More

    ಹಿಂಸಾಚಾರ ನಡೆಸುತ್ತಿರುವ ಸಂಘಟನೆ ನಿಷೇಧಿಸಿ

    ಹೊಸಪೇಟೆ: ಇಸ್ಲಾಮಿಕ್, ಜಿಹಾದಿ ಹಾಗೂ ಮತಾಂಧತೆಯನ್ನು ಬಿತ್ತಿ ದೇಶದಲ್ಲಿ ಹಿಂಸಾಚಾರವನ್ನು ಹರಡುತ್ತಿರುವ ಪಿಎಫ್‌ಐ, ತಬ್ಲಿಘಿ ಜಮಾತ್ ಮತ್ತು ಮೂಲಭೂತವಾದ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗ ದಳದ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

    ಕೆಲ ದಿನಗಳಿಂದ ದೇಶದಲ್ಲಿ ಇಸ್ಲಾಮಿಕ್ ಜಿಹಾದಿ, ಮತಾಂಧತೆ ಹೆಚ್ಚುತ್ತಿದೆ. ಹಿಂದುಗಳ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಯುತ್ತಿದೆ. ಶ್ರೀರಾಮನವಮಿ ಮತ್ತು ಹನುಮ ಜಯಂತಿ ನಿಮಿತ್ತ ದೇಶದ ಹಲವೆಡೆ ಮೆರವಣಿಗೆ ನಡೆಯುವ ವೇಳೆ ಕೆಲವರು ಕಲ್ಲು ತೂರಾಟ ನಡೆಸಿ, ಶಾಂತಿ ಕದಡುವ ಯತ್ನ ನಡೆಸಿದ್ದರು. ರಾಜ್ಯದಲ್ಲಿ ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರ ಪಾಲನೆಗೆ ಸರ್ಕಾರದ ಆದೇಶ ಉಲ್ಲಂಘಿಸಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್‌ಗೆ ಪಟ್ಟು ಹಿಡಿದಿದ್ದರು. ಇದರಿಂದ ಬಹುದೊಡ್ಡ ವಿವಾದ ಸೃಷ್ಟಿಯಾಗಿತ್ತು. ಅಲ್ಲಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಿಂದುಸ್ಥಾನದಲ್ಲೇ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.

    ಬಿಜೆಪಿ ನಾಯಕರಾಗಿದ್ದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಹೇಳಿಕೆಯನ್ನು ಖಂಡಿಸುವುದರ ಜತೆಗೆ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆ ಬಳಿಕ ಹಿಂದುಗಳ ಮೇಲೆ ದಾಳಿ ನಡೆಸಲಾಗಿದೆ. ಹಿಂದುಗಳ ಮನೆ, ಅಂಗಡಿ, ದೇವಸ್ಥಾನಗಳಿಗೆ ಹಾನಿ ಮಾಡಿ, ವಾಹನಗಳಿಗೆ ಬೆಂಕಿಯಿಡಲಾಗಿದೆ. ಸರ್ಕಾರಿ ಆಸ್ತಿಗೆ ಹಾನಿ ಮಾಡುವುದರ ಜತೆ ಪೊಲೀಸರ ಮೇಲೂ ದಾಳಿ ಮಾಡಿ, ಮಾರಣಾಂತಿ ಕ ಹಲ್ಲೆ ನಡೆಸಲಾಗಿದೆ. ಇಂತಹ ಕೃತ್ಯಗಳ ಮೂಲಕ ಜಿಹಾದಿ ಕಾನೂನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

    ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು. ಧರ್ಮಾಂಧತೆ, ದ್ವೇಷ ಭಾಷಣ ಮಾಡುವವರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ, ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ಮನವಿ ಸಲ್ಲಿಸಿದರು. ವಿಎಚ್‌ಪಿ ಹಾಗೂ ಭಜರಂಗ ದಳ ಪ್ರಮುಖರಾದ ಬಿ.ನರಸಿಂಹಮೂರ್ತಿ, ತಿಪ್ಪೇಸ್ವಾಮಿ, ಸುಧೀಂದ್ರ, ಆನಂದಕೃಷ್ಣ, ನಾಗರಾಜ, ಸಂದೀಪ, ಕುಶಾಲ್, ದುರುಗೇಶ ಜಿ.ಬಿ., ಕೆ.ಹಾಲೇಶ, ಎಚ್.ಜಗದೀಶ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts