More

    ವ್ಯಕ್ತಿಯ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇದೆಯೇ ಇಲ್ಲವೇ ಎಂದು ತಿಳಿಯುವುದು ಹೇಗೆ?

    | ರೇಖಾ ಬೆಳವಾಡಿ, ಆಪ್ತ ಸಲಹೆಗಾರರು

    ಆರೋಗ್ಯವೇ ಭಾಗ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಆರೋಗ್ಯಕ್ಕೆ ಒಳ್ಳೆಯದು ಎಂದು ಪೌಷ್ಟಿಕ ಆಹಾರ ಸೇವಿಸುತ್ತೇವೆ, ವ್ಯಾಯಾಮ ಮಾಡುತ್ತೇವೆ, ಸರಿಯಾದ ಹೊತ್ತಿಗೆ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ. ಆದರೆ ಆರೋಗ್ಯ ಕೇವಲ ದೇಹಕ್ಕೆ ಮಾತ್ರ ಸೀಮಿತವೇ? ಆರೋಗ್ಯ ಎಂದರೇನು?

    ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯ ಪ್ರಕಾರ “ಒಂದು ಜೀವಿಯ ದೇಹ – ಮನಸ್ಸು ಸಂಪೂರ್ಣವಾಗಿ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ” ಎಂದು ಕರೆಯಬಹುದು. ವ್ಯಕ್ತಿಯು ಕೇವಲ ದೈಹಿಕವಾಗಿ ಅಲ್ಲದೆ ಬೌದ್ಧಿಕವಾಗಿ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಸುಸ್ಥಿತಿಯಲ್ಲಿದ್ದರೆ ವ್ಯಕ್ತಿಯು ಆರೋಗ್ಯವಾಗಿದ್ದಾನೆ ಎಂದು ಪರಿಗಣಿಸಬಹುದು.

    ಅಂದರೆ, ವ್ಯಕ್ತಿಯು ಕೇವಲ ದೈಹಿಕವಾಗಿ ರೋಗ ರುಜಿನಗಳಿಂದ ಹೊರತಾಗಿದ್ದರೆ ಅಷ್ಟೇ ಅಲ್ಲ, ದಿನನಿತ್ಯದ ಸಾಮಾಜಿಕ ಸವಾಲುಗಳನ್ನು ಎದುರಿಸುವ ರೀತಿ, ತನ್ನ ಪರಿಸರ, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ರೀತಿ, ಯೋಚನಾ ಸಾಮರ್ಥ್ಯ- ಕಾರ್ಯ ನಿರ್ವಹಣಾ ಸಾಮರ್ಥ್ಯ ಕೂಡ ವ್ಯಕ್ತಿಯ ಬೌದ್ದಿಕ, ಸಾಮಾಜಿಕ ಹಾಗೂ ಮಾನಸಿಕ ಆರೋಗ್ಯವನ್ನು ತಿಳಿಸುತ್ತದೆ. ದೈಹಿಕ ಆರೋಗ್ಯದಲ್ಲಿ ಆಗುವ ಏರುಪೇರು ಕಣ್ಣಿಗೆ ಕಾಣುವುದು, ಅನುಭವಕ್ಕೆ ಬರುವುದು. ತಪಾಸಣೆ ಮಾಡಿ ವ್ಯತ್ಯಾಸ ಕಂಡುಹಿಡಿದರೆ ಸೂಕ್ತ ಔಷಧೋಪಚಾರ ಮಾಡಬಹುದು.

    ಆದರೆ ಮನಸ್ಸಿನಲ್ಲಾಗುವ ವ್ಯತ್ಯಾಸಗಳು, ಭಾವನಾತ್ಮಕ ಏರುಪೇರುಗಳು ಒತ್ತಡಗಳು ಮೇಲ್ನೋಟಕ್ಕೆ ಕಣ್ಣಿಗೆ ಕಾಣುವುದಿಲ್ಲ. ಹಾಗಿದ್ದರೆ ವ್ಯಕ್ತಿಯ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿದೆ ಎಂದು ತಿಳಿಯುವುದು ಹೇಗೆ? ಪ್ರತಿ ವ್ಯಕ್ತಿಯೂ ದಿನನಿತ್ಯ ಜೀವನದಲ್ಲಿ ಸಂತೋಷ, ದುಃಖ, ಉದ್ವೇಗ, ಆತಂಕ, ಕೋಪ, ದುಗುಡ, ಭಯವನ್ನು ಒಂದಲ್ಲ ಒಂದು ರೀತಿಯಲ್ಲಿ ಅನುಭವಿಸುತ್ತಾನೆ. ಪರಿಸರ ಹಾಗೂ ಸಂಧರ್ಭಕ್ಕೆ ತಕ್ಕಂತೆ ಭಾವನೆಗಳೊಂದಿಗೆ ಸ್ಪಂದಿಸುತ್ತಾನೆ, ಪ್ರತಿಕ್ರಿಯಿಸುತ್ತಾನೆ ಕೂಡ. ಇದು ಮಾನವ ಸಹಜವಾದುದು. ಆದರೆ ಕೆಲವೊಮ್ಮೆ ಮಾನಸಿಕ ಗೊಂದಲಗಳು, ಒತ್ತಡ, ಕೋಪ ತೀವ್ರ ಸ್ವರೂಪ ಪಡೆದು ವ್ಯಕ್ತಿಯು ದೈನಂದಿನ ಸರಳ ಚಟುವಟಿಕೆಗಳನ್ನು ನಿಭಾಯಿಸುವುದರಲ್ಲಿ, ಸವಾಲುಗಳನ್ನು ಎದುರಿಸುವಲ್ಲಿ ಸಮಸ್ಯೆ ಉಂಟಾಗುತ್ತದೆ‌ .

    ವ್ಯಕ್ತಿಯ ಅಸಹಜ ಭಯ, ತಮ್ಮ ಸಾಮರ್ಥ್ಯದ ಮೇಲೆ ಅಪನಂಬಿಕೆ, ನಿರಂತರ ದುಃಖ, ಅತಿಯಾದ ಆತಂಕ ಎಲ್ಲವೂ ಮಾನಸಿಕ ಆರೋಗ್ಯದಲ್ಲಿನ ಏರುಪೇರುಗಳ ಬಗ್ಗೆ ತಿಳಿಸುತ್ತದೆ. ಇದು ವ್ಯಕ್ತಿಯ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಆತ್ಮವಿಶ್ವಾಸ ಕುಗ್ಗುತ್ತಾ ಹೋಗುತ್ತದೆ. ಗೊಂದಲದಲ್ಲೇ ಬದುಕು ನಡೆಸುತ್ತಿರುತ್ತಾರೆ.

    ಈ ತೀವ್ರ ಸ್ವರೂಪದ ಆತಂಕ, ಭಯವನ್ನು ನಿಜವಾಗಿಯೂ “ಸಮಸ್ಯೆ” ಎಂದು ಪರಿಗಣಿಸಬೇಕೆ? ಈ ರೀತಿಯ ನಕಾರಾತ್ಮಕ ಭಾವನೆಗಳು ತನಗೊಬ್ಬನಿಗೇ ಕಾಡುತ್ತಿರಬಹುದೇ? ತನ್ನ ಸಮಸ್ಯೆಯನ್ನು ಹೇಳಿಕೊಂಡರೆ ಸುತ್ತಮುತ್ತಲಿನವರು ನಕ್ಕರೆ ಏನು ಮಾಡುವುದು? ತಮ್ಮ ಈ ಸಮಸ್ಯೆಗೆ ಪರಿಹಾರ ಹುಡುಕಲು ಯಾರ ಸಹಾಯ ಪಡೆಯಬೇಕು? ಈ ರೀತಿಯ ಮಾನಸಿಕ ಸಮಸ್ಯೆಗಳಿಗೂ ಸಮಾಧಾನ ಕಂಡುಕೊಳ್ಳಬಹುದೇ? ಎಂಬ ಅನೇಕ ವಿಷಯಗಳು, ಪ್ರಶ್ನೆಗಳು ಮನಸ್ಸಿನಲ್ಲಿ ಆವರಿಸುತ್ತದೆ. ತನ್ನ ಈ ಸಮಸ್ಯೆಗಳನ್ನು ಹೊರ ಪ್ರಪಂಚ ಗುರುತಿಸಿಬಿಡುವುದೋ ಎಂಬ ಭಯದಿಂದ, ಸಮಾಜದಿಂದ ದೂರಸರಿದು ಒಂಟಿಯಾಗಿಬಿಡುತ್ತಾರೆ.

    ಈ ಕೆಳಗಿನ ಕಾರುಗಳನ್ನು ಗಮನಿಸಿ

    ವ್ಯಕ್ತಿಯ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇದೆಯೇ ಇಲ್ಲವೇ ಎಂದು ತಿಳಿಯುವುದು ಹೇಗೆ?ಚಿತ್ರ 1: ಫಳ ಹೊಳೆಯುತ್ತಿರುವ ಬಿಳಿ ಕಾರು 

    ವ್ಯಕ್ತಿಯ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿ ಇದೆಯೇ ಇಲ್ಲವೇ ಎಂದು ತಿಳಿಯುವುದು ಹೇಗೆ?ಚಿತ್ರ 2: ನಜ್ಜುಗುಜ್ಜಾದ ಬಿಳಿಯ ಕಾರು 

    ಈಗ ಹೇಳಿ ಯಾವ ಕಾರು ಸುಸ್ಥಿತಿಯಲ್ಲಿದೆ ಎಂದು…

    ಅನೇಕರು ಚಿತ್ರ 1 ಬಿಳಿಯ ಬಣ್ಣದ ಫಳಫಳ ಹೊಳೆಯುವ ಕಾರು ಸುಸ್ಥಿತಿಯಲ್ಲಿ ಇದೆ ಎಂದೇ ಯೋಚಿಸುತ್ತಾರೆ. ಕಾರಣ ಈ ಕಾರನ್ನು ನೋಡಿದಾಗ ಕಾಣುವುದು ಅದರ ಆಕರ್ಷಕ ಬಣ್ಣ, ನವಿರಾದ ಕಾರಿನ ಸೀಟ್ ಗಳು. ಹೊರನೋಟಕ್ಕೆ ಯಾವುದೇ ತೊಂದರೆ ಇದ್ದಂತೆ ಕಾಣುವುದಿಲ್ಲ. ಇನ್ನು ಚಿತ್ರ 2ರಲ್ಲಿ ಕಾಣುವ ಕಾರು ನಜ್ಜುಗುಜ್ಜಾಗಿದೆ, ಸೀಟುಗಳನ್ನು ಇಲಿಗಳು ಕಡಿದು ಹಾಕಿವೆ, ಗಾಜುಗಳು ಒಡೆದಿದೆ. ಕಾರಿನ ಬಣ್ಣ ಅಲ್ಲಲ್ಲಿ ಕಿತ್ತುಹೋಗಿದೆ. ಕಾರಿನ ಒಂದು ಬಾಗಿಲು ಮುರಿದಿದೆ. ಹಾಗಾಗಿ ಎರಡನೇ ಚಿತ್ರದ ಕಾರಿನಲ್ಲಿ ಸಮಸ್ಯೆ ಇದೆ ಎಂದು ಸುಲಭವಾಗಿ ಹೇಳಿಬಿಡಬಹುದು.

    ಈಗ ನಾನು ನಿಮಗೆ ಚಿತ್ರ 1ರ ಕಾರಿನ ಕೀಲಿಗಳನ್ನು ಕೊಡುತ್ತಾ, ಸ್ವಲ್ಪ ದೂರ ಸುತ್ತಾಡಿಕೊಂಡು ಬರುವಂತೆ ತಿಳಿಸುತ್ತೇನೆ… ನೀವು ಸಂತೋಷವಾಗಿ ಕಾರಿನ ಕೀಲಿ ತೆಗೆದುಕೊಂಡು, ಕಾರನ್ನು ಸ್ಟಾರ್ಟ್ ಮಾಡುತ್ತೀರಿ. ಆದರೆ ಕಾರು ಸ್ಟಾರ್ಟ್ ಆಗುವುದಿಲ್ಲ. ಮುಂದಕ್ಕೆ ಹೋಗುವುದಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡುತ್ತೀರಿ, ಆದರೂ ಸಹ ಕಾರು ಮುಂದಕ್ಕೆ ಹೋಗುವುದೇ ಇಲ್ಲ. ನೋಡಲು ಚೆನ್ನಾಗಿದೆ, ಅಷ್ಟೇ. ಆದರೆ ಕೆಲಸ ಮಾಡುತ್ತಿಲ್ಲ. ಏನಾಗಿರಬಹುದು ಎಂದು ಚಿಂತಿಸುತ್ತೀರಿ…

    ಈಗ ಚಿತ್ರ 2ರ ಕಾರಿನ ಕೀಲಿ ಕೊಡುತ್ತೇನೆ, ನೀವು ಕಾರಿಗೆ ಕೀಲಿ ಹಾಕಿದಾಗ, ಯಾವುದೇ ತೊಂದರೆ ಇಲ್ಲದೆ ಕಾರು ಚಾಲಿತವಾಗುತ್ತದೆ, ಮುಂದಕ್ಕೆ ಹೋಗುತ್ತದೆ‌. ನೀವು ಸ್ವಲ್ಪ ದೂರ ಸುತ್ತಾಡಿಕೊಂಡು ಬರುತ್ತೀರ. ಕಾರು ನೋಡಲು ನಜ್ಜುಗುಜ್ಜಾಗಿದ್ದರೂ ಸಹ ಚಾಲನೆಯಲ್ಲಿದೆ, ಸ್ವಲ್ಪ ಮಟ್ಟಿನ ರಿಪೇರಿಯ ಅಗತ್ಯ ಇದೆ ಅಷ್ಟೆ.

    ಈಗ ಒಮ್ಮೆ ಯೋಚಿಸಿ

    ಯಾವ ಕಾರಿನಲ್ಲಿ ಹೆಚ್ಚಿನ ಸಮಸ್ಯೆ ಇದೆ? ಎರಡೂ ಕಾರುಗಳಲ್ಲಿ ಸಮಸ್ಯೆಗಳು ಇವೆ‌. ಚಿತ್ರ 2ರ ಕಾರಿನಲ್ಲಿ ಬಾಹ್ಯ ಸಮಸ್ಯೆಗಳು ಎದ್ದು ಕಾಣುತ್ತದೆ. ಸಮಸ್ಯೆ ಗುರುತಿಸಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಸಮಸ್ಯೆಗಳನ್ನು ಬೇಗ ಸರಿಪಡಿಸಬಹುದು‌ ಸಹ. ಮತ್ತೊಮ್ಮೆ ಪೇಯಿಂಟ್ ಮಾಡಿ, ಕೆಲವು ಬಿಡಿ ಭಾಗಗಳನ್ನು ಹೊಸದಾಗಿ ಅಳವಡಿಸಬಹುದು. ರಿಪೇರಿ ಮಾಡಬಹುದು. ಕಾರು ಓಡಾಡಲು ಯಾವುದೇ ಸಮಸ್ಯೆ ಇಲ್ಲ.

    ಮೊದಲನೇ ಕಾರು ನೋಡಲು ಚೆನ್ನಾಗಿ ಕಂಡರೂ, ಚಾಲನೆಯಾಗುವುದಿಲ್ಲ. ಕಾರಣ ಒಳಭಾಗಗಳಲ್ಲಿ ಅನೇಕ ದಿನಗಳಿಂದ ನೀರು ತುಂಬಿಕೊಂಡು ತುಕ್ಕು ಹಿಡಿದಿವೆ. ಬ್ರೇಕ್ ಫೇಲ್ ಆಗಿದೆ. ಎಂಜಿನ್ ಕೆಟ್ಟಿದೆ. ಕಾರಿನ ಹೊಳಪು ಕಾರಿನ ಆಂತರಿಕ ಸಮಸ್ಯೆಯನ್ನು ಮರೆಯಾಗಿಸಿದೆ, ಕಾರು ಹೊರಗಿನಿಂದ ಚೆನ್ನಾಗಿಯೇ ಇದೆಯಲ್ಲಾ ಎಂಬ ಆಲೋಚನೆಯು, ಕಾರಿನ ಆಂತರಿಕ ಸಮಸ್ಯೆ ಅರಿಯಲು ಮತ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಅಡ್ಡಿಯಾಗುತ್ತದೆ. ಇನ್ನೂ ನಿರ್ಲಕ್ಷ್ಯ ತೋರಿದರೆ, ಪರಿಹಾರ ಕಂಡುಕೊಳ್ಳದಿದ್ದರೆ ಕಾರು ಕೆಲಸಕ್ಕೆ ಬಾರದಂತಾಗಿಬಿಡಬಹುದು. ಹಾಗಾಗಿ ಆಂತರಿಕ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.

    ಮಾನಸಿಕ ಸಮಸ್ಯೆಗಳೂ ಸಹ ಹೀಗೆಯೇ. ಕಣ್ಣಿಗೆ ಕಾಣುವುದಿಲ್ಲ. ಅನೇಕರು ಕೀಳರಿಮೆ, ಆತಂಕ, ನಕಾರಾತ್ಮಕ ಚಿಂತನೆಗಳು, ಭಾವನಾತ್ಮಕ ಸಮಸ್ಯೆಗಳು ಹಾಗೂ ಒತ್ತಡ, ನಿರಾಸೆ, ತಮ್ಮ ಸಾಮರ್ಥ್ಯದ ಮೇಲೆ ಅಪನಂಬಿಕೆ ಇಂತಹ ಇನ್ನೂ ಅನೇಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಸೂಕ್ಷ್ಮವಾಗಿ ಗಮನಿಸುವುದು ಅಗತ್ಯ. ಸೂಕ್ತ ನೆರವು ಹಾಗೂ ಚಿಕಿತ್ಸೆ ಅಗತ್ಯ.

    ಯಾರ ಹತ್ತಿರ ನೆರವು ಸಿಗುವುದು?

    ಮಾನಸಿಕ ತಜ್ಞರ ನೆರವು ಪಡೆಯಬಹುದು. ಆಪ್ತಸಮಾಲೋಚನೆ ಹಾಗೂ ಮಾನಸಿಕ ಚಿಕಿತ್ಸೆಗಳು ಸವಾಲುಗಳನ್ನು ಪರಿಣಾಮಕಾರಿಯಾಗಿ, ಅರ್ಥಪೂರ್ಣವಾಗಿ ಎದುರಿಸಬಹುದು, ಆಪ್ತಸಮಾಲೋಚನೆ ಪ್ರಕ್ರಿಯೆ, ಸಮಸ್ಯೆಯ ಸ್ವರೂಪ ಹೇಗೇ ಇದ್ದರೂ, ಮುಕ್ತ ಹಾಗೂ ಸುರಕ್ಷಿತವಾದ ವಾತಾವರಣವನ್ನು ಒದಗಿಸುತ್ತದೆ. ವಿಶ್ವಾಸಾರ್ಹ ವ್ಯಕ್ತಿಯ (ನುರಿತ ಆಪ್ತಸಮಾಲೋಚಕರ) ಜೊತೆಯ ಮುಕ್ತ ಸಂವಹನ ಹಾಗೂ ಸೂಕ್ತ ಚಿಕಿತ್ಸೆಗಳು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಅಗತ್ಯವಾದ ಒಳನೋಟವನ್ನು ಒದಗಿಸಲು ನೆರವಾಗುತ್ತದೆ. ಸವಾಲುಗಳನ್ನು ಎದುರಿಸುವ ಉತ್ತಮ ಮಾರ್ಗಗಳನ್ನು ಗುರುತಿಸಲು ನೆರವಾಗುತ್ತದೆ. ಅಗತ್ಯವಾದ ಉತ್ತಮ ಬದಲಾವಣೆಗಳನ್ನು ತರಲು ನೆರವಾಗುತ್ತದೆ. ಸೂಕ್ತ ಬದಲಾವಣೆಗಳು ನಮ್ಮ ಯೋಚನಾ ಹಾಗು ಕಾರ್ಯ ನಿರ್ವಹಣಾ ಕ್ರಮ ಉತ್ತಮಗೊಳ್ಳುತ್ತದೆ. ಇದರಿಂದ ನಮ್ಮ ಆತ್ಮಗೌರವ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಹಂತ ಹಂತವಾಗಿ ಕ್ರಮೇಣ ವ್ಯಕ್ತಿಯು ಜೀವನ ಕೌಶಲಗಳನ್ನು ಬೆಳೆಸಿಕೊಂಡು ಸಮಾಧಾನಕರ ಜೀವನ ಸಾಗಿಸಲು ಸಾಧ್ಯವಾಗುತ್ತದೆ.

    ಮಾನಸಿಕ ಸಮಸ್ಯೆಗಳು ಸಣ್ಣ ಮಕ್ಕಳಿಂದ ವೃದ್ಧಾಪ್ಯದ ಯಾವುದೇ ವಯಸ್ಸಿನವರಿಗೂ ಎದುರಾಗಬಹುದು. ದೈಹಿಕ ಆರೋಗ್ಯಕ್ಕಾಗಿ ಹೇಗೆ ವೈದ್ಯಕೀಯ ನೆರವು ಪಡೆಯುತ್ತೇವೋ, ಹಾಗೆಯೇ ಮಾನಸಿಕ ಆರೋಗ್ಯಕ್ಕೆ ಸರಿಯಾದ ಸಮಯದಲ್ಲಿ ನೆರವು ಪಡೆಯುವುದು ಅತ್ಯಗತ್ಯ. ಮಾನಸಿಕವಾಗಿ ಸಮಸ್ಯೆಗಳಿಗೂ ಚಿಕಿತ್ಸೆ ಬೇಕಾಗುತ್ತದೆ. ನೆರವು ಪಡೆಯಲು ಹಿಂಜರಿಯಬಾರದು. ಜನರು ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ/ ನೆರವು ಪಡೆಯಲು ಮುಂದಾಗುವಂತೆ ಮುಕ್ತ ವಾತಾವರಣ ಸೃಷ್ಟಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts