More

    ಎನ್ನ ಮಸ್ತ್ ವರ್ಸೊದ ಕನ ನಿಜ ಆಂಡ್, ಮಸ್ತ್ ಖುಷಿ ಆಂಡ್: ಹೊಸ ಮನೆಗೆ ಪಾದಾರ್ಪಣೆ ಮಾಡಿದ ನಾಗಮ್ಮಜ್ಜಿ ಭಾವನಾತ್ಮಕ ನುಡಿ

    ಬಂಟ್ವಾಳ: ‘ಮಾತೆರ‌್ಲಾ ಸೇರ್‌ದ ಎಂಕ್ ಬಾರಿ ಪೊರ್ಲುದ ಇಲ್‌ಲ್ ಕಟ್‌ದ್ ಕೊರಿಯರ್. ಎನ್ನ ಮಸ್ತ್ ವರ್ಸೊದ ಕನ ನಿಜ ಆಂಡ್ ಪಂಡ್‌ದ್ ಎಂಕ್ ಮಸ್ತ್ ಖುಷಿ ಆಂಡ್. ಸಾಕಾರ ಕೊರಿನಾ ಮಾತೆರೆಗ್ಲಾ ದೈವ ದೇವೆರ್ ಎಡ್ಡೆ ಮನ್ಪಡ್….’ (ಎಲ್ಲರೂ ಸೇರಿ ನನಗೆ ಸುಂದರ ಮನೆ ನಿರ್ಮಿಸಿ ಕೊಟ್ಟಿದ್ದೀರಿ. ನನ್ನ ಅನೇಕ ವರ್ಷದ ಕನಸು ನನಸಾಗಿದೆ. ಖುಷಿಯಾಗುತ್ತಿದೆ. ಮನೆ ನಿರ್ಮಿಸಲು ಸಹಕರಿಸಿದ ಎಲ್ಲರಿಗೂ ದೈವ-ದೇವರು ಒಳಿತು ಮಾಡಲಿ…
    – ಬಂಟ್ವಾಳ ತಾಲೂಕಿನ ಜಾರಂದಗುಡ್ಡೆಯ ನಾಗಮ್ಮಜ್ಜಿಯ ಭಾವನಾತ್ಮಕ ನುಡಿಗಳಿವು.

    ವಿಜಯವಾಣಿ ದಿಗ್ವಿಜಯ 24/7 ಮಾಧ್ಯಮ ಬಳಗದ ಮುತುವರ್ಜಿ, ಜೆಸಿಐ ಬಂಟ್ವಾಳದ ನೇತೃತ್ವ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದಾನಿಗಳ ಆರ್ಥಿಕ ಸಹಕಾರ, ಸಂಘ ಸಂಸ್ಥೆಗಳ ಶ್ರಮದಾನದ ಸೇವೆಯಿಂದ ಜಾರಂದಗುಡ್ಡೆಯಲ್ಲಿ ನಿರ್ಮಾಣಗೊಂಡ ನಾಗಮ್ಮಜ್ಜಿ ಯ ನೂತನ ಗೃಹಪ್ರವೇಶ ಭಾನುವಾರ ನಡೆಯಿತು.
    ಗೃಹಪ್ರವೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ದಾನಿಗಳ ನೆರವಿನಿಂದ ಮನೆ ನಿರ್ಮಾಣವಾಗಿದೆ. ಇನ್ನು ಹೊಸ ಮನೆಯಲ್ಲಿ ಕುಟುಂಬ ಕಟ್ಟುವ ಕಾರ್ಯ ಆಗಬೇಕಿದೆ ಎಂದರು. ಹತ್ತು ಜನರು ಜೊತೆಯಾಗಿ ಕೆಲಸ ಮಾಡುವ ಜಾಗದಲ್ಲಿ ದೇವರು ನೆಲೆಸುತ್ತಾನೆ ಎನ್ನುವುದಕ್ಕೆ ಈ ಸ್ಥಳವೇ ಸಾಕ್ಷಿ. ನಾಗಮಜ್ಜಿ ಮತ್ತು ಮನೆಯವರ ಮೊಗದಲ್ಲಿ ಅರಳಿದ ನಗು ಶಾಶ್ವತವಾಗಿರಲಿ ಎಂದು ಆಶಿಸಿದರು.

    ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ದೈವಾನುಗ್ರಹ, ಋಣಾನುಬಂಧ ಹಾಗೂ ಎಲ್ಲರ ಸಹಕಾರದೊಂದಿಗೆ ಸುಸಜ್ಜಿತವಾದ ಮನೆ ನಾಗಮಜ್ಜಿಗೆ ಲಭಿಸಿದೆ. ಪ್ರತ್ಯಕ್ಷ, ಪರೋಕ್ಷವಾಗಿ ಅನೇಕರು ಮನೆ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಅಭಿನಂದನೀಯ ಎಂದರು.

    ಭಗತ್‌ಸಿಂಗ್ ಸೇವಾ ಪ್ರತಿಷ್ಠಾನ ತೊಕ್ಕೊಟ್ಟು ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು, ಪತ್ರಿಕೆಗಳು ಸುದ್ದಿಗಳನ್ನು ಬಿತ್ತರಿಸುತ್ತವೆ. ಆದರೆ ವಿಜಯವಾಣಿ ತಂಡ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಮಾದರಿಯಾಗಿದೆ ಎಂದರು.

    ವಿಜಯವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಸುರೇಂದ್ರ ಎಸ್.ವಾಗ್ಳೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಅಟೋಮೇಶನ್ ಕ್ಲೌಡ್ ಸೊಲ್ಯೂಶನ್ಸ್ ಸಂಸ್ಥೆ ಆಡಳಿತ ನಿರ್ದೇಶಕ ಜಗದೀಶ್ ರಾಮ, ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಜೆಸಿಐ ಬಂಟ್ವಾಳ ನಿಯೋಜಿತ ಕಾರ್ಯದರ್ಶಿ ರವೀಣ ಬಂಗೇರ, ಉದಯ ಯುವಕ ಮಂಡಲದ ಅಧ್ಯಕ್ಷ ಅಶೋಕ್ ಶೆಟ್ಟಿ, ನಾಗಮಜ್ಜಿ ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಅಶ್ವಿನ್ ಮುಂಡಾಜೆ ಹಾಗೂ ಟೈಲ್ಸ್ ವರ್ಕ್ ಮಾಡಿದ ಜೀವನ್ ಅಬ್ಬೆಟ್ಟು ಅವರನ್ನು ಸನ್ಮಾನಿಸಲಾಯಿತು. ಸಿಮೆಂಟ್ ಅಭಿಯಾನದಲ್ಲಿ ಸಹಕರಿಸಿದ ಜೆಸಿಐ ಬಂಟ್ವಾಳದ ಸದಸ್ಯರಾದ ರವೀಣ ಬಂಗೇರ ಹಾಗೂ ಅಕ್ಷಯ್ ಅವರನ್ನು ಗೌರವಿಸಲಾಯಿತು. ಆರ್ಥಿಕ ಸಹಕಾರ ನೀಡಿದ ದಾನಿಗಳನ್ನು ಗುರುತಿಸಲಾಯಿತು. ವಿಶ್ವ ಮಹಿಳಾ ಬಿಲ್ಲವ ಸಂಘದ ಅಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ರಾರಾಸಂ ಫೌಂಡೇಶನ್ ಅಧ್ಯಕ್ಷ ರಾಧಕೃಷ್ಣ ಬಂಟ್ವಾಳ, ವಕೀಲ ಅರುಣ್ ರೋಷನ್ ಡಿಸೋಜ, ಎಬಿವಿಪಿಯ ಹರ್ಷಿತ್ ಹಾಗೂ ಜೆಸಿಐ ಬಂಟ್ವಾಳದ ಸದಸ್ಯರು ಜೆಸಿಐ ಮಂಗಳಗಂಗೋತ್ರಿ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹೊ, ಸೌಹಾರ್ದ ಸಹಕಾರಿ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ಗುರುಪ್ರಸಾದ್ ಬಂಗೇರ ಮನೆಗೆ ಭೇಟಿ ನೀಡಿದರು.

    ಪತ್ರಕರ್ತ ಸಂದೀಪ್ ಸಾಲ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಮೋಹನದಾಸ್ ಮರಕಡ ಕಾರ್ಯಕ್ರಮ ನಿರೂಪಿಸಿದರು.

    ದೈವಾನುಗ್ರಹ, ಋಣಾನುಬಂಧ ಹಾಗೂ ಎಲ್ಲರ ಸಹಕಾರದೊಂದಿಗೆ ನಾಗಮಜ್ಜಿಗೆ ಸುಸಜ್ಜಿತವಾದ ಮನೆ ಪ್ರಾಪ್ತವಾಗಿದೆ. ವಿಜಯವಾಣಿಯ ಕೆಲಸ ಮಾದರಿ. ಪ್ರತ್ಯಕ್ಷ, ಪರೋಕ್ಷವಾಗಿ ಅನೇಕರು ಮನೆ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಕೂಡ ಅಭಿನಂದನೀಯ.
    ಬಿ.ರಮಾನಾಥ ರೈ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts