More

    ಗಂಗೂಬಾಯಿ ಗುರುಕುಲದಲ್ಲಿ ಸ್ವರ ಲೋಪ

    ಪ್ರಕಾಶ ಎಸ್. ಶೇಟ್ ಹುಬ್ಬಳ್ಳಿ
    ಗುರು-ಶಿಷ್ಯ ಪರಂಪರೆಯಲ್ಲಿ ಹಿಂದುಸ್ತಾನಿ ಸಂಗೀತವನ್ನು ಕಲಿಸುವ ದೇಶದ ಏಕೈಕ ಎಂದೆನಿಸಿಕೊಂಡಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಆಲಾಪ ಕೇಳಿಸದಾಗಿದೆ. ಗೌರವ ಧನ ನೀಡಲು ಸರ್ಕಾರ ಸತಾಯಿಸುತ್ತಿರುವುದರಿಂದ ಗುರುಕುಲ ವೃಂದವು ಪಾಠ ನಿಲ್ಲಿಸಿದೆ.
    ಕಳೆದ ಜೂನ್‌ನಿಂದ ಗೌರವಧನ ನೀಡದಿರುವ ಪರಿಣಾಮ ಐವರು ಗುರುಗಳು, ನಾಲ್ವರು ತಬಲಾ ಸಾಥಿದಾರರು ಪಾಠ ಮಾಡುವುದನ್ನು ಡಿ. 1ರಿಂದ ನಿಲ್ಲಿಸಿದ್ದಾರೆ. ಹೀಗಾಗಿ, ಸಂಗೀತ ಶಿಕ್ಷಣ ಪಡೆಯಲು ದೇಶದ ನಾನಾ ಭಾಗಗಳಿಂದ ಬಂದಿರುವ 30 ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಿದ್ದಾರೆ.
    ಹೆಸರಾಂತ ಹಿಂದುಸ್ತಾನಿ ಸಂಗೀತಗಾರರಾದ ಪಂಡಿತ್ ಗಣಪತಿ ಭಟ್ ಹಾಸಣಗಿ, ಪಂಡಿತ್ ಕೈವಲ್ಯಕುಮಾರ ಗುರವ್, ಉಸ್ತಾದ್ ಫಯಾಜ್‌ಖಾನ್, ವಿದುಷಿ ವಿಜಯಾ ಜಾಧವ ಘಾಟ್ಲೆವಾರ್, ಅಕ್ಕಮಹಾದೇವಿ ಮಠ ಅಂಥವರನ್ನೇ ಸರ್ಕಾರ ಗೌರವಧನ ನೀಡದೆ ಸತಾಯಿಸುತ್ತಿರುವುದು ಸಂಗೀತ ಪ್ರಿಯರನ್ನು ಕೆರಳಿಸಿದೆ. ಸಂಗೀತಾಭ್ಯಾಸ ಮಾಡಲು ಬಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಮಂಕು ಕವಿದಿದೆ.
    ಡಾ. ಗಂಗೂಬಾಯಿ ಹಾನಗಲ್ ಗುರುಕುಲವು ರಾಷ್ಟ್ರಕ್ಕೆ ಒಂದು ಮಾದರಿ ಸಂಸ್ಥೆಯಾಗಿ 2007ರಲ್ಲಿ ಲೋಕಾರ್ಪಣೆಗೊಂಡಿತ್ತು. ಪಾಠ ಹೇಳಿಕೊಡುವ ಗುರುಗಳಿಗೆ, ವಿದ್ಯಾರ್ಥಿಗಳಿಗೆ ವಸತಿ ಗೃಹಗಳನ್ನು ಕಲ್ಪಿಸಲಾಗಿದ್ದು ಊಟೋಪಚಾರದ ವ್ಯವಸ್ಥೆಯೂ ಇಲ್ಲಿದೆ. ಆಡಳಿತಾಧಿಕಾರಿ ಸೇರಿ ನಾಲ್ವರು ಸರ್ಕಾರಿ ಸಿಬ್ಬಂದಿ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ 13 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.
    ಸರ್ಕಾರ ಎರಡು ಕಂತುಗಳ ರೂಪದಲ್ಲಿ ಕೇವಲ 30.96 ಲಕ್ಷ ರೂ. ಬಿಡುಗಡೆ ಮಾಡಿದೆ. ಆದರೆ, ವಾರ್ಷಿಕ ವೇತನ, ಸಂಗೀತ ಗುರುಗಳಿಗೆ, ತಬಲಾ ಸಾಥಿದಾರರಿಗೆ ಗೌರವ ಧನ, ಹೊರಗುತ್ತಿಗೆ ನೌಕರರಿಗೆ ವಾರ್ಷಿಕ ವೇತನ, ಊಟೋಪಚಾರ, ಆಡಳಿತ ನಿರ್ವಹಣೆ ಗಾಗಿ 1.44 ಕೋಟಿ ರೂ. ಬೇಕಾಗುತ್ತದೆ. ಸರ್ಕಾರ ನೀಡಿದ ಬಿಡಿಗಾಸಿನಿಂದಾಗಿ ಗುರುಕುಲದಲ್ಲಿನ ಕಾರ್ಯಚಟುವಟಿಕೆಗಳು ಸ್ಥಗಿತಗೊಂಡಂತಾಗಿದೆ.
    ಅವಶ್ಯವಿರುವ ಅನುದಾನ ಬಿಡುಗಡೆ ಮಾಡುವಂತೆ ಧಾರವಾಡ ಜಿಲ್ಲಾಧಿಕಾರಿಗಳು ಸಾಕಷ್ಟು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಅನುದಾನ ಬಿಡುಗಡೆ ಆಗಿಲ್ಲ. ತುರ್ತಾಗಿ ಒಂದು ಕೋಟಿ ರೂ. ಅನುದಾನ ನೀಡುವಂತೆ ಕೆಲದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೂ ಸ್ಪಂದನ ವ್ಯಕ್ತವಾಗಿಲ್ಲ. ಹೀಗಾಗಿ, ಗುರುಕುಲವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗದಾಗಿದೆ. ಇದರೊಟ್ಟಿಗೆ ಭಾರತದ ಭವ್ಯ ಪರಂಪರೆಯನ್ನು ಸಾರುವ ಹಿಂದುಸ್ತಾನಿ ಸಂಗೀತ ಕಾರ್ಯಾಗಾರ, ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತಾಭ್ಯಾಸದ ಚಟುವಟಿಕೆಗಳು ನಿಂತುಹೋಗಿವೆ.

    ದೇಶದ ಹೆಮ್ಮೆ ಡಾ. ಗಂಗೂಬಾಯಿ ಹಾನಗಲ್ ಗುರುಕುಲವನ್ನು ಸರ್ಕಾರ ಬಂದ್ ಮಾಡಲು ಹೊರಟಂತಿದೆ. 1 ಕೋಟಿ ರೂ. ಅನುದಾನ ನೀಡಲೂ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡು. ಇದು ಸಂಗೀತ ಕ್ಷೇತ್ರಕ್ಕೆ ಮಾಡಿದ ಅವಮಾನ. ಸರ್ಕಾರದ ಧೋರಣೆಯ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೆ ಮಾಡಿ ಖಂಡಿಸುವೆ.
    ಮಹೇಶ ಟೆಂಗಿನಕಾಯಿ
    ಹು-ಧಾ ಸೆಂಟ್ರಲ್ ಶಾಸಕ

    ಒಂದು ಪರಂಪರೆಯನ್ನು ಸಂರಕ್ಷಿಸುವ ಅಪರೂಪದ ಗುರುಕುಲ ಇದು. ಸಂಗೀತದ ಮೇಲಿನ ನಮ್ಮ ಪ್ರೀತಿ, ಬದ್ಧತೆಯಿಂದ ಕಳೆದ ಆರು ತಿಂಗಳಿಂದ ವೇತನದ ಬಗ್ಗೆ ಯೋಚನೆ ಮಾಡದೆ ಪಾಠ ಮಾಡಿದ್ದೇವೆ. ಈಗಲೂ ನಮಗೆ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲು ಮನಸಿಲ್ಲ. ಆದರೆ, ಬೇರೆ ದಾರಿ ಇಲ್ಲದೆ ನಾದೋಪಾಸನೆಯನ್ನು ಸ್ಥಗಿತಗೊಳಿಸಿದ್ದೇವೆ. ವೇತನ ಪಾವತಿಯಾದ ಮೇಲೆ ವಾಪಸ್ ಬರುವುದಾಗಿ ತಿಳಿಸಿದ್ದೇವೆ.
    ಪಂ. ಗಣಪತಿ ಭಟ್ ಹಾಸಣಗಿ ಸಂಗೀತ ಗುರುಗಳು

    ಪ್ರಮುಖಾಂಶ
    ವೇತನ, ಊಟೋಪಚಾರ, ನಿರ್ವಹಣೆಗೆ ವಾರ್ಷಿಕವಾಗಿ ಸರಾಸರಿ ಬೇಕಾಗುವ ಅನುದಾನ 1.44 ಕೋಟಿ ರೂಪಾಯಿ.
    ಎರಡು ಹಂತದಲ್ಲಿ ಬಿಡುಗಡೆಯಾದ ಅನುದಾನ 30.96 ಲಕ್ಷ ರೂಪಾಯಿ.
    ಕೊರತೆಯಾಗಿರುವ ಅನುದಾನ 1.13 ಕೋಟಿ ರೂಪಾಯಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts