More

    ವೃದ್ಧನಿಗೆ ಎಎನ್‌ಎಫ್ ಮನೆ ಕೊಡುಗೆ: ಅಮೃತ ಮಹೋತ್ಸವದಂಗವಾಗಿ ಅಮೃತ ನಿರ್ಮಾಣ

    ನರೇಂದ್ರ ಎಸ್. ಮರಸಣಿಗೆ, ಹೆಬ್ರಿ
    ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಗಮಾರು ಎಂಬಲ್ಲಿ ಕಾಡಿನ ನಡುವೆ ಮನೆಯಿಲ್ಲದೆ ಗುಡಿಸಲಲ್ಲಿ ವಾಸಿಸುತ್ತಿದ್ದ ನಾರಾಯಣಗೌಡ ಎಂಬ ವೃದ್ಧರಿಗೆ ನಕ್ಸಲ್ ನಿಗ್ರಹ ಪಡೆಯವರು ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಸದಾ ಬಂದೂಕು ಹೊತ್ತುಕೊಂಡು ಕಾಡಿನಲ್ಲಿ ನಕ್ಸಲರ ಬೆನ್ನತ್ತುವ ನಕ್ಸಲ್ ನಿಗ್ರಹ ಪಡೆಯ ಈ ಸಮಾಜ ಸೇವೆಯ ಕಾರ್ಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಸ್ವಾತಂತ್ರೃದ ಅಮೃತ ಮಹೋತ್ಸವದಂಗವಾಗಿ ನಿರ್ಮಿಸಿದ ಈ ಮನೆಗೆ ಅಮೃತ ಎಂದು ಹೆಸರಿಟ್ಟಿದ್ದಾರೆ.

    ಎಸ್ಪಿ ಪ್ರಕಾಶ್ ಅಮ್ರಿತ್ ನಿಕಮ್ ಅವರ ನೇತೃತ್ವದಲ್ಲಿ ಹೆಬ್ರಿ ನಕ್ಸಲ್ ನಿಗ್ರಹ ಪಡೆಯ ಇನ್‌ಸ್ಪೆಕ್ಟರ್ ಸತೀಶ್ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಅವಿರತ ಶ್ರಮ ವಹಿಸಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿಗಳಾದ ರಾಘವೇಂದ್ರ ಕಾಂಚನ್ ಹಾಗೂ ಗಣಪತಿ ಈ ಕಾರ್ಯದಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಸುಮಾರು 55 ಸಾವಿರ ರೂ. ವೆಚ್ಚದಲ್ಲಿ ಹೆಬ್ರಿಯ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೇರಿ ಮನೆ ನಿರ್ಮಿಸಿ ಕೊಟ್ಟಿರುತ್ತಾರೆ.

    ತೆಂಗಮಾರಿನಲ್ಲಿ 73 ವರ್ಷದ ನಾರಾಯಣ ಗೌಡ ಎಂಬ ನಾಟಿ ವೈದ್ಯ ಸುಮಾರು 55 ವರ್ಷಗಳಿಂದ ಒಂಟಿಯಾಗಿ ವಾಸವಾಗಿದ್ದಾರೆ. ಆಸುಪಾಸು ಬೇರೆ ಮನೆ ಕೂಡ ಇಲ್ಲ. ಸಂಬಂಧಿಕರು ಒಡನಾಟವೂ ಇಲ್ಲ. ಕಾಡುತ್ಪತ್ತಿಯ ವರಮಾನವೇ ಜೀವನ ನಿರ್ವಹಣೆಗೆ ಆಧಾರ. ಹಿಂದೆ ಇದ್ದ ಮನೆ ಬಿದ್ದುಹೋದ ಬಳಿಕ ಹತ್ತು ವರ್ಷದಿಂದ ಗುಡಿಸಿಲಲ್ಲಿ ವಾಸಿಸುತ್ತಿದ್ದರು.

    ಸಾಹಸಮಯ ಸಾಗಾಟ: ಮನೆ ಕಟ್ಟಲು ಬೇಕಾದ ಸಿಮೆಂಟ್, ಇಟ್ಟಿಗೆ ಮರಳನ್ನು ಎ ಎನ್‌ಎಫ್ ಸಿಬ್ಬಂದಿ ಸ್ವತಃ ಜೀಪಿನಲ್ಲಿ ಸಾಗಿಸಿದ್ದಾರೆ. ವಿಪರೀತ ಮಳೆ ಇದ್ದರೂ ಕಾಡಿನ ದುಸ್ತರ ರಸ್ತೆಯಲ್ಲಿ ಮನೆ ಕಟ್ಟುವ ಕಚ್ಚಾ ಸಾಮಗ್ರಿ ಸಾಗಿಸಿರುವುದು ವಿಶೇಷ. ಮನೆಗೆ ತನಕ ರಸ್ತೆ ಇಲ್ಲದಿರುವುದರಿಂದ ಸುಮಾರು 400 ಮೀಟರ್ ದೂರ ಇಕ್ಕಟ್ಟಾದ ದಾರಿಯಲ್ಲಿ ಹೊತ್ತುಕೊಂಡು ಹೋಗಿದ್ದಾರೆ.ತೆಂಗಮಾರಿನಲ್ಲಿ ನಾರಾಯಣ ಗೌಡರ ಒಂದೇ ಮನೆಯಿರುವುದರಿಂದ ರಸ್ತೆ, ವಿದ್ಯುತ್, ಟಾಯ್ಲೆಟ್, ನೀರು ಸೇರಿ ಯಾವುದೇ ಸೌಲಭ್ಯಗಳಿಲ್ಲ.

    20 ಸಾವಿರ ರೂ. ಬಹುಮಾನ: ಹೆಬ್ರಿಯ ನಕ್ಸಲ್ ನಿಗ್ರಹ ಪಡೆಯ ಸಾಮಾಜಿಕ ಬದ್ಧತೆಯನ್ನು ಅಭಿನಂದಿಸಿ ಎಸ್ಪಿ 20 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ. ಮನೆ ನಿರ್ಮಾಣಕ್ಕೆ ಸ್ಥಳೀಯರಾದ ಆನಂದ ಗೌಡ, ನಾರಾಯಣ ಗೌಡ, ಪ್ರಶಾಂತ್, ಸುಧಾಕರ್, ಅರುಣ್ ಕುಮಾರ್, ರಾಜು ಗೌಡ ಎಂಬವರು ಗಾರೆ ಮತ್ತಿತರ ಕೆಲಸಗಳಲ್ಲಿ ಸಹಕರಿಸಿದ್ದಾರೆ.
    ತೆಂಗಮಾರಿನಲ್ಲಿ ಅಲ್ಲಲ್ಲಿ ದೂರ ದೂರ ಕೆಲವೊಂದು ಮನೆಗಳಿದ್ದು , ನಾರಾಯಣ ಗೌಡರು ಎರಡು ಮೂರು ತಿಂಗಳು ಮಕ್ಕಿ ಭಾಗಕ್ಕೆ ಬಾರದಿದ್ದರೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಭಾವಿಸಿ ತಿಂಗಳಮಕ್ಕಿಯ ಜನರು ಅವರನ್ನು ನೋಡಿಕೊಂಡು ಹೋಗಲು ಬರುತ್ತಾರೆ.ನಾರಾಯಣ ಗೌಡರು ಇಲ್ಲಿಯತನಕ ಆಸ್ಪತ್ರೆ ಹೋಗಿಲ್ಲ.

    ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ: ಹಕ್ಕುಪತ್ರ, ರೇಶನ್ ಕಾರ್ಡ್ ಇತ್ಯಾದಿ ದಾಖಲೆಪತ್ರಗಳು ಇಲ್ಲದ ಕಾರಣ ವೃದ್ಧಾಪ್ಯ ವೇತನ, ಅಕ್ಕಿ , ಪಡಿತರ ಸಾಮಾಗ್ರಿ, ವಿದ್ಯುತ್ ಸೇರಿದಂತೆ ಯಾವುದೇ ರೀತಿಯ ಸರ್ಕಾರದ ಸವಲತ್ತುಗಳು ಅವರಿಗೆ ಸಿಗುವುದಿಲ್ಲ.

    ಅಮೃತ ಉದ್ಘಾಟನೆ: ಮನೆಯ ಕೀಲಿಕೈಯನ್ನು ಹಸ್ತಾಂತರಿಸುವ ಮೂಲಕ ನಕ್ಸಲ್ ನಿಗ್ರಹ ಪಡೆಯ ಎಸ್‌ಪಿ ಪ್ರಕಾಶ್ ಅಮ್ರಿತ್ ನಿಕಮ್ ಅವರು ಗುರುವಾರ ನಾರಾಯಣಗೌಡ ಅವರ ನೂತನ ಮನೆ ಅಮೃತವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಾರಾಯಣ ಗೌಡರಿಗೆ ಅಗತ್ಯ ವಸ್ತುಗಳನ್ನು ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ ಉಡುಗೊರೆಯಾಗಿ ನೀಡಿದರು. ನಕ್ಸಲ್ ನಿಗ್ರಹ ಪಡೆಯ ಇನ್‌ಸ್ಪೆಕ್ಟರ್ ಸತೀಶ್ ಬಿ. ಎಸ್., ಪಿಎಸ್‌ಐಗಳಾದ ವಸಂತ ಅಕ್ಕಸಾಲಿ, ವೀರೇಶ್ ಬೂದಿಹಾಳ, ಹೆಬ್ರಿ ಠಾಣಾಧಿಕಾರಿ ಸುದರ್ಶನ ದೊಡ್ಡಮನಿ, ಸಿಬ್ಬಂದಿಗಳಾದ ರಾಘವೇಂದ್ರ ಕಾಂಚನ್, ಗಣಪತಿ ಹಾಗೂ ನಕ್ಸಲ್ ನಿಗ್ರಹ ಪಡೆಯ ಸಿಬ್ಬಂದಿ, ಸ್ಥಳೀಯರು ಉಪಸ್ಥಿತರಿದ್ದರು.

    ಹೆಬ್ರಿಯ ಸಿಬ್ಬಂದಿ ಮಾನವೀಯ ಕಾರ್ಯ ನಿಜವಾಗಿಯೂ ಅಭಿನಂದನೀಯ. ಮನೆ ಕಟ್ಟಲು ಸಿಬ್ಬಂದಿ ಕಚ್ಚಾ ಸಾಮಗ್ರಿಗಳ ಪೂರೈಕೆಯನ್ನು ಸಾಹಸಮಯವಾಗಿ ಹೊತ್ತು ತಂದಿರುವುದು ಅವರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.
    ಪ್ರಕಾಶ್ ಅಮ್ರಿತ್ ನಿಕಮ್, ಎಸ್‌ಪಿ, ನಕ್ಸಲ್ ನಿಗ್ರಹ ಪಡೆ ಕಾರ್ಕಳ.

    ಇದು ನನ್ನ ಸೌಭಾಗ್ಯ, ಗುಡಿಸಿನಲ್ಲಿ ಮಳೆಗಾಲದಲ್ಲಿ ವಾಸಿಸುವುದು ಬಹಳ ಕಷ್ಟವಾಗಿತ್ತು. ನನಗೆ ಹೊರಜಗತ್ತಿನ ಸಂಪರ್ಕ ಇಲ್ಲದಿದ್ದರೂ ಆಕಾಂಕ್ಷೆಗಳಿಲ್ಲದೆ ಉತ್ತಮ ಜೀವನ ನಡೆಸುತ್ತಿದ್ದೇನೆ. ಎಲ್ಲರಿಗೂ ನನ್ನ ಧನ್ಯವಾದಗಳು.
    ನಾರಾಯಣಗೌಡ, ಫಲಾನುಭವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts