More

    ‘ಭಿಲ್ವಾರಾ ಮಾದರಿ’ಯ ಹಿಂದಿರುವ ಶಕ್ತಿ ಯಾವುದು?: ಸೋಂಕು ಪ್ರಕರಣ ತಗ್ಗಿಸಿ ವಿಶ್ವದ ಗಮನ ಸೆಳೆದ ಗ್ರಾಮ

    ನವದೆಹಲಿ: ಕರೊನಾ ಸೋಂಕು ವಿಷಯ ಬಂದಾಗ ಈ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಹೆಸರೇ ಥಳಕು ಹಾಕುತ್ತಿದೆ. ಕರೊನಾ ಮಹಾಮಾರಿ ಆಗಷ್ಟೇ ತನ್ನ ಸ್ವರೂಪವನ್ನು ತೋರಿಸಲು ಶುರು ಮಾಡಿದ ಸಂದರ್ಭದಲ್ಲಿ ಈ ಜಿಲ್ಲೆಯು ಸೋಂಕಿತರ ‘ಹಾಟ್‌ ಸ್ಪಾಟ್‌’ ಎಂಬ ಕುಖ್ಯಾತಿ ಗಳಿಸಿತ್ತು. ಮಾರ್ಚ್‌ 19ರಲ್ಲಿ ಮೊದಲ ಸೋಂಕು ಪತ್ತೆಯಾಗಿತ್ತು. ಅದಾದ ನಂತರ ಕ್ಷಿಪ್ರಗತಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿತು. ನಂತರ ಮೂರೇ ದಿನಗಳಲ್ಲಿ ಅಂದರೆ ಮಾರ್ಚ್‌ 21 ರಿಂದ 23ರ ಅವಧಿಯಲ್ಲಿ 13 ಪ್ರಕರಣಗಳು ದಾಖಲಾದವು. ಈ ಪೈಕಿ ಹೆಚ್ಚಿನವರು ಸೋಂಕಿತರ ಸಂಪರ್ಕಕ್ಕೆ ಬಂದ ವೈದ್ಯರೇ ಎನ್ನುವ ಆಘಾತಕಾರಿ ಸುದ್ದಿ ಕೂಡ ತಿಳಿಯಿತು.

    ಮಾರ್ಚ್‌ 26ಕ್ಕೆ ಮೊದಲ ಬಲಿಯಾಯಿತು. ಕೆಲವೇ ಗಂಟೆಗಳಲ್ಲಿ ಇನ್ನೊಬ್ಬರು ಮೃತಪಟ್ಟರು. ಆದರೆ ಅಲ್ಲಿ ತೆಗೆದುಕೊಂಡ ನಿರ್ಧಾರದಿಂದ ಇಂದು ಭಿಲ್ವಾರಾದಲ್ಲಿ ಪ್ರಕರಣಗಳ ಸಂಖ್ಯೆ ವಿಪರೀತ ತಗ್ಗಿದೆ. ಭಾರತ ಮಾತ್ರವಲ್ಲದೇ ಇಡೀ ವಿಶ್ವ ‘ಅನುಸರಿಸಿದರೆ ಭಿಲ್ವಾರಾ ಮಾದರಿ ಅನುಸರಿಬೇಕು ಎನ್ನುತ್ತಿದೆ. ಅದು ಏಕೆ? ಅದರ ಹಿಂದಿರುವ ಶಕ್ತಿ ಯಾವುದು ಎನ್ನುವುದು ಕುತೂಹಲದ ಪ್ರಶ್ನೆ.

    ಜವಳಿ ನಗರಿ ಭಿಲ್ವಾರಾದಲ್ಲಿ ಕರೊನಾ ವಿರುದ್ಧ ಸಿಡಿದಿದ್ದ ಶಕ್ತಿ ಎಂದರೆ ಅಲ್ಲಿಯ ಜಿಲ್ಲಾಧಿಕಾರಿ 56 ವರ್ಷದ ರಾಜೇಂದ್ರ ಭಟ್‌. ಅವರೇ ಹೇಳುವಂತೆ ‘ಕರೊನಾ ಮೊದಲ ಬಲಿ ಪಡೆದದ್ದೇ ತಡ ನಾವು ಎಚ್ಚೆತ್ತುಕೊಂಡೆವು. ಮೊದಲಿಗೆ 850 ತಂಡಗಳನ್ನು ರಚಿಸಲಾಯಿತು. ತಂಡವು ಪ್ರತಿ ಬೀದಿಗಳಲ್ಲಿಯೂ ಕಾರ್ಯಾಚರಣೆ ನಡೆಸಿತು. 28 ಲಕ್ಷ ಮಂದಿಯನ್ನು ತಂಡ ತಪಾಸಣೆಗೆ ಒಳಪಡಿಸಿತು. ಇದಕ್ಕೆ ತಂಡ ತೆಗೆದುಕೊಂಡ ಅವಧಿ ಕೇವಲ 14 ದಿನ. ಈ ಪೈಕಿ ಸುಮಾರು ಎರಡೂವರೆ ಸಾವಿರ ಮಂದಿಗೆ ಜ್ವರ ಇರುವುದು ಪತ್ತೆಯಾಯಿತು. ಆದ್ದರಿಂದ ಅವರೆಲ್ಲವನ್ನೂ ಕ್ವಾರಂಟೈನ್‌ನಲ್ಲಿ ಇಡಲಾಯಿತು. ನಗರದಲ್ಲಿ 144 ಸೆಕ್ಷನ್‌ ಜಾರಿ ಮಾಡಲಾಯಿತು. ಸೋಂಕಿತರಿಗೆ ಸೀಲ್‌ ಹಾಕಲಾಯಿತು. ಇವರು ಯಾವುದೇ ಕಾರಣಕ್ಕೂ ಹೊರಕ್ಕೆ ಬಾರದಂತೆ ನಿಗಾವಹಿಸಲು ಜಿಯಾಗ್ರಫಿಕಲ್‌ ಇನ್‌ಫಾರ್ಮೇಷನ‌ ಸಿಸ್ಟಂ ಮೂಲಕ ನಿಗಾ ಇಡಲಾಯಿತು. ಇಷ್ಟೆಲ್ಲಾ ಮಾಡಿದ ಮೇಲೆ ಸೋಂಕು ನಿಯಂತ್ರಣಕ್ಕೆ ಬಂದಿದೆ’ ಎನ್ನುತ್ತಾರೆ.

    ಮಾರ್ಚ್‌ 31ರ ನಂತರ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಕೇವಲ ಒಂದೇ ಸೋಂಕು ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟು 27 ಮಂದಿ ಸೋಂಕಿತರು ಇದ್ದಾರೆ. ಅವರೆಲ್ಲರೂ ಶೀಘ್ರ ಗುಣಮುಖರಾಗುವ ವಿಶ್ವಾಸ ರಾಜೇಂದ್ರ ಭಟ್‌ ಅವರದ್ದು. ‘ನಾವು ರೂಪಿಸಿರುವ ಈ ಯೋಜನೆ ಎಷ್ಟರಮಟ್ಟಿಗೆ ಕಾರ್ಯಗತವಾಗಿದೆ ಎಂಬುದನ್ನು ತಿಳಿಯಲು ಕೊನೆಯ ಪಕ್ಷ ಮೇ 1ರವರೆಗೆ ಕಾಯಬೇಕು. ನನ್ನ ಗುರಿ ತಲುಪುವವರರೆಗೆ ಟೆಸ್ಟಿಂಗ್‌, ಕ್ವಾರಂಟೈನಿಂಗ್‌ ಮಂತ್ರ ಮುಂದುವರಿಯಲೇಬೇಕು ಎಂದಿದ್ದಾರೆ.

    ಯಶಸ್ಸು ಎನ್ನುವುದು ರಾಕೆಟ್‌ ಸೈನ್ಸ್‌ ಅಲ್ಲ. ಇಂಥದ್ದೊಂದು ಯೋಜನೆಯನ್ನು ನಾನು ರೂಪಿಸಿದ್ದರೂ ಅದರ ಸಂಪೂರ್ಣ ಶ್ರೇಯಸ್ಸು ಸರ್ಕಾರಕ್ಕೆ ಸಲ್ಲಬೇಕು. ಸೋಂಕು ಹರಡದಂತೆ ಗಡಿ ಭಾಗವನ್ನು ಮುಚ್ಚುವಂತೆ ಸರ್ಕಾರವನ್ನು ಕೋರಿದಾಗ ನಮ್ಮ ಮನವಿಯನ್ನು ಕೂಡಲೇ ಪರಿಗಣಿಸಲಾಯಿತು. ನಮ್ಮ ಗುರಿ ತಲುಪುವವರೆಗೆ ಯಾರೊಬ್ಬರೂ ಮನೆಯಿಂದ ಹೊರಕ್ಕೂ ಹೋಗಬಾರದು, ಹೊರಗಿನ ಜಿಲ್ಲೆಗಳವರು ಇಲ್ಲಿಗೆ ಕಾಲಿಡಬಾರದು, ಆ ರೀತಿಯ ವ್ಯವಸ್ಥೆ ಆಗಬೇಕು ಎಂದಾಗಲೂ ಸರ್ಕಾರ ಅದನ್ನು ಒಪ್ಪಿ ಸಂಪೂರ್ಣ ಸಹಕಾರ ನೀಡಿದೆ. ಅಷ್ಟೇ ಅಲ್ಲ, ಹೋಟೆಲ್‌, ಆಸ್ಪತ್ರೆ ಎಲ್ಲವನ್ನೂ ಜಿಲ್ಲಾಧಿಕಾರಿಗಳ ವಶಕ್ಕೆ ಒಪ್ಪಿಸಿ, ಅದರ ಮೇಲೆ ನಿಗಾ ಇರಿಸುವಂತೆ ಸರ್ಕಾರ ನನ್ನ ಮೇಲೆ ತೋರಿರುವ ವಿಶ್ವಾಸದಿಂದ ಇವೆಲ್ಲವೂ ಸಾಧ್ಯವಾಗಿದೆ’ ಎಂದಿದ್ದಾರೆ ಭಟ್‌. ನನ್ನ ಜತೆ ಸಾಕಷ್ಟು ಅಧಿಕಾರಿಗಳು ಕೆಲಸ ಮಾಡಿದ್ದಾರೆ.

    ‘ನಾವು ಏನೇನು ಮಾಡಬೇಕು ಎನ್ನುವುದನ್ನು ಜಿಲ್ಲಾಧಿಕಾರಿಗಳು ಸೂಚಿಸುತ್ತಾರೆ. ಅದನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಅವರು ಹೇಳುತ್ತಾರೆ, ಅವರು ನೀಡುವ ಮಾರ್ಗದರ್ಶನದಂತೆ ನಾವು ನಡೆದುಕೊಂಡಿದ್ದೇವೆ. ಆದ್ದರಿಂದ ಯಶಸ್ಸು ಸಾಧಿಸಿದ್ದೇವೆ ಎನ್ನುತ್ತಾರೆ ಭಟ್‌ ಅವರ ಕೆಳಗೆ ಕೆಲಸ ನಿರ್ವಹಿಸುತ್ತಿರುವ ಐಎಎಸ್‌ ಅಧಿಕಾರಿಗಳು. (ಏಜೆನ್ಸೀಸ್‌)

    ವಿಶ್ವದಲ್ಲಿ ಕರೊನಾ ಸೋಂಕಿಗೆ 88 ಸಾವಿರ ಬಲಿ: ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ನಡೆಸಲು ಮುಂದಾದ ಶಕ್ತಿಶಾಲಿ ರಾಷ್ಟ್ರಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts