More

    ಮಾನಸಿಕ ಒತ್ತಡವನ್ನು ನಿರ್ವಹಿಸುವುದು ಹೇಗೆ?

    ಮಾನಸಿಕ ಒತ್ತಡವನ್ನು ನಿರ್ವಹಿಸುವುದು ಹೇಗೆ?ಮನಶಾಸ್ತ್ರಜ್ಞರ ಪ್ರಕಾರ ವಿಪರೀತವಾದ ಮಾನಸಿಕ ಒತ್ತಡ ಮನುಷ್ಯನ ಆರೋಗ್ಯಕ್ಕೆ ಬಾಧಕ. ಸಾಧಾರಣವಾದ ಮಾನಸಿಕ ಒತ್ತಡ ಸಹಜವಷ್ಟೇ ಅಲ್ಲ, ಕೆಲವೊಮ್ಮೆ ಉಪಯುಕ್ತ ಕೂಡ. ಸ್ವಲ್ಪಮಟ್ಟಿಗಿನ ಮಾನಸಿಕ ಒತ್ತಡ ಕ್ರಿಯಾಶೀಲತೆಗೆ ಪ್ರೇರಣೆ ನೀಡಬಲ್ಲದು.

    ಸಂತೃಪ್ತ ಜೀವನವನ್ನು ನಡೆಸಿ ಬದುಕಿನಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕು ಎಂಬುದು ಎಲ್ಲರ ಬಯಕೆ. ಇದು ಸಾಧ್ಯವಾಗಬೇಕಾದರೆ ಆಧುನಿಕ ಜಗತ್ತಿನ ಧಾವಂತದ ಬದುಕು ನಮ್ಮಲ್ಲುಂಟು ಮಾಡುವ ತಲ್ಲಣಗಳ ಹಾಗೂ ಮಾನಸಿಕ ಒತ್ತಡಗಳ ನಿರ್ವಹಣೆ ಬಹಳ ಮುಖ್ಯ. ಮಾನಸಿಕ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಾಗಿರುವುದು ಸಾರಭೂತಜ್ಞಾನ. ಈ ಪ್ರಾಯೋಗಿಕ ಜ್ಞಾನವನ್ನು ಸಂಕ್ಷಿಪ್ತವಾಗಿ, ಸುಲಭವಾಗಿ ಗ್ರಹಿಸಲು ಸಾಧ್ಯವಾಗಬೇಕು. ಮಧುಮೇಹ, ಅಸಿಡಿಟಿ ಮುಂತಾದ ಅನೇಕ ಕಾಯಿಲೆಗಳು ಹಾಗೂ ವಿಕೃತ ಮನಸ್ಥಿತಿಗಳು ಇವೆಲ್ಲವೂ ಮಾನಸಿಕ ಒತ್ತಡಕ್ಕೆ ಸಂಬಂಧಿಸಿದವುಗಳೆಂದೂ (stress-related) ಅನೇಕ ಸಂಶೋಧನೆಗಳಿಂದ ಸಿದ್ಧಪಡಿಸಲಾಗಿದೆ.

    ಮಾನಸಿಕ ಒತ್ತಡ ಯೋಗ್ಯ ಪ್ರಮಾಣದಲ್ಲಿದ್ದರೆ ಅದು ಜೀವನ ನಿರ್ವಹಣೆಯ ಬೇರೆ ಬೇರೆ ಕೆಲಸಗಳಿಗೆ ಸಹಜವಾದ ಪ್ರೇರಕಶಕ್ತಿಯಾಗುತ್ತದೆ. ಹಾಗೂ ಅನೇಕ ಸಂದರ್ಭಗಳಲ್ಲಿ ಅದು ಅನಿವಾರ್ಯವಾಗಿರುವುದನ್ನೂ ನೋಡಬಹುದು. ಈ ಯುಕ್ತ ಪ್ರಮಾಣದ ಒತ್ತಡವನ್ನು ಸಹಜವಾಗಿ ಭರಿಸುವ ಶಕ್ತಿ ಮನಸ್ಸಿಗೆ ಮತ್ತು ದೇಹಕ್ಕೆ ಇದ್ದೇ ಇದೆ. ಆದರೆ ಒಂದು ಮಿತಿಯನ್ನು ಮೀರಿದಾಗ, ಸತತವಾಗಿ ಮಾನಸಿಕ ಒತ್ತಡವನ್ನು ಎದುರಿಸಬೇಕಾದಾಗ, ಅದು ಮನಸ್ಸಿನ ಮೇಲೆ, ತನ್ಮೂಲಕ ನಮ್ಮ ಜೈವಿಕ ಚಟುವಟಿಕೆಗಳಾದ ರಾಸಾಯನಿಕ ಕ್ರಿಯೆಗಳು, ಕರುಳು, ಪಿತ್ತಜನಕಾಂಗ, ಜೀರ್ಣಾಂಗ ವ್ಯೂಹ, ಹೃದಯ ಮತ್ತಿತರ ಅಂಗಗಳ ಮೇಲೆ ಪರಿಣಾಮ ಬೀರುವುದರಿಂದ ಅನೇಕ ರೀತಿಯ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ರೋಗಾಣುಗಳಿಂದ ಆಕ್ರಮಿತವಾದಾಗ ಶರೀರ ಹೇಗೆ ವ್ಯಾಧಿಗ್ರಸ್ತವಾಗುತ್ತದೋ ಅದೇ ರೀತಿ ಮಿತಿಮೀರಿದ ಮಾನಸಿಕ ಒತ್ತಡದಿಂದ ಕೂಡ ಶರೀರದ ಸೂಕ್ಷ್ಮ ಜೈವಿಕ ರಾಸಾಯನಿಕ ಕ್ರಿಯೆಗಳಿಗೆ ಅಡಚಣೆ ಅಥವಾ ಅವುಗಳಲ್ಲಿ ವ್ಯತ್ಯಾಸ ಉಂಟಾಗಿ ಬೇರೆ ಬೇರೆ ರೀತಿಯ ರೋಗಗಳು ಉಂಟಾಗುತ್ತವೆ. ಇವುಗಳನ್ನು ಮನೋದೈಹಿಕ ಅಸಮತೋಲನದಿಂದ ಉಂಟಾಗುವ ರೋಗಗಳು ಎನ್ನಲಾಗುತ್ತದೆ. ಇವುಗಳನ್ನು ಜೀವನಶೈಲಿಯ ಅಕ್ರಮಗಳಿಂದ ಉಂಟಾಗುವ ರೋಗಗಳು ಎಂದೂ ಕರೆಯಲಾಗುತ್ತದೆ.

    ಆದುದರಿಂದ ಜೀವನದಲ್ಲಿ ಬಾಲ್ಯದಿಂದ ನಾವು ರೂಢಿಸಿಕೊಂಡ ಕೆಟ್ಟ ಅಭ್ಯಾಸಗಳಿಂದ ಮುಕ್ತರಾಗಬೇಕು. ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿ ಕೊಳ್ಳಬೇಕು. ತನ್ಮೂಲಕ ಅಶಿಸ್ತಿನ ಜೀವನಶೈಲಿಯಿಂದ ಉಂಟಾಗುವ ಅನಗತ್ಯ ಮಾನಸಿಕ ಒತ್ತಡಗಳನ್ನು ತಡೆಗಟ್ಟಿ, ಅಡ್ಡಪರಿಣಾಮಗಳನ್ನು ಬೀರುವ ಔಷಧಗಳನ್ನು ತೆಗೆದುಕೊಳ್ಳದೆ ಅನೇಕ ರೋಗಗಳಿಂದ ಪಾರಾಗಿ ಆರೋಗ್ಯಕರ ಮತ್ತು ಸಹಜವಾದ ಶಾಂತಿ-ಸೌಖ್ಯಗಳಿಂದ ತುಂಬಿದ ಜೀವನವನ್ನು ನಿರ್ವಹಿಸುವುದು ಸಾಧ್ಯವಾಗುತ್ತದೆ.

    ಮಾನಸಿಕ ಒತ್ತಡ ಎಂದರೇನು?: ಸ್ಟ್ರೆಸ್ ಅಥವಾ ಮಾನಸಿಕ ಒತ್ತಡ ಎಂಬುದಕ್ಕೆ ಆಕ್ಸ್ ಫರ್ಡ್ ನಿಘಂಟಿನಲ್ಲಿ ಈ ರೀತಿಯ ನಿರ್ವಚನವಿದೆ: ‘ದೈಹಿಕ ಅಥವಾ ಮಾನಸಿಕ ಶಕ್ತಿಯನ್ನು ಮಿತಿಮೀರಿ ಒತ್ತಾಯಿಸುವ ಒಂದು ಸನ್ನಿವೇಶ’. ಕೆಲವು ಸನ್ನಿವೇಶಗಳು, ಕ್ರಿಯೆ ಮತ್ತು ಭಾವೋದ್ರೇಕಗಳಿಂದ ವ್ಯಕ್ತಿಯ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಹದಗೆಡುವ ಪ್ರಕ್ರಿಯೆಗೆ ‘ಮಾನಸಿಕ ಒತ್ತಡ’ ಎಂದು ಕರೆಯಬಹುದು. ವ್ಯಕ್ತಿ ಮಾನಸಿಕ ಒತ್ತಡಕ್ಕೆ ಒಳಗಾದಾಗ ದೇಹದಲ್ಲಿರುವ ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಜೈವಿಕ-ರಾಸಾಯನಿಕ ಸಂತುಲನವು ಹದಗೆಟ್ಟು, ಮಿದುಳಿನ ನರವಾಹಕಗಳ ಮೇಲೆ ದುಷ್ಪರಿಣಾಮ ಬೀರುತ್ತವೆ (ಮಾನಸಿಕ ಒತ್ತಡದ ಪರಿಣಾಮ ಯಾವಾಗಲೂ ಪ್ರತಿಕೂಲವೇ ಆಗಿರದಿದ್ದರೂ).

    ವೈದ್ಯಕೀಯ ವಿವರಣೆ: ನಮ್ಮ ಆಂತರಿಕ ಪರಿಸರವನ್ನು ನಿಯಂತ್ರಿಸಲು, ಅದರ ಗುಣಲಕ್ಷಣಗಳ ತುಲನಾತ್ಮಕವಾದ ಸ್ಥಿರಸ್ಥಿತಿ ಅವಶ್ಯವಾಗಿರುತ್ತದೆ. ಇಂತಹ ಸ್ಥಿರಸ್ಥಿತಿಯನ್ನು ಕಾಪಾಡಿಕೊಳ್ಳುವ ವ್ಯವಸ್ಥೆಯನ್ನು ಸಂತುಲನವೆಂದು ಕರೆಯಲಾಗುತ್ತದೆ. ಈ ಸಂತುಲನವನ್ನು ವಿಕ್ಷಿಪ್ತಗೊಳಿಸುವ ಒಂದು ಸ್ಥಿತಿಯನ್ನೇ ಮಾನಸಿಕ ಒತ್ತಡ ಎಂದೆನ್ನಬಹುದು. ಜೀವನದಲ್ಲಿ ಹಾಗೂ ದೇಹದ ಚಯಾಪ ಚಯ ಪ್ರಕ್ರಿಯೆಯಲ್ಲಿ ಉಂಟಾಗುವ ತೀವ್ರ ಬದಲಾವಣೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಒತ್ತಡವು ಮನೋ-ದೈಹಿಕ ಸಂಕೀರ್ಣದ ಮೇಲೆ ಹೇರಲ್ಪಡುತ್ತದೆ.

    ಮನಶಾಸ್ತ್ರಜ್ಞರ ಪ್ರಕಾರ ವಿಪರೀತವಾದ ಮಾನಸಿಕ ಒತ್ತಡ ಮನುಷ್ಯನ ಆರೋಗ್ಯಕ್ಕೆ ಬಾಧಕ. ಸಾಧಾರಣವಾದ ಮಾನಸಿಕ ಒತ್ತಡ ಸಹಜವಷ್ಟೇ ಅಲ್ಲ, ಕೆಲವೊಮ್ಮೆ ಉಪಯುಕ್ತ ಕೂಡ. ಸ್ವಲ್ಪಮಟ್ಟಿಗಿನ ಮಾನಸಿಕ ಒತ್ತಡ ಕ್ರಿಯಾಶೀಲತೆಗೆ ಪ್ರೇರಣೆ ನೀಡಬಲ್ಲದು. ಶ್ರಮವಹಿಸಿ ಕಾರ್ಯವೆಸಗುವಾಗ ಅಥವಾ ಕ್ಷಿಪ್ರಗತಿಯಲ್ಲಿ ಪ್ರತಿಕ್ರಿಯಿಸ ಬೇಕಾದಾಗ ಮಾನಸಿಕ ಒತ್ತಡ ಸಹಾಯಕವಾಗಬಲ್ಲುದು.

    ಮಾನಸಿಕ ಒತ್ತಡವನ್ನು ನಿರ್ವಹಿಸುವುದು ಹೇಗೆ?

    ಮಾನಸಿಕ ಒತ್ತಡದ ಲಕ್ಷಣಗಳು

    • ಇತರರ ಮಾತನ್ನು ಸ್ವಲ್ಪವೂ ಕೇಳುವ ತಾಳ್ಮೆ ಇಲ್ಲದಿರುವುದು.
    • ಅತಿಯಾದ ಪ್ರತಿಕ್ರಿಯೆ ಮತ್ತು ಸ್ವಂತ ಕಾರ್ಯಗಳನ್ನು ಮಾಡಲು ಅಸಮರ್ಥರಾಗುವುದು.
    • ಅಸಹನೆ ಮತ್ತು ಕೋಪವನ್ನು ವಿಪರೀತವಾಗಿ ಎಲ್ಲರ ಮುಂದೆ ತೋರಿಸುವುದು
    • ಅನಗತ್ಯ, ವಿಪರೀತ ಕಾಳಜಿ ?ಅವಸರ ಮತ್ತು ವೇಗದಿಂದ ಮಾತನಾಡುವುದು.
    • ಅವಸರದಿಂದ ಅನೇಕ ಕೆಲಸಗಳನ್ನು ಸಾಮರಸ್ಯವಿಲ್ಲದೆ ಒಂದೇ ಸಲ ಮಾಡಲು ಪ್ರಯತ್ನಿಸುವುದು. ಅಥವಾ ಹಲವಾರು ಚಟುವಟಿಕೆಗಳಿಂದ ಮನಸ್ಸನ್ನು ಗೊಂದಲಗೊಳಿಸುವುದು.
    • ದೀರ್ಘ ನಿದ್ದೆಮಾಡಲಾಗದ ಸ್ಥಿತಿ ಮತ್ತು ಅನೇಕ ಬಾರಿ ನಿದ್ದೆ ಭಂಗವಾಗುವಂತಹದು.
    • ಇನ್ನೊಬ್ಬರೊಡನೆ ಮಾತನಾಡುವಾಗ ಆಗಾಗ ತನ್ನದೇ ಆಲೋಚನೆ ಮತ್ತು ಚಿಂತೆಯಲ್ಲಿ ಮುಳುಗುವುದು (ಅನ್ಯಮನಸ್ಕರಾಗಿರುವುದು).
    • ಒರಟಾಗಿ ಮತ್ತು ಅಸಂಬದ್ಧವಾಗಿ ಸಂಭಾಷಣೆಯಲ್ಲಿ ತೊಡಗುತ್ತ ಇನ್ನೊಬ್ಬರ ಮೇಲೆ ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸುವುದು (ಅತ್ಯಾಕಾಂಕ್ಷೆ).
    • ಪದೇಪದೆ ಕೈ ಬೆರಳುಗಳು, ಕಾಲು ಆಡಿಸುವುದು, ಹಲ್ಲು ಕಡಿಯುವುದು, ಮುಷ್ಟಿ ಬಿಗಿ ಹಿಡಿಯುವುದು.
    • ಗಬಗಬನೆ ತಿನ್ನುವುದು, ಅತಿಯಾಗಿ ತಿನ್ನುವುದು ಅಥವಾ ಹಸಿವಿನ ಕೊರತೆಯಿಂದ ಬಹಳ ಕಮ್ಮಿ ತಿನ್ನುವುದು.
    • ಅಪ್ರಜ್ಞಾ ಮನಸ್ಸಿನ ಸಂಕೀರ್ಣಗಳ ಪರಿಣಾಮದಿಂದ ಮನಸ್ಸು ಅಶಾಂತಿಯಿಂದ ಚಡಪಡಿಸುವುದು.
    • ಅಸಿಡಿಟಿ ಮತ್ತು ತಲೆನೋವು.
    • ಇತರರ ಬಗ್ಗೆ ಅನಗತ್ಯವಾಗಿ ದೂರುವ ಹವ್ಯಾಸ ಬೆಳೆಯುವುದು. ತನ್ನ ದೌರ್ಬಲ್ಯಗಳನ್ನು ಗುರುತಿಸಿ ಸರಿಪಡಿಸಿಕೊಳ್ಳಲಾಗದ ಸ್ಥಿತಿ.

    ಮಾನಸಿಕ ಒತ್ತಡ ತಡೆಗಟ್ಟುವ ಕ್ರಮಗಳು

    • ಉತ್ಸಾಹದಿಂದಿರಲು ಅಭ್ಯಾಸ ಮಾಡುವುದು.
    • ಲಯಬದ್ಧ ಉಸಿರಾಟವನ್ನು ಆಗಾಗ್ಗೆ ಮಾಡುವುದು.
    • ವರ್ತಮಾನದ ಈ ಕ್ಷಣದಲ್ಲಿ ಪೂರ್ಣ ಅರಿವಿನಿಂದ ಇರುವುದು.
    • ನಮ್ಮ ಮನಸ್ಸಿನ ಆಲೋಚನೆಗಳನ್ನು ಗಮನಿಸುವುದು.
    • ಬೆಳಗಿನ ಜಾವ ಬೇಗ ಏಳುವುದರಿಂದ ನಮಗೆ ಬೆಟ್ಟವನ್ನೂ ಜರುಗಿಸುವ ಶಕ್ತಿ ಬರುವುದು ಎಂಬ ಉಕ್ತಿಯನ್ನು ಗಮನಿಸಿ ಅದನ್ನು ನಿತ್ಯಜೀವನದಲ್ಲಿ ಆಚರಿಸಿ. 
    • ಜಾನೆ ಸ್ನಾನ, ದಿನಕ್ಕೆ ನಾಲ್ಕೈದು ಸಾರಿ ತಲೆ, ಮುಖ ಮತ್ತು ಕೈಕಾಲುಗಳನ್ನು ತಣ್ಣೀರಿನಿಂದ ತೊಳೆಯುವುದು.
    • ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
    • ಆರೋಗ್ಯಕರ ಹವ್ಯಾಸಗಳು, ಸೇವಾ ಚಟುವಟಿಕೆಗಳು ಮತ್ತು ಬಿಡುವಿನ ವೇಳೆಯನ್ನು ಉಪಯುಕ್ತವಾಗುವಂತೆ ಬಳಸುವುದು.
    • ಅನುಕಂಪ, ದಯೆ, ಕರುಣೆ, ಕ್ಷಮೆ, ಸಮತೆ, ಸರ್ವರಲ್ಲೂ ಪ್ರೀತಿಯನ್ನು ರೂಢಿಸಿಕೊಳ್ಳುವುದು.
    • ತನ್ನನ್ನು ತಾನು ಅರಿಯುವುದು, ವಿಶ್ವ ಮತ್ತು ಜನರನ್ನು ಯಥಾರ್ಥವಾಗಿ ಅರ್ಥಮಾಡಿಕೊಳ್ಳುವುದು.
    • ದುಡುಕು ಮತ್ತು ಸಿಟ್ಟನ್ನು ಮಾಡದೆ ಇರುವುದು.
    • ಜನರ ನಡುವೆ ಇದ್ದರೂ ಮನಸ್ಸನ್ನು ಭಗವಂತನ ಚಿಂತನೆಯಲ್ಲಿ ತೊಡಗಿಸುವುದು.
    • ನಿಸರ್ಗದೊಂದಿಗೆ ಸಾಮರಸ್ಯ ಸಾಧಿಸುವುದು.
    • ಸಮಯಪ್ರಜ್ಞೆ ಮತ್ತು ಕೆಲಸದಲ್ಲಿ ಗೊಂದಲವಿಲ್ಲದಿರುವುದು.
    • ದೈಹಿಕ ಸ್ವಾಸ್ಥ್ಯದ ಕಡೆ ಗಮನ, ರೋಗವನ್ನು ತಡೆಗಟ್ಟಲು ಬೇಕಾದ ವ್ಯಾಯಾಮ ಮತ್ತು ವಿರಾಮವನ್ನು ನಿತ್ಯ ಜೀವನದಲ್ಲಿ ಅಳವಡಿಸುವುದು.

    ಪರಿಪೂರ್ಣ ಜೀವನದ ಸೂತ್ರ

    ಜೀವನದ ಐದು ಪ್ರಧಾನ ಅಂಶಗಳ ನಿರ್ವಹಣೆ (ಈ ಅಂಶಗಳು ಪರಸ್ಪರ ಅವಿಭಾಜ್ಯ ಸಂಬಂಧ ಹೊಂದಿವೆ ಮತ್ತು ಅವಲಂಬಿಸಿವೆ)

    1. ಸ್ವಯಂ-ನಿರ್ವಹಣೆ

    2. ಕೌಟುಂಬಿಕ ನಿರ್ವಹಣೆ

    3. ವೃತ್ತಿ ನಿರ್ವಹಣೆ

    4. ಸಾಮಾಜಿಕ ಸಂಬಂಧಗಳ ನಿರ್ವಹಣೆ

    5. ಆಧ್ಯಾತ್ಮಿಕ ನಿರ್ವಹಣೆ

    ಪರಿಪೂರ್ಣ ಜೀವನದ ಐದು ಆಯಾಮಗಳು: ವೈಯಕ್ತಿಕ, ಕೌಟುಂಬಿಕ, ವೃತ್ತಿಪರ, ಸಾಮಾಜಿಕ, ಆಧ್ಯಾತ್ಮಿಕ.

    ಕರ್ತವ್ಯ ನಿರ್ವಹಣೆ

    • ವೈಯಕ್ತಿಕ ಕೆಲಸ ಮತ್ತು ಜವಾಬ್ದಾರಿ.
    • ಕೌಟುಂಬಿಕ ಕರ್ತವ್ಯ ಮತ್ತು ಜವಾಬ್ದಾರಿ.
    • ವೃತ್ತಿಪರ ಜವಾಬ್ದಾರಿ.
    • ಸಾಮಾಜಿಕ ಕಾರ್ಯ ಮತ್ತು ಜವಾಬ್ದಾರಿ.
    • ಆಧ್ಯಾತ್ಮಿಕ ಸಾಧನೆ ಮತ್ತು ಜವಾಬ್ದಾರಿ.

    – ಇವುಗಳನ್ನು ದಕ್ಷತೆಯಿಂದ ಜೀವನದಲ್ಲಿ ಅಳವಡಿಸಿಕೊಂಡು ಸಾಮರಸ್ಯ ಸಾಧಿಸಿ ಬಾಳನ್ನು ಶಾಂತಿಮಯ ಅರ್ಥಪೂರ್ಣ ಮತ್ತು ಯಶಸ್ವಿಯಾಗಿ ಮಾಡಿಕೊಳ್ಳಬೇಕು.

    (ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

    (ಈ ಅಂಕಣ ಪ್ರತಿ ಬದಲಿ ಮಂಗಳವಾರ ಪ್ರಕಟವಾಗುತ್ತದೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts