More

    ಹೆತ್ತ ಮಗನನ್ನೇ ಕೊಂದ ಸಿಇಓ ಸುಚನಾ ಸಿಕ್ಕಿಬೀಳಲು ಪೊಲೀಸರಿಗೆ ನೆರವಾಯ್ತು ಟ್ರಾಫಿಕ್​ ಜಾಮ್​!

    ಬೆಂಗಳೂರು: ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನೇ ಕೊಂದು ಬ್ಯಾಗಿನಲ್ಲಿಟ್ಟುಕೊಂಡು ಬೆಂಗಳೂರಿನತ್ತ ಪರಾರಿಯಾಗುತ್ತಿದ್ದ ಸುಚನಾ ಸೇಠ್​ಳ ವಿಚಾರಣೆ ಮುಂದುವರಿದಿದ್ದು, ಆಕೆ ಮಗುವಿಗೆ ಕಫದ ಸಿರಪ್ ಕುಡಿಸಿ ನಂತರ ಉಸಿರುಗಟ್ಟಿಸಿ ಸಾಯಿಸಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕತ್ತು ಹಿಸುಕಿ ಮಗುವನ್ನು ಕೊಂದಳೇ ಅಥವಾ ಬಟ್ಟೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿರಬಹುದೇ ಎಂಬ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ನಡುವೆ ಆಕೆ ಪೊಲೀಸರ ಕೈಗೆ ಸಿಕ್ಕಿಬೀಳಲು ಗೋವಾ ಗಡಿಯಲ್ಲಿ ನಡೆದ ಅಪಘಾತವೇ ಕಾರಣ ಎಂಬ ಮತ್ತೊಂದು ಸಂಗತಿ ಇದೀಗ ಬಯಲಿಗೆ ಬಂದಿದೆ.

    ಆರೋಪಿ ಸುಚನಾ ಸೇಠ್​, ಕೊಲೆ ಮಾಡಿದ ಬಳಿಕ ಗೋವಾದಿಂದ ಟ್ಯಾಕ್ಸಿಯಲ್ಲಿ ಪರಾರಿಯಾಗುವಾಗ ಗೋವಾದ ಗಡಿಯಲ್ಲಿರುವ ಚೋರ್ಲಾ ಘಾಟ್​ನಲ್ಲಿ ನಡೆದ ಅಪಘಾತದಿಂದ ಸ್ಥಳದಲ್ಲಿ ಉಂಟಾದ ಟ್ರಾಫಿಕ್​ ಜಾಮ್​ನಲ್ಲಿ ಸುಮಾರು 4 ಗಂಟೆಗಳ ಕಾಲ ಸಿಲುಕಿಕೊಂಡಿದ್ದಳು. ಈ ವೇಳೆ ಆಕೆ ಮಾರುವೇಷದಲ್ಲಿದ್ದಳು. ಬೆಂಗಳೂರು ತಲುಪಲು ಯತ್ನಿಸಿದ್ದಳು. ಆದರೆ, ಟ್ರಾಫಿಕ್​ ಜಾಮ್​ನಿಂದ ತಡವಾದ್ದರಿಂದ ಗೋವಾ ಪೊಲೀಸರು ಆಕೆಯನ್ನು ಹಿಂಬಾಲಿಸಿ ಚಿತ್ರದುರ್ಗ ಪೊಲೀಸರ ಸಹಾಯದಿಂದ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಒಂದು ವೇಳೆ ಬೆಂಗಳೂರು ತಲುಪಿದ್ದರೆ, ಮಗುವಿನ ದೇಹವನ್ನು ಪಡೆಯುವುದು ಕಷ್ಟವಾಗುತ್ತಿತ್ತು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

    ಅಂದಹಾಗೆ ಚೋರ್ಲಾ ಘಾಟ್​ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಗಳಲ್ಲಿದೆ. ಗೋವಾ ರಾಜಧಾನಿ ಪಣಜಿಯಿಂದ ಈಶಾನ್ಯಕ್ಕೆ ಇದೆ. ಬೆಳಗಾವಿಯಿಂದ ಸುಮಾರು 55 ಕಿ.ಮೀ ದೂರದಲ್ಲಿ ಈ ಘಾಟ್​ ಇದೆ. ಪ್ರಾಥಮಿಕ ತನಿಖೆ ಪ್ರಕಾರ ಗಂಡ-ಹೆಂಡತಿ ನಡುವಿನ ಕಲಹಕ್ಕೆ ಮಗು ಬಲಿಯಾಗಿದೆ. ಸುಚನಾ ಅವರು ಪತಿಯಿಂದ ಬೇರೆಯಾಗಿದ್ದಾರೆ. ಇಬ್ಬರ ಡಿವೋರ್ಸ್​ ವಿಚಾರ ಕೋರ್ಟಿನಲ್ಲಿದೆ. ವಿದೇಶದಲ್ಲಿರುವ ಪತಿ ಆಗಾಗ ಮಗುವನ್ನು ಭೇಟಿಯಾಗುತ್ತಿದ್ದ. ಇದು ಆಕೆಗೆ ಇಷ್ಟವಿರಲಿಲ್ಲ. ಭೇಟಿಯಾಗುವುದನ್ನು ತಡೆಯಲು ಸುಚನಾ ಈ ಕೃತ್ಯ ಎಸಗಿದ್ದಾಳೆ.

    ಪಣಜಿಯ ಅಪಾರ್ಟ್​ವೆುಂಟ್ ಒಂದರಲ್ಲಿ ತಂಗಿದ್ದ ಸುಚನಾ, ಮಗುವನ್ನು ಕೊಂದು ಶವವನ್ನು ಬ್ಯಾಗಿನಲ್ಲಿರಿಸಿ ಕೊಂಡು ಬೆಂಗಳೂರಿನತ್ತ ಪಲಾಯನ ಮಾಡುತ್ತಿದ್ದಾಗ ಗೋವಾ ಪೊಲೀಸರು ಚಿತ್ರದುರ್ಗ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರ ನೆರವಿನಿಂದ ಆಕೆಯನ್ನು ಸೋಮವಾರ ಬಂಧಿಸಿದ್ದರು. ಸುಚನಾ ಉಳಿದುಕೊಂಡಿದ್ದ ಉತ್ತರ ಗೋವಾದ ಕಾಂಡೋಲಿಂನ ಸರ್ವಿಸ್ ಅಪಾರ್ಟ್​ವೆುಂಟ್​ನ ಕೊಠಡಿಯಲ್ಲಿ ಕಫ ಸಿರಪ್​ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಕಫ ಸಿರಪ್​ನ ಒಂದು ಚಿಕ್ಕ, ಹಾಗೂ ದೊಡ್ಡ ಬಾಟಲಿ ಸಿಕ್ಕಿವೆ. ಆಕೆ ಅಪಾರ್ಟ್​ವೆುಂಟ್​ಗೆ ಹೋಗುವಾಗ ತನ್ನ ಲಗೇಜ್​ನಲ್ಲಿ ಕಫ ಸಿರಪ್​ನ ಒಂದು ಬಾಟಲಿ ಒಯ್ದಿದ್ದಳು. ನಂತರ, ಗಂಟಲು ಕೆರೆತ ಇರುವುದರಿಂದ ಇನ್ನೊಂದು ಬಾಟಲಿ ಬೇಕೆಂದು ಸ್ವಾಗತಕಾರರ ಬಳಿ ತರಿಸಿಕೊಂಡಿದ್ದಳು’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸುಚನಾ ಪಶ್ಚಿಮ ಬಂಗಾಳ ಮೂಲದವಳಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾಳೆ. ಸುಚನಾ ಪತಿ ಕೇರಳದವರಾಗಿದ್ದು, ಪ್ರಸ್ತುತ ಇಂಡೋನೇಷ್ಯಾದಲ್ಲಿದ್ದಾರೆ. 2010 ರಲ್ಲಿ ವಿವಾಹವಾಗಿದ್ದು, ಅವರಿಗೆ 2019 ರಲ್ಲಿ ಗಂಡುಮಗು ಜನಿಸಿತ್ತು. 2020ರಲ್ಲಿ ತನ್ನ ಪತಿಯಿಂದ ಸುಚನಾ ಸೇಠ್‌ ವಿಚ್ಛೇದನ ಪಡೆದಿದ್ದಳು. ಆ ಬಳಿಕ ಪ್ರತಿ ರವಿವಾರ ತನ್ನ ಪುತ್ರನನ್ನು ನೋಡಲು ಸುಚನಾ ಸೇಠ್ ಪತಿಗೆ ಕೋರ್ಟ್ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಪತಿಯು ತನ್ನ ಪುತ್ರನನ್ನು ಭೇಟಿಯಾಗಲು ಪ್ರಾರಂಭಿಸಿದರೆ, ಆತನ ಮೇಲೆ ಪತಿ ಹಿಡಿತ ಸಾಧಿಸಬಹುದು ಎಂದು ಸುಚನಾ ಭಯಭೀತಳಾಗಿದ್ದಳು. ಹೀಗಾಗಿ ತನ್ನ ಪುತ್ರನನ್ನು ಭೇಟಿಯಾಗಲು ಪತಿ ಬರುವುದಕ್ಕೂ ಮುಂಚಿತವಾಗಿಯೇ ಪುತ್ರನನ್ನು ಕೊಲೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

    ಹೆತ್ತ ಮಗುವನ್ನೇ ಹತ್ಯೆಗೈದ ಸುಚನಾ ಸೇಠ್‌ ಯಾರು? ಕೊಲೆಗೆ ಕಾರಣವೇನು? ವಿವರ ಇಲ್ಲಿದೆ ಓದಿ..

    ಮಾಲ್ಡೀವ್ಸ್​ನಲ್ಲಿ 1 ಪಿಜ್ಜಾ ಖರಿದೀಸುವ ದುಡ್ಡಲ್ಲಿ ಭಾರತದಲ್ಲಿ ಚಿನ್ನವನ್ನೇ ಕೊಳ್ಳಬಹುದು!

    ಕಾಫ್ ಸಿರಪ್ ಕುಡಿಸಿ ಮಗನನ್ನು ಕೊಂದ ಸುಚನಾ?; ವಿಚಾರಣೆ ವೇಳೆ ಪೊಲೀಸರ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts