More

    ವಿಜಯವಾಣಿ, ದಿಗ್ವಿಜಯ ವಾಹಿನಿಯಿಂದ ಆಯೋಜನೆ: ಬೂಸ್ಟರ್ ಡೋಸ್, ಆಯುಷ್ಮಾನ್ ಕಾರ್ಡ್ ವಿತರಣೆ

    ಹೊಸಪೇಟೆ: ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ನಗರಸಭೆ, ತಾಲೂಕು ಆರೋಗ್ಯ ಇಲಾಖೆ, ಕೆಎಚ್‌ಪಿಟಿ, ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಸಹಯೋಗದಲ್ಲಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಪೌರ ಕಾರ್ಮಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

    ಎಂದಿನಂತೆ ನಗರದ ಸ್ವಚ್ಛತಾ ಜವಾಬ್ದಾರಿಯನ್ನು ಪೂರ್ಣಗೊಳಿಸಿ, ಪೂರ್ವ ನಿಗದಿಯಂತೆ ಬೆಳಗ್ಗೆ 10.30ರ ಒಳಗಾಗಿ ನಗರಸಭೆಯ ಎಲ್ಲ ಪೌರ ಕಾರ್ಮಿಕರು ಆರೋಗ್ಯ ಶಿಬಿರಕ್ಕೆ ಹಾಜರಾಗಿದ್ದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ ಸಾಂಕೇತಿಕವಾಗಿ ಶಿಬಿರಕ್ಕೆ ಚಾಲನೆ ನೀಡಿ, ನಗರದ ಸ್ವಚ್ಛತೆಗೆ ಶ್ರಮಿಸುವ ಎಲ್ಲ ಪೌರಕಾರ್ಮಿಕರು ತಮ್ಮ ಕುಟುಂಬ ಸಮೇತರಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಿ, ಉತ್ತಮ ಆರೋಗ್ಯ ಹೊಂದಬೇಕು ಎಂದು ಸಲಹೆ ನೀಡಿದರು.

    ಶಿಬಿರದಲ್ಲಿ ಕಸ ಗುಡಿಸುವ ಮಹಿಳೆಯರು, ಲೋಡರ್ರ್ಸ್‌, ನಗರಸಭೆ ವಾಹನ ಚಾಲಕರು, ಹೆಲ್ಪರ್ಸ್‌, ಸ್ವಚ್ಛತಾ ಕಾರ್ಮಿಕರು ಹಾಗೂ ನಗರಸಭೆ ಕಚೇರಿ ಸಿಬ್ಬಂದಿ ಸೇರಿದಂತೆ 400ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆಗೆ ಒಳಗಾದರು.

    ತಜ್ಞ ವೈದ್ಯರಾದ ಡಾ.ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆಯ ಶುಶ್ರೂಷಕಿಯರು, ಆರೋಗ್ಯ ಕಾರ್ಯಕರ್ತೆಯರು ಪೌರ ಕಾರ್ಮಿಕರಿಗೆ ಬಿಪಿ, ಶುಗರ್ ಹಾಗೂ ಮಹಿಳೆಯರಿಗೆ ಹಿಮೋ ಗ್ಲೋಬಿನ್ ಸಹಿತ ಪರೀಕ್ಷಿಸಿದರು. ಪೌರ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇದೇ ವೇಳೆ ಬೂಸ್ಟರ್ ಡೋಸ್ ಕೋವಿಡ್ ಲಸಿಕೆ ಹಾಕಲಾಯಿತು.

    ಪೌರ ಕಾರ್ಮಿಕರು ಎದುರಿಸುತ್ತಿರುವ ಆರೋಗ್ಯದ ಸಮಸ್ಯೆಗಳನ್ನು ಡಾ.ಚಂದ್ರಶೇಖರ್ ವಿವರಿಸಿದರು. ಅಗತ್ಯವುಳ್ಳವರಿಗೆ ಔಷಧ ನೀಡಿ, ವಿವಿಧ ಪರೀಕ್ಷೆಗಳಿಗೆ ಒಳಗಾಗುವಂತೆ ಸಲಹೆ ನೀಡಿದರು.

    ಪೌರ ಕಾರ್ಮಿಕರು 235, ಚಾಲಕರು 36, 33 ಸಹಾಯಕರು ಹಾಗೂ ನಗರಸಭೆ ಸಿಬ್ಬಂದಿ ಶಿಬಿರದ ಲಾಭ ಪಡೆದುಕೊಂಡರು. ಆರೋಗ್ಯ ಶಿಬಿರವನ್ನು ವ್ಯವಸ್ಥಿತವಾಗಿ ಆಯೋಜಿಸಿದ್ದಕ್ಕೆ ಪೌರಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ನಗರಸಭೆ ಪೌರ ಕಾರ್ಮಿಕರಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ವಿತರಿಸಲಾಯಿತು.

    ಪರಿಸರ ಇಂಜಿನಿಯರ್ ಆರತಿ ಜಿ., ಹಿರಿಯ ಆರೋಗ್ಯ ನಿರೀಕ್ಷಕ ವಿರೂಪಾಕ್ಷಪ್ಪ ಎನ್.ಎಚ್., ಆರೋಗ್ಯ ನಿರೀಕ್ಷಕ ಪಿ.ಸತ್ಯನಾರಾಯಣ ಶರ್ಮ, ಸೂಪರ್‌ವೈಸರ್ ಬಿ.ಎಂ.ನಾಗೇಂದ್ರ ವರ್ಮ, ಆರೋಗ್ಯ ನಿರೀಕ್ಷರಾದ ನಾಗರತ್ನ, ಜಗನ್ನಾಥ ಕುಲ್ಕರ್ಣಿ, ಕೆಎಚ್‌ಪಿಟಿ ತಾಲೂಕು ಸಂಯೋಜಕಿ ಎಚ್.ಗಂಗಮ್ಮ ಪಾಲ್ಗೊಂಡಿದ್ದರು.

    ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ವಿಜಯವಾಣಿ, ದಿಗ್ವಿಜಯ ಸಹಯೋಗದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಎಲ್ಲ ಪೌರಕಾರ್ಮಿಕರು, ವಾಹನ ಚಾಲಕರು ಹಾಗೂ ಲೋರ್ಡ್ಸ್‌ಗಳು ಪಾಲ್ಗೊಂಡಿದ್ದಾರೆ. ಎಲ್ಲರೂ ಶಿಬಿರದ ಲಾಭ ಪಡೆದುಕೊಳ್ಳಬೇಕು. ಉತ್ತಮ ಆರೋಗ್ಯ ಹೊಂದಬೇಕು.
    | ಮನೋಹರ, ಪೌರಾಯುಕ್ತ.

    ನಿತ್ಯ ಬೆಳಗಾಗುತ್ತಿದ್ದಂತೆ ನಗರದ ವಾರ್ಡ್‌ಗಳ ಸ್ವಚ್ಛತೆಯಲ್ಲಿ ತೊಡಗುತ್ತೇವೆ. ನೈರ್ಮಲ್ಯದ ಮಧ್ಯೆ ಕೆಲಸ ಮಾಡುವುದರಿಂದ ನಾನಾ ರೀತಿಯ ಕಾಯಿಲೆಗಳು ಹರಡುತ್ತವೆ. ಸಕಾಲಕ್ಕೆ ಆಸ್ಪತ್ರಗೆ ತೆರಳುವುದಕ್ಕೂ ಆಗುವುದಿಲ್ಲ. ನಗರಸಭೆ, ವಿಜಯವಾಣಿ, ದಿಗ್ವಿಜಯ ಟಿವಿಯಿಂದ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿದ್ದರಿಂದ ಅನುಕೂಲವಾಗಿದೆ.
    | ನಾಗರತ್ನ, ಪೌರಕಾರ್ಮಿಕರು.

    ಆರೋಗ್ಯ ತಪಾಸಣಾ ಶಿಬಿರದೊಂದಿಗೆ ಆರೋಗ್ಯ ಕಾರ್ಡ್ ವಿತರಣೆ, ಬೂಸ್ಟರ್ ಡೋಸ್ ಲಸಿಕೆ ನೀಡುವುದರಿಂದ ಒಂದೂ ಸೂರಿನಲ್ಲಿ ಎಲ್ಲವೂ ದೊರಕುತ್ತಿದೆ. ಇದರಿಂದ ಪೌರಕಾರ್ಮಿಕರ ಅಲೆದಾಟ ತಪ್ಪಿಸಿದ್ದಾರೆ. ಈ ನಿಟ್ಟಿನಲ್ಲಿಪೌರಾಯುಕ್ತರು, ಅಧ್ಯಕ್ಷರ ಕ್ರಮ ಅಭಿನಂದನಾರ್ಹ.
    | ವೆಂಕಟೇಶ ಕೆ., ಪೌರಕಾರ್ಮಿಕರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts