದಾಯ ಕಳೆದುಕೊಳ್ಳುತ್ತಿದೆ.
    ಹೊಸ ಮೀಟರ್‌ಗಳು ಕಡಿಮೆ ಲೋಡ್ ಮತ್ತು ಕಡಿಮೆ ವೋಲ್ವೇಜ್‌ಗಳಲ್ಲಿ ನಿಖರವಾಗಿ ಕಾರ್ಯನಿರ್ವಹಿಸುವ ಶಕ್ತಿ ಹೊಂದಿವೆ. ಡಿಜಿಟಲ್ ಮೀಟರ್‌ಗಳಲ್ಲಿ ಟ್ಯಾಂಪರಿಂಗ್ ಡೇಟಾವನ್ನು ರೆಕಾರ್ಡ್ ಮಾಡಿಕೊಳ್ಳುವ ಸೌಲಭ್ಯವಿದೆ. ಈ ಉದ್ದೇಶದಿಂದ ಹೆಚ್ಚಿನ ಆದಾಯದ ಬೇಡಿಕೆಯಿರುವ ನಗರ ಪ್ರದೇಶಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಹಳೇ ಮೀಟರ್‌ಗಳನ್ನು ಬದಲಿಸಿ, ಹೊಸ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗುವುದು ಎನ್ನುತ್ತಾರೆ ಹೆಸ್ಕಾಂ ಹಿರಿಯ ಅಕಾರಿಗಳು.
    ಬೆಂಗಳೂರು ಮೂಲದ ಖಾಸಗಿ ಕಂಪನಿಗೆ ಹೊಸ ಡಿಜಿಟಲ್ ಮೀಟರ್ ಅಳವಡಿಸುವ ಕಾಮಗಾರಿಯ ಗುತ್ತಿಗೆ ನೀಡಲಾಗಿದೆ. ಸದ್ಯ ಹುಬ್ಬಳ್ಳಿ-ಧಾರವಾಡದಲ್ಲಿ ನಿತ್ಯ 800 ಮೀಟರ್‌ಗಳನ್ನು ಅಳವಡಿಸಲಾಗುತ್ತಿದೆ ಎಂದು ಹೆಸ್ಕಾಂ ತಿಳಿಸಿವೆ.

    ಮೀಟರ್ ಅಳವಡಿಕೆ ಉಚಿತ
    ಹೊಸ ಡಿಜಿಟಲ್ ಮೀಟರ್‌ಗಳನ್ನು ಹೆಸ್ಕಾಂ ವತಿಯಿಂದ ಅಳವಡಿಸಲಾಗುತ್ತಿದೆ. ಇದು ಉಚಿತವಾಗಿದ್ದು, ಗ್ರಾಹಕರು ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ.

    ಹೆಸ್ಕಾಂ ವ್ಯಾಪ್ತಿಯ 4 ಜಿಲ್ಲೆಗಳ ಐದು ನಗರಗಳಲ್ಲಿ ಮೊದಲ ಹಂತದಲ್ಲಿ ಎಲೆಕ್ಟ್ರೋ ಮೆಕಾನಿಕಲ್ ಮೀಟರ್‌ಗಳನ್ನು ತೆಗೆದು ಡಿಜಿಟಲ್ ಮೀಟರ್ ಅಳವಡಿಸಲಾಗುತ್ತಿದೆ. ಹೊಸ ಮೀಟರ್‌ಗಳು ಆಧುನಿಕ ತಂತ್ರಜ್ಞಾನ ಒಳಗೊಂಡಿದ್ದು, ಹೆಚ್ಚಿನ ಕಾರ್ಯಕ್ಷಮತೆ ಹೊಂದಿವೆ. ಇದರಿಂದ ಹೆಸ್ಕಾಂ ಮತ್ತು ಗ್ರಾಹಕರು ಇಬ್ಬರಿಗೂ ಉಪಯುಕ್ತವಾಗಲಿದೆ.
    ಮಹಮ್ಮದ ರೋಶನ್
    ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹುಬ್ಬಳ್ಳಿ

    ಹೊಸ ಮೀಟರ್ ಅಳವಡಿಕೆ ವಿವರ
    ಹುಬ್ಬಳ್ಳಿ ನಗರ 1,27,719
    ಧಾರವಾಡ ನಗರ 18,676
    ಗದಗ 18,110
    ಬೆಳಗಾವಿ ನಗರ 1,02,284
    ವಿಜಯಪುರ 51,058
    ಒಟ್ಟು 3,17,847

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts